ಕಿತ್ತೂರು ಚೆನ್ನಮ್ಮ ೧೯೬೧ರಲ್ಲಿ ಬಿಡುಗಡೆಯಾದ ಕಪ್ಪು ಬಿಳುಪು ಸಾಮಾಜಿಕ ಚಿತ್ರ. `ಪದ್ಮಿನಿ ಪಿಕ್ಚರ್ಸ್’ ಲಾಂಛನದಲ್ಲಿ, ಬಿ.ಆರ್.ಪಂತುಲು ನಿರ್ಮಾಣದ ಮತ್ತು ನಿರ್ದೇಶನದ ಈ ಚಿತ್ರಕ್ಕೆ ಜಿ.ವಿ.ಅಯ್ಯರ್ ಮತ್ತು ಹೆಚ್.ಎನ್.ಹೂಗಾರ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲಾ, ಪಿ.ಕಾಳಿಂಗ ರಾವ್ ಅವರ ಗಾಯನವಿತ್ತು. ಟಿ.ಜಿ.ಲಿಂಗಪ್ಪ ಸಂಗೀತ, ಡಬ್ಲ್ಯೂ, ಆರ್.ಸುಬ್ಬರಾವ್, ಎಂ.ಕರ್ಣನ್ ಛಾಯಾಗ್ರಹಣ ಈ ಚಿತ್ರಕ್ಕಿತ್ತು. ಬಿ.ಸರೋಜಾದೇವಿ, ರಾಜಕುಮಾರ್, ಲೀಲಾವತಿ, ರಾಜಾಶಂಕರ್, ಎಂ.ವಿ.ರಾಜಮ್ಮ, ಚಿಂದೋಡಿ ಲೀಲಾ, ನರಸಿಂಹರಾಜು, ಬಾಲಕೃಷ್ಣ, ಕೆ.ಎಸ್.ಅಶ್ವಥ್, ಹನುಮಂತಾಚಾರ್, ರಮಾದೇವಿ ,ಡಿಕ್ಕಿ ಮಾಧವರಾವ್ ಹೆಚ್.ಟಿ.ಅರಸ್, ಬಿ.ಕೆ. ಈಶ್ವರಪ್ಪ, ವೀರಪ್ಪ ಚಿಂದೋಡಿ, ಶ್ರೀಧರರಾವ್ ಶ್ರೀಕಾಂತ್, ರಾಜಶೇಖರ್ ಶ್ಯಾಮಸುಂದರ್, ಸೂರ್ಯಕುಮಾರ್, ಸೇತುಪತಿ ವಸಂತಸಾ ಗಿರಿಮಾಜಿ, ಹೂಗಾರ, ಶಿವಾಜಿರಾವ್ ಸುಬ್ಬಣ್ಣ, ಮಹಾಲಿಂಗ ಭಾಗವತ, ಮಹೇಶ್ವರಯ್ಯ ಎಂ.ಎನ್.ನಂಜಪ್ಪ, ಶಾರದಾ, ಅನಂತನಾರಾಯಣ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ಈ ಚಿತ್ರದ `ತನು ಕರಗದವರಲ್ಲಿ’ಹಾಡು ಇಂದಿಗೂ ಎವರ್‌ಗ್ರೀನ್ ಹಾಡಾಗಿ ಉಳಿದುಕೊಂಡಿದೆ.
ಕಥೆ
ಮೈಸೂರು ಹುಲಿ ಟಿಪ್ಪುಸುಲ್ತಾನ್, ಕಿತ್ತೂರಿನ ಅರಸ ಮಲ್ಲಸರ್ಜನನ್ನು (ರಾಜಕುಮಾರ್) ಸೆರೆಹಿಡಿದು ಕೊಪ್ಪಳದ ಕೋಟೆಯಲ್ಲಿ ಬಂಧಿಸಿರುತ್ತಾನೆ. ಟಿಪ್ಪುವಿನ ಉದ್ದೇಶ ಒಂದೇ. ಮಲ್ಲಸರ್ಜ ಅವನ ಮಾಂಡಲೀಕನಾಗಲು ಒಪ್ಪಿದರೆ ಅವರನ್ನು ವಿಮುಕ್ತಿಗೊಳಿಸುವುದು, ಮಲ್ಲಸರ್ಜ ಇದಕ್ಕೆ ಸಮ್ಮತಿಸುವುದಿಲ್ಲ. ಆಗ ಕಿತ್ತೂರಿನಲ್ಲಿದ್ದ ಮಲ್ಲಸರ್ಜನ ರಾಣಿ ರುದ್ರಾಂಬೆ ಕಲ್ಮಠದ ಸ್ವಾಮಿಗಳ ನೆರವು ಪಡೆಯುತ್ತಾಳೆ. ಮಾರುವೇಷ ಧರಿಸಿ, ಬುದ್ಧಿಚಾತುರ್ಯಗಳಿಂದ ಗಂಡನನ್ನು ಬಂಧಿಸಿಟ್ಟಿದ್ದ ಕೋಟೆಗೆ ಪ್ರವೇಶಿಸಿ, ಟಿಪ್ಪುವಿನ ಸೈನಿಕರ ಕಣ್ಣಿಗೆ ಮಣ್ಣೆರಚಿ, ಗಂಡನನ್ನು ಬಿಡಿಸಿಕೊಂಡು ಹೋಗುತ್ತಾಳೆ. ಇಷ್ಟಾಗಿ ಮಲ್ಲಸರ್ಜ ನೆಮ್ಮದಿಯಿಂದ ಇರುವಂತಿರಲಿಲ್ಲ. ಟಿಪ್ಪು ಯಾವ ಕ್ಷಣ ಬೇಕಾದರೂ ಪ್ರತೀಕಾರಕ್ಕಾಗಿ ದಂಡೆತ್ತಿ ಬರುವ ಸಾಧ್ಯತೆಗಳಿತ್ತು. ಇದನ್ನೆಲ್ಲ ಯೋಚಿಸಿದ ಮಲ್ಲಸರ್ಜ ಪಕ್ಕದ ಕಾಗತಿ ಧೂಳಪ್ಪ ದೇಸಾಯಿಯವರಲ್ಲಿಗೆ ನೆರವು ಕೇಳಲು ಹೋಗುತ್ತಾನೆ. ಅಲ್ಲಿ ಆತನ ಪುತ್ರಿ ಚೆನ್ನಮ್ಮಳನ್ನು ಕಂಡು ಅವಳಲ್ಲಿ ಅನುರಕ್ತನಾಗುತ್ತಾನೆ. ಚೆನ್ನಮ್ಮಳಿಗೂ ಮಲ್ಲಸರ್ಜನಲ್ಲಿ ಅನುರಾಗ ಉಂಟಾಗುತ್ತದೆ. ಈ ವಿಷಯವನ್ನು ರುದ್ರಾಂಬೆಗೆ ತಿಳಿಸಿದಾಗ ಆಕೆ ಸ್ವಲ್ಪವೂ ಅಸೂಯೆಪಡದೆ ತನ್ನ ಗಂಡನಿಗೆ ಚೆನ್ನಮ್ಮನನ್ನು ತಂದು ವಿವಾಹ ಮಾಡಿಸುತ್ತಾಳೆ.
ರುದ್ರಾಂಬೆಗೆ ಶಿವಲಿಂಗ ರುದ್ರಸರ್ಜನೆಂಬ ಮಗನಿರುತ್ತಾನೆ. ಅವನೆಂದರೆ ಚೆನ್ನಮ್ಮನಿಗೆ ತುಂಬು ವಾತ್ಸಲ್ಯ. ಅತ್ಯಂತ ಪ್ರೀತಿ, ಮಮತೆಯಿಂದ ಅವನಿಗೆ ಯುದ್ಧ ವಿದ್ಯೆಯ ಪಾಠ, ತಂತ್ರಗಳನ್ನು ಹೇಳಿಕೊಡುತ್ತಾಳೆ. ಅವನು ಪ್ರಾಪ್ತವಯಸ್ಸಿಗೆ ಬಂದಾಗ ಶಿವನಗುತ್ತಿ ದೇಸಾಯರ ಪತ್ರಿ ವೀರಾಂಬೆಯನ್ನು ತಂದು ವಿವಾಹ ಮಾಡಿಸುತ್ತಾಳೆ. ಈ ಮಧ್ಯೆ ಬ್ರಿಟಿಷರ ಕುತಂತ್ರಗಳನ್ನು ಎದುರಿಸುವ ಸಮಸ್ಯೆ ಕೂಡ ದೊಡ್ಡದಾಗಿ ಎದುರು ನಿಲ್ಲುತ್ತದೆ. ಅರಮನೆಯ ಕಾರಭಾರಿಗಳಾದ ಸ್ವಾರ್ಥ ಸಾಧಕ ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾವ್ ಪಿತೂರಿಯಿಂದ ಮಲ್ಲಸರ್ಜ ಪೇಳ್ವೆಯ ಸೆರೆಯಲ್ಲಿ ಕೊನೆಯುಸಿರೆಳೆಯಬೇಕಾಗುತ್ತದೆ. ನಂತರ ಪಟ್ಟಕ್ಕೆ ಬಂದ ಶಿವಲಿಂಗ ರುದ್ರಸರ್ಜ, ತಂದೆಯ ಸಾವಿಗೆ ಕಾರಣನಾದ ಪೇಳ್ವೆಯನ್ನು ನಿರ್ನಾಮ ಮಾಡಲು ತೀರ್ಮಾನಿಸಿ, ಈ ಕಾರ್ಯಸಾಧನೆಗೆ ಇಂಗ್ಲಿಷರ ತೆಕ್ಕೆಗೆ ಬೀಳುತ್ತಾನೆ. ಒಪ್ಪಂದವೂ ಆಗುತ್ತದೆ. ಈ ಬೆಳವಣಿಗೆಯಿಂದ ಚೆನ್ನಮ್ಮನಿಗೆ ದೊಡ್ಡ ಆಘಾತವಾಗುತ್ತದೆ, ಮಗನ ದುಡುಕಿಗೆ ಕೊರಗಿದ ತಾಯಿ ರುದ್ರಾಂಬೆ ಅದೇ ವ್ಯಸನದಲ್ಲಿ ಕಣ್ಮುಚ್ಚುತ್ತಾಳೆ. ತಾಯಿಯ ಸಾವು, ಜೊತೆಗೆ ತನ್ನ ತಪ್ಪಿನ ಅರಿವೂ ಆದ ಮೇಲೆ ಶಿವಲಿಂಗ, ತಾಯ್ನಾಡಿಗೆ ತಾನು ಮಾಡಿದ ದ್ರೋಹಕ್ಕಾಗಿ ಚಿಂತಿಸುತ್ತಾ ಆ ಕೊರಗಿನಲ್ಲೇ ಪ್ರಾಣಬಿಡುತ್ತಾನೆ. ಶಿವಲಿಂಗನ ಸಾವಿನೊಂದಿಗೆ ಕಿತ್ತೂರಿಗೆ ವಾರಸುದಾರರಿಲ್ಲದಂತಾಗುತ್ತದೆ.
ಚೆನ್ನಮ್ಮ ಕೂಡಲೇ ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ, ದತ್ತು ಪುತ್ರನನ್ನು ಗದ್ದುಗೆಯ ಮೇಲೆ ಕುಳ್ಳಿರಿಸಿ, ರಾಜ್ಯಭಾರದ ಹೊಣೆಯನ್ನು ತಾನು ಪೊರುತ್ತಾಳೆ. ಆದರೆ ಹೆಣ್ಣಿನ ನಾಯಕತ್ವಕ್ಕೆ ಎಂಥ ಬೆಲೆ?! ಇಂಥ ಸಮಯಕ್ಕಾಗಿಯೇ ಕಾಯುತ್ತಿದ್ದ ಬ್ರಿಟೀಷರು ಸೈನ್ಯ ಸಮೇತ ಕಿತ್ತೂರಿಗೆ ಮುತ್ತಿಗೆ ಹಾಕುತ್ತಾರೆ. ಚೆನ್ನಮ್ಮನ ಸ್ವಾಭಿಮಾನ ಹೆಡೆಯೆತ್ತುತ್ತದೆ. ಹೋರಾಟದ ಹೆಚ್ಚು ಕಿಚ್ಚಾಗಿ ಮೈಮನಗಳನ್ನು ಆವರಿಸಿಕೊಳ್ಳುತ್ತದೆ. ಪ್ರಾಣವನ್ನು ಲೆಕ್ಕಿಸದೆ ರಣರಂಗಕ್ಕೆ ಧುಮುಕುತ್ತಾಳೆ. ಸೈನಿಕರನ್ನು ಹುರಿದುಂಬಿಸಿ ಮುನ್ನುಗ್ಗುತ್ತಾಳೆ. ವೀರಾವೇಷದಿಂದ ಇಂಗ್ಲಿಷ್ ಸೈನ್ಯವನ್ನು ಮೆಟ್ಟಿ ಮುನ್ನಡೆಯುತ್ತಾಳೆ. ಬ್ರಿಟಿಷರಿಗೆ ಇಂಥ ಉಗ್ರ ಪ್ರತಿರೋಧದ ನಿರೀಕ್ಷೆ ಇರುತ್ತದೆ. ಆದ್ದರಿಂದಲೇ ಕಿತ್ತೂರಿನದಕ್ಕಿಂತ ನಾಲ್ಕುಪಟ್ಟು ಹೆಚ್ಚು ಸೈನ್ಯವನ್ನು ತಂದಿರುತ್ತಾರೆ. ಜೊತೆಗೆ ಕಿತ್ತೂರಿನ ಒಳಗಿದ್ದ ಪಿತೂರಿಗಾರರು, ದೇಶದ್ರೋಹಿಗಳಿಂದ ಚೆನ್ನಮ್ಮನಿಗೆ ಸಾಕಷ್ಟು ಹಿನ್ನಡೆಯಾಗುತ್ತದೆ. ಛಲ, ಶಕ್ತಿಯಿಂದ ಉಸಿರುಗಟ್ಟುವವರೆಗೆ ಹೋರಾಡಿದರೂ ಕೊನೆಗೆ ಸೋಲೊಪ್ಪಿಕೊಳ್ಳುವುದು ಅನಿವಾರ್ಯವಾಗುತ್ತದೆ. ಕಿತ್ತೂರು ಪರಕೀಯರ ಪಾಲಾಗುತ್ತದೆ. ಆದರೆ ಕೆಚ್ಚೆದೆಯ ಕಲಿ ಕಿತ್ತೂರು ಚೆನ್ನಮ್ಮನ ಹೆಸರು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗುತ್ತದೆ. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರವನಿತೆಯರಲ್ಲಿ ಚೆನ್ನಮ್ಮ ಅಗ್ರಸ್ಥಾನದಲ್ಲಿ ನಿಲ್ಲುತ್ತಾಳೆ.
ಲೇಖನ ಮತ್ತು ಫೋಟೋ ಸಹಕಾರ
ದೊಡ್ಡಹುಲ್ಲೂರು ರುಕ್ಕೋಜಿ
(ಡಾ.ರಾಜ್‌ಕುಮಾರ್ ಸಮಗ್ರ ಚರಿತ್ರೆ)