ಕನ್ನಡ ಚಿತ್ರರಂಗದಲ್ಲಿ ಈಗ ಒಂದಷ್ಟು ಸಮಸ್ಯೆಗಳು ಹೆಚ್ಚಾಗಿವೆ. ಥಿಯೇಟರ್ಗೆ ಜನರು ಬರುತ್ತಿಲ್ಲ ಅನ್ನೋ ಕೊರಗು ಒಂದು ಕಡೆಯಾದರೆ, ಸ್ಟಾರ್ ನಟರು ಹೆಚ್ಚೆಚ್ಚು ಸಿನಿಮಾ ಮಾಡಿದರೆ, ಇದಕ್ಕೆ ಪರಿಹಾರ ಸಿಗಬಹುದು ಎಂಬ ಮಾತುಗಳು ಕೂಡ ಕೇಳಿಬಂದಿವೆ. ಆದರೆ ನಟ ರವಿಚಂದ್ರನ್ ಇದಕ್ಕೆ ಖಡಕ್ ಉತ್ತರ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ರವಿಚಂದ್ರನ್, “ಎಲ್ಲಿ ಕಥೆ ಸಿಗುತ್ತೋ, ಅಲ್ಲಿ ಹೋಗಿ ಕಥೆ ಮಾಡಿಕೊಂಡು ಬನ್ನಿ. ಯಾರು ಬೇಡ ಅಂತಾರೆ? ಸಿನಿಮಾಗೆ ಜನ ಬರ್ತಿಲ್ಲ ಅಂತ ಹೇಳೋದೇ ತಪ್ಪು? ಒಳ್ಳೆಯ ಸಿನಿಮಾ ಮಾಡಿ, ಯಾಕೆ ಬರಲ್ಲ ನೋಡೋಣ. ಜನರು ಉತ್ತಮ ಸಿನಿಮಾಗಳನ್ನು ಯಾವತ್ತೂ ಕೈಬಿಟ್ಟಿಲ್ಲ. ನಾನು ನಾಳೆ ಬೆಳಗ್ಗೆಯೇ 10 ಸಿನಿಮಾ ಮಾಡ್ತಿನಿ, ಬಂದು ಸೈನ್ ಮಾಡೋಕೆ ಹೇಳಿ ನೋಡೋಣ. ಆದರೆ ಅವರೆಲ್ಲರಿಗೂ ಯಶ್ ಬೇಕು, ದರ್ಶನ್ ಬೇಕು.
ಇದನ್ನೂ ಓದಿ :‘ರೆಡ್ ರಾಕ್ ಸ್ಟುಡಿಯೋ’ ಸ್ಟುಡಿಯೋಗೆ ಶ್ರೀಮತಿ ಪ್ರಿಯಾಂಕಾ ಉಪೇಂದ್ರ ಚಾಲನೆ
ಸಿನಿಮಾ ಅವರವರ ಚಾಯ್ಸ್. ಕಥೆ ಓಕೆ ಆಗೋದು ಬೇಡ್ವಾ? ಯಶ್, ದರ್ಶನ್ ವರ್ಷಕ್ಕೆ 2-3 ಸಿನಿಮಾ ಮಾಡ್ತಾ ಹೋದ್ರೆ, ಎರಡೇ ವರ್ಷಕ್ಕೆ ಮನೆಗೆ ಕಳಿಸಿಬಿಡ್ತಿರಾ. ಅವರೀಗ ಅವರದ್ದೇ ಒಂದು ತಾಕತ್ತು, ಬಜೆಟ್, ಲೆವೆಲ್ನಲ್ಲಿ ಇರ್ತಾರೆ. ಇಷ್ಟೇ ಸಿನಿಮಾ ಮಾಡಿ ಅಂತ ಯಾರೂ ಫೋರ್ಸ್ ಮಾಡಬಾರದು. ಅದು ಅವರ ಚಾಯ್ಸ್. ಒಬ್ಬ ಹೀರೋಗೆ ಕಥೆ ಮುಖ್ಯ ಅಲ್ವಾ? ಅವನಿಗೆ ಅವನದ್ದೇ ಒಂದು ಬ್ರ್ಯಾಂಡ್ ಇರುತ್ತದೆ. ಅದನ್ನು ಅವನು ಉಳಿಸಿಕೊಳ್ಳಬೇಕು ಅಲ್ವಾ.
ಚಿತ್ರರಂಗದಲ್ಲಿ ಸಮಸ್ಯೆ ಏನು ಇಲ್ಲ. ಸಮಸ್ಯೆ ಎಲ್ಲಿದೆ? ಸಮಸ್ಯೆ ಯಾರು ಅಂತ ಬೆರಳು ತೋರಿಸಿ. ಆಮೇಲೆ ಆ ಸಮಸ್ಯೆಗೆ ಪರಿಹಾರ ಏನು ಅಂತ ಅವರಿಗೆ ಹೇಳುವುದಕ್ಕೆ ಹೇಳಿ. ಮೊದಲು ಸಮಸ್ಯೆ ಏನು ಅಂತ ಒಂದು ಪಟ್ಟಿ ಮಾಡೋಕೆ ಹೇಳಿ. ಬಂದ್ ಮಾಡಿಬಿಡ್ತಿವಿ ಅನ್ನೋದೆಲ್ಲಾ ಸರಿ ಇಲ್ಲ. ಇಲ್ಲಿ ಬಂದ್ ಮಾಡಿದರೆ ನಮಗೆ ಸಮಸ್ಯೆ ಬಿಟ್ರೆ ಬೇರೆ ಯಾರಿಗೂ ಅಲ್ಲ. ಎಲ್ಲರೂ ಕೆಲಸ ಇಲ್ಲ ಅಂತ ಒದ್ದಾಡ್ತಾರೆ. ನೀವು ಕೆಲಸ ನಿಲ್ಲಿಸಿ ಏನು ಮಾಡ್ತಿರಿ? ನಮ್ಮ ಚಿತ್ರರಂಗದಲ್ಲೂ ದೊಡ್ಡ ದೊಡ್ಡ ಸಿನಿಮಾಗಳು ಬಂದಿವೆ. ಒಂದಷ್ಟು ಕೆಟ್ಟ ಸಮಯ ಕೂಡ ಬರುತ್ತದೆ ಎಂದು ಹೇಳಿದ್ದಾರೆ.