80,90 ದಶಕದವರಿಗೆ ದೂರದರ್ಶನ ಅಂದ್ರೆ ಒಂದು ರೋಮಾಂಚನಕಾರಿ ಅನುಭವ. ಅದರೊಂದಿಗೆ ಒಂದು ಅವಿನಾಭಾವ ನಂಟು ಬೆಳೆದಿರುತ್ತೆ. ಅದ್ರಲ್ಲೂ ಹಳ್ಳಿಯವರಾದರೆ ಆ ನಂಟಿನ ಸೊಗಸೇ ಅದ್ಭುತ. ಈಗಲೂ ಆ ದಿನಗಳನ್ನು ನೆನಪಿಸಿ ಮಿಸ್ ಮಾಡಿಕೊಳ್ಳೋರಿಗೆ ಆ ಮಜಭೂತನ್ನು ತೆರೆ ಮೇಲೆ ಕಟ್ಟಿಕೊಡಲು ಸಿದ್ದವಾಗಿರೋ ಸಿನಿಮಾ ‘ದೂರದರ್ಶನ’. ಟೈಟಲ್ ಕೇಳಿದಾಕ್ಷಣ ಬಹಳ ಬೇಗ ಕನೆಕ್ಟ್ ಆಗುತ್ತೆ ಅದೇ ರೀತಿ ಸಿನಿಮಾ ಕೂಡ ಹಳ್ಳಿ ಸೊಗಡಲ್ಲೇ ಮೋಡಿ ಮಾಡೋಕೆ ಸಿದ್ದವಾಗಿದೆ. ಹಾಡುಗಳ ಮೂಲಕ ಮೋಡಿ ಮಾಡಿರೋ ‘ದೂರದರ್ಶನ’ ಚಿತ್ರತಂಡ ಪ್ರಾಮಿಸಿಂಗ್ ಆಗಿರೋ ಟೀಸರ್ ಬಿಡುಗಡೆ ಮಾಡಿದೆ.
ಮಾಸ್ ಸಿನಿಮಾ ಭರಾಟೆಯಲ್ಲಿ ಹಳ್ಳಿ ಸೊಗಡಿರೋ, ಹಳ್ಳಿಯಲ್ಲಿ ನಡೆಯೋ ಕಥಾನಕಗಳಿರೋ ಸಿನಿಮಾಗಳು ಕಡಿಮೆ ಆಗಿದೆ ಅನ್ನೋರಿಗೆ ಪಕ್ಕಾ ಹಳ್ಳಿ ಸೊಗಡಿರೋ, 80, 90 ದಶಕದ ಚಿತ್ರಣವನ್ನೊಳಗೊಂಡ ‘ದೂರದರ್ಶನ’ ಸಿನಿಮಾ ಮನರಂಜನೆ ನೀಡಲು ಸಜ್ಜಾಗಿದೆ. ಹಾಗೆಂದ ಮಾತ್ರಕ್ಕೆ ಕ್ಲಾಸ್ ಆಡಿಯನ್ಸ್ ಸಿನಿಮಾವೇನಲ್ಲ. ಮಾಸ್ ಆಡಿಯನ್ಸ್ ಗಳನ್ನು ಸೆಳೆಯೋ ಕಟೆಂಟ್ ಚಿತ್ರದಲ್ಲಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಪ್ರಾಮಿಸಿಂಗ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡ ಗಮನ ಸೆಳೆದಿದೆ.
‘ದೂರದರ್ಶನ’ ಸಿನಿಮಾ ಸುಕೇಶ್ ಶೆಟ್ಟಿ ನಿರ್ದೇಶನಲ್ಲಿ ಮೂಡಿಬಂದಿರೋ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ ಸುಕೇಶ್ ಶೆಟ್ಟಿ. ಈ ಚಿತ್ರ 80, 90 ದಶಕದಲ್ಲಿ ಹಳ್ಳಿಗಳಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಹಳ್ಳಿಯೊಂದಕ್ಕೆ ಟಿವಿ(ದೂರದರ್ಶನ)ಯ ಆಗಮನವಾದ ಮೇಲೆ ಏನೆಲ್ಲ ಬದಲಾವಣೆ ಆಗುತ್ತೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ಡ್ರಾಮಾ ಹಾಗೂ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ ನಟನಾಗಿ ನಟಿಸಿದ್ದು, ಅಯಾನ ನಾಯಕಿಯಾಗಿ ನಟಿಸಿದ್ದಾರೆ.
ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಒಳಗೊಂಡ ತಾರಾಗಣ ಸಿನಿಮಾದಲ್ಲಿದೆ. ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ. ವಿ ಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ದೂರದರ್ಶನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ಪ್ರದೀಪ್ ಆರ್ ರಾವ್ ಸಂಕಲನ ಚಿತ್ರಕ್ಕಿದೆ.
https://www.youtube.com/watch?v=HjVsRkWvmYk