Sandalwood Leading OnlineMedia

ನಟ ದಿಗಂತ್ ‘ಔಟ್ ಆಫ್ ಡೇಂಜರ್’, ವಾರ್ಡ್​ಗೆ ಶಿಫ್ಟ್!

ಗೋವಾ ಪ್ರವಾಸದಲ್ಲಿದ್ದ ಸ್ಯಾಂಡಲ್​ವುಡ್​ ನಟ ದೂದ್​ಪೇಡ ದಿಗಂತ್‌ ದೈಹಿಕ ಕಸರತ್ತು ಮಾಡುವಾಗ ಆಯತಪ್ಪಿ ಬಿದ್ದು ಕತ್ತಿನ ಭಾಗಕ್ಕೆ ದೊಡ್ಡ ಪ್ರಮಾಣ ಪೆಟ್ಟು ಮಾಡಿಕೊಂಡಿದ್ದರು. ಗೋವಾ ಬೀಚ್‌ನಲ್ಲಿ ಪಲ್ಟಿ ಹೊಡೆಯುವಾಗ ದಿಗಂತ್ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿತ್ತು. ಮಂಗಳವಾರ ಸಂಜೆ ಏರ್‌ಲಿಫ್ಟ್‌ ಮೂಲಕ ಅವರನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಸದ್ಯ ನಟ ದಿಗಂತ್‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಿನ್ನೆ ರಾತ್ರಿ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ದಿಗಂತ್​​ರನ್ನು ಆಸ್ಪತ್ರೆಯ ವಾರ್ಡ್​​ಗೆ ಶಿಫ್ಟ್​ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದಿಗಂತ್ ಅವರಿಗೆ ಸೂಕ್ತ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅವರೀಗ ಆರೋಗ್ಯದಿಂದ ಇದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ಅವರು ಐಸಿಯುನಲ್ಲಿ ಇರುವಂತಹ ಫೋಟೋವೊಂದನ್ನು ಬಿಡುಗಡೆ ಮಾಡಿದ್ದಾರೆ. ದಿಗಂತ್ ಕೂಡ ಗೆಲುವಿನ ಚಿಹ್ನೆ ತೋರಿಸಿ, ತಾವು ಆರೋಗ್ಯದಿಂದ ಇರುವುದಾಗಿ ಈ ಮೂಲಕ ತಿಳಿಸಿದ್ದಾರೆ. ಅಬ್ಸರ್ವೇಶನ್ ಮುಗಿದ ಬಳಿಕೆ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗುತ್ತದೆಯಂತೆ. 

ಸಮ್ಮರ್ ಸಾಲ್ಟ್ ಮಾಡುವಾಗ ಕುತ್ತಿಗೆ ಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದ ದಿಗಂತ್ ಅವರಿಗೆ ಕೂಡಲೇ ಗೋವಾದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಇನ್ನೂ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದ ಕಾರಣದಿಂದಾಗಿ ಗೋವಾದಿಂದ ಬೆಂಗಳೂರಿಗೆ ಅವರನ್ನು ಕರೆತರಲಾಗಿತ್ತು. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲವಾದ್ದರಿಂದ ಅವರನ್ನು ಗೋವಾದಿಂದ ಬೆಂಗಳೂರಿಗೆ ಕರೆತರುವ ಯೋಚನೆ ಮಾಡಿದ್ದರು ದಿಗಂತ್ ಕುಟುಂಬ.

 ‘ಮಣಿಪಾಲ್‌ ಆಸ್ಪತ್ರೆಯ ವೈದ್ಯ ಡಾ| ವಿದ್ಯಾಧರ್‌ ನೇತೃತ್ವದ ವೈದ್ಯರ ತಂಡ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ. ದಿಗಂತ್‌ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಆಪ್ತರು ಹಾಗೂ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. 

Share this post:

Translate »