ನಟಿ ಸಮಂತಾ ರುತ್ ಪ್ರಭು ಅವರು ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಪ್ರತಿದಿನ ಒಂದಿಲ್ಲೊಂದು ಪೋಸ್ಟ್ ಹಾಕುತ್ತಲೇ ಇರುತ್ತಾರೆ. ತಮಗಿರುವ ಅಪರೂಪದ ಮೈಯೋಸಿಟಿಸ್ ಕಾಯಿಲೆ ಬಗ್ಗೆಯೂ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾ ಇರುತ್ತಾರೆ. ಹಾಗೇ ತಮ್ಮ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಆ ಸಲಹೆಯನ್ನು ಅನುಸರಿಸಿದರೆ ಮನುಷ್ಯ ಸತ್ತೇ ಹೋಗುತ್ತಾನೆ ಎಂದು ವೈದ್ಯರೊಬ್ಬರು ಕಿಡಿಕಾರಿದ್ದಾರೆ.
ಇತ್ತೀಚೆಗೆ ಸಮಂತಾ ಅವರು ವೈರಲ್ ಇನ್ಫೆಕ್ಷನ್ ತಡೆಯೋದು ಹೇಗೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದರಲ್ಲಿ ‘ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಹೇಳಿದ್ದರು. ಈ ಸಲಹೆಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಹೈಡ್ರೋಜ್ ಪೆರಾಕ್ಸೈಡ್ನ ತೆಗೆದುಕೊಂಡು ವೈರಲ್ ಇನ್ಫೆಕ್ಷನ್ನ ಕಡಿಮೆ ಮಾಡಿ ಎಂದು ಹೇಳುವ ಮೂಲಕ ದಾರಿ ತಪ್ಪಿಸುತ್ತಿರುವ ಸಮಂತಾಗೆ ವಿಜ್ಞಾನದ ಜ್ಞಾನವೂ ಇಲ್ಲ, ಆರೋಗ್ಯದ ಬಗ್ಗೆಯೂ ಯಾವುದೇ ಜ್ಞಾನ ಇಲ್ಲ. ಸಮಂತಾ ಅವರ ಈ ಮಾತು ಕೇಳಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೆಬ್ಯುಲೈಸ್ ಮಾಡಬೇಡಿ ಎಂದು ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ ಎಚ್ಚರಿಕೆ ನೀಡಿದ್ದಾರೆ. ಆರೋಗ್ಯದ ಬಗ್ಗೆ ಬೇಕಾ ಬಿಟ್ಟಿ ಸಲಹೆಯನ್ನು ನೀಡುತ್ತಿರುವ ಸಮಂತಾ ಅವರ ವಿರುದ್ಧ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಆರೋಪದಡಿ ಜೈಲಿಗೆ ಹಾಕಬೇಕು. ಭಾರತದ ಆರೋಗ್ಯ ಸಚಿವಾಲಯ ಅಥವಾ ಯಾವುದೇ ಆರೋಗ್ಯ ಸಂಸ್ಥೆ ಇವರ ಮೇಲೆ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಸುಮ್ಮನೆ ಇದ್ದು ಜನರನ್ನು ಸಾಯಲು ಬಿಡುತ್ತಾರಾ ಎಂದು ಪ್ರಶ್ನೆಯನ್ನೂ ಕೂಡ ಮಾಡಿದ್ದಾರೆ.
ವೈದ್ಯರು ಮಾಡಿದ ಈ ಟೀಕೆ ಟಿಪ್ಪಣಿಯ ನಂತರ ಎಚ್ಚೆತ್ತುಕೊಂಡ ಸಮಂತಾ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ವಿವಿಧ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಹಲವು ಚಿಕಿತ್ಸೆಗಳು ತುಂಬಾ ದುಬಾರಿಯಾಗಿದ್ದವು. ಆದರೆ ಅದೃಷ್ಟವಶಾತ್ ನಾನು ಆ ಖರ್ಚು-ವೆಚ್ಚ ನಿಭಾಯಿಸಬಲ್ಲೆ. ಆದರೆ.. ಈ ದುಬಾರಿ ಚಿಕಿತ್ಸೆಯನ್ನ ಪಡೆಯಲು ಅನೇಕರಿಗೆ ಸಾಧ್ಯವಾಗಲ್ಲ. ಈ ಅಂಶವೇ ನನಗೆ ಪರ್ಯಾಯ ಚಿಕಿತ್ಸೆಗಳು ಮತ್ತು ಚಿಕಿತ್ಸೆಗಳ ಬಗ್ಗೆ ಓದಲು ಕಾರಣವಾಯಿತು. ಪ್ರಯೋಗ ಮತ್ತು ದೋಷದ ನಂತರ, ನನಗೆ ಅದ್ಭುತವಾಗಿ ಕೆಲಸ ಮಾಡುವ ಚಿಕಿತ್ಸೆಯನ್ನು ನಾನು ಕಂಡುಕೊಂಡೆ. ಕಳೆದೆರಡು ವರ್ಷಗಳಲ್ಲಿ ನಾನು ಎದುರಿಸಿದ ಮತ್ತು ಕಲಿತ ಎಲ್ಲದರಿಂದ ನಾನು ಕೇವಲ ಒಳ್ಳೆಯ ಉದ್ದೇಶದಿಂದ ಸಲಹೆ ನೀಡಿದ್ದೇನೆ ಎಂದು ಸಮಂತಾ ಹೇಳಿದ್ದಾರೆ.