ಈ ವಾರ ಧೀರನ್ ತೆರೆಗೆ
ಕೆನಡಾದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ವೈಬಿಎನ್ ಸ್ವಾಮಿ ಸಿನಿಮಾ ನಿರ್ದೇಶಕನಾಗಬೇಕೆಂದು ಕೆಲಸ ತೊರೆದು ಭಾರತಕ್ಕೆ ಬಂದು ನಿರ್ದೇಶಿಸಿದ ಚಿತ್ರ. ಧೀರನ್, ಸ್ನೇಹಿತರ ಜೊತೆ ಸೇರಿ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಪಕನೂ ಆಗಿದ್ದಾರೆ. ಇದೇ ಶುಕ್ರವಾರ (27ರಂದು) ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗುತ್ತಿದೆ.
ಸ್ವಾಮಿ ಅವರೇ ಚಿತ್ರದ ನಾಯಕನಾಗಿಯೂ ನಟಿಸಿದ್ದಾರೆ. ಉತ್ತರ ಕರ್ನಾಟಕಡೆಲ್ಲೆಡೆ ಪ್ರಚಾರ ಮಾಡಿಕೊಂಡು ಬಂದಿರುವ ಚಿತ್ರತಂಡ ಜನರ ನಡುವೆಯೇ ಹೋಗಿ ಚಿತ್ರದ ಬಗ್ಗೆ ಮಾಹಿತಿ ನೀಡಿ ಕುತೂಹಲ ಹೆಚ್ಚುವಂತೆ ಮಾಡಿದೆ. ಸ್ವಾಮಿ ಅವರ ಜೊತೆ ನಾಯಕಿಯಾಗಿ ರಕ್ಷಾ ಶೆಟ್ಟಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ ಅವರಿಲ್ಲಿ ಅಡ್ಡದಾರಿ ಹಿಡಿಯುತ್ತಿದ್ದ ಹುಡುಗರಿಗೆ ಬುದ್ದಿವಾದ ಹೇಳಿ ಸರಿದಾರಿಗೆ ತರಲು ಪ್ರಯತ್ನಿಸುವ ಪೋಲಿಸ್ ಆಗಿ ಕಾಣಿಸಿಕೊಂಡಿದ್ದಾರೆ.
ಪ್ರತಿಯೊಬ್ಬ ಮನುಷ್ಯನಲ್ಲೂ ಮತ್ತೊಬ್ಬ ವ್ಯಕ್ತಿಯಿರುತ್ತಾನೆ. ಆತ ಏನಾದರೂ ಹೊರಗೆ ಬಂದರೆ ಏನಾಗಬಹುದು ಎನ್ನುವುದೇ ಈ ಚಿತ್ರದ ಕಥಾಹಂದರ. ಬೆಂಗಳೂರಿನಿಂದ ಸಕಲೇಶಪುರದವರೆಗೆ ನಡೆಯುವ ೫ ಪಾತ್ರಗಳ ಕುತೂಹಲಕರ ಪಯಣದಲ್ಲಿ ಯಾರು ಗೆಳೆಯರು, ಯಾರು ವಿಲನ್‌ಗಳು ಎಂಬುದೇ ಗೊತ್ತಾಗದ ರೀತಿ ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕ ಸ್ವಾಮಿ. ಡ್ರಗ್ಸ್ ಮಾಫಿಯಾದ ಎಳೆ ಕೂಡ ಈ ಚಿತ್ರದಲ್ಲಿದೆ.
ಚಿತ್ರಕಥೆಯನ್ನು ಸ್ವಾಮಿ ಅವರೇ ಬರೆದಿದ್ದಾರೆ ಮಾಸ್ತಿ ಅವರ ಡೈಲಾಗ್, ಗಣೇಶ ನಾರಾಯಣ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಉಳಿದಂತೆ ತೇಜಸ್ವಿನಿ, ಮಿಮಿಕ್ರಿ ದಯಾನಂದ್ ಕೂಡ ನಟಿಸಿದ್ದಾರೆ.