Sandalwood Leading OnlineMedia

ತೂಗುದೀಪ ಶ್ರೀನಿವಾಸ್‌ ಮಕ್ಕಳಾದರೂ ಶಾಲೆಗೆ ಸೈಕಲ್‌ನಲ್ಲಿಯೇ ಹೋಗುತ್ತಿದ್ದ ದರ್ಶನ್‌ & ದಿನಕರ್..!‌

ತಂದೆ ಇಂಡಸ್ಟ್ರಿಯಲ್ಲಿಯೇ ದೊಡ್ಡ ಖಳ ನಟನಾಗಿ ಹೆಸರು ಮಾಡಿದವರು. ಈಗ ಇಬ್ಬರು ಮಕ್ಕಳು ಆ ಹೆಸರನ್ನು ಕಾಪಾಡಿಕೊಂಡು ಬಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್ ನಟರಾಗಿ ಗುರುತಿಸಿಕೊಂಡರೆ, ದಿನಕರ್ ತೂಗುದೀಪ ಅವರು ಸ್ಟಾರ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಮೊದಲ ಸಿನಿಮಾ `ಜೊತೆಜೊತೆಯಲಿ’ ನಿರ್ದೇಶನ ಮಾಡುವ ಮೂಲಕವೇ ಯಶಸ್ಸು ಕಂಡಿದ್ದ ದಿನಕರ್ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟರು. ಸದ್ಯ `ರಾಯಲ್’ ಸಿನಿಮಾ ನಿರ್ದೇಶನ ಮಾಡುತ್ತಿರುವ ದಿನಕರ್, ತಮ್ಮ ಬಾಲ್ಯ, ದರ್ಶನ್ ಜೊತೆಗಿನ ಬಾಂಧವ್ಯದ ಬಗ್ಗೆ`ಚಿತ್ತಾರʼದೊಂದಿಗೆ ಹಂಚಿಕೊಂಡಿದ್ದಾರೆ.

 

* ದರ್ಶನ್‌ ಹಾಗೂ ನಿಮ್ಮ ಬಾಲ್ಯ ಹೇಗಿತ್ತು..?

` ನಾರ್ಮಲ್ ಆಗಿನೇ ಇತ್ತು. ಆಕ್ಟರ್ ಮಕ್ಕಳು ಅಂತ ಹೇಳಿ ಅಷ್ಟೊಂದು ಸ್ಪೆಷಲ್ ಆಗಿ ಏನು ಬೆಳೆಸಿಲ್ಲ. ನಾವೂ ಸ್ಕೂಲಿಗೆ ಹೋಗುವಾಗ ಸೈಕಲ್‌ನಲ್ಲಿಯೇ ಹೋಗುತ್ತಾ ಇದ್ವಿ, ಹತ್ತಿರವಿದ್ದಾಗ ನಡೆದುಕೊಂಡು ಹೋಗುತ್ತಾ ಇದ್ವಿ, ಕಾಲೇಜಿಗೆ ಬಂದಾಗ ಬಸ್‌ನಲ್ಲಿಯೇ ಓಡಾಡುತ್ತಾ ಇದ್ವಿ. ತಂದೆ ಅವರು ಹೆಚ್ಚು ಬೆಂಗಳೂರಿನಲ್ಲಿಯೇ ಇರುತ್ತಾ ಇದ್ದರು. ಶೂಟಿಂಗ್ ಬ್ರೇಕ್ ಇದ್ದಾಗ, ಎರಡು ವಾರಕ್ಕೊಮ್ಮೆ ಮೈಸೂರಿಗೆ ಬರುವ ಥರ ಪ್ಲ್ಯಾನ್‌ ಮಾಡಿಕೊಂಡು ಬಂದು ಹೋಗ್ತಾ ಇದ್ರು. ನಾವೂ ಹೆಚ್ಚು ಬೆಳೆದಿದ್ದೆಲ್ಲ ಅಮ್ಮನ ಜೊತೆಗೆ. ಹಬ್ಬ ಇದ್ದಾಗೆಲ್ಲಾ ಅಪ್ಪ ಬರ್ತಾ ಇದ್ರು. ಬಂದಾಗೆಲ್ಲಾ ತುಂಬಾ ಫ್ರೆಂಡ್ಲಿಯಾಗಿಯೇ ಇರುತ್ತಾ ಇದ್ರು. ತೆರೆ ಮೇಲಷ್ಟೇ ವಿಲನ್, ಆದರೆ ನಿಜವಾದ ಹೀರೋ ಅವರು. ದರ್ಶನ್‌ಗೆ ಹೋಲಿಕೆ ಮಾಡಿಕೊಂಡರೆ ಅಪ್ಪನ ಜೊತೆಗೆ ನಾನೇ ಹೆಚ್ಚು ಕ್ಲೋಸ್ ಆಗಿದ್ದಿದ್ದು. ಚಿಕ್ಕವನು ಅಂತ ಅಪ್ಪ ಕ್ಲೋಸ್ ಆಗಿ ಇರ್ತಾ ಇದ್ರುʼ.

 

* ದರ್ಶನ್ ಹಾಗೂ ದಿನಕರ್ ಬಾಂಡಿಂಗ್‌ ಹೇಗಿತ್ತು..?

`ನಂಗು ಮತ್ತು ದರ್ಶನ್‌ಗೂ ಅಷ್ಟೊಂದು ವಯಸ್ಸಿನ ಅಂತರವೇನು ಇಲ್ಲ. ಹೀಗಾಗಿ ಅಣ್ಣ-ತಮ್ಮಂದಿರು ಎನ್ನುವುದಕ್ಕಿಂತ ಸ್ನೇಹಿತರು ನಾವೂ. ತುಂಬಾ ಸಮಯ ಜೊತೆಗೆ ಕಳೆಯುತ್ತೀವಿ. ನಮ್ಮ ಮನೆಯಲ್ಲಿ ತಂದೆ-ತಾಯಿಗೆ ಒಂದು ರೂಮು, ಅಕ್ಕನಿಗೆ ರೂಮಿನ ಕಾರ್ನರ್‌ನಲ್ಲಿ ಒಂದು ಮಂಚ ಇತ್ತು. ನಾವಿಬ್ಬರು ಒಂದೇ ಮಂಚದಲ್ಲಿ ಮಲಗಿಕೊಳ್ತಾ ಇದ್ವಿ. 9 ಗಂಟೆಗೆಲ್ಲಾ ಮಲಗಬೇಕು ಎಂಬುದು ಮನೆಯ ನಿಯಮ. ಆದರೆ ನಿದ್ದೆ ಬರುತ್ತಾ ಇರಲಿಲ್ಲ. ನಾನು ದರ್ಶನ್ ಬೆಡ್‌ಶೀಟ್ ಒಳಗೆ ಗುಸುಗುಸು ಅಂತ ಮಾತನಾಡುತ್ತಾ ಇರುತ್ತಿದ್ದೆವು. ಆದರೆ ಏನು ಮಾತನಾಡುತ್ತಿದ್ದೆವು ಎಂಬುದು ಮಾತ್ರ ನೆನೆಪಿಲ್ಲ. ತುಂಬಾ ಮಾತನಾಡುತ್ತಿದ್ದೆವು’.

 

* ಎಂಟ್ರಿ ದರ್ಶನ್ ಅವರಷ್ಟೇ ಕಷ್ಟವಾಯ್ತಾ..?

`ನಾನು ಅಸಿಟ್ಟೆಂಟ್ ಕ್ಯಾಮರಾಮೆನ್ ಆಗಿ ಕೆಲಸ ಶುರು ಮಾಡುವಷ್ಟರಲ್ಲಿ ದರ್ಶನ್ ಹೀರೋ ಆಗಿದ್ರು. ದರ್ಶನ್ ಎಂಟ್ರಿಯಾಗುವಾಗ ಸಪೋರ್ಟ್‌ಗೆ ಯಾರೂ ಇರಲಿಲ್ಲ. ಬಟ್ ನಾನು ಬಂದಾಗ ಅದಾಗಲೇ ದರ್ಶನ್ ತಮ್ಮ ಅನ್ನೋದು ಇತ್ತು. ಇಂಡಸ್ಟ್ರಿಯಲ್ಲಿ ಹೆಸರು ಮಾಡುವುದಕ್ಕೆ ನಮ್ಮ ತಂದೆ ತುಂಬಾ ಕಷ್ಟ ಪಟ್ಟಿದ್ದರು. ಆ ಕಷ್ಟ ದರ್ಶನ್ ಪಟ್ಟಿಲ್ಲ. ದರ್ಶನ್ ಕಷ್ಟ ನಾನ್ ಪಟ್ಟಿಲ್ಲ. ನಾನು ಇಂಡಸ್ಟ್ರಿಗೆ ಬರಬೇಕಾದರೆ ತೂಗುದೀಪ ಶ್ರೀನಿವಾಸ್ ಅವರ ಮಗ ಹಾಗೂ ದರ್ಶನ್ ಅವರ ತಮ್ಮ ಎನ್ನುವುದಿತ್ತು. ಆ ಟ್ಯಾಗ್‌ನಿಂದ ನನ್ನ ದಾರಿ ಸುಲಭವಾಗಿತ್ತು ಅನ್ನಿಸುತ್ತೆ’

* `ನವಗ್ರಹ’ಕ್ಕೆ ದರ್ಶನ್ ಕಾಲ್‌ಶೀಟ್ ಕೊಟ್ಟಿದ್ದೇಗೆ..?

`ಜೊತೆ ಜೊತೆಯಲಿ’ ಸಿನಿಮಾಗಿಂತ ಫಸ್ಟ್ ಕಥೆ ಹೊಳೆದಿದ್ದೆ ನವಗ್ರಹದ್ದು. ಪಿಯುಸಿಯಲ್ಲಿ ಇದ್ದಾಗಲೇ ಆ ಕಾನ್ಸೆಪ್ಟ್ ಬಗ್ಗೆ ತಲೆಗೆ ಬಂದಿತ್ತು. ಪಿಯುಸಿ ರಜೆಯಲ್ಲಿ ಫ್ರೆಂಡ್ಸ್‌ಗಳ ಜೊತೆಗೆ ಪ್ಯಾಲೇಸ್‌ಗೆ ಹೋಗುತ್ತಾ ಇದ್ವಿ. ಅಲ್ಲಿ ಪರಿಚಯದವರು ಇದ್ದ ಕಾರಣ ಟಿಕೆಟ್ ಎಲ್ಲಾ ತೆಗೆದುಕೊಳ್ಳುತ್ತಿರಲಿಲ್ಲ. ಪ್ಯಾಲೇಸ್ ಒಳಗೆ ಹೋದಾಗ ಅಂಬಾರಿ ನೋಡಿ ಹೇಳುತ್ತಾ ಇದ್ದೆ. ಈ ಅಂಬಾರಿಯನ್ನು ಕದ್ದು ಬಿಟ್ಟರೆ ಲೈಫ್ ಸೆಟಲ್ ಅಲ್ವಾ ಅಂತ. ಅದು ತಮಾಷೆಯಾಗಿ ಹೇಳಿದ್ದರೂ ಸಹ ನನ್ನ ತಲೆಯಲ್ಲಿ ಹಾಗೇ ಇತ್ತು. ಆದರೆ ಮೊದಲು `ಜೊತೆಜೊತೆಯಲಿ’ ಸಿನಿಮಾ ಮಾಡಿದೆ. ಪ್ರಿಮೀಯರ್ ಶೋ ನೋಡಿದ ದರ್ಶನ್, ಅಂಬಾರಿ ಕದಿಯುವ ಸಿನಿಮಾ ಇತ್ತಲ್ಲ ಯಾವಾಗ ಮಾಡೋಣಾ ಅಂತ ಕೇಳಿದ್ರು’.

* ದರ್ಶನ್ ಅವರಿಗೆ ಯಾಕೆ ಸಿನಿಮಾ ಮಾಡ್ತಿಲ್ಲ..?

`ನಾನು ಮೊದಲು ಸ್ಕ್ರಿಪ್ಟ್ ಮಾಡಿಕೊಳ್ಳುತ್ತೀನಿ. ಆಮೇಲೆ ಆ ಸ್ಕ್ರಿಪ್ಟ್‌ಗೆ ಯಾರೂ ಸರಿ ಹೊಂದುತ್ತಾರೆ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತೀನಿ. ೧೦೦% ದರ್ಶನ್ ಜೊತೆಗೂ ಮತ್ತೆ ಸಿನಿಮಾ ಮಾಡ್ತೀನಿ. ಪ್ರಸ್ತುತ ಮಾಡಿಕೊಂಡಿರುವ ಕಥೆ ಶಿವಣ್ಣ ಅವರಿಗೆ ಮ್ಯಾಚ್ ಆಗುವುದು. ರಾಯಲ್ ಈಗಾಗಲೇ ಮುಗಿದಿದೆʼ.

 

ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಂತ ನಿರ್ದೇಶಕರು ದಿನಗರ್ ತುಗೂದೀಪ ಅವರು. ಸದ್ಯ `ರಾಯಲ್’ ಮೂಲಕ ಮತ್ತೆ ಮೋಡಿ ಮಾಡುವುದಕ್ಕೆ ರೆಡಿಯಾಗಿದ್ದಾರೆ. `ಚಿತ್ತಾರ’ದೊಂದಿಗೆ ಮನಬಿಚ್ಚಿ ಮಾಹಿತಿ ಹಂಚಿಕೊಂಡ ದಿನಗರ್ ತುಗೂದೀಪ ಅವರಿಗೆ ಧನ್ಯವಾದಗಳು.

Share this post:

Related Posts

To Subscribe to our News Letter.

Translate »