Sandalwood Leading OnlineMedia

ಸಂಗೀತಾ ರಾಜ – ಮಾಧುರ್ಯತೇಜ : ದೊಡ್ಡರಂಗೇಗೌಡರು ಕಂಡ ಎಸ್ ಪಿ ವೆಂಕಟೇಶ್

ಹತ್ತು ಹನ್ನೊಂದು ವರ್ಷದ ಒಬ್ಬ ಹುಡುಗ ಗಿಟಾರ್ ಹಿಡಿದು “ಸಂಗೀತ ಸಾಮ್ರಾಟ್” ವಿಜಯ್ ಭಾಸ್ಕರ್ ಹತ್ತಿರ ಕೆಲಸ ಕೇಳಿಕೊಂಡು ಬಂದು, ಕೈಕಟ್ಟಿ ನಿಂತು ಯಾಚಿಸುತ್ತಾನೆ. ನಿಮ್ಮ ಬಳಿ ಗಿಟಾರ್ ನುಡಿಸಿಕೊಂಡು ಇರುತ್ತೇನೆ. ನಾನು ಸಹ ಆ ಮೂಲಕ ಹೆಚ್ಚಿನ ಜ್ಞಾನ ಪಡೆಯುತ್ತೇನೆ. ಒಂದು ಅವಕಾಶ ಕೊಡಿ ವಾದ್ಯಾರ್ (ಗುರುಗಳೇ) ಎಂದು ವಿನಮ್ರವಾಗಿ ಪ್ರಾರ್ಥಿಸುತ್ತಾನೆ. `ಎಲ್ಲಿ ನುಡಿಸಿ ತೋರಿಸು, ನಿನಗೆ ಗೊತ್ತಿರುವುದೆಲ್ಲವನ್ನು ನನ್ನೆದುರು ಈಗಲೇ ನುಡಿಸು’ ಎಂದು ಆದೇಶ ನೀಡುತ್ತಾರೆ. ವಿಧೇಯ ವಿದ್ಯಾರ್ಥಿಯಾಗಿ ಎಸ್ ಪಿ ವೆಂಕಟೇಶ್ ತನಗೆ ಗೊತ್ತಿರುವ ಎಲ್ಲಾ ರಾಗಗಳನ್ನು ನುಡಿಸುತ್ತಾನೆ, ಗುರುಗಳ ಮೆಚ್ಚುಗೆ ಗಳಿಸುತ್ತಾನೆ. ಅಂದಿನಿಂದಲೇ ವೆಂಕಟೇಶ್ ಶ್ರೀವಿಜಯ್ ಭಾಸ್ಕರ್‌ಗೆ ಪ್ರಿಯ ವಿದ್ಯಾರ್ಥಿ ಆಗುತ್ತಾನೆ. ಪ್ರತಿದಿನ ಕೆಲಸ ಕಲಿಯುತ್ತಾನೆ. ಅಲ್ಲಿಂದ ೧೮ ವರ್ಷಗಳ ಕಾಲ ವೆಂಕಟೇಶ್, ಗುರುವಿಗೆ ತಕ್ಕ ಶಿಷ್ಯನಾಗಿ ಸಂಗೀತದ ಎಲ್ಲಾ ಆಯಾಮಗಳನ್ನು ಕಲಿಯುತ್ತಾನೆ. ಸಂಗೀತ ಪಾರಂಗತನಾಗುತ್ತಾನೆ. ವಾದ್ಯಾರ್, ನೀವು ಕುಳಿತು ಸುಮ್ಮನೆ ನೋಡುತ್ತಾ ಇರಿ. ನಿಮ್ಮ ಒಂದು ಟ್ಯೂನ್‌ಗೆ ನೊಟೇಷನ್ ಹಾಕಿ ಎಲ್ಲಾ ಸಂಗೀತಗಾರರಿಗೂ ಬರೆಸಿ, ಪ್ರಶಿಕ್ಷಣ ಇತ್ತು ತಾನೇ ಸ್ವತಃ ಗುರುವಿನ ನೇತೃತ್ವದಲ್ಲಿ ಧ್ವನಿ ಮುದ್ರಣ ಮಾಡಿ ಸೈ ಎನ್ನಿಸಿಕೊಳ್ಳುತ್ತಾನೆ.

ಆ ತರುಣನೇ ಮುಂದೆ ಎಸ್ ಪಿ ವೆಂಕಟೇಶ್ ಎಂಬ ಸಂಗೀತ ನಿರ್ದೇಶಕನಾಗಿ ಬೆಳಕಿಗೆ ಬರುತ್ತಾನೆ. ಆ ಕಾಲಕ್ಕೆ ಕೆ.ವಿ ಜಯರಾಂಗೆ ಒಂದು ಸುವರ್ಣ ಅವಕಾಶ ಬಂತು. ಅದೇ “ಶರವೇಗದ ಸರದಾರ” ಎಂಬ ಚಿತ್ರ ನಿರ್ದೇಶಿಸುವ ಕಾರ್ಯ. ಬಂಗಾರಪ್ಪ ಅವರು ನೀನು ಮಾಡು ಚೆನ್ನಾಗಿ ಬರುತ್ತೆ, ನಿನ್ನ ಬಗ್ಗೆ ದೊಡ್ಡರಂಗೇಗೌಡರು ಹೇಳಿದ್ದಾರೆ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ. ಕುಮಾರ್ ಬಂಗಾರಪ್ಪ ಒಪ್ಪಿಕೊಳ್ಳುತ್ತಾರೆ, ಅಪ್ಪಿಕೊಳ್ಳುತ್ತಾರೆ. ಹೀಗೊಬ್ಬ ಸಂಗೀತಗಾರನ ಉದಯವಾಗುತ್ತದೆ. ಆಗ ಬಂಗಾರಪ್ಪ ಅವರು ಮುಖ್ಯಮಂತ್ರಿ. ಹಿರಿಯ ಮಗ ವಸಂತ್ ಬಗ್ಗೆ ಎಲ್ಲಿಲ್ಲದ ಪ್ರೀತಿ. ವಸಂತ್ ಕನ್ನಡದ ವರನಟ ಡಾ.ರಾಜ್‌ಕುಮಾರ್ ಹಾಗೆ ಹೆಸರು ಗಳಿಸಬೇಕೆಂಬ ಹಂಬಲ. ಅವರ ಅಭೀಪ್ಸೆ ಪೂರೈಸುವುದಕ್ಕೆ ಹೊರಟವರು ವಸಂತ್. ಅವರಿಗೆ ನಾವು ಇಟ್ಟ ಹೆಸರು `ಕುಮಾರ್ ಬಂಗಾರಪ್ಪ’ ಎಂದು. ಅದೇ ಹೆಸರಲ್ಲಿಯೇ ಪ್ರಖ್ಯಾತರಾದರು. ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದು ಮಧು ಬಂಗಾರಪ್ಪ. ಅವರಿಬ್ಬರು ಸದಾ ರಾಮ-ಲಕ್ಷö್ಮಣರಂತೆ ಇದ್ದರು. ಆ ಪ್ರೀತಿ-ವಾತ್ಸಲ್ಯ-ಅಕ್ಕರೆಯನ್ನು ನಾನು ಕಣ್ತುಂಬ ನೋಡಿದ್ದೇನೆ. ಸಿಎಂ ಅಧಿಕೃತ ಕಾರ್ಯಾಲಯ ಕೃಷ್ಣಗೆ ಹೊಂದಿಕೊಂಡಂತೆ ಒಂದು ದೊಡ್ಡ ಹಾಲ್, ಕಿಚನ್‌ಗಳು ಇದ್ದವು. ದೊಡ್ಡ ಹಾಲ್‌ನಲ್ಲಿ ಕಂಪೋಸಿಂಗ್ ಆರಂಭ ಮಾಡಿದೆವು. ಆಗ ಕೆವಿ ಜಯರಾಂ, ಈಗಾಗಲೇ ವೆಂಕಟೇಶ್ ಹೆಸರಿನ ಸಂಗೀತ ನಿರ್ದೇಶಕ ಜಿಕೆಯು ಇದ್ದಾರೆ. ಜನರಿಗೆ ಗೊಂದಲ ಆಗುವುದು ಬೇಡ ಎಂದರು. ನೀವೂ ಹೇಳುತ್ತಾ ಇರುವುದು ಸರಿಯಾಗಿಯೇ ಇದೆ. ಏನಾದರೂ ಒಂದು ಆಕರ್ಷಕ ಹೆಸರನ್ನು ಇಡೋಣಾ ಎಂದು ಎಲ್ಲರೂ ತೀರ್ಮಾನಿಸಿದೆವು. ಆಗ ನಾನು ಸೂಚಿಸಿದ ಹೆಸರೇ `ಸಂಗೀತ ರಾಜ’ (ಎಸ್‌ಪಿ ವೆಂಕಟೇಶ್). ಅದೇ ಹೆಸರಿನಲ್ಲಿ ಹತ್ತಾರು ಕನ್ನಡ ಚಿತ್ರಗಳಿಗೆ ಅವರು ಸಂಗೀತ ನೀಡಿದರು, ಪ್ರಖ್ಯಾತರಾದರು.

ಒಂದು ಮಧ್ಯಾಹ್ನ ೪ ಗಂಟೆ ಸಮಯ. ಸಿಎಂ ಬಂದರು. ನಿಮ್ಮ ಟ್ಯೂನ್‌ಗಳನ್ನು ಹಾಡಿ ತೋರಿಸಿ ಎಂದರು. ಎಲ್ಲವೂ ಅವರಿಗೆ ಇಷ್ಟವಾದವು. ಇದು ೭೦ ಎಂಎಂ ಸಿನಿಮಾ. ಮ್ಯೂಸಿಕ್ ರಿಚ್ ಆಗಿರಲಿ ಎಂದರು. ಕುಮಾರ್, ನೀವೆಲ್ಲಾ ಎಲ್ಲಾದರೂ ಒಂದು ನಿಸರ್ಗಧಾಮದಲ್ಲಿ ಕುಳಿತು ಹಾಡು ಮಾಡಿದ್ದರೆ ಗೌಡರಿಗೆ ಇನ್ನೂ ಸ್ಪೂರ್ತಿಯೂ ಸಿಗುತ್ತಿತ್ತೇನೋ ಎಂದು ಹೇಳಿ, ಅವರ ಪಿಎಗೆ ನಂದಿ ಹಿಲ್ಸ್ನ ನಂಬರ್ ತಗೋ ಅಂದರು. ಅರ್ಧ ಗಂಟೆಯಲ್ಲಿ ಸ್ನ್ಟೈಲ್‌ನ ಹೊಟೇಲ್ ಬುಕ್ ಆಯ್ತು. ಅಲ್ಲಿಗೆ ಹೋಗಿ ಹಾಯಾಗಿ ಹಾಡು ಮಾಡಿಕೊಂಡು ಬನ್ನಿ ಎಂದರು. ಮೂರು ನಾಲ್ಕು ಕಾರು ಮಾಡಿದರು. ವಾದ್ಯಗಾರರೆಲ್ಲ ಒಂದು ಕಾರಲ್ಲಿ ಕುಳಿತರು. ನಾನು, ವಸಂತ್, ಕೆವಿ ಜಯರಾಂ ಇನ್ನೊಂದು ಕಾರಲ್ಲಿ ಕುಳಿತೆವು. ಸಂಗೀತರಾಜ ಹಾಗೂ ಅವರ ಇಬ್ಬರು ಸಹಾಯಕರು ಮತ್ತೊಂದು ಕಾರಲ್ಲಿ. ಸಂಜೆ ವೇಳೆ ನಾವೆಲ್ಲಾ ನಂದಿ ಬೆಟ್ಟಕ್ಕೆ ತಲುಪಿದೆವು. ಟೀ ಕುಡಿದು ಕಂಪೋಸಿಂಗ್‌ಗೆ ಕುಳಿತೆವು. ಮೊದಲಿಗೆ ಅನುರಾಗವೇ ಹೂವಾಗಿದೆ ಗೀತೆ ಬರೆದೆ. ಕೆ ವಿ ಜಯರಾಂ ಚೆನ್ನಾಗಿದೆ ಎಂದರು.

ನಾವೂ ಒಂದು ಅಭೂತಪೂರ್ವ ಹಾಡು ಮಾಡಬೇಕು. ಮುಖ್ಯವಾಗಿ ಮಕ್ಕಳಿಗೆ ಆ ಹಾಡು ಇಷ್ಟವಾಗಬೇಕು. ಸರಳ, ಸುಂದರ ಮಧುರಾತಿ ಮಧುರ ಆಗಿರಬೇಕು. ಪ್ರಯತ್ನಿಸಿ ಸಾರ್ ಎಂದರು. ಆಯ್ತು ಸರ್ ಎಂದು ಒಪ್ಪಿಕೊಂಡು ಬರೆಯಲು ಕುಳಿತೆ. ಆಗ ಹೊಳೆಯಿತು, `ಕನ್ನಡ ನಾಡಿನ ರನ್ನದ ರತುನ.. ಕೇಳೋ ಕಥೆಯೊಂದ..ನಾ, ಹೇಳೋ ಕಥೆಯೊಂದ’ ಎಂದು ಪ್ರಾರಂಭಿಸಿ, ಹೊಯ್ಸಳ ಹುಟ್ಟಿದ ಕಥೆ. ಸಳ ಹುಲಿಯನ್ನು ಕೊಂದ ಕಥೆ. ಗುರುಗಳು ಶಿಷ್ಯನಿಗೆ `ಹೊಯ್-ಸಳ’ ಎಂದು ಹೆಸರಿಟ್ಟ ಕಥೆಯೆಲ್ಲಾ ಬರೆದೆ. ಸಂಗೀತಾ ರಾಜ, ಈ ಕಥನ ಗೀತೆಗೆ ಅತ್ಯುತ್ತಮ ರಾಗ-ಸಂಯೋಜನೆ ಮಾಡಿದರು. ವಸಂತ್, ಅಪ್ಪಾಜಿಗೆ ಈ ಬಗ್ಗೆ ಫೋನ್‌ನಲ್ಲಿಯೇ ತಿಳಿಸಿದರು. ಸಂಗೀತ ರಾಜ ಆನಂದ ತುಂದಿಲನಾಗಿದ್ದ, ಡೈರೆಕ್ಟರ್ ಕೆ ವಿ ಜಯರಾಂ ಸಮಾಧಾನ, ಕುಮಾರ್ ಬಂಗಾರಪ್ಪ ಅವರಿಂದ ಮೆಚ್ಚುಗೆಯ ಸುರಿಮಳೆ. ನೀವೂ ಬರೆಯಿರಿ ಸಾರ್. ನಾವೂ ಚೆನ್ನಾಗಿ ಚಿತ್ರೀಕರಣ ಮಾಡಿ, ಹಾಡಿಗೆ ನ್ಯಾಯ ಒದಗಿಸುತ್ತೇವೆ ಎಂದರು. ಎಲ್ಲರು ಊಟ ಮಾಡಿ ಮಲಗಿದೆವು. ಕೊಠಡಿ ತುಂಬೆಲ್ಲಾ ಕನ್ನಡ ನಾಡಿನ ರನ್ನದ ರತುನ ಅನುರಣಿಸುತ್ತಿತ್ತು. ಇದನ್ನು ಎಸ್ ಪಿ ಬಾಲಸುಬ್ರಮಣ್ಯ ಅವರಿಂದಾನೇ ಹಾಡಿಸಬೇಕೆಂದು ಸಂಕಲ್ಪ ಮಾಡಿದೆವು. ನಾನಂತೂ ಹೊಯ್ಸಳ ಸಾಮ್ರಾಜ್ಯ ಅಂದು ಉದಯವಾದ ದಿನ ನೆನೆದು ತಾಯಿ ಶಾರದೆಗೆ ನೂರು ನಮನ ಸಲ್ಲಿಸಿದೆ. ಅಮ್ಮಾ ನಿನ್ನ ಕೃಪೆ ಇದ್ದರೆ ಮಾತ್ರ ಇಂಥ ಒಳ್ಳೆಯ ಹಾಡು ನನ್ನ ಲೇಖನಿಯಿಂದ ಮೂಡಲು ಸಾಧ್ಯ. ಸಂಗೀತ ಹಾಲು-ಜೇನಿನಂತೆ ಬೆರೆತಿತ್ತು. ಸಾಹಿತ್ಯ ಸಂಗೀತ ಸರಸ್ವತಿ ನನ್ನ ಲೇಖನಿಯಲ್ಲಿ ಕುಳಿತು ಬರೆಸಿ ಆಶೀರ್ವದಿಸಿದ್ದಳು. ಬಿಡುಗಡೆಯಾದಾಗ ಜಯಭೇರಿ ಹೊಡೆಯಿತು. ನನ್ನ ಹಾಗೂ ಕೆವಿ ಜಯರಾಂ ಹಾಗೂ ಸಂಗೀತ ರಾಜ ಕಾಂಬಿನೇಷನ್‌ನಲ್ಲಿ ಎರಡನೇ ಚಿತ್ರ `ಮುದುಡಿದ ತಾವರೆ ಅರಳಿತು’ ಹಾಡುಗಳ ಟ್ಯೂನಿಂಗ್ ಚೆನ್ನಾಗಿತ್ತು. ನಾನು ಕೂಡ ಒಳ್ಳೆಯ ಗೀತೆಗಳನ್ನು ಬರೆಯುವ ಪ್ರಯತ್ನ ಮಾಡಿದೆ. ಅಲ್ಲಿಂದ ಸಂಗೀತರಾಜ್, ಕಲ್ಯಾಣ್ ಜೊತೆ ನನ್ನ ಗೀತೆಗಳನ್ನೆಲ್ಲಾ ಆಧರಿಸಿದ `ಶ್ವೇತಾ ಗುಲಾಬಿ’ಗೆ ಸ್ವರ ಸಂಯೋಜನೆ ಮಾಡಿದರು. ಎಲ್ಲಾ ಹಾಡುಗಳು ಮಧುರವಾಗಿದ್ದವು.

ನಮ್ಮ ಟೀಂಗೆ ಹೊಸ ಸೇರ್ಪಡೆ ಮಂಜುಳಾ ಗುರುರಾಜ್. `ಪ್ರೀತಿ ಜಗದ ಪಾತ್ರ ಪಡೆದ ನನ್ನ ಆಟಕೆ ನೀನೆ ಗೊಂಬೆ’ ಹಾಡು ಹಾಡಿದರು. ಅಲ್ಲಿಂದ ಮುಂದೆ ಅನಂತ್ ನಾಗ್ ನಾಯಕನಾಗಿ ನಟಿಸಿದ ಚಿತ್ರ `ವರ್ಣಚಕ್ರ’, ಅದರ ಎಲ್ಲಾ ಹಾಡುಗಳನ್ನು ನಾನು ಬರೆದ, `ಅಮ್ಮ ನಕ್ಕರೆ ಹಾಲು ಸಕ್ಕರೆ, ವಾತ್ಸಲ್ಯ ಸಿರಿ ತೋರಿದ ಕಣ್ಣು ತುಂಬಿ ನಾ ನೋಡಿದೆ’ ನಾನು ಬರೆದ ಈ ಗೀತೆ ಲೀಲಾವತಿ ಅವರ ಮೇಲೆ ಚಿತ್ರೀಕರಣವಾಗಿದೆ. ಆ ಅಭಿನಯ ಮನೋಜ್ಞ, ಮುಂದೆ ನಮ್ಮ ಜೋಡಿ ಸೃಷ್ಠಿಸಿದ್ದು ಅದ್ಭುತ. ಸಂಗೀತರಾಜನಿಗೆ ಒಂದೊಂದೆ ಅವಕಾಶಗಳು ಹೆಚ್ಚಾಯ್ತು. ಕೆವಿಜೆ ಹಾಗೂ ನಾನು, ರಾಜು, ಅನಂತ್ ನಾಗ್ ಮತ್ತೆ ಹಳೆಯ ಟೀಂ ಒಂದುಗೂಡಿತ್ತು. ರಶ್ಮಿ ಆನಂತರ ರಂಜಿತಾ, ಒಂದರ ಹಿಂದೆ ಒಂದು, `ಇಬ್ಬನಿ ತಬ್ಬಿದ ಇಳೆಯಲಿ..ರವಿತೇಜ ಕಣ್ಣು ತೆರೆದು’ ಹಾಡು ಆ ಕಾಲದಲ್ಲಿ ಜನಪ್ರಿಯವಾಯಿತು. ವರ್ಣಚಕ್ರದಲ್ಲಿ ಜ್ವಾಲಾಮುಖಿ ಹಾಡು ಯಶಸ್ಸು ಪಡೆದ ಹಾಗೆ. ಹೀಗೆ ನಮ್ಮ ಸಂಗೀತದ ಪಯಣದಲ್ಲಿ ಸಮಗೀತ ರಾಜ ಮಿಂಚಿದರು, ಮಿನುಗಿದರು. ಅದರ ಸ್ವರ ಪ್ರಸ್ತಾರದ ಯಾನಗಾನ ಒಂದು ಹತ್ತು ವರ್ಷ ಚೆನ್ನಾಗಿಯೇ ಚಲಾವಣೆಯಲ್ಲಿತ್ತು. ಕೆಲವು ದಾಖಲೆಯನ್ನು ಬರೆಯಿತು.

 

Share this post:

Related Posts

To Subscribe to our News Letter.

Translate »