ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ರಾಕ್ಸ್ಟಾರ್ ಎಂದೇ ಜನಪ್ರಿಯರಾಗಿರುವ ದೇವಿ ಶ್ರೀಪ್ರಸಾದ್ ಅಲಿಯಾಸ್ ಡಿಎಸ್ಪಿ, ಟಿ-ಸೀರೀಸ್ ಜೊತೆಗೆ ಕೈಜೋಡಿಸಿ ‘ಓ ಪರಿ’ ಎಂಬ ಹಿಂದಿ ಸಿಂಗಲ್ ಹೊರತಂದಿರುವುದು, ಅದನ್ನು ಇತ್ತೀಚೆಗೆ ಮುಂಬೈನಲ್ಲಿ ರಣವೀರ್ ಸಿಂಗ್ ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ಈಗ ‘ಓ ಪರಿ’ಯ ತಮಿಳಿನ ಅವತರಣಿಕೆಯಾದ ‘ಓ ಪೆಣ್ಣೆ’ ಮತ್ತು ತೆಲುಗು ಅವತರಣಿಕೆಯಾದ ‘ಓ ಪಿಲ್ಲ’ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ತಮಿಳು ಮತ್ತು ತೆಲುಗು ‘ಬಿಗ್ ಬಾಸ್’ ಕಾರ್ಯಕ್ರಮಗಳ ಲಾಂಚ್ನಲ್ಲಿ ಎರಡೂ ಹಾಡುಗಳು ಬಿಡುಗಡೆಯಾಗಿದ್ದು, ತಮಿಳು ಹಾಡನ್ನು ಕಮಲ್ ಹಾಸನ್ ಬಿಡುಗಡೆ ಮಾಡಿದರೆ, ತೆಲುಗು ಹಾಡನ್ನು ನಾಗಾರ್ಜುನ ಬಿಡುಗಡೆ ಮಾಡಿ ಡಿಎಸ್ಪಿಗೆ ಶುಭ ಕೋರಿದ್ದಾರೆ.
‘ಓ ಪಿಲ್ಲ’ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿರುವ ನಾಗಾರ್ಜುನ, ‘’ಓ ಪರಿ’ ಹಾಡು ಸೂಪರ್ ಹಿಟ್ ಆಗಿದೆ, ಈ ಹಾಡು ತೆಲುಗಿನಲ್ಲೂ ಮೂಡಿಬರಬೇಕಿತ್ತು ಅಂದುಕೊಳ್ಳುತ್ತಿರುವಾಗಲೇ, ಡಿಎಸ್ಪಿ ತೆಲುಗು ಹಾಡಿನೊಂದಿಗೆ ಬಂದಿದ್ದಾರೆ. ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ನನಗೆ ಮೊದಲಿನಿಂದಲೂ ಡಿಎಸ್ಪಿ ಅವರ ಪ್ರತಿಭೆ ಕುರಿತು ವಿಶೇಷವಾದ ಕುತೂಹಲ, ಆಸಕ್ತಿ ಎರಡೂ ಇದೆ. ಅವರು ಹೇಗೆ ಇಷ್ಟೊಂದು ಅದ್ಭುತವಾಗಿ ಕೆಲಸ ಮಾಡುವುದುರ ಜೊತೆಗೆ, ಹೇಗೆ ಈ ರೀತಿ ಹಿಟ್ ಹಾಡುಗಳನ್ನು ಕೊಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಇದೆ. ಹಾಗಿರುವಾಗಲೇ ಡಿಎಸ್ಪಿ ಇನ್ನೊಂದು ಅದ್ಭುತ ಹಾಡಿನೊಂದಿಗೆ ವಾಪಸ್ಸಾಗಿದ್ದಾರೆ’ ಎಂದಿದ್ದಾರೆ ನಾಗಾರ್ಜುನ.
ಡಿಎಸ್ಪಿ ತಮಗೆ ಬಹಳ ವರ್ಷಗಳಿಂದ ಗೊತ್ತು ಎಂದು ಹೇಳಿಕೊಂಡಿರುವ ಕಮಲ್ ಹಾಸನ್, ‘ಅವರು ತಮ್ಮ ಹಾಡು ಮತ್ತು ಪ್ರತಿಭೆಯಿಂದ ನನ್ನನ್ನು ಖುಷಿಪಡಿಸುತ್ತಲೇ ಇದ್ದಾರೆ. ತಮ್ಮ ಸಾಧನೆಗಳಿಂದ ಹೊಸಹೊಸ ಮೈಲಿಗಲ್ಲುಗಳನ್ನು ತಲುಪುತ್ತಿದ್ದಾರೆ. ಪ್ರತಿಯೊಬ್ಬ ಸಂಗೀತ ನಿರ್ದೇಶಕರು ಸಹ ಈ ನಿಟ್ಟಿನಲ್ಲಿ ಹೊಸ ಸಾಧನೆಗಳನ್ನು ಮಾಡುವುದರ ಬಗ್ಗೆ ಯೋಚಿಸಬೇಕು. ಅವರ ಸಾಧನೆ ಮತ್ತು ಕೆಲಸಗಳಿಗೆ ಪ್ರತಿಯಾಗಿ ಅವರಿಗೆ ಯಶಸ್ಸು ಸಿಗುತ್ತಲೇ ಇದ್ದು, ಈಗ ಓ ಪರಿ ಮೂಲಕ ಮತ್ತೊಂದು ದೊಡ್ಡ ಯಶಸ್ಸನ್ನು ಕಂಡಿದ್ದಾರೆ ಡಿಎಸ್ಪಿ. ಅವರು ಇನ್ನಷ್ಟು ಎತ್ತರಗಳನ್ನು ಕಾಣಲಿ ಎನ್ನುವುದರ ಜೊತೆಗೆ, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಭೂಷಣ್ ಕುಮಾರ್ರಂತಹವರ ಸಹಕಾರ ಹೀಗೆಯೇ ಮುಂದುವರೆಯಲಿ’ ಎಂದು ಹಾರೈಸಿದ್ದಾರೆ.
ಕಮಲ್ ಹಾಸನ್ ಮತ್ತು ನಾಗಾರ್ಜುನ ಅವರ ಸಹಕಾರ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಡಿಎಸ್ಪಿ, ಅವರಿಬ್ಬರ ಪ್ರೋತ್ಸಾಹವಿಲ್ಲದೆ ಇಷ್ಟು ದೂರ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ. ಇಂಥದ್ದೊಂದು ಅಂತಾರಾಷ್ಟ್ರೀಯ ಮಟ್ಟದ ಹಾಡಿನ ಬಗ್ಗೆ ನಾನು ಮೊದಲು ಪ್ರಸ್ತಾಪ ಮಾಡಿದ್ದು ಕಮಲ್ ಹಾಸನ್ ಅವರ ಬಳಿ. ಅವರ ಪ್ರೋತ್ಸಾಹದ ಮಾತುಗಳು ನನ್ನನ್ನು ಈ ಹಾಡು ಸಂಯೋಜಿಸುವಂತೆ ಮಾಡಿತು. ಅವರ ಸಂಗೀತಾಸಕ್ತಿಯೇ ನಮ್ಮಿಬ್ಬರನ್ನೂ ಇಷ್ಟು ಹತ್ತಿರಕ್ಕೆ ಸೇರಿಸಿದ್ದು. ಅದೇ ಕಾರಣಕ್ಕೆ ಈ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸಲಾಯಿತು ಎಂದು ಹೇಳಿಕೊಂಡಿದ್ದಾರೆ. ‘ಓ ಪೆಣ್ಣೆ’ ಮತ್ತು ‘ಓ ಪಿಲ್ಲ’ ಹಾಡುಗಳು ಯೂಟ್ಯೂಬ್ನ ಟಿ-ಸೀರೀಸ್ ಚಾನಲ್ನಲ್ಲಿ ಲಭ್ಯವಿದೆ.