ಚಿಕ್ಕ ವಯಸ್ಸಿನಲ್ಲೇ ನಾಟಕದ ಗೀಳು ಹತ್ತಿಸಿಕೊಂಡು, ಕಂಪನಿ ನಾಟಕಗಳ ಕಡೆ ಅಭಿಮುಖವಾಗಿ ರಹದಾರಿ ಸಿಗದೆ ನೃತ್ಯ ಕಲಾ ಶಾಲೆ ಮಾಡಿ , ಹಿರಿಯ ನಟರಾದ ಕೃಷ್ಣಶಾಸ್ತ್ರಿಗಳ ಸಂಸ್ವರ್ಗಕ್ಕೆ ಸಿಲುಕಿ, ಚಲನಚಿತ್ರ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿ ಅವರ ನಿಕಟ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿ ಕೊನೆಗೊಮ್ಮೆ ತಮ್ಮ ಅಭಿಲಾಶೆಯಾದ ಚಲನಚಿತ್ರ ಕಲಾವಿದನಾಗಬೇಕೆಂಬ ಹಂಬಲವನ್ನು ಈಡೇರಿಸಿಕೊಂಡ ಸಾಧಕ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಗೀತ ರಚನಕಾರ ಸಿ.ವಿ.ಶಿವಶಂಕರ್.
ಮೊದಲಿಗೆ ಅವರು ಬಣ್ಣ ಹಚ್ಚಿದ ಚಿತ್ರವೇ ‘ರತ್ನ ಗಿರಿಯ ರಹಸ್ಯ’ ದಕ್ಷಿಣ ಭಾರತದ ಪ್ರಖ್ಯಾತ ಚಿತ್ರ ನಿರ್ದೇಶಕರಾದ ಬಿ.ಆರ್ ಪಂತುಲು ಬಳಿ. ಅಲ್ಲಿ ನಮ್ಮ ನಲ್ಮೆಯ ಎಸ್.ಆರ್. ಪುಟ್ಟಣ್ಣ ಕಣಗಾಲ್ ಅವರು ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸಮಯ. “ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ” ಎಂಬ ಹಿರಿಯರ ಆರ್ಯೋಕ್ತಿಯಂತೆ ಪ್ರಪ್ರತಮವಾಗಿ ಕನ್ನಡದ ರಜತ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಪಂತುಲು (ಮಾಸ್ತರ್) ಎಂದರೆ ಪದ್ಮಿನಿ ಪಿಕ್ಚರ್ಸ್ ಎಂದೇ ಆಗಿನ ಕಾಲಕ್ಕೆ ಸುಪ್ರಸಿದ್ಧಿ ಅಲ್ಲಿಂದ ದಕ್ಷಿಣ ಭಾರತದ ವಿಖ್ಯಾತವಾದ ‘ಸ್ಕೂಲ್ ಮಾಸ್ಟರ್’ ನಲ್ಲೂ ಗುರುವಿನ ಅನುಗ್ರಹದಿಂದ ಅಡಿಗೆ ಭಟ್ಟನ ಪಾತ್ರ ಸಿಕ್ಕಿತು, ಅಲ್ಲೂ ಮಿಂಚಿದರು ಶಿವ ಶಂಕರ್ ಕುಟುಂಬದಲ್ಲಿ ಒಂದು ಬಗೆ ಅಕ್ಕರೆ ಸಂಚಲನಕ್ಕೆ ಕಾರಣವಾಯಿತು! ಪೋಲೀಸ್ ಆಫೀಸರ್ ಪಾತ್ರಧಾರಿ ಶಿವಾಜಿ ಗಣೇಶನ್‌ಗೆ ಕನ್ನಡ ಸಂಭಾಷಣೆ ಹೇಳಿಕೊಟ್ಟು ಅವರನ್ನು ಸಿದ್ಧಗೊಳಿಸಿದರು ನಮ್ಮ ನಲ್ಮೆಯ ಶಿವಶಂಕರ್.
ಮುಂದೆ ಅವರು ಡಬ್ಬಿಂಗ್ ಚಿತ್ರಗಳಿಗೆ ಕನ್ನಡದಲ್ಲಿ ಕಂಠದಾನ ಮಾಡಿದರು, ಹೊಟ್ಟೆ ಪಾಡಿಗಾಗಿ! ಆನಂತರ ‘ಧರ್ಮ ವಿಜಯ’ ‘ಮಾಂಗಲ್ಯ ಯೋಗ’ ಎಂಬ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ರಾಜ್ ಹಾಗೂ ಲೀಲಾವತಿಯರೂ ಆ ಚಿತ್ರದ ತಾರಾಗಣದಲ್ಲಿ ಇದ್ದುದು ಹೆಮ್ಮೆಯಾಗಿತ್ತು. ಅಲ್ಲಿಂದ ಮುಂದೆ ಕೃಷ್ಣ ಗಾರುಡಿ ಚಿತ್ರಕ್ಕಾಗಿ ಹುಣಸೂರು ಕೃಷ್ಣಮೂರ್ತಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡಿ ಪರಿಪಕ್ವವಾದರು. ಅಲ್ಲಿಂದ ಸೋಪಾನ ಸೋಪಾನ ಏರಿ ವೈ.ಆರ್. ಸ್ವಾಮಿ ಅವರು ನಿರ್ದೇಶಿಸುತ್ತಿದ್ದ ‘ಕನಕದಾಸರು’ಕಡೆ ಅಭಿಮುಖರಾದರು. ‘ಭಕ್ತ ಕನಕದಾಸ’ ಸಂಪೂರ್ಣವಾಗಿ ಯಶಸ್ಸುಗಳಿಸಿ ಇಡೀ ಚಿತ್ರರಂಗಕ್ಕೆ ಒಳ್ಳೆಯ ಹೆಸರು ಬಂತು. ಡಾ|| ರಾಜ್ ಕುಮಾರ್, ಉದಯ್ ಕುಮಾರ್, ಕೆ,ಎಸ್ ಅಶ್ವಥ್ ಮುಂತಾದ ಕಲಾವಿದರ ದಂಡೇ ಆ ಚಿತ್ರಕ್ಕೆ ದುಡಿಯಿತು. ಹುಣಸೂರ್ ಕೃಷ್ಣಮೂರ್ತಿ ಅವರ ಅತ್ಯುತ್ತಮ ಗೀತ ಸಾಹಿತ್ಯ ದಿ|| ಎಂ ವೆಂಕಟರಾಜುರವರ ಸುಮಧುರ ಸಂಗೀತ ಝರಿ ಹರಿದು ಬಂತು. ಡಿ.ಆರ್ ನಾಯ್ಡು (ನಿರ್ಮಾಪಕರು) ಶ್ರಮ ಸಾರ್ಥಕವಾಗಿತ್ತು. ಸಿ.ವಿ.ಶಿವಶಂಕರ್ ಅವರ ನಟನೆಯನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡರು, ಜನಪ್ರಿಯರಾದರು. ಮುಂದಿನ ಘಟ್ಟದಲ್ಲಿ ಟಿ.ವಿ.ಸಿಂಗ್ ಠಾಕೂರ್ ಅವರು ನಿರ್ದೇಶಿಸಿದ ಕೈವಾರ ಮಹಾತ್ಮೆ’ ನಟರಿಗೆ ಒಳ್ಳೆಯ ಅವಕಾಶವನ್ನೇ ಒದಗಿಸಿತು. ಸಿ.ವಿ.ಶಂಕರ್ ರವರು ಈ ಚಿತ್ರದಲ್ಲಿ ಸುವರ್ಣ ಅವಕಾಶ ಪಡೆದರು. ಮುಂದೆ ಏನೇ ಅಡೆ ತಡೆ ಬಂದರೂ ಛಲ ಬಿಡದ ತ್ರಿವಿಕ್ರಮನ ರೀತಿ ಹುಣಸೂರರ ಜೊತೆ ‘ವೀರಸಂಕಲ್ಪ’ದಲ್ಲಿ ನಿಷ್ಠೆಯಿಂದ ದುಡಿದರು. ಅಲ್ಲಿಂದ ವರನಟ ಡಾ|| ರಾಜ್ ಅವರ ಬದುಕಲ್ಲೂ ಒಂದು ಮಹಾ ತಿರುವು! ಸುಂದರ ರಾವ್ ನಾಪಕರ್ಣಿ ಎಂಬ ನಿರ್ದೇಶಕರ ಆದೇಶದ ಮೇರೆಗೆ ಸಿ.ವಿ.ಶಿವಶಂಕರ್ ಅವರಿಗೆ ಡಾ|| ರಾಜ್ ಜೊತೆಜೊತೆಯಲ್ಲೇ ಒದಗಿ ಬಂತು. ಹೀಗಾಗಿ ಅವರಿಗೆ ‘ಸಂತ ತುಕಾರಾಂ’ ಅಭಿನಯಿಸುವ ಭಾಗ್ಯ ಬಂತು.
ಮನುಷ್ಯನಿಗೆ ಮಹತ್ವಾಕಾಂಕ್ಷೆ ಇದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಶಿವಶಂಕರ್ ಸಾಕ್ಷಿ. ‘ಮನೆ ಕಟ್ಟಿ ನೋಡು’ ಚಿತ್ರದ ನಿರ್ಮಾಪಕ ನಿದೇಸಕರಾಗುತ್ತಾರೆ. ಆ ಚಿತ್ರಕ್ಕಾಗಿ ಗೀತೆ ಬರೆಯುತ್ತಾರೆ.
ಬೆಳೆದಿದೆ ನೋಡಾ ಬೆಂಗಳೂರು ನಗರ
ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ!
ಕಣ್ಣಿಗೆ ಕಾಣುವ ಅಂದದ ಸೌಧ
ಕನ್ನಡ ನಾಡಿನ ವಿಧಾನ ಸೌಧ
ಸಂಗೀತ ನಿರ್ದೇಶಕ ಆರ್. ರತ್ನಂ ಈ ಗೀತೆಗೆ ಮಧುರ ರಾಗ ಸಂಯೋಜನೆ ಮಾಡಿದ್ದಾರೆ, ಅತ್ಯಂತ ಜನಪ್ರಿಯ ಗೀತೆ. ಈ ಚಿತ್ರದಿಂದಲೆ ದ್ವಾರಕೀಶ್ ಪ್ರವೇಶವಾದದ್ದು.
ಮುಂದಿನ ಪ್ರಯತ್ನ ‘ಪಧವೀಧರ’ ಸಿನಿಮಾ ಮಾಡಲು ಹೊರಟದ್ದು. ಸಿ.ವಿ.ಶಿವಶಂಕರ್ ರಾಗ ಸಂಯೋಜನೆಯಲ್ಲಿ ಆರು ಹಾಡುಗಳನ್ನು ರಚಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಾನೊಬ್ಬ ಗಂಭೀರ ಚಿತ್ರ ಗೀತ ರಚನಕಾರ ಎಂಬುದನ್ನು ಸಾಬೀತು ಮಾಡಿದರು!
೧) ನನ್ನಂತೆಯೇ ನೀನಿಲ್ಲ ನಿನ್ನಂತೆಯೂ ನಾನಿಲ್ಲ
೨) ಯಾರಿಗೆ ಹೋಲಿಸಲಿ ನಿನ್ನ ನಗು ಮೊಗವ
೩) ಕರ್ನಾಟಕ ಸಾಮ್ರಾಜ್ಯದ ಹೊಯ್ಸಳ, ಮುಂತಾದ ಹಾಡುಗಳಿಗೆ ಸ್ವರ ಪ್ರಸ್ತಾರ ಹಾಡಿಸಿದರು ಆರ್.ರತ್ನಂ ಕೈಯಲ್ಲಿ!
ಇಲ್ಲಿಂದ ಪ್ರಾಂಭವಾಯಿತು ಸಿ.ವಿ.ಶಿವಶಂಕರ್‌ರವರಿಗೆ ಶುಕ್ರದೆಶೆ! ೧೯೬೮ರಲ್ಲಿ ‘ನಮ್ಮ ಊರು’ ಚಿತ್ರ ಯಶಸ್ಸು ಪಡೆಯಿತು. ಕಲಾತಪಸ್ವಿ ರಾಜೇಶ್ ರವರಿಗೆ ಬಹಳ ಹೆಸರು ತಂದುಕೊಟ್ಟ ಚಿತ್ರ ‘ವೀರ ಮಹಾದೇವ’ ಕನ್ನಡ ಚಿತ್ರಕ್ಕೆ ಹಾಡು ಬರೆದು ಗಾನ ಗಂಧರ್ವ ಬಿರುದಾಂಕಿತ ಡಾ|| ರಾಜ್ ಅವರಿಂದ ಗೀತೆ ಹಾಡಿಸಿ ಒಳ್ಳೆಯ ಹೆಸರುಗಳಿಸಿದರು. ಮುಂದೆ ಐತಿಹಾಸಿಕ ಚಿತ್ರ ಹೊಯ್ಸಳ ಮಾಡುತ್ತಾರೆ. ‘ಕನ್ನಡ ಕುವರ’ ಅಕಳಂಕ ಅವರ ಕೊನೆಯ ಚಿತ್ರಗಳಾಗಿವೆ.
ಸೂಪರ್ ಹಿಟ್ ಗೀತೆಗಳು ಸಿ.ವಿ.ಶಿವಶಂಕರ್ ಬರೆದದ್ದು.
ಸಿ.ವಿ. ಶಿವಶಂಕರ್ ಬರೆದದ್ದೂ ಕಡಿಮೆಯಾದರೂ ಕನ್ನಡದಲ್ಲಿ ಶಾಶ್ವತ ಗೀತೆಗಳನ್ನು ನೀಡಿದ್ದಾರೆ.
೧) ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ
೨) ಬೆಳೆದಿದೆ ನೋಡಾ ಬೆಂಗಳೂರು ನಗರ
೩) ನಾ ನೋಡಿ ನಲಿಯುವ ಕಾರವಾರ
೪) ಹೋಗದಿರೀ ಸೋದರರೇ..
೫) ಕನ್ನಡದ ರವಿ ಮೂಡಿ ಬಂದ..
೬) ನಾಡ ಚರಿತೆ ನೆನಪಿಸುವ ವೀರ ಗೀತೆಯಾ
೭) ನೋಡು ಬಾ ಕನ್ನಡಿಗ ನೆನಪಿನ ಕೋಟೆಗಳ
೮) ಕನ್ನಡಿಗ ನೀ ಭಾಗ್ಯಶಾಲಿ
೯) ನಡೆಯು ಕನ್ನಡ! ನುಡಿಯು ಕನ್ನಡ! ಇಂಥ ಶಾಶ್ವತ ಗೀತೆಗಳನ್ನು ಬರೆದ ಅವರ ಕೀರ್ತಿ ಚಿರಂತನ. ಅವರಳಿದಿದ್ದರೂ ಅವರ ಸಾಹಿತ್ಯ ನಾಡಿನಾದ್ಯಂತ ಅನುರಣಿಸುತ್ತದೆ.
_ ದೊಡ್ಡ ರಂಗೇಗೌಡ.