Left Ad
ವಂಚನೆ ಕೇಸ್ ಬಗ್ಗೆ ಧ್ರುವ ಸರ್ಜಾ ಆಪ್ತ ಹೇಳಿದ್ದೇನು? exclusive - Chittara news
# Tags

ವಂಚನೆ ಕೇಸ್ ಬಗ್ಗೆ ಧ್ರುವ ಸರ್ಜಾ ಆಪ್ತ ಹೇಳಿದ್ದೇನು? exclusive

ಬಹುಶಃ ಹಿಂದೆ ಯಾವ ನಿರ್ಮಾಪಕರೂ, ಹೀರೋ ವಿರುದ್ಧ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿರುವ ಉದಾಹರಣೆ ಇರಲಿಲ್ಲ. ಹೀರೋಗಳು ಅತ್ತ ಮುಂಗಡ ಪಡೆದು ಚಿತ್ರವನ್ನೂ ಮಾಡಿಕೊಡದಿದ್ದರೆ, ಅವರ ವಿರುದ್ಧ ಕಲಾವಿದರ ಸಂಘಕ್ಕೋ, ವಾಣಿಜ್ಯ ಮಂಡಳಿಗೋ ದೂರು ಕೊಟ್ಟವರು ಇದ್ದಾರೆ. ತೆರೆಮರೆಯಲ್ಲೇ ಪ್ರಯತ್ನ ನಡೆಸಿ, ತಮ್ಮ ದುಡ್ಡು ವಾಪಸ್ಸು ಪಡೆದವರು ಇದ್ದಾರೆ. ಇನ್ನು, ಹೀರೋಗಳು ಅದೆಷ್ಟೇ ಕಿರಿಕಿರಿ ಮಾಡಿದರೂ, ಮಾನಸಿಕ ಹಿಂಸೆ ನೀಡಿದರೂ, ಅದನ್ನು ಹೇಳಿಕೊಳ್ಳುವುದಕ್ಕೆ ಹಲವು ನಿರ್ಮಾಪಕರು ಹೆದರುತ್ತಾರೆ. ಎಲ್ಲಿ ಹೀರೋಗಳು ಮತ್ತು ಅವರ ಅಭಿಮಾನಿಗಳ ವಕ್ರದೃಷ್ಟಿ ಬೀಳುತ್ತದೋ, ಅದರಿಂದ ಏನೆಲ್ಲಾ ಎದುರಿಸಬೇಕಾಗುತ್ತದೋ ಎಂದು ಹೆದರಿ ಸುಮ್ಮನೆ ಇದ್ದುಬಿಡುವವರೇ ಹೆಚ್ಚು. ಹಾಗಿರುವಾಗ ರಾಘವೇಂದ್ರ ಹೆಗ್ಡೆ ಎಂಬ ನಿರ್ಮಾಪಕ-ನಿರ್ದೇಶಕ, ಧ್ರುವ ಸರ್ಜಾ ವಿರುದ್ಧ ಸೀದಾ ವಂಚನೆ ಕೇಸ್‍ ದಾಖಲಿಸಿದ್ದಾರೆ. ಧ್ರುವ ತಮಗೆ 3.15 ಕೋಟಿ ರೂ. ವಂಚನೆ ಮಾಡಿದ್ದಾರೆಂದು ಅವರು ಆರೋಪಿಸಿದ್ದಾರೆ.

ಹೆಗ್ಡೆ ಈ ಹಿಂದೆ ದರ್ಶನ್‍ ಅಭಿನಯದಲ್ಲಿ ‘ಜಗ್ಗು ದಾದಾ’ ಎಂಬ ಚಿತ್ರ ಮಾಡಿದ್ದರು. ಆ ನಂತರ ಧ್ರುವ ಸರ್ಜಾ ಜೊತೆಗೆ ಚಿತ್ರ ಮಾಡುವುದಾಗಿ ಘೋಷಿಸಿದ್ದರು. ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಜಾಹೀರಾತು ಸಹ ಬಂದಿತ್ತು. ಈ ಚಿತ್ರದಲ್ಲಿ ಧ್ರುವ, ಪ್ಯಾರಾ ಕಮಾಂಡೋ ಆಗಿ ನಟಿಸುತ್ತಿರುವ ಮಾಹಿತಿ ಇತ್ತು. ಚಿತ್ರದ ಮೊದಲಾರ್ಧ ಅದ್ಭುತವಾಗಿ ಮೂಡಿಬಂದಿದ್ದು, ಕಥೆ ಕೇಳಿ ಖುಷಿಯಾಯ್ತು ಎಂದು 2020ರ ಡಿಸೆಂಬರ್‍ 23ರಂದು ಧ್ರುವ ಟ್ವೀಟ್‍ ಸಹ ಮಾಡಿದ್ದರು. ಅಂದಹಾಗೆ, ಈ ಚಿತ್ರದಲ್ಲಿ ನಟಿಸುವುದಕ್ಕೆ 2018ರಿಂದ 2021ರ ಮಧ್ಯೆ, ಸುಮಾರು 3.15 ಕೋಟಿ ರೂ ಹಣವನ್ನು ಧ್ರುವಗೆ ಹೆಗ್ಡೆ ಎರಡು ಕಂತುಗಳಲ್ಲಿ ನೀಡಿದ್ದರಂತೆ. 2019ರಲ್ಲೇ ಚಿತ್ರ ಮಾಡುತ್ತಿರುವ ಒಪ್ಪಂದವಾದರೂ, ಇದುವರೆಗೂ ಚಿತ್ರ ಶುರುವಾಗಿಲ್ಲ. ಯಾವಾಗ ಶುರುವಾಗುತ್ತದೆ ಎಂಬುದೂ ಗೊತ್ತಿಲ್ಲ. ಕಾದುಕಾದು ಸುಸ್ತಾದ ರಾಘವೇಂದ್ರ ಹೆಗ್ಡೆ, ಧ್ರುವ ವಿರುದ್ಧ ತಿರುಗಿಬಿದ್ದಿದ್ದಾರೆ. ತಾವು ಕೊಟ್ಟ ಸಂಭಾವನೆಯನ್ನು ಹಿಂತಿರುಗಿ ನೀಡುವಂತೆ ಮಾಡಬೇಕು ಎಂದು ನ್ಯಾಯದ ಮೊರೆ ಹೋಗಿದ್ದಾರೆ.

ಈ ಬಗ್ಗೆ ಧ್ರುವ ಮಾತನಾಡದಿದ್ದರೂ, ಈ ಸಂಬಂಧ ಧ್ರುವ ಅವರ ಪರವಾಗಿ ಅವರ ಆಪ್ತ ಅಶ್ವಿನ್‍ ಹೇಳಿಕೆ ನೀಡಿದ್ದಾರೆ. ಈ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ. ‘ನಾವು ಅವರ ಬಳಿ ಸಾಲ ಪಡೆದಿಲ್ಲ, ಮುಂಗಡ ಪಡೆದಿದ್ದೇವೆ. ಚಿತ್ರ ಮಾಡುವುದಿಲ್ಲ ಎಂದು ಹೇಳಿಲ್ಲ. ದುಡ್ಡು ವಾಪಸ್ಸು ಕೊಡುವುದಿಲ್ಲ ಎಂದು ಹೇಳಿಲ್ಲ. ಮುಂದೆ ಕಾನೂನು ಪ್ರಕಾರ ಹೆಜ್ಜೆ ಇಡುತ್ತೇವೆ’ ಎಂದಿದ್ದಾರೆ.

ಇಷ್ಟಕ್ಕೂ ಆಗಿದ್ದೇನು? ಈ ಸಂಬಂಧ ರಾಘವೇಂದ್ರ ಹೆಗ್ಡೆ ಒಂದು ವೀಡಿಯೋ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ನಾನು ಮೂಲತಃ ಕರಾವಳಿಯವನು. ಬದುಕು ಕಟ್ಟಿಕೊಂಡಿದ್ದು ಮುಂಬೈನಲ್ಲಿ. ಹಂತಹಂತವಾಗಿ ಬೆಳೆದು ಈ ಹಂತಕ್ಕೆ ಬಂದಿದ್ದೇನೆ. ದರ್ಶನ್‍ ಅವರ ಜೊತೆಗೆ ‘ಜಗ್ಗುದಾದಾ’ ಚಿತ್ರ ಮಾಡಿದೆ. ಅದು ಯಶಸ್ವಿಯಾಯಿತು. ನನ್ನನ್ನು ನಿರ್ದೇಶಕನಾಗಿ ಗುರುತಿಸಿದರು. ನಂತರ ‘ಶನಿ’ ಮತ್ತು ‘ಮಹಾಕಾಳಿ’ ಧಾರಾವಾಹಿಗಳನ್ನು ಮಾಡಿದೆ. ಜನ ಅದನ್ನೂ ಯಶಸ್ವಿಗೊಳಿಸಿದರು. ಅದಾದ ಮೇಲೆ ಧ್ರುವ ಸರ್ಜಾ ಜೊತೆಗೆ ಚಿತ್ರ ಮಾಡಬೇಕು ಎಂದು ಅಡ್ವಾನ್ಸ್ ಕೊಟ್ಟೆ. ಕಥೆ ಓಕೆ ಆಯ್ತು. ಸ್ವಲ್ಪ ಕರೆಕ್ಷನ್‍ ಇತ್ತು. ಆ ಕೆಲಸ ನಡೆಯುತ್ತಿತ್ತು. ಈ ಮಧ್ಯೆ, ‘ಕೆಡಿ – ದಿ ಡೆವಿಲ್‍’ ಚಿತ್ರ ಮುಗಿಸಿ ಈ ಚಿತ್ರ ಮಾಡುವುದಾಗಿ ಧ್ರುವ ಹೇಳಿದರು. ನೋಡನೋಡುತ್ತಿದ್ದಂತೆಯೇ ಎಂಟು ವರ್ಷ ಹೋಯಿತು. ಅಷ್ಟರಲ್ಲಿ ತಮಿಳಿನ ‘ಅಮರನ್‍’ ಚಿತ್ರ ಬಿಡುಗಡೆಯಾಯಿತು. ನಮ್ಮ ಚಿತ್ರದ ಶೇ. 70ರಷ್ಟು ಭಾಗ ಅದರಲ್ಲಿತ್ತು. ಹಾಗಾಗಿ, ಆ ಕಥೆಯನ್ನು ಅಲ್ಲಿಗೇ ಬಿಟ್ಟುಬಿಟ್ಟೆವು. ಕೊನೆಗೆ ಅವರೇ ಒಬ್ಬ ಬರಹಗಾರರನ್ನು ಕೊಟ್ಟರು. ಒಂದು ಕಥೆಯೂ ಓಕೆ ಆಯ್ತು’ ಎನ್ನುತ್ತಾರೆ ಹೆಗ್ಡೆ.

2025ರ ಫೆಬ್ರವರಿಯಲ್ಲಿ ಈ ಕುರಿತು ಮೀಟಿಂಗ್‍ ಆಯಿತಂತೆ. ‘ಅಲ್ಲಿ ಅರ್ಜುನ್‍ ಸರ್ಜಾ ಸಹ ಇದ್ದರು. ಆ ಸಂದರ್ಭದಲ್ಲಿ ಈ ಚಿತ್ರವನ್ನು ಯಾವ ಲೆವೆಲ್‍ಗೆ ಮಾಡ್ತೀರಾ? ಎಂದು ಧ್ರುವ ಕೇಳಿದರು. ಚಿತ್ರಕಥೆ ಏನೆಲ್ಲಾ ಡಿಮ್ಯಾಂಡ್‍ ಮಾಡುತ್ತದೋ, ಖರ್ಚು ಮಾಡುವುದಕ್ಕೆ ತಯಾರು ಎಂದೆ. ಕನ್ನಡ ಸಿನಿಮಾ ಮಾಡ್ತೀರೋ ಅಥವಾ ಪ್ಯಾನ್‍ ಇಂಡಿಯಾ ಸಿನಿಮಾ ಮಾಡ್ತೀರೋ ಎಂದು ಕೇಳಿದರು. ನಾನು ಕನ್ನಡ ಸಿನಿಮಾ ಮಾತ್ರ ಮಾಡುವುದಾಗಿ ಹೇಳಿದೆ. ಪ್ಯಾನ್ ‍ಇಂಡಿಯಾ ಚಿತ್ರಕ್ಕೆ ಸಾಕಷ್ಟು ಖರ್ಚಾಗುವುದರಿಂದ ಬೇಡ ಎಂದೆ. ‘‘ಮಾರ್ಟಿನ್‍’, ‘ಕೆಡಿ’ ಪ್ಯಾನ್‍ ಇಂಡಿಯಾ ಲೆವೆಲ್‍ನಲ್ಲಿ ಮೂಡಿಬರುತ್ತಿದೆ. ಇನ್ನೂ ಒಬ್ಬ ನಿರ್ಮಾಪಕರಿಗೆ ಡೇಟ್ ಕೊಟ್ಟಿದ್ದು, ಅವರು ಸಹ ದೊಡ್ಡ ಮಟ್ಟಕ್ಕೆ ಚಿತ್ರ ಮಾಡುತ್ತಿದ್ದಾರೆ. ಹಾಗಾಗಿ, ಅವರದ್ದು ಮುಗಿದ ಮೇಲೆ ನೀವು ಮಾಡಿ’ ಎಂದರು. ಅಷ್ಟರಲ್ಲಾಗಲೇ ಎಂಟು ವರ್ಷ ವೇಸ್ಟ್ ಆಗಿತ್ತು. ಇನ್ನೊಂದು ಸಿನಿಮಾ ಮಾಡುವುದಕ್ಕೆ ನಾಲ್ಕು ವರ್ಷ ಬೇಕು. ಅಲ್ಲಿಗೆ 12 ವರ್ಷ ಹೋದಂತೆ. ಈ ಮಧ್ಯೆ, ಹೈದರಾಬಾದ್‍ನ ನಿರ್ಮಾಣ ಸಂಸ್ಥೆಯೊಂದು, ‘ನಿಮಗಿಂತ ಮುಂಚೆ ನಾವು ಡೇಟ್‍ ಪಡೆದಿದ್ದರಿಂದ, ನಮ್ಮ ಸಿನಿಮಾಗಿಂತ ಮುನ್ನ ನೀವು ಸಿನಿಮಾ ಮಾಡುವಂತಿಲ್ಲ’ ಎಂದು ನೋಟೀಸ್‍ ಕಳಿಸಿದರು. ಆ ಚಿತ್ರ ಮುಗಿಯುವುದಕ್ಕೆ ಕಾದರೆ, ಅಲ್ಲಿಗೆ 12 ಪ್ಲಸ್‍ ಮೂರು ಎಂದರೆ 15 ವರ್ಷ ವೇಸ್ಟ್’ ಎಂದಿದ್ದಾರೆ.

ಇಷ್ಟು ವರ್ಷಗಳ ನಂತರ ಈಗಲೂ ಡೇಟ್ ಮುಂದಕ್ಕೆ ಹೋದರೆ, ಇನ್ನು ಕಾಯುವುದು ಸರಿಯಲ್ಲ ಎಂದು ನೋಟೀಸ್‍ ಕಳಿಸಿದ್ದೇನೆ ಎಂದಿರುವ ಹೆಗ್ಡೆ, ‘ನೋಟೀಸ್‍ ಕಳಿಸಿದ ಮೇಲೆ, ನನ್ನನ್ನು ಕನ್ನಡ ವಿರೋಧಿ ಎಂದು ಬಿಂಬಿಸುವ ಕೆಲಸವಾಗುತ್ತಿದೆ. ನಾನು ಕನ್ನಡ ವಿರೋಧಿ ಅಲ್ಲ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯ ಏನು ತೀರ್ಪು ಕೊಡುತ್ತದೋ ನಾನದ್ದಕ್ಕೆ ಬದ್ಧ. ಇಲ್ಲಿ ನಾನು ಯಾರ ವಿರುದ್ಧವೂ ನಿಂತಿಲ್ಲ. ಯಾರ ಬಗ್ಗೆಯೂ ಬೇಸರವಿಲ್ಲ. ಆದರೆ, ಇದರಿಂದ ತುಂಬಾ ಸಮಯ ವೇಸ್ಟ್ ಆಗುತ್ತದೆ. ಸಮಯ ಹಾಳಾಗುವುದರ ಜೊತೆಗೆ ಮಾನಸಿಕ ಹಿಂಸೆ ಬೇರೆ. ‘ಜಗ್ಗು ದಾದಾ’ ಆದ್ಮೇಲೆ ನಾನು ಸಿನಿಮಾ ಮಾಡಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಎಂಟು ವರ್ಷಗಳಿಂದ ಸಿನಿಮಾ ಮಾಡಿಲ್ಲ ಎನ್ನುತ್ತಾರೆ. ಧ್ರುವ ಸರ್ಜಾ ಡೇಟ್‍ ಕೊಟ್ಟಿದ್ದರೆ, ನಾನು ಯಾವತ್ತೋ ಸಿನಿಮಾ ಮಾಡಿರುತ್ತಿದ್ದೆ. ಎಂಟು ವರ್ಷಗಳಲ್ಲಿ ನಾಲ್ಕು ಸಿನಿಮಾ ಮಾಡಿರುತ್ತಿದ್ದೆ. ಸಿನಿಮಾ ಗೆಲ್ಲುತ್ತದೋ, ಸೋಲುತ್ತದೋ ಬೇರೆ ಮಾತು. ನಾನು ಕೆಲಸ ಮಾಡಿರುತ್ತಿದ್ದೆ. ಎಂಟು ವರ್ಷಗಳಲ್ಲಿ ಸಾಕಷ್ಟು ಸಮಯ ಹೋಗಿದೆ. ಆ ಡಿಪ್ರೆಶನ್‍, ನೋವು, ತಲೆನೋವು ಯಾರಿಗೆ ಬೇಕು. ನಾನು ಯಾವತ್ತೂ ಖಾಲಿ ಕೂತಿಲ್ಲ. ನಾನು ಅವರಿಗೆ ಮೂರು ಕೋಟಿ ಹಣ ಕೊಟ್ಟಿದ್ದೇನೆ. ಅದರ ಬಡ್ಡಿಯೇ ಸಾಕಷ್ಟಾಗುತ್ತದೆ. ನನಗೆ ಬ್ಯುಸಿನೆಸ್‍ ಇದೆ. ಹಾಗಾಗಿ, ತಡೆದುಕೊಳ‍್ಳುವ ಶಕ್ತಿ ಇದೆ. ಸಾಮಾನ್ಯ ಮನುಷ್ಯನಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಪ್ರತಿಯೊಂದಕ್ಕೂ ಒಂದು ಸಮಯವಿದೆ. ಅದರಲ್ಲಿ ಮುಗಿಯಬೇಕು’ ಎಂದಿದ್ದಾರೆ ಹೆಗ್ಡೆ.

ಇಷ್ಟೇ ಸಾಕು, ಬೇರೇನು ಹೇಳುವ ಅವಶ್ಯಕತೆಯೇ ಇಲ್ಲ. ಕನ್ನಡ ಚಿತ್ರರಂಗದ ಬದಲಾದ ಪರಿಸ್ಥಿತಿ, ಕೆಲವು ಹೀರೋಗಳ ಮನಸ್ಥಿತಿ, ಅವರ ಪ್ಯಾನ್‍ ಇಂಡಿಯಾ ಪ್ರೀತಿ, ನಿರ್ಮಾಪಕರನ್ನು ನೋಡಿಕೊಳ್ಳುವ ರೀತಿ … ಇದೆಲ್ಲಕ್ಕೂ ಇದೊಂದು ಉದಾಹರಣೆ ಸಾಕು. ಇದು ಧ್ರುವ ಸರ್ಜಾ ಒಬ್ಬರ ವಿಷಯವಲ್ಲ. ಇವತ್ತು ಕೆಲವು ಹೀರೋಗಳಿಂದಾಗಿ ನಿರ್ಮಾಪಕರು ನುಜ್ಜುಗುಜ್ಜಾಗಿದ್ದಾರೆ. ಆದರೆ, ಬಹಿರಂಗವಾಗಿ ಮಾತನಾಡುವುದಕ್ಕೆ ಹೆದರುತ್ತಿದ್ದಾರೆ. ಎಲ್ಲರೂ ಧೈರ್ಯ ಮಾಡಿ ನಿಂತರೆ, ಬಹುಶಃ ಈ ವ್ಯಾಜ್ಯಗಳನ್ನು ಬಗೆಹರಿಸುವುದಕ್ಕೆ ಕನ್ನಡ ಚಿತ್ರರಂಗಕ್ಕೆ ಒಂದು ವಿಶೇಷ ನ್ಯಾಯಾಲಯ ಸ್ಥಾಪನೆಯಾಗಬೇಕೇನೋ?

-ಚೇತನ್ ನಾಡಿಗೇರ್ (ಲೇಖಕರು ಸಿನಿಮಾ ಪತ್ರಕರ್ತರು)

 

 

Spread the love
Translate »
Right Ad