ಡಾ.ರಾಜ್.. ಕನ್ನಡಿಗರ ಎದೆಬಡಿತದ ಸದ್ದು, ಕನ್ನಡಿಗರ ಉಸಿರು, ಕನ್ನಡ ಕಲಾರಸಿಕರ ಹೃದಯ ಸಾಮ್ರಾಜ್ಯದ ಅಧಿಪತಿ. ರಾಜ್ ಕುಮಾರ್ ಅಂದ್ರೆ ಬರೀ ಹೆಸರಲ್ಲ, ಅದೊಂದು ಶಕ್ತಿ, ಅದು ಕನ್ನಡದ ಪ್ರತಿಧ್ವನಿ, ಕನ್ನಡಿಗರಿಗಾಗಿ, ಕನ್ನಡಿಗರಿಂದ, ಕನ್ನಡಕ್ಕಾಗಿ ಬಾಳಿ ಬದುಕಿದ ಮೇರುನಟ, ಹೆಮ್ಮೆಯ ಕನ್ನಡಿಗ, ಇಂದು ವರನಟ ಡಾ.ರಾಜಕುಮಾರ್ ಅವರ 95ನೇ ಹುಟ್ಟುಹಬ್ಬ.
ಇಂದಿನ ಅವರ 95ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ಈಗಾಗಲೇ ನಾನಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಅವರ ಅಭಿಮಾನಿಗಳು. ಕರ್ನಾಟಕ ಸರಕಾರ ಮತ್ತು ಡಾ.ರಾಜ್ ಕುಮಾರ್ ಸ್ಮಾರಕ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕಂಠೀರವ ಸ್ಟುಡಿಯೋಗೆ ಇಂದು ಬೆಳಿಗ್ಗೆಯೇ ಕುಟುಂಬಸ್ಥರು ಆಗಮಿಸಿ, ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ಕುಮಾರ್ ಸ್ಮಾರಕದ ಬಳಿ ರಾಘವೇಂದ್ರ ರಾಜ್ಕುಮಾರ್, ಪತ್ನಿ ಮಂಗಳ, ಡಾ.ರಾಜ್ ಪುತ್ರಿ ಲಕ್ಷ್ಮಿ ದಂಪತಿ, ಅಶ್ವಿನಿ ರಾಜ್ಕುಮಾರ್, ಪುತ್ರಿ ವಂದಿತಾ ಆಗಮಿಸಿದ್ದಾರೆ.
ಡಾ.ರಾಜ್ ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ್ದಾರೆ. ಅಂದಹಾಗೆ, ಈ ವೇಳೆ ಹೊನ್ನವಳ್ಳಿ ಕೃಷ್ಣ ಭಾಗಿಯಾಗಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದರು.
ಪ್ರತಿ ವರ್ಷದಂತೆ ಈ ಸಲವೂ ಡಾ.ರಾಜ್ ಪುಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ಈ ಎಲ್ಲ ಕೆಲಸಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲೇ ಶುರುವಾಗಲಿವೆ.
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್… ಹೀಗೆಂದರೆ ಬಹುತೇಕರಿಗೆ ತಿಳಿಯಲಿಕ್ಕಿಲ್ಲ. ಯಾಕೆಂದ್ರೆ ಚಾಮರಾಜನಗರದ ಸಿಂಗಾನಲ್ಲೂರು ಎಂಬ ಕುಗ್ರಾಮದ ಪುಟ್ಟ ಬಾಲಕ ‘ಮುತ್ತುರಾಜನನ್ನು ಎದೆಗಾನಿಸಿಕೊಂಡು ‘ಡಾ.ರಾಜಕುಮಾರ’ನನ್ನಾಗಿ ಮಾಡಿದ್ದು ಇದೇ ಅಭಿಮಾನಿ ದೇವರುಗಳು.
ಅವರಿಗೆ ರಾಜ್ ಎಂದರೆ ಮನೆಮಗ. ಡಾ.ರಾಜ್ ಕುಮಾರ್ ಹುಟ್ಟಿದ್ದು 1929, ಏಪ್ರಿಲ್ 24ರಂದು. ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ ಹಿರಿಮಗ ಈ ‘ಗಾಜನೂರು ಗಂಡು.
ಡಾ.ರಾಜ್, ಓದಿದ್ದು ನಾಲ್ಕನೇ ಕ್ಲಾಸ್. ಆದರೆ ಸಾಧನೆ ಮಾತ್ರ ಶಿಖರದಷ್ಟು. ಬಹುಶಃ ಸ್ಯಾಂಡಲ್ವುಡ್ ಒಂದೇ ಅಲ್ಲ, ಭಾರತೀಯ ಚಿತ್ರರಂಗ.. ಅಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ರಾಜ್ ಕುಮಾರ್ ಅವ್ರಿಗೆ ಸರಿಸಾಟಿಯಾದವರು ಯಾರು ಇಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ರಾಜ್ ಗೆ ರಾಜ್ ಒಬ್ಬರೇ ಸರಿಸಾಟಿ! ಡಾ.ರಾಜ್ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪʼ ಅಂತ ಎಲ್ಲರೂ ಹೇಳ್ತಾರೆ. ಆದ್ರೆ ಅಸಲಿಗೆ ರಾಜ್ ಬೇಡರ ಕಣ್ಣಪ್ಪ ಸಿನಿಮಾಗೂ ಮೊದಲೇ ಕೆಲವೊಂದಿಷ್ಟು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು.
ರಾಜ್ ತಂದೆ ರಂಗಭೂಮಿ ಕಲಾವಿದರಾಗಿದ್ರಿಂದ ರಾಜ್ ಗೂ ಬಣ್ಣದ ನಂಟಿತ್ತು. ಕೆಲವೊಂದಿಷ್ಟು ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದ ರಾಜ್, 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಣ್ಣಪ್ಪನ ಪಾತ್ರ ಮಾಡಿದ್ರು. ಅಲ್ಲಿಗೆ ‘ಮುತ್ತುರಾಜ್’ ಎಂಬ ಹಳ್ಳಿ ಹೈದನ ಬದುಕೇ ಬದಲಾಯಿತು. ‘ಮುತ್ತುರಾಜ’ ಕನ್ನಡಿಗರ ಮನೆ ಮನೆಯ ‘ರಾಜಕುಮಾರ’ನಾಗಿ ಬೆಳೆದ್ರು, ಉಳಿದ್ರು.
ಬೇಡರ ಕಣ್ಣಪ್ಪನಿಂದ ಶುರುವಾದ ರಾಜ್ ಸಿನಿ ಪಯಣ ತಡೆಯಿಲ್ಲದೇ ಸಾಗಿತು. ಬೇಡರ ಕಣ್ಣಪ್ಪನಿಂದ ಶಬ್ದವೇದಿವರೆಗೂ ರಾಜ್ ಮುಟ್ಟಿದ್ದೆಲ್ಲವೂ ಚಿನ್ನ, ಅಭಿನಯಿಸಿದ್ದೆಲ್ಲವೂ ಚೆನ್ನ. ಬೇಡರ ಕಣ್ಣಪ್ಪ, ಓಹಿಲೇಶ್ವರ, ಭೂಕೈಲಾಸ, ರಣಧೀರ ಕಂಠೀರವ, ದಶಾವತಾರ, ಭಕ್ತ ಕನಕದಾಸ, ವಿಜಯನಗರದ ವೀರಪುತ್ರ, ಇಮ್ಮಡಿ ಪುಲಕೇಶಿ, ಹುಲಿಯ ಹಾಲಿನ ಮೇವು, ವೀರ ಕೇಸರಿ, ಶ್ರೀಕೃಷ್ಣ ದೇವರಾಯ, ಮಂತ್ರಾಲಯ ಮಹಾತ್ಮೆ, ಸತ್ಯಹರೀಶ್ಚಂದ್ರ, ಸನಾದಿ ಅಪ್ಪಣ್ಣ, ಬೀದಿ ಬಸವಣ್ಣ, ಬಂಗಾರದ ಮನುಷ್ಯ, ಜೇಡರಬಲೆ, ಮೇಯರ್ ಮುತ್ತಣ್ಣ,ಭಲೇಜೋಡಿ, ಗೋವಾದಲ್ಲಿ ಸಿಐಡಿ 999, ಕಸ್ತೂರಿ ನಿವಾಸ, ಹೊಸಬೆಳಕು, ಕವಿರತ್ನ ಕಾಳಿದಾಸ, ಸಿಪಾಯಿ ರಾಮು, ಶಂಕರ್ ಗುರು, ಬಂಗಾರದ ಪಂಜರ, ಭಕ್ತ ಪ್ರಹ್ಲಾದ, ದಾರಿತಪ್ಪಿದ ಮಗ, ಭಾಗ್ಯವಂತರು, ಆಪರೇಷನ್ ಡೈಮಂಡ್ ರಾಕೆಟ್, ಗಂಧದಗುಡಿ, ಶಬ್ದವೇದಿ… ಊಫ್.. ರಾಜ್ ಅಭಿನಯಿಸಿದ್ದು ಒಂದೇ, ಎರಡೇ… ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜ್ ನಟಿಸಿದ್ದಾರೆ.
ಡಾ.ರಾಜ್ ಬರೀ ನಟರೊಂದೇ ಅಲ್ಲ, ಗಾಯಕರಾಗಿಯೂ ಪ್ರಸಿದ್ಧರು. ತಮ್ಮ ಗಾಯನಕ್ಕಾಗೇ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಡಾ.ರಾಜ್. ‘ಸಂಪತ್ತಿಗೆ ಸವಾಲ್’ ಸಿನಿಮಾದ ಹಾಡಿನಿಂದ ಶುರುವಾದ ರಾಜ್ ಗಾಯನಯಾತ್ರೆ ಕೊನೆಯವರೆಗೂ ಸಾಗುತ್ತಲೇ ಇತ್ತು. ಬರೀ ತಮ್ಮೊಬ್ಬರಿಗೆ ಅಷ್ಟೇ ದನಿನೀಡಿಲ್ಲ ರಾಜ್.
ಕನ್ನಡದ ಅದೆಷ್ಟೋ ಹಿರಿ-ಕಿರಿಯ ನಟರಿಗೆ ದನಿಯಾಗಿದ್ದು ಗಾನಗಂಧರ್ವನ ಹೆಚ್ಚುಗಾರಿಕೆ. ತಮ್ಮ ಕಂಠಸಿರಿಗಾಗೇ ‘ಜೀವನಚೈತ್ರ’ ಸಿನಿಮಾದ ‘ನಾದಮಯ’ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದು, ಇಡೀ ಲೋಕವೇ ತಿರುಗಿ ನೋಡುವಂತೆ ಮಾಡಿದ್ದರು. ಇನ್ನೊಂದು ವಿಶೇಷ ಅಂದ್ರೆ ಅದೆಷ್ಟೋ ಹಾಡು ಹಾಡಿ, ಅದೆಷ್ಟೋ ಸ್ಟಾರ್ ನಟರಿಗೆ ದನಿ ನೀಡಿದ್ದ ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವ್ರಿಗೂ ದನಿಯಾಗಿದ್ದು ನಮ್ಮ ರಾಜಣ್ಣ.