ರಿಯಲ್ ಸ್ಟಾರ್ ಉಪೇಂದ್ರ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಎಂದಿನಂತೆ ತಮ್ಮ ವಿಭಿನ್ನ ಶೈಲಿಯ ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದಾರೆ. ‘ಯುಐ’ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿ ಸದ್ದು ಮಾಡ್ತಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ಚಿತ್ರ ಗೆಲ್ಲುವ ಸುಳಿವು ಸಿಕ್ಕಿದೆ. ದಾಖಲೆಗಳ ಪರ್ವ ಶುರುವಾಗಿದೆ. ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ‘ಯುಐ’ ಸಿನಿಮಾ ತೆರೆ ಕಂಡಿದೆ. ಮೊದಲ ದಿನವೇ ಅಂದಾಜು 10 ಕೋಟಿ ರೂ.ವರೆಗೂ ಸಿನಿಮಾ ಕಲೆಕ್ಷನ್ ಮಾಡಿರಬಹುದು ಎನ್ನುವ ಅಂದಾಜಿದೆ. ಆದರೆ ಖಚಿತ ಮಾಹಿತಿ ಲಭ್ಯವಿಲ್ಲ. ಬೆಂಗಳೂರಿನ ಊವರ್ಶಿ ಚಿತ್ರಮಂದಿರದಲ್ಲಿ ಮಾತ್ರ 9.39 ಲಕ್ಷ ರೂ. ಗಳಿಕೆ ಕಂಡಿದೆ ಎನ್ನಲಾಗ್ತಿದೆ. ಇನ್ನು ಮೊದಲ ದಿನ ಸಿನಿಮಾ ‘ಕಾಟೇರ’ ಚಿತ್ರದ ದಾಖಲೆ ಮುರಿದಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ UI Review: ಪ್ರೇಕ್ಷಕನನ್ನೇ ವಿಮರ್ಶೆಗೆ ಒಡ್ಡುವ ಉಪ್ಪಿ ಪ್ರಪಂಚ!
ಮೊದಲ ದಿನ ಬುಕ್‌ಮೈ ಶೋನಲ್ಲಿ ಅತಿ ಹೆಚ್ಚು ಟಿಕೆಟ್ ಬುಕ್ ಮಾಡಿದ ಸಿನಿಮಾ ಎನ್ನುವ ದಾಖಲೆ ಇದೀಗ ‘ಯುಐ’ ಪಾಲಾಗಿದೆ ಎನ್ನಲಾಗ್ತಿದೆ. ಎಷ್ಟು ಟಿಕೆಟ್ ಬುಕ್ ಆಗುತ್ತದೆ ಎನ್ನುವ ಲೆಕ್ಕವನ್ನು ಇತ್ತೀಚೆಗೆ ಬುಕ್‌ಮೈ ಶೋ ಕೊಡುತ್ತಿದೆ. ಆ ರೀತಿ ಲೆಕ್ಕ ಕೊಡಲು ಆರಂಭಿಸಿದ ಮೇಲೆ ಮೊದಲ ದಿನ ಅತಿಹೆಚ್ಚು ಟಿಕೆಟ್ ಗಳಿಸಿದ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆ ‘ಕಾಟೇರ’ ಚಿತ್ರದ್ದಾಗಿತ್ತು. ದರ್ಶನ್ ನಟನೆಯ ‘ಕಾಟೇರ’ ಚಿತ್ರ ಕಳೆದ ವರ್ಷ ಡಿಸೆಂಬರ್ 29ಕ್ಕೆ ಬಿಡುಗಡೆ ಆಗಿತ್ತು. ಆ ದಿನ 1 ಲಕ್ಷದ ನಾಲ್ಕು ಸಾವಿರ ಟಿಕೆಟ್ ಬುಕ್ ಆಗಿತ್ತು. ಆದರೆ ಉಪೇಂದ್ರ ನಿರ್ದೇಶಿಸಿ ನಟಿಸಿರುವ ‘ಯುಐ’ ಚಿತ್ರಕ್ಕೆ ಫಸ್ಟ್ ಡೇ 1 ಲಕ್ಷದ 9 ಸಾವಿರ ಟಿಕೆಟ್ ಬುಕ್ ಆಗಿದೆ. ಆ ಲೆಕ್ಕದಲ್ಲಿ ‘ಯುಐ’ ಮೊದಲ ಸ್ಥಾನದಲ್ಲಿದೆ. ಆದರೆ ‘ಕಾಟೇರ’ ಚಿತ್ರ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿತ್ತು.
‘ಯುಐ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಭಾಷೆಗಳಲ್ಲಿ ಕೂಡ ತೆರೆಗೆ ಬಂದಿದೆ. ಬರೀ ಕನ್ನಡ ಸಿನಿಮಾ ಅಂದಾಗ ಇನ್ನು ದಾಖಲೆ ‘ಕಾಟೇರ’ ಚಿತ್ರದ ಹೆಸರಿನಲ್ಲೇ ಇದೆ ಎಂದು ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಅಡ್ವಾನ್ಸ್ ಬುಕ್ಕಿಂಗ್ ಹಾಗೂ ಮೊದಲ ದಿನ ಬುಕ್ ಆಗಿದ್ದ ಟಿಕೆಟ್ ಸೇರಿಸಿದರೆ ದರ್ಶನ್ ಸಿನಿಮಾ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅಡ್ವಾನ್ಸ್ ಬುಕ್ಕಿಂಗ್ ಹಾಗೂ ಫಸ್ಟ್ ಬುಕ್ಕಿಂಗ್ ಸೇರಿ ‘ಕಾಟೇರ’ ಚಿತ್ರಕ್ಕೆ 2 ಲಕ್ಷದ 37 ಸಾವಿರ ಟಿಕೆಟ್ ಬುಕ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದಿರುವ ‘ಯುಐ’ ಒಟ್ಟಾರೆ 2 ಲಕ್ಷದ 6 ಸಾವಿರ ಟಿಕೆಟ್ ಅಷ್ಟೇ ಬುಕ್ ಆಗಿದೆ. ಧ್ರುವ ಸರ್ಜಾ ‘ಮಾರ್ಟಿನ್’ 1 ಲಕ್ಷದ 35 ಸಾವಿರ, ‘ಸಪ್ತಸಾಗರದಾಚೆ ಎಲ್ಲೋ’-A ಚಿತ್ರಕ್ಕೆ ಒಟ್ಟು 94 ಸಾವಿರ ಹಾಗೂ ದುನಿಯಾ ವಿಜಯ್ ‘ಭೀಮ’ ಚಿತ್ರಕ್ಕೆ 88 ಸಾವಿರ ಟಿಕೆಟ್ ಬುಕ್ ಆಗಿತ್ತು. ಇದು ಬುಕ್‌ಮೈ ಶೋ ಟಿಕೆಟ್ ಲೆಕ್ಕವಷ್ಟೆ. ಜನ ಚಿತ್ರಮಂದಿರಕ್ಕೆ ಹೋಗಿ ಟಿಕೆಟ್ ಖರೀದಿಸಿ ನೋಡಿರುವ ಲೆಕ್ಕೆ ಬೇರೆನೆ ಇದೆ.