ಚಂದನವನದ ಸ್ಟಾರ್ ಜೋಡಿಗಳಿಗೇನೂ ಕಡಿಮೆ ಇಲ್ಲ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೂ ಸಹ ಮೊದಲಿನಂತೆಯೇ ಈ ಜೋಡಿಗಳು ಲವ್ ಬರ್ಡ್ಸ್‌ಗಳ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹಂಚಿಕೊಂಡು ಪ್ರೇಮಿಗಳೆಂದರೆ ಹೀಗಿರಬೇಕಪ್ಪ ಎನ್ನುವ ಅಭಿಪ್ರಾಯ ಮೂಡುವ ಹಾಗೆ ಬದುಕುತ್ತಿದ್ದಾರೆ.ಅಂತಹ ಅನ್ಯೋನ್ಯ ಜೋಡಿಗಳಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿ ಸಹ ಒಂದು. ಸಿನಿಮಾ ಮೂಲಕ ಪರಿಚಯವಾದ ಈ ಜೋಡಿ ಬಳಿಕ ಪರಸ್ಪರ ಪ್ರೀತಿಯಲ್ಲಿ ಬಿದ್ದು, ವಿವಾಹವಾಗಿ ಈಗ ಸುಖ ಸಂಸಾರ ನಡೆಸುತ್ತಿದ್ದಾರೆ.
ಇಬ್ಬರೂ ಸಹ ಸಿನಿಮಾಗಳಿಗೂ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಲವ್ ಮಾಕ್‌ಟೇಲ್ ಹಾಗೂ ಲವ್ ಮಾಕ್‌ಟೇಲ್ 2 ರೀತಿಯ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿ ಸ್ಟಾರ್ ಎನಿಸಿಕೊಂಡಿದ್ದಾರೆ. ಇನ್ನು ತಮ್ಮದೇ ನಿರ್ದೇಶನದ ಚಿತ್ರಗಳನ್ನು ಮಾತ್ರವಲ್ಲದೇ ಬೇರೆ ನಿರ್ದೇಶಕರ ಚಿತ್ರಗಳಲ್ಲಿಯೂ ಸಹ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿ ಅಭಿನಯಿಸಿದೆ.ಕಳೆದ ವರ್ಷವಷ್ಟೇ ಲವ್ ಬರ್ಡ್ಸ್ ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿ ಇದೀಗ ‘ಕೌಸಲ್ಯ ಸುಪ್ರಜ ರಾಮ’ ಎಂಬ ಚಿತ್ರದಲ್ಲಿಯೂ ಸಹ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು, ನಿನ್ನೆಯಷ್ಟೇ ( ಜುಲೈ 14 ) ಈ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು, ಟ್ರೈಲರ್ನ ಕೊನೆಯ ದೃಶ್ಯದಲ್ಲಿ ಮಿಲನ ನಾಗರಾಜ್ ಹಾಟ್ ಡ್ರೆಸ್ ತೊಟ್ಟು ಪಬ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಒಂದೆರಡು ಸೆಕೆಂಡುಗಳು ಮಾತ್ರ ಈ ದೃಶ್ಯವಿದ್ದು, ಮಿಲನ ನಾಗರಾಜ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವುದರ ಬಗ್ಗೆ ಚರ್ಚೆ ಏರ್ಪಟ್ಟಿದೆ. ಇನ್ನು ಈ ಚಿತ್ರಕ್ಕೆ ಶಶಾಂಕ್ ಆಕ್ಷನ್ ಕಟ್ ಹೇಳಿದ್ದು, ಮತ್ತೊಂದು ಲವ್ ಸ್ಟೋರಿಯನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ.ಇನ್ನು ನಿನ್ನೆ ಬಿಡುಗಡೆಯಾದ ಈ ಟ್ರೈಲರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ. ಇನ್ನು ಈ ಚಿತ್ರದ ಟ್ರೈಲರ್ ಅನ್ನು ಮೆಚ್ಚಿದ ಸ್ಯಾಂಡಲ್ವುಡ್ನ ಹಲವಾರು ನಟ ಹಾಗೂ ನಟಿಯರೂ ಸಹ ಈ ಟ್ರೈಲರ್ ಲಿಂಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
ಅದೇ ರೀತಿ ಡಾಲಿ ಧನಂಜಯ್ ಸಹ ಕೌಸಲ್ಯ ಸುಪ್ರಜ ರಾಮ ಚಿತ್ರದ ಟ್ರೈಲರ್ ಲಿಂಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೌಸಲ್ಯ ಸುಪ್ರಜ ರಾಮ ಚಿತ್ರದ ಟ್ರೈಲರ್ ಕುತೂಹಲಕಾರಿಯಾಗಿದೆ, ಚಿತ್ರತಂಡಕ್ಕೆ ಶುಭವಾಗಲಿ ಎಂದು ಬರೆದುಕೊಂಡು ಹಾರೈಸಿದ್ದಾರೆ ಹಾಗೂ ನಾಯಕ ಡಾರ್ಲಿಂಗ್ ಕೃಷ್ಣ, ನಿರ್ದೇಶಕ ಶಶಾಂಕ್ ಹಾಗೂ ನಾಗಭೂಷಣ್ ಅವರನ್ನು ಉಲ್ಲೇಖಿಸಿದ್ದಾರೆ.
ಧನಂಜಯ್ ಶುಭ ಕೋರಿ ಮಾಡಿದ ಟ್ವೀಟ್ ಕುರಿತು ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯಿಸಿದ್ದು, ‘ಥ್ಯಾಂಕ್ಸ್ ಮಗಾ, ಮಿಲನಳನ್ನು ಟ್ಯಾಗ್ ಮಾಡಿಲ್ಲ ನೀನು. ಬರುತ್ತೆ ನಿಂಗೆ ಕಾಲ್’ ಎಂದು ಬರೆದುಕೊಂಡು ಟ್ವೀಟ್ ಮಾಡಿ ಎಚ್ಚರಿಸಿದ್ದಾರೆ. ಈ ಟ್ವೀಟ್‌ಗೆ ಮರು ಉತ್ತರಿಸಿರುವ ಧನಂಜಯ್ ‘ಒಹ್ ಲಾಸ್ಟ್ ಅಲ್ಲಿ ಸಖತ್ತಾಗಿ ಎಂಟರ್ ಆಗ್ತಾರಲ್ಲ ಅದು ಮಿಲನನಾ? ನಾನು ಯಾರೋ ಹೊಸ ಹುಡುಗಿ ಇರಬೇಕು ಅನ್ಕೊಂಡೆ, ಗೊತ್ತೇ ಆಗ್ಲಿಲ್ಲ’ ಎಂದು ಬರೆದುಕೊಂಡಿದ್ದಾರೆ.ಇನ್ನು ಇದಕ್ಕೆ ಮಿಲನ ನಾಗರಾಜ್ ಸಹ ಪ್ರತಿಕ್ರಿಯಿಸಿದ್ದು, ‘ಹೊಸ ಹುಡುಗಿ ಅನ್ಕೊಂಡು, ಹೊಸ ಪ್ರತಿಭೆಗಳನ್ನು ಉತ್ತೇಜಿಸಿ’ ಎಂದು ಡಾಲಿ ಧನಂಜಯ್‌ಗೆ ಟಾಂಗ್ ನೀಡಿದ್ದಾರೆ. ಹೀಗೆ ಈ ಮೂವರ ಕಾಮೆಂಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಕೌಸಲ್ಯ ಸುಪ್ರಜ ರಾಮ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣಗೆ ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸಿದ್ದು, ಮಿಲನ ನಾಗರಾಜ್ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಟ್ರೈಲರ್ ವೀಕ್ಷಿಸಿದರೆ ಪುರುಷ ಹಾಗೂ ಮಹಿಳೆಯರ ನಡುವೆ ಸಮಾನತೆಯನ್ನು ಬಯಸದ ಹಾಗೂ ಗಂಡೇ ಮೇಲು ಎಂದು ಬದುಕು ನಡೆಸುವ ನಾಯಕ ಹೇಗೆ ಲವ್ ಹಾಗೂ ಮದುವೆ ಜೀವನವನ್ನು ನಿಭಾಯಿಸುತ್ತಾನೆ ಎಂಬುವುದೇ ಸಿನಿಮಾ ಎಂಬುವುದು ತಿಳಿದುಬಿಡುತ್ತದೆ. ಇಷ್ಟು ದಿನಗಳ ಕಾಲ ಫೀಲಿಂಗ್ ಲವ್ ಸ್ಟೋರಿಗಳ ಮೂಲಕ ಜನರ ಮನಗೆದ್ದಿದ್ದ ಡಾರ್ಲಿಂಗ್ ಕೃಷ್ಣ ಈಗ ಈ ವಿಭಿನ್ನ ಕಥೆಯ ಮೂಲಕ ಯಾವ ರೀತಿ ಮಿಂಚುತ್ತಾರೋ ಕಾದು ನೋಡಬೇಕಿದೆ.