1962 ರಲ್ಲಿ ತೆರೆಗೆ ಬಂದಿದ್ದು `ಮಹಾತ್ಮ ಕಬೀರ್’ ಸಿನಿಮಾ. ಇದು ಭಕ್ತಪ್ರಧಾನ ಸಿನಿಮಾ. ಕಬೀರ ಪಾತ್ರದಲ್ಲಿ ಡಾ.ರಾಜ್‌ಕುಮಾರ್ ಅವರು ನಟಿಸಿದ್ದರು. ಉಳಿದಂತೆ ಕೃಷ್ಣಕುಮಾರಿ, ಉದಯ್ ಕುಮಾರ್, ಎಂ ಎನ್ ಲಕ್ಷ್ಮೀದೇವಿ ಮಹಾಲಿಂಗ ಭಾಗವತರ್ ಸೇರಿದಂತೆ ಅನೇಕ ಕಲಾವಿದರು ತಾರಾಬಳಗದಲ್ಲಿದ್ದರು. ಪಿ. ಶ್ರೀನಿವಾಸ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಸರ್ವೋದಯ ಬ್ಯಾನರ್‌ನಡಿ ಟಿ ಎನ್ ರೆಡ್ಡಿ ಸಿನಿಮಾ ನಿರ್ಮಾಣ ಮಾಡಿದ್ದರು.
ಅನುಸೂಯದೇವಿ ಸಂಗೀತ ಸಂಯೋಜನೆ, ಜಾನಕಿರಾಂ-ಛಾಯಾಗ್ರಹಣ, ಎಂ ಎ ಪೆರುಮಾಳ್ ಸಂಕಲನ ಮಾಡಿದ್ದರು.
ಕಥೆಯ ಸಾರಾಂಶ:
ಸ್ವಾಮಿ ರಮಾನಂದ ಅವರು ೧೬ನೇ ಶತಮಾನದ ಅವತಾರ ಪುರುಷ ಎಂದು ಖ್ಯಾತಿ ಪಡೆದಿದ್ದವರು. ಇವರು ಆಡಿದ ಮಾತೆಲ್ಲವೂ ಸತ್ಯವಾಗುತ್ತಿತ್ತು. ಒಂದು ದಿನ ಬಾಲವಿಧವೆಗೆ `ಸುಪುತ್ರಪ್ರಾಪ್ತಿರಸ್ತು’ ಎಂದು ಆಶೀರ್ವಾದ ಮಾಡಿದ್ದರು. ಅದರಂತೆ ಆ ಬಾಲವಿಧವೆ ತಾಯಿಯಾದಳು. ಆದರೆ ಸಮಾಜಕ್ಕೆ ಹೆದರು ಆ ಮಗುವನ್ನು ಗಂಗೆಯಲ್ಲಿ ತೇಲಿ ಬಿಡುತ್ತಾಳೆ.
ಆ ಮಗು ನೀರೂ-ನೀಮಾ ದಂಪತಿಗೆ ಸಿಗುತ್ತದೆ. ಕಾರಾಣಾಂತರಗಳಿಂದ ಮುಂದೆ ಆ ಮಗು ಮುಸಲ್ಮಾನರ ಕುಟುಂಬದಲ್ಲಿ ಬೆಳೆಯುತ್ತಿದೆ.
ಯಾವತ್ತೋ ಒಮದು ದಿನ ರಾಮಾನಂದರ ಆಶ್ರಮದಲ್ಲಿ ಭಜನೆ ಕೇಳಿ ಬರುತ್ತದೆ. ಅಲ್ಲಿಗೆ ಹೋದ ಕಬೀರ, ಶಿಷ್ಯತ್ವ ಬೇಡುತ್ತಾನೆ.
ರಾಮಾನಂದರು ಕಬೀರನನ್ನು ಶಿಷ್ಯನಾಗಿ ಸ್ವೀಕರಿಸುತ್ತಾನೆ. ಮುಸಲ್ಮಾನರ ಕುಟುಂಬದಲ್ಲಿ ಬೆಳೆದಿದ್ದರು ಕಬೀರ ರಾಮಧ್ಯಾನದಲ್ಲಿ ಮುಳುಗುತ್ತಾನೆ. ಇದರಿಂದ ಹಿಂದೂಗಳು-ಮುಸಲ್ಮಾನರು ಕುಪಿತರಾಗುತ್ತಾರೆ. ದ್ವೇಷಿಸುವುದಕ್ಕೆ, ಚಿತ್ರಹಿಂಸೆ ಕೊಡುವುದಕ್ಕೆ ಶುರು ಮಾಡುತ್ತಾರೆ. ಆದರೆ ಕಬೀರನ ಖ್ಯಾತಿ ಪಸರಿಸುತ್ತಲೇ ಹೋಗುತ್ತದೆ.
ಅನಾಥೆ ಲೋಯಿ, ಕಬೀರನನ್ನು ಪ್ರೀತಿಸುತ್ತಾ ಇರುತ್ತಾಳೆ. ಈ ವಿಷಯ ತಿಳಿದ ರಮಾನಂದರು ಇಬ್ಬರಿಗೂ ಮದುವೆ ಮಾಡುತ್ತಾರೆ.
ಆ ದಂಪತಿಗೆ ಕಮಾಲ್ ಎಂಬ ಗಂಡು ಮಗು ಜನಿಸುತ್ತದೆ. ಒಂದು ದಿನ ಕಬೀರವ ಮನೆಯಲ್ಲಿ ಇರುವುದಿಲ್ಲ. ಮನೆಯಲ್ಲಿ ಧಾನ್ಯವು ಇರುವುದಿಲ್ಲ. ಮಗ ಸಾಧುಗಳನ್ನು ಊಟಕ್ಕೆ ಕರೆತಂದಾಗ, ಊರಿನ ಸಾಹುಕಾರನ ಬಳಿ ಲೋಯಿ ಸಾಲ ಕೇಳಲು ಹೋಗುತ್ತಾಳೆ.
ಮೊದಲೇ ಲೋಯಿ ಮೇಲೆ ಕಣ್ಣಿಟ್ಟಿದ ಸಾಹುಕಾರ ಬಯಕೆ ಈಡೇರಿಸುವಂತೆ ಕೇಳುತ್ತಾನೆ. ವಿಧಿಯಿಲ್ಲದೆ ಒಪ್ಪಿಕೊಂಡ ಲೂಯಿ, ಮೊದಲು ಧಾನ್ಯ ತಂದು ಸಾಧುಗಳಿಗೆ ಮನಸಾರೆ ಊಟ ಬಡಿಸುತ್ತಾಳೆ. ಸಾಧುಗಳು ದಂಪತಿಯನ್ನು ಹಾರೈಸಿ ಹೋಗುತ್ತಾರೆ.
ಕಬೀರ ಮನೆಗೆ ಬಂದಾಗ ಹೆಂಡತಿಯ ಬದಲಾವಣೆ ಕಂಡು ಕೆಳಿದಾಗ ನಡೆದ ವಿಚಾರ ಹೇಳುತ್ತಾಳೆ. ಕಬೀರ ಸೀದಾ ಸಾಹುಕಾರನ ಬಳಿ ಹೋಗಿ ಒಪ್ಪಿಸುವುದಕ್ಕೆ ಮುಂದಾಗುತ್ತಾನೆ.
ಆಗ ಸಾಹುಕಾರನಿಗೆ ತಪ್ಪಿನ ಅರಿವಾಗಿ ಕ್ಷಮೆಯಾಚಿಸುತ್ತಾನೆ. ದೇವನೊಬ್ಬ ನಾಮ ಹಲವು, ಜಾತಿ ಪದ್ದತಿ ತೊಲಗಬೇಕೆಂಬ ವಿಚಾರದಲ್ಲಿ ಕಬೀರ ಪ್ರಯತ್ನಿಸುತ್ತಾನೆ. ಈ ಮೂಲಕ ಹೆಚ್ಚೆಚ್ಚು ಖ್ಯಾತಿ ಪಡೆಯುತ್ತಾ ಹೋಗುತ್ತಾನೆ. ಹಿಂದೂ-ಮುಸಲ್ಮಾನರಿಗೆ ಬೇಕಾದವನಾಗುತ್ತಾನೆ.
ಈ ಸಿನಿಮಾದಲ್ಲಿ ಹಲವು ವಿಶೇಷತೆಗಳು ಇದೆ. ೧೬ನೆಯ ಶತಮಾನದಲ್ಲಿ ನಡೆದಿರುವ ಕಥೆ. ಪವಾಡಗಳನ್ನು ವಾಸ್ತವ ದೃಷ್ಟಿಯಲ್ಲಿ ಚಿತ್ರೀಕರಿಸಿರುವುದು ಕುತೂಹಲವಾಗಿದೆ. ಈ ಚಿತ್ರದ ನಿರ್ಮಾಣದ ಹಿಂದೆಯೂ ಹಲವು ವಿಶೇಷತೆಗಳು ಇದಾವೆ. ಈ ಸಿನಿಮಾದ ನಿರ್ಮಾಪಕ ಟಿ ಎನ್ ರೆಡ್ಡಿ ಹಾಗೂ ನಿರ್ದೇಶಕ ಪಿ ಶ್ರೀನಿವಾಸ್ ಇಬ್ಬರು ಕೂಡ ತೆಲುಗಿನವರು. ಇಬ್ಬರಿಗೂ ಇದೇ ಮೊದಲ ಸಿನಿಮಾ, ಇದೇ ಕಡೆಯ ಸಿನಿಮಾ ಕೂಡ.
ರೆಡ್ಡಿ ಅವರಿಗೆ ಹಣ ಹಾಗೂ ತನ್ನ ಗೆಳೆಯ ನಿರ್ದೇಶಕನಾಗಬೇಕೆಂಬ ಆಸೆಗೆ ಈ ಸಿನಿಮಾ ಮಾಡಿದ್ದರು. ೫೦ ವರ್ಷವಾದರೂ ಶ್ರೀನಿವಾಸ್ ಇನ್ನೂ ಸಹಾಯಕ ನಿರ್ದೇಶಕರಾಗಿಯೇ ಉಳಿದುಕೊಂಡಿದ್ದರು.
ತೆಲುಗಿನಲ್ಲಿ ಅದು ಸಾಧ್ಯವಿಲ್ಲದ ಕಾರಣ, ಕನ್ನಡದಲ್ಲಿ ಕಡಿಮೆ ಬಜೆಟ್‌ನಲ್ಲಿ ಟಾಪ್ ನಟನನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎಂದು ಬಂದವರು.
ಕರ್ನಾಟಕದ ನೆಲಕ್ಕೆ ಬಂದು, ಡಾ.ರಾಜ್‌ಕುಮಾರ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದರು. ಕಡಿಮೆ ವೆಚ್ಚದಲ್ಲಿ ಸಿನಿಮಾ ತೆಗೆದರೆ ಲಾಭ ಗ್ಯಾರಂಟಿ ಎಂದು ರೆಡ್ಡಿ ಲೆಕ್ಕಚಾರ ಹಾಕಿದ್ದರಂತೆ. ಆದರೆ ಅವರು ಎಣಿಸಿದಂತೆ ಯಾವುದು ನಡೆಯಲಿಲ್ಲ. ಚಿತ್ರ ಸೋಲು ಕಂಡಿತ್ತು. ನಿರ್ದೇಶಕ ಶ್ರೀನಿವಾಸ್ ಅವರಿಗೆ ಯಾರೂ ಅವಕಾಶ ನೀಡಿರಲಿಲ್ಲ.
೧೯೯೨ರವರೆಗೆ ಈ ಚಿತ್ರದ ವಾರಸುದಾರ ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಅದರ ಒಂದೇ ಒಂದು ಪ್ರಿಂಟ್ ಲಭ್ಯವಾಗಿದ್ದರಿಂದ ೨೦೦೬ರಲ್ಲಿ ಈ ಚಿತ್ರದ ಸಿಡಿ ಹೊರಬಂದಿತ್ತು.
೪೫ ದಿನಗಳ ಕಾಲ ಸಿನಿಮಾದ ಶೂಟಿಂಗ್ ನಡೆದಿತ್ತು. ಎರಡು ಲಕ್ಷ ರೂಪಾಯಿ ಬಂಡವಾಳ ಹಾಕಿದ್ದರು. ಸಿನಿಮಾದಲ್ಲಿ ೧೧ ಹಾಡುಗಳು ಇದಾವೆ.
ಒಂಭತ್ತು ಮಂದಿ ಗಾಯಕ-ಗಾಯಕಿಯರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈ ಚಿತ್ರಕ್ಕೆ ಸಮಭಾಷಣೆ ಹಾಗೂ ಗೀತೆ ರಚಿಸಿದವರು ಇಬ್ಬರು. ಎಂ ನರೇಂದ್ರ ಬಾಬು ಹಾಗೂ ಚಿ ಸದಾಶಿವಯ್ಯ.
ಈ ಸಿನಿಮಾ ಪವಾಡಗಳಿಂದ ಕೂಡಿದ್ದ ಸಿನಿಮಾವಾಗಿತ್ತು. ನರೇಂದ್ರ ಬಾಬು ಅವರು ಈ ಸಿನಿಮಾಗೆ ಸಾಹಿತ್ಯ ಬರೆಯಲು ಒಪ್ಪಿಕೊಂಡಾಗ ಅದಾಗಲೇ ಚಿತ್ರೀಕರಣ ೧೫ ದಿನಗಳ ಚಿತ್ರೀಕರಣವೂ ಮುಗಿದಿತ್ತು. ಸದಾಶಿವಯ್ಯನವರಿಗೂ ಮತ್ತು ನಿರ್ದೇಶಕರಿಗೂ ಕಥೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು.
ಪವಾಡಗಳನ್ನು ಯಥಾವತ್ತಾಗಿ ತೋರಿಸಬೇಕೆಂಬುದು ಸದಾಶಿವಯ್ಯ ಅವರ ಹಠ. ಸಾಧ್ಯವಿಲ್ಲವೆಂದು ನಿರ್ದೇಶಕರು. ಹೀಗಾಗಿಯೇ ಸದಾಶಿವಯ್ಯನವರು ದೂರಾದರೂ. ಬಳಿಕ ನಿರ್ಮಾಪಕರು ನರೇಂದ್ರ ಬಾಬು ಅವರನ್ನು ಸಂಪರ್ಕ ಮಾಡಿದರು. ಈ ಸಿನಿಮಾದಲ್ಲಿ ಮತ್ತೊಂದು ವಿಶೇಷತೆ ಇದೆ. ಸಂಗೀತಾ ನೀಡಿದವರು ಅನುಸೂಯಾದೇವಿ. ಕನ್ನಡ ಚಿತ್ರರಂಗಕ್ಕೆ ಸಂಗೀತಾ ನೀಡಿದ ಮೊದಲ ಮಹಿಳೆ ಇವರೇ ಆಗಿದ್ದಾರೆ.
ನರೇಂದ್ರ ಬಾಬು ಅವರು ಹೇಳಿದಂತೆ, ಡಾ.ರಾಜ್ ತುಂಬಾ ಭಕ್ತಿ, ಶ್ರದ್ಧೆಯಿಂದ ಕಬೀರ್ ಪಾತ್ರವನ್ನು ನಿರ್ವಹಿಸಿದ್ದರಂತೆ.
ನಾಯಕಿ ನಿದ್ದೆ ಮಾಡುತ್ತಿರುವಾಗ ಅವಳ ಮೈಮೇಲಿನ ಬಟ್ಟೆ ಅಸ್ತವ್ಯಸ್ತವಾಗಿ, ನಾಯಕನ ಮನಸ್ಸು ಚಂಚಲವಾಗುತ್ತದೆ. ಇದರಿಂದ ವ್ಯಾಕುಲಗೊಂಡ ನಾಯಕ, ಉರಿವ ದೀಪದ ಮೇಲೆ ತನ್ನ ಅಂಗೈಯನ್ನು ಒಡ್ಡಿ ತನಗೇ ತಾನೇ ಶಿಕ್ಷೆ ಕೊಟ್ಟುಕೊಳ್ಳುವ ದೃಶ್ಯವದು. ಅದರಲ್ಲಿ ರಾಜ್ ನೀಡಿದ ಅಭಿನಯ ಕಂಡ ನಿರ್ದೇಶಕ ಕಟ್ ಹೇಳುವುದನ್ನು ಮರೆತು ದಾಂಗಾಗಿ ನಿಂತು ಬಿಟ್ಟಿದ್ದರಂತೆ.