ನೆನಪು ಹಸಿರಾಗಿದೆ ಆಗ ವಿಷ್ಣು ಇನ್ನೂ `ಕುಮಾರ’ನಾಮಧಾರಿಯೇ ಆಗಿದ್ದ. ೧೯೬೮ ಇರಬಹುದು. ಕುಮಾರನಿಗೆ ರಂಗಭೂಮಿಯ ಗೀಳು! ಹೀಗಾಗಿ ರವೀಂದ್ರ ಕಲಾಕ್ಷೇತ್ರಕ್ಕೆ ಶಿಸ್ತಿನ ಸಿಪಾಯಿ ತರ ಬರುವುದು-ನಾಟಕಗಳ ನೋಡುವುದು-ಅಲ್ಲೇ ಮೆಟ್ಟಿಲುಗಳ ಮೇಲೆ ಕುಳಿತು ಹರಟೆ ಹೊಡೆಯುವುದು ಅವರ (ಕುಮಾರನ) ಹವ್ಯಾಸ. ಅವರು ಸದಾ Inshirt ಮಾಡಿರುತ್ತಿದ್ದುದೇ ಹೆಚ್ಚು. ಆಗ ನಾನು ಪ್ರಥಮ ವರ್ಷದ ಬಿ.ಎ.ಆನರ್ಸ್ ವಿದ್ಯಾರ್ಥಿ. ಅಂದಿನಿಂದ ಅವರು ಕೊನೆ ಉಸಿರು ಎಳೆವ ತನಕ ವಿಷ್ಣುವನ್ನು ಚೆನ್ನಾಗಿ ಬಲ್ಲೆ! `ವಂಶ ವೃಕ್ಷ’ದಲ್ಲಿ ಪುಟ್ಟ ಪಾತ್ರ ಮಾಡಿದವರು ಪುಟ್ಟಣ್ಣ ಕಣಗಾಲ್‌ಗೆ ಬಹಳ ಹತ್ತಿರದವರಾದರು. `ನಾಗರ ಹಾವು’ ಚಿತ್ರದ ತಪ್ತ ಯುವಕನ ಪಾತ್ರಮಾಡಿ ತಮ್ಮದೇ ಆದ ಸ್ವಂತ ಮ್ಯಾನರಿಸಂಗಳಿಂದ ಹಾಗೂ ಅಭಿನಯದ ಸ್ವಂತಿಕೆಯಿಂದ ಕನ್ನಡ ನಾಡಿನ ಬಹು ದೊಡ್ಡ ಚಲನ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಬಳಿ ಆ ಕಲಾ ಕಠಿಣ ಗರಡಿಯಲ್ಲಿ ಪಳಗಿ, ವಿವಿಧ ವರಸೆಗಳ ಕಲಿತು ತನ್ನ ಸ್ವಂತ ಪರಿಶ್ರಮದಿಂದ ಮೇಲೆ ಬಂದರು. ಜಯಭೇರಿ ಬಾರಿಸಿದರು ಅದೆಲ್ಲಾ ಈಗ ಚಿರಂತನ ಇತಿಹಾಸ!
ಮುಂದೆ ಗೆಳೆಯ ಶ್ರೀ ಟಿ.ಎಸ್.ನಾಗಭರಣರಿಂದ ಸುಂದರ್ ರಾಜ್ ಅವರಿಂದ ವಿಷ್ಣುಗೆ ಚಿರಪರಿಚಿತನಾದೆ. (ಅಸೀಮಾ ಚಿತ್ರ ತಂಡದ ಶ್ರೀ ಎಸ್.ರಾಮಚಂದ್ರ ಅವರ ಅನನ್ಯ ಸಂಸರ್ಗದಿಂದ `ಹಸಿವು’ಚಿತ್ರ ಹಮ್ಮಿ ಕೊಂಡಿದ್ದೆ! ನಾಲ್ಕು ವರ್ಷದ ನನ್ನ ಮುದ್ದು ಮಗ ಭರತನ ಬಳಿ ಪಾತ್ರವನ್ನು ಮಾಡಿಸಿದ್ದೆ!)ನಮ್ಮ ಸ್ನೇಹ ನಿಕಟವಾದದ್ದು ಭರಣರ ಚಿತ್ರ `ಬಂಗಾರದ ಜಿಂಕೆ’ಹಾಡುಗಳ ಧ್ವನಿ ಮುದ್ರಣದಿಂದ `ಒಲುಮೆ ಸಿರಿಯ ಕಂಡು.. ಬಯಕೆ ಸಿಹಿಯ ಉಂಡು ಪ್ರೀತಿ ಮಾತಾಡಿದೆ’ ಚಿತ್ರದ ಸೂಪರ್ ಹಿಟ್ ಹಾಡು ನಮ್ಮೆಲ್ಲರ ಆತ್ಮೀಯ ಸ್ನೇಹದ ಬೆಸುಗೆಗೆ ನಾಂದಿ ಹಾಡಿತು. `ಬಂಗಾರದ ಜಿಂಕೆ’ಚಿತ್ರದ ಎಲ್ಲ ಹಾಡೂ ನಾನೇ ಬರೆದೆ.
`ಕಿಲಾಡಿ ಜೋಡಿ’ ಚಿತ್ರದ ಪ್ರೀಮಿಯರ್ ಷೋ ದಿಂದ ರಾಜೇಂದ್ರಸಿಂಗ್ ಬಾಬು, ಅಂಬರೀಶ್ ಶ್ರೀನಾಥ್, ಭಾರತಿ, ಭರಣ-ಎಲ್ಲರ ಸ್ನೇಹ ವಿಶ್ವಾಸ ವರ್ಧಿಸಿತ್ತು. ನಾನು ಆ ಚಿತ್ರಕ್ಕೆ `ಆಡಬೇಕು.. ಕರಾಟೆ.. ಆಡಬೇಕು’ ಹಾಡು ಬರೆದಿದ್ದೆ. ಅದೊಂದು ಚರಿತ್ರೆ! ಮುಂದೆ ನನಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿತು. ವಿಜಯ ಭಾಸ್ಕರ್ ಹಾಗೂ ಗೋಪಾಲ್ ಲಕ್ಷ್ಮಣ್ ಮತ್ತು ರವಿ (ಕೆ.ಎಸ್.ಎಲ್.ಸ್ವಾಮಿ) ಅವರ ಸಂಪರ್ಕದಿಂದ ಇನ್ನಷ್ಟು ನಿಕಟ ಆಗಿದ್ದೆವು. `ಕಂಡದ್ದ ಕಂಡ್ಹಂಗೆ ಹೇಳಿದ್ರೆ ನೀವೆಲ್ಲಾ ಕೆಂಡದಂಥಾ ಕೋಪ ಮಾಡ್ಬೇಡಿ’ ಹಾಡುಬರೆದೆ. ವಿಜಯ ಭಾಸ್ಕರ್ ತುಂಬಾ ತುಂಬಾ ಚೆನ್ನಾಗಿ ಟ್ಯೂನ್ ಮಾಡಿದರು ಸ್ವತಃ ವಿಷ್ಣು ಮದ್ರಾಸ್‌ನ ಸ್ಟುಡಿಯೋದಲ್ಲಿ ಭರ್ಜರಿಯಾಗಿ ಹಾಡಿದರು.
ಆನಂತರ `ಒಲವಿನಾಸರೆ’ ಯಲ್ಲಿ ಸಿಕ್ಕರು ನಿಗರ್ವಿ ಮಗುವಿನಂಥಾ ಮನಸ್ಸು. ಎಂ.ರಂಗರಾವ್ ಸಂಗೀತವಿದ್ದ ಆ ಚಿತ್ರಕ್ಕಾಗಿ, ನಮ್ಮನೆಲ್ಲಾ ಒಟ್ಟು ಗೂಡಿಸಿದವರು ಕೆ.ವಿ.ಜಯರಾಂ.. ಹೋಟಲ್ ಹೈಲ್ಯಾಂಡ್ಸ್ನಲ್ಲಿ. ರಂಗರಾವ್ ಕಂಪೋಸಿಂಗ್ ಅಲ್ಲೇ ನಡೆದದ್ದು. ಇದಾದ ನಂತರ ಮಾವು-ಬೇವು ಎಲ್.ಪಿ.ರೆಕಾರ್ಡ್ ಬಿಡುಗಡೆ ಸಂದರ್ಭ. ಹೋಟಲ್ ಆಶೋಕ ಸೆಂಟ್ರಲ್ ಹಾಲ್ ನಲ್ಲಿ. ನಾನು, ವಿಷ್ಣು ಇಬ್ಬರೇ ವೇದಿಕೆಯ ಮೇಲೆ, gold dise ನನಗೆ ವಿಷ್ಣು ಅವರು ಪ್ರದಾನ ಮಾಡಿದರು. ಆ ಹೊತ್ತು ವಿಪರೀತ ಮಳೆ. ಎಸ್.ಪಿ.ಬಿ ಚೆನ್ನೈನಿಂದ ಬರಲಾಗಲಿಲ್ಲ, ಸಿ.ಅಶ್ವತ್ಥ್ ಕೊನೆಗಳಿಗೆ ಬಂದರು ಆ ಮೇಲೆ ಮೈಸೂರಿನ ಕಿಂಗ್ಸ್ ಕೋರ್ಟ್‌ನಲ್ಲಿ ಭೇಟಿ ಹೀಗೆ ನನ್ನ ಹಾಗೂ ವಿಷ್ಣು ಒಡನಾಟ ಹಾರ್ದಿಕವಾಗಿತ್ತು. ಅವರು ಹೇಳಿ ಕಳುಹಿಸಿದ್ದರು ಬಪ್ಪೀ ಲಹರಿಗೆ ಹಾಡು ಬರೆಯಲಾಗಲ್ಲಿಲ. ಕೊನೆಕೊನೆಗೆ ವಿಷ್ಣು ಆಧ್ಯಾತ್ಮಕದ ಕಡೆ ಹೊರಳಿದ್ದೇ ವಿಶೇಷ!
ಅಂದು ತಿಪಟೂರು ರಘು, ಗಂಗರಾಜು, ಲಕ್ಷö್ಮಣ್ ಅವರುಗಳು ನಾನು ಹಾಡಿನ ಧ್ವನಿ ಮುದ್ರಣದ ಸಂದರ್ಭ ಮಾಡುತ್ತಿದ್ದ ಕಡೆಗೆ ಸ್ಟುಡಿಯೋಗೇ ಬಂದರು. ಗೌಡರೇ ಒಂದೆರಡು ಹಾಡು ಬರೆಯಬೇಕಿತ್ತು ಟ್ಯೂನ್ ರೆಡಿ ಇವೆ, ಎ.ವಿ.ಎಂ.ಸಿ.ಥಿಯೇರ‍್ನಲ್ಲಿ ರೆಕಾರ್ಡಿಂಗ್ ನಡೆದಿದೆ…, ಎಂದರು, ಆಯ್ತು ಸಾರ್; ಆದರೆ ನನ್ನ ಇಲ್ಲಿ ಪ್ರಸಾದ್ ೭೦ ಎಮ್.ಎಮ್‌ಗೆ ಕರೆಸಿರೋರು ಸಂಗೀತ ನಿರ್ದೇಶಕರಾದ ಜಿ.ಕೆ.ಯು, ಅವರ ಒಪ್ಪಿಗೆ ತೆಗೆದುಕೊಳ್ಳಿ ಬರುತ್ತೇನೆಂದೆ. ಎಲ್ಲರೂ ಸ್ಟುಡಿಯೋಗೆ ಹೋದೆವು. ಅಲ್ಲಿ ಆಗಲೇ ವಾಣಿ ಜಯರಾಂ ಬಂದು ಕುಳಿತಿದ್ದರು. ಇನ್ನೇನು ಜೇಸುದಾಸ್ ಬಂದು ಬಿಡ್ತಾರೆ. ಅಷ್ಟರಲ್ಲಿ ನೀವು ಹಾಡು ಬರೆಯಬೇಕು ಒಪ್ಪಿಕೊಂಡೆ. ಎಂ.ರಂಗರಾವ್ ಕೊಟ್ಟ ಟ್ಯೂನ್ ಎರಡೆರಡು ಸಾರಿ ಕೇಳಿಸಿಕೊಂಡೆ ಆಗ ಇನ್‌ಸ್ಟೆಂಟಾಗಿ ಮೂಡಿದ ಗೀತೆ-
ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನು
ಮೆಚ್ಚಿ ಪ್ರೀತಿಯ ಕಾಮನೆ!
ಇದು ೧೫ ನಿಮಿಷದಲ್ಲಿ ಬರೆದ ಹಾಡು ಸೂಪರ್ ಹಿಟ್ ಸಾಂಗ್ ಆಯ್ತು.. ಎಲ್ಲಾ ದೈವೇಚ್ಛೆ!
ಆ ಚಿತ್ರ `ಬೆಂಕಿ ಬಿರುಗಾಳಿ’ಒಂದು ಅಪರೂಪದ ಚಿತ್ರ ನಿರ್ದೇಶಕ ತಿಪಟೂರು ರಘೂಗೂ ಒಳ್ಳೆಯ ಹೆಸರು ಬಂತು ಆ ಹಾಡು ವಿಷ್ಣುವರ್ಧನ್‌ಗೆ ಬಹಳ ಇಷ್ಟವಾಯಿತು ಇದೊಂದು ಯೋಗಾ ಯೋಗ! ಇದು ನಡೆದದ್ದು ೧೯೮೪ ರಲ್ಲಿ! ಇನ್ನೊಂದು ಹಾಡು- `ನಮ್ಮೂರ ಬೀದಿಯಲ್ಲಿ ಅನ್ಯಾಯ ಮೆಟ್ಟಿ ನಿಂತು’ ಎಂದು ಪ್ರಾರಂಭವಾಗುವ ಸಮಾಜಮುಖಿ ಗೀತೆ! (ಬೆಂಕಿ ಬಿರುಗಾಳಿ ೧೯೮೪) ಹೃದಯ ಗೀತೆ ಹಾಡುತಿರೆ ಭೂಮಿ ಸ್ವರ್ಗವಾಗಿದೆ! ನಾನು ಬರೆದ ಈ ಹಾಡನ್ನು ವಿಷ್ಣು ಸದಾ ಗುನುಗುನಿಸುತ್ತಿದ್ದರು, ಅದು ಭಾರ್ಗವ ನಿರ್ದೇಶನದ ರಾಜನ್ ನಾಗೇಂದ್ರ ಕಂಪೋಸ್ ಮಾಡಿದ್ದು. (ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ ಹಾಡಿದ್ದು ೧೯೮೯ರಲ್ಲಿ) ಅದು ವರ್ಷದ ಸೂಪರ್ ಹಿಟ್ ಸಾಂಗ್. ಹೀಗೆ ವಿಷ್ಣು ಜೊತೆ ಕಳೆದ ಕ್ಷಣಗಳು ಅಮೃತ ಘಳಿಗೆಗಳು. ಅವರ ಜೊತೆ ಸ್ಟುಡಿಯೋ ಗ್ರೀನ್ ರೂಮ್‌ಗಳಲ್ಲಿ, ಅವರ ಮನೆಯ ಒಂದು ಕೊಠಡಿಯಲ್ಲಿ ಜೊತೆ ಜೊತೆಯಲ್ಲಿ ಕಳೆದ ಸಮಯ ಅನನ್ಯವಾದದು, ಅಪೂರ್ವವಾದುದು, ಅವಿಸ್ಮರಣೀಯವಾದುದು.