ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ’ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್. ಜಿ. ದತ್ತಾತ್ರೆಯನವರು ಮೂಲತಃ ಚಿತ್ರದುರ್ಗದವರು. ಭಾರತೀಯ ವಾಯುಪಡೆಯ ವಿಂಗ್ ಕಮ್ಯಾಂಡರ್ ಆಗಿ, ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ, ಅಲ್ಲಿನ ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರಾಗಿ ಇವರು ಸೇವೆ ಸಲ್ಲಿಸಿದ್ದಾರೆ. ಶಾಲಾ-ಕಾಲೇಜು ದಿನಗಳಿಂದಾನೇ ನಾಟಕದ ಗೀಳು ಹಿಡಿಸಿಕೊಂಡಿದ್ದವರು.
ನಾಟಕವಾಡುತ್ತಾ ಸೈ ಎನಿಸಿಕೊಂಡವರು. ಆದರೆ ದತ್ತಣ್ಣನವರು ಸಿನಿಮಾ ರಂಗಕ್ಕೆ ಬಂದದ್ದು ಬಹಳ ತಡವಾಗಿ, ಅಂದರೆ ೪೫ ವರ್ಷ ತುಂಬಿದ ಮೇಲೆ. ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್ ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಹೆಚ್ಚಾಗಿ ಬೆಂಗಳೂರಿನಲ್ಲಿರಲಿಲ್ಲ. ಚಂಡೀಗಢ, ದೆಹಲಿ, ಅಂಡಮಾನ್ ಮುಂತಾದೆಡೆ ಇದ್ದರು. ೧೯೮೭ರಲ್ಲಿ ಅವರು ಬೆಂಗಳೂರಿನ ಎಚ್.ಎ.ಎಲ್ಗೆ ವರ್ಗವಾಗಿ ಬಂದರು. ಟಿ.ಎಸ್. ರಂಗ ಅವರು ಮೊದಲ ಬಾರಿಗೆ ೧ ಘಂಟೆ ಅವಧಿಯ ‘ಉದ್ಭವ್’ ಎಂಬ ಸಿನಿಮಾದಲ್ಲಿ ‘ದತ್ತಣ್ಣ’ನವರನ್ನು ಪರಿಚಯಿಸಿದರು.
ಅದಾದ ನಂತರ ನಾಗಾಭರಣರ ‘ಆಸ್ಫೋಟ’ ಚಿತ್ರ ಬಂತು. ಆ ಚಿತ್ರದಲ್ಲಿನ ಖಳನಟನ ಪಾತ್ರಕ್ಕೆ ರಾಷ್ಟ್ರಮಟ್ಟದ ಶ್ರೇಷ್ಠ ಪೋಷಕನಟ ಪ್ರಶಸ್ತಿ ದೊರಕಿತು. ನಂತರ ‘ಶರವೇಗದ ಸರದಾರ’, ‘ಮಾಧುರಿ’ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದರು. ಆಮೇಲೆ ‘ವೈದ್ಯೋ ನಾರಾಯಣೋ ಹರಿ’ ಎಂಬ ಧಾರವಾಹಿ ಮೂಲಕ ದೂರದರ್ಶನಕ್ಕೂ ಕಾಲಿಟ್ಟರು. ಆಗ ಕೆಲಸದಲ್ಲಿದ್ದುದರಿಂದ ಹೆಚ್ಚಾಗಿ ನಟಿಸಲಾಗುತ್ತಿರಲ್ಲಿಲ್ಲ. ಅಲ್ಲಲ್ಲಿ ಒಂದೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದರು.
೧೯೯೪ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರದಲ್ಲಿ ನಿರಂತರವಾಗಿ ಸಿನಿಮಾ, ನಾಟಕ, ಟಿವಿ ಮತ್ತು ರೇಡಿಯೋಗಳಲ್ಲಿ ನಟಿಸುತ್ತಾ ಸಾಗಿದ್ದಾರೆ. ಸದ್ಯ ಎರಡು ಸಿನಿಮಾಗಳು ರಿಲೀಸ್ಗೆ ಬಾಕಿ ಇದೆ. ಶೇಷಾದ್ರಿ ಅವರ ಮೋಹನದಾಸ ಎಂಬ ಸಿನಿಮಾ ಇಂಗ್ಲೀಷ್, ಕನ್ನಡ, ಹಿಂದಿ ಸಿನಿಮಾಗಳಲ್ಲಿ ಸಿದ್ದವಾಗಿದ್ದು, ರಿಲೀಸ್ಗೆ ರೆಡಿಯಾಗಿದೆ. ಅಷ್ಟೇ ಅಲ್ಲ ಸಿಕ್ಕಾಪಟ್ಟೆ ಬ್ಯುಸಿ ಇರುವ ದತ್ತಣ್ಣ ಮೂರು ಸಿನಿಮಾಗಳಿ ಸಹಿ ಹಾಕಿದ್ದು, ಇಷ್ಟರಲ್ಲಿಯೇ ಸಿನಿಮಾ ಶೂಟಿಂಗ್ ಆರಂಭಿಸಲಿದೆ.