ದಿನಕರ ತೂಗುದೀಪ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ದೇಶಕರಾಗಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಇಂಡಸ್ಟ್ರಿಯ ಜರ್ನಿ ಹೇಗಿತ್ತು ಎಂಬುದರ ಮಾಹಿತಿಯನ್ನು ಚಿತ್ತಾರದದೊಂದಿಗೆ ಹಂಚಿಕೊಂಡಿದ್ದಾರೆ.
* ದಿನಕರ ತೂಗುದೀಪ ಡೈರೆಕ್ಟರ್ ಆಗಿದ್ದೇಕೆ..?
`ನಮ್ಮ ತಂದೆಗೆ ಕಿಡ್ನಿ ಸಮಸ್ಯೆ ಶುರುವಾಗಿದ್ದು 1993ರಲ್ಲಿ. ನಾನಾಗ 9ನೇ ಕ್ಲಾಸ್. ಆರೋಗ್ಯ ಸರಿಯಿಲ್ಲದೆ ಇದ್ದಾಗ ಮೈಸೂರಲ್ಲಿಯೇ ಜಾಸ್ತಿ ಸಮಯ ಕಳೆಯುತ್ತಿದ್ದರು. ಮನೆಯಲ್ಲಿಯೇ ಇರುತ್ತಿದ್ದಾಗ ಸಿನಿಮಾ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ನಾನು ಕೂಡ ಮಾತನಾಡುತ್ತಿದ್ದೆ. ಸಿನಿಮಾದಲ್ಲಿ ಯರ್ಯಾರ ಡೆಸಿಗ್ನೇಷನ್ ಹೇಗಿರುತ್ತೆ. ಎಲ್ಲರೂ ಡೈರೆಕ್ಟರ್ ಮಾತನ್ನೇ ಕೇಳಬೇಕು ಅಂತೆಲ್ಲಾ ಹೇಳಿದ್ದರು. ಆ ಮಾತುಗಳೇ ನನಗೆ ಡೈರೆಕ್ಟರ್ ಆಗಬೇಕು ಅನ್ನೋದು ಬಂತಾ ಏನೋ. ಅಂದಿನಿಂದಾನೂ ಆಸೆ ನನಗೆ ನನ್ನ ಕಮಾಂಡ್ ಮೇಲೆ ಕೆಲಸ ಆಗಬೇಕು ಅನ್ನುವುದು. ಸಿನಿಮಾ ನೋಡಿದಾಗ ಈ ಥರ ಮಾಡಬಹುದು, ಆ ಥರ ಮಾಡಬಹುದಲ್ವಾ ಅಂತ ನಾನು ತಂದೆಯ ಬಳಿ ಕಮೆಂಟ್ ಮಾಡುತ್ತಿದ್ದೆ. ಆಗ ಅಪ್ಪ ಹೇಳುತ್ತಾ ಇದ್ರು, ಇಲ್ಲಿ ಕುಳಿತು ಕಮೆಂಟ್ ಮಾಡುವುದು ಸುಲಭ, ಆದರೆ ಅಲ್ಲಿ ನಿಂತು ಕೆಲಸ ಮಾಡಿದಾಗ ಆಗು-ಹೋಗುಗಳ ಬಗ್ಗೆ ತಿಳಿಯುತ್ತೆ ಎಂದಿದ್ದರು. ಹೀಗಾಗಿ ಈ ಎಲ್ಲಾ ಕುತೂಹಲಗಳೇ ನಿರ್ದೇಶಕನಾಗುವ ಆಸೆ ಬಿತ್ತಿದೆ ಅನ್ಸುತ್ತೆ’ ಎಂದಿದ್ದಾರೆ.
* `ಜೊತೆಜೊತೆಯಲಿ’ ಶುರುವಾಗಿದ್ದು ಹೇಗೆ..?
ದಿನಕರ ತೂಗುದೀಪ ಅವರಿಗೆ ಆರಂಭದಲ್ಲಿಯೇ ಬಹಳ ಸಕ್ಸಸ್ ಸಿಕ್ಕಿದೆ. ನಿರ್ದೇಶನ ಮಾಡಿದ್ದಂತ ಎಲ್ಲಾ ಸಿನಿಮಾಗಳು ಹಿಟ್ ಆಗಿದ್ದವು. ಸಕ್ಸಸ್ ಸಿಗುವುದಕ್ಕೂ ಮುನ್ನ ನಿರ್ಮಾಪಕರು ದಿನಕರ್ ಅವರನ್ನು ರಿಜೆಕ್ಟ್ ಮಾಡಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 19 ನಿರ್ಮಾಪಕರು. ಆದರೆ ಸಕ್ಸಸ್ ಸಿಕ್ಕ ಮೇಲೆ, `ದರ್ಶನ್‌ಗೆ ಪ್ರೊಡಕ್ಷನ್ ಎಲ್ಲಾ ಶುರು ಮಾಡಬೇಕು ಎಂಬ ಮೆಂಟಾಲಿಟಿ ಇರಲಿಲ್ಲ. ಆಕ್ಟರ್ ಆಗಿನೆ ಇರಬೇಕು ಅಂತ ಇದ್ದಿದ್ದು. ನಾನು ಎಜುಕೇಷನ್ ಮುಗಿಸಿ 2000ರಲ್ಲಿ ಎಂಟ್ರಿಯಾಗಿದ್ದೆ. ಅದಾಗಲೇ ದರ್ಶನ್ `ಮೆಜೆಸ್ಟಿಕ್’ ಸಿನಿಮಾ ಮಾಡಿ ಹೀರೋ ಆಗಿದ್ದರು. ಗೌರಿಶಂಕರ್ ಅವರ ಬಳಿ ನಾನು ಅಸಿಸ್ಟೆಂಟ್ ಆಗಿ ಕೆಲಸ ಮಾಡಿದೆ. 9 ಸಿನಿಮಾಗಳಿಗೆ ಅಸಿಸ್ಟೆಂಟ್ ಕ್ಯಾಮೆರಾಮೆನ್ ಆಗಿ ಕೆಲಸ ಮಾಡಿದ್ದೆ. ಬಳಿಕ ದರ್ಶನ್ ಬಳಿ ಡೇಟ್ ಕೇಳಿದ್ದೆ. ನನ್ನದೊಂದು ಕಥೆ ಇದೆ ಸಿನಿಮಾ ಮಾಡೋಣಾ ಎಂದು. ಕಂಪ್ಲೀಟ್ ಕೆಲಸ ಕಲಿತಿದ್ದೀನಿ ಎಂಬುದನ್ನು ಪ್ರೂವ್ ಮಾಡಿದಾಗ ಡೇಟ್ಸ್ ಕೊಡುತ್ತೀನಿ ಎಂದಿದ್ರು. ಅದನ್ನು ಚಾಲೆಂಜಿಂಗ್ ಆಗಿನೇ ತೆಗೆದುಕೊಂಡು, `ಜೊತೆ ಜೊತೆಯಲಿ’ ಕಥೆ ಮಾಡಿಕೊಂಡೆ. ಈ ಸಿನಿಮಾ ಮಾಡಲು 19 ಜನರ ಬಳಿ ಕೇಳಿದ್ದೆ. ಯಾರೂ ಒಪ್ಪಿರಲಿಲ್ಲ. ನಂಗೆ ಕಥೆಯನ್ನು ಹೇಳುವುದಕ್ಕೆ ಈಗಲೂ ಬರಲ್ಲ. ಪಾಯಿಂಟ್ಸ್ ಥರ ಹೇಳ್ತೀನಿ. ಆಮೇಲೆ ನಮ್ಮ ಅಮ್ಮ ನಾವೇ ಮಾಡೋಣಾ ಬಾ ಅಂತ ಹೇಳಿ ಸಿನಿಮಾ ಶುರು ಮಾಡಿದರು. ಹಂಗೆ ತುಗೂದೀಪ ಪ್ರೊಡಕ್ಷನ್ ಶುರುವಾಗಿದ್ದು. ಆಗ ನಂಗೆ ಸ್ವಲ್ಪ ಬೇಜಾರು ಕೂಡ ಇತ್ತು. ದರ್ಶನ್ ಮಾತನ್ನು ಮೀರಿ ಮುಂದೆ ಹೋಗುತ್ತಾ ಇದ್ದೀನಿ ಅಂತ. ದರ್ಶನ್ಗೆ ನನ್ನ ತಮ್ಮನ್ನು ಡೈರೆಕ್ಷನ್ಗೆ ಹಾಕಿಕೊಳ್ಳಿ ಅಂತ ಹೇಳುವುದು ಐದು ನಿಮಿಷದ ಕೆಲಸ. ನಾನು ಕೆಲಸ ಸರಿ ಮಾಡದೆ ಇದ್ದರೆ ಒಬ್ಬ ನಿರ್ಮಾಪಕನನ್ನು ಬಲಿಕೊಟ್ಟಂಗೆ ಆಗುತ್ತಲ್ಲ ಅನ್ನೋ ಭಯ ದರ್ಶನ್ಗಿತ್ತು ಅನ್ಸುತ್ತೆ. ನಮ್ಮ ಪ್ರೊಡಕ್ಷನ್ನಲ್ಲೇ ಸಿನಿಮಾ ಶುರುವಾದ ಮೇಲೆ ಆರಂಭದಲ್ಲಿ ಅಷ್ಟೇನು ಸಪೋರ್ಟ್ ಮಾಡಲಿಲ್ಲ. ಆದರೆ ಆಮೇಲೆ ದರ್ಶನ್ ಪೂರ್ತಿ ಸಪೋರ್ಟ್ ಮಾಡಿದರು. . ಸಿನಿಮಾ ರಿಲೀಸ್ ಆದ ಮೇಲೆ ರಿಜೆಕ್ಟ್ ಮಾಡಿದ್ದ ನಿರ್ಮಾಪಕರಲ್ಲ್ಲಿ ನಾಲ್ಕೆದು ಜನ ನಿರ್ಮಾಪಕರು ಫೋನ್ ಮಾಡಿ, ಈ ಥರ ತೆಗಿತೀಯಾ ಅಂತ ನಮಗೆ ಹೇಳಿಯೇ ಇರಲಿಲ್ಲವಲ್ಲ. ಇಷ್ಟು ಚೆನ್ನಾಗಿ ಸಿನಿಮಾ ತೆಗಿತೀಯಾ ಅಂತ ಗೊತ್ತಿದ್ದರೆ ನಾವೇ ಮಾಡುತ್ತಾ ಇದ್ವಿ ಅಂತ ಹೇಳಿದ್ದರು.
* ಸಿನಿಮಾ ಬಗ್ಗೆ ತಂದೆ ಯಾವ ಸಲಹೆ ನೀಡುತ್ತಾ ಇದ್ದರು..?
ಸಿನಿಮಾ ಇಂಡಸ್ಟ್ರಿಯಲ್ಲಿರುವವರು ತಮ್ಮ ಮಕ್ಕಳಿಗೆ ಆ ಕ್ಷೇತ್ರದ ಬಗ್ಗೆ ಒಂದಷ್ಟು ಸಲಹೆಗಳನ್ನು ನೀಡುತ್ತಾರೆ. ಆದರೆ ದರ್ಶನ್ ಹಾಗೂ ದಿನಕರ್ ಬಳಿ ತುಗೂದೀಪ ಅವರು ಇಂಡಸ್ಟ್ರಿ ಬಗ್ಗೆ ಹೆಚ್ಚೇನು ಮಾತನ್ನೇ ಆಡುತ್ತಿರಲಿಲ್ಲವಂತೆ. `ಇಂಡಸ್ಟ್ರಿ ಬಗ್ಗೆ ನಮ್ಮಿಬ್ಬರ ಬಳಿಯೂ ಏನು ಮಾತನಾಡುತ್ತಿರಲಿಲ್ಲ. ಅಮ್ಮನ ಬಳಿ ಮಾತನಾಡುತ್ತಿದ್ದರು. ನಾನಾಗಲೀ, ದರ್ಶನ್ ಆಗಲಿ ಇಂಡಸ್ಟ್ರಿಗೆ ಬರುವುದು ಅವರಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಇಂಡಸ್ಟ್ರಿಗೆ ಬಂದು ಸರ್ವೈವ್ ಆಗುತ್ತಾರೋ ಇಲ್ಲವೋ ಎಂಬ ಭಯ ಇತ್ತು.
* ಶಂಕರ್ ನಾಗ್ ರೋಲ್ ಮಾಡೆಲ್ ಆಗಿದ್ದೇಗೆ..?
`ನನ್ನ ರೋಲ್ ಮಾಡೆಲ್ ಅಂದ್ರೆ ಅದು ನಮ್ಮ ಅಪ್ಪನೇ. ಅದಾದ ಮೇಲೆ ಶಂಕರ್ ನಾಗ್ ಸರ್. ಅವರು ತೀರಿಕೊಂಡಾಗ ೮ನೇ ತರಗತಿಯಲ್ಲಿದ್ದೆ. ಅವರ ಜೊತೆಗೆ ನಾನು ಕೆಲಸ ಮಾಡಿಲ್ಲ. ಆದರೆ ಬಿಸಿ ಗೌರಿಶಂಕರ್ ಅವರು ಅವರ ಸಿನಿಮಾಗಳಿಗೆ ಕ್ಯಾಮೆರಾ ಮೆನ್ ಆಗಿದ್ದರು. ಗೌರಿ ಶಂಕರ್ ಅವರ ಮನೆಗೆ ಹೋದಾಗ, ಕೆಲಸದ ಸಮಯದಲ್ಲೆಲ್ಲಾ ಶಂಕರ್ ನಾಗ್ ಅವರ ಸಿನಿಮಾಗಳ ಬಗ್ಗೆ ಹೇಳ್ತಾ ಇದ್ದರು. ನಾನು ಮೊದಲು ಕೂಡ ಶಂಕರ್ ನಾಗ್ ಸರ್ ಸಿನಿಮಾಗಳನ್ನು ನೋಡುತ್ತಾ ಇದ್ದೆ. ಆದರೆ ಅವರ ಬಗ್ಗೆ ತಿಳಿದುಕೊಂಡ ಮೇಲೆ ಅವರ ಸಿನಿಮಾಗಳನ್ನು ನಾನು ನೋಡುತ್ತಿದ್ದ ರೀತಿಯೇ ಬದಲಾಗಿತ್ತು. ಅವರ ಥರ ಥಿಂಕ್ ಮಾಡುವುದಕ್ಕೇ ಈಗಲೂ ಸಾಧ್ಯವಿಲ್ಲ. ನಾನು ಅವರ ದೊಡ್ಡ ಫ್ಯಾನ್ ಆಗೋದೆ. `ಜೊತೆ ಜೊತೆಯಲಿ’ ಸಿನಿಮಾ ಟೈಟಲ್ ಇಡುವುದಕ್ಕೂ ಅವರ ಮೇಲಿನ ಅಭಿಮಾನವೇ ಕಾರಣ’ ಎಂದಿದ್ದಾರೆ.