ಹಾಸ್ಯ ನಟನಾಗಿ, ಪೋಷಕ ನಟನಾಗಿ ಗುರುತಿಸಿಕೊಂಡಿರುವ ಧರ್ಮಣ್ಣ ಕಡೂರು ಈಗಾಗಲೇ ರಾಜಯೋಗ ಎಂಬ ಸಿನಿಮಾದಲ್ಲಿ ನಾಯಕರಾಗುವ ಮೂಲಕ ಎಲ್ಲರನ್ನು ರಂಜಿಸಿದ್ದರು. ಇದೀಗ ಮತ್ತೊಮ್ಮೆ ಮುಖ್ಯ ಪಾತ್ರದಲ್ಲಿ ʻಹಂಪಿ ಎಕ್ಸ್‌ಪ್ರೆಸ್ʼ ಏರಿ ಹೊರಟಿದ್ದಾರೆ. ಹಂಪಿ ಭಾಗದಲ್ಲಿ ನಡೆಯುವ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದ್ದು, ಧರ್ಮಣ್ಣ ಕಡೂರು ಅವರೇ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ನಿರ್ದಶಕ ಯೋಗರಾಜ್ ಭಟ್ ಅವರು ಸಿನಿಮಾಗೆ ಚಾಲನೆ ನೀಡುವ ಮೂಲಕ ಶುಭ ಹಾರೈಸಿದ್ದಾರೆ. ಈ ಸಿನಿಮಾದ ಸ್ಪೆಷಾಲಿಟಿ ಏನು..? ಪಾತ್ರ ಹೇಗಿರುತ್ತೆ ಎಂಬಿತ್ಯಾದಿ ಮಾಹಿತಿಗಳನ್ನು ಚಿತ್ತಾರದ ಜೊತೆಗೆ ಹಂಚಿಕೊಂಡಿದ್ದಾರೆ.
* ʻಹಂಪಿ ಎಕ್ಸ್‌ಪ್ರೆಸ್ʼ ಹತ್ತಿದ್ದೀರಿ.. ಏನಿದರ ವಿಶೇಷತೆ..?
ʻಇದು ನೈಜ ಘಟನೆಯಾಧಾರಿತ ಕಥೆ. ಉತ್ತರ ಕರ್ನಾಟಕದಲ್ಲಿ ನಡೆದಿರುವಂತ ಕಥೆ ಇದು. ಕಥೆ ಅಲ್ಲಿನ ನೇಟಿವಿಟಿಗೆ ತುಂಬಾನೇ ಕನೆಕ್ಟ್ ಆಗುತ್ತೆ. ಈ ಕಥೆಯನ್ನು ತೆರೆ ಮೇಲೆ ನೋಡಿದಾಗ ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ಘಟನೆ ನಡೆದಿರುವುದು ಅನುಭವಕ್ಕೆ ಬರುತ್ತೆ. ಸಿನಿಮಾದಲ್ಲಿ ನಾನು ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದೀನಿ. ಇಬ್ಬರು ಮುಖ್ಯ ಪಾತ್ರಧಾರಿಗಳಿದ್ದೀವಿ. ಎರಡು ಟ್ರ್ಯಾಕ್‌ನಲ್ಲಿ ಕಥೆ ಸಾಗುತ್ತದೆ. ಫ್ಯಾಮಿಲಿ, ಕಾಮಿಡಿ ಎಲ್ಲವೂ ಸಿನಿಮಾದಲ್ಲಿ ಇರುತ್ತೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತ ಸಿನಿಮಾ ಇದುʼ.
* ಫೋಟೋಗ್ರಾಫರ್ ಆಗಿ ಏನೆಲ್ಲಾ ಕ್ಲಿಕ್ ಮಾಡುತ್ತೀರಿ..?
ʻಹಂಪಿ ಮತ್ತು ಆನೆಗುಂದಿ ಎಂಬ ಎರಡು ಹಳ್ಳಿ ಬರುತ್ತೆ. ಅದರ ಪಕ್ಕದಲ್ಲಿ ಒಂದು ನದಿ ಹರಿಯುತ್ತದೆ. ಅಲ್ಲೊಂದು ಮುಖ್ಯವಾದ ಲಾಂಚ್ ಇರುತ್ತದೆ. ಅದರ ಮೇಲೆ ಕಥೆ ಸಾಗುತ್ತೆ. ಮುಂದೆ ನಿಮಗೆ ಗೊತ್ತಾಗುತ್ತೆ ʻಹಂಪಿ ಎಕ್ಸ್‌ಪ್ರೆಸ್ʼ ಟೈಟಲ್ ಯಾಕೆ ಇಟ್ಟಿದ್ದಾರೆ ಅಂತ. ಆ ಲಾಂಚ್‌ನಲ್ಲಿಯೇ ದಿನ ಓಡಾಡುತ್ತಾ ನನ್ನ ಕೈಯಲ್ಲಿರುವ ಕ್ಯಾಮರಾ ನೋಡುವ ದೃಶ್ಯಗಳು ಕಥೆಗೆ ಟ್ವಿಸ್ಟ್ ಕೊಡುತ್ತವೆʼ.
* ಮತ್ತೆ ನಾಯಕ ನಟರಾಗಿದ್ದೀರಿ..?
ʻಇದು ತುಂಬಾ ಖುಷಿ ಕೊಡುತ್ತಾ ಇದೆ. ಮುಖ್ಯ ಪಾತ್ರದಲ್ಲಿ ಮಾಡ್ತಾ ಇದ್ದೀನಿ ಎಂದಾಗ ನಮ್ಮ ಭುಜದ ಮೇಲೆ ಹೆಚ್ಚಿನ ಭಾರ ಇರುತ್ತದೆ. ಮಾಮೂಲಿಯಾಗಿ ಕಾಮಿಡಿ, ಪೋಷಕ ಪಾತ್ರದಲ್ಲಿ ಮಾಡುವಾಗ ಹೋಗ್ತಾ ಇದ್ದೆ ಆಕ್ಟ್ ಮಾಡ್ತಾ ಇದ್ದೆ, ಬರ್ತಾ ಇದ್ದೆ. ಅವರು ಕರೆದಾಗ ಪ್ರಚಾರಕ್ಕೆ ಹೋಗ್ತಾ ಇದ್ದೆ. ಆದರೆ ಮುಖ್ಯಪಾತ್ರದಲ್ಲಿ ಇದ್ದಾಗ ಅವರು ಕರೆಯದೆ ಇದ್ದರು ಸೆಟ್‌ನಲ್ಲಿ ಇರಬೇಕು. ಸಿನಿಮಾಕ್ಕಾಗಿ ನಾವೂ ಬೆಂಬಲವಾಗಿ ನಿಲ್ಲಬೇಕಾಗುತ್ತದೆ.
* ʻಹಂಪಿ ಎಕ್ಸ್‌ಪ್ರೆಸ್; ನೀವೇ ಹತ್ತಬೇಕು ಎಂದಿದ್ದೇಕೆ ನಿರ್ದೇಶಕರು..?
ʻನಾವೇಗೆ ನಾಟಕದಿಂದ ಬಂದಿದ್ದೀವಿ, ಅದೇ ಥರ ನಿರ್ದೇಶಕರು ಕೂಡ ನಾಟಕದಿಂದಾನೇ ಬಂದವರು. ಸುಮಾರು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಅಮರ ಪ್ರೇಮಿ ಅರುಣ್ ಎಂಬ ಸಿನಿಮಾದಲ್ಲಿ ನಾನು ಆಕ್ಟ್ ಮಾಡಿದ್ದೀನಿ. ಅದರ ನಿರ್ದೇಶಕರ ತಂಡದಲ್ಲಿ ಈ ಸಿನಿಮಾ ನಿರ್ದೇಶಕರು ಕೆಲಸ ಮಾಡಿದ್ದಾರೆ. ಆಗ ನನ್ನ ನೋಡಿದ್ದರು. ಈ ಸಿನಿಮಾದ ಪಾತ್ರ ಕೂಡ ಹಳ್ಳಿಯ ಹುಡುಗನ ಪಾತ್ರ. ಅದಕ್ಕೆ ನಾನು ಹೊಂದುತ್ತೇನೆ ಅಂತ ನನ್ನನ್ನೇ ಆಯ್ಕೆ ಮಾಡಿದರು. ಒಂದು ದಿನ ಬಂದು ಕಥೆ ಹೇಳಿದರು. ನನಗೂ ತುಂಬಾ ಇಷ್ಟ ಆಯ್ತು. ರಾಜಯೋಗ ಆದ ಮೇಲೆ ತುಂಬಾ ಕಥೆ ಕೇಳಿದ್ದೀನಿ. ಅದರಲ್ಲಿ ಎರಡು ತುಂಬಾ ಇಷ್ಟ ಆಯ್ತು. ಅದರಲ್ಲಿ ಇದು ಕೂಡ ಒಂದುʼ.
* ನಾಯಕ ಆದಮೇಲೆ ಪೋಷಕ ಪಾತ್ರಗಳನ್ನು ಮಾಡ್ತೀರಾ ಹೇಗೆ…?
ʻಹಾಗೆಲ್ಲಾ ಏನಿಲ್ಲ. ರಾಜಯೋಗ ಆದ್ಮೇಲೆ ವಿದ್ಯಾಪತಿ, ಎಕ್ಸ್ ಅಂಡ್ ವೈ, ಗುರುನಂದನ್ ಅವರ ಜೊತೆಗೊಂದು ಸಿನಿಮಾ ಒಪ್ಪಿಕೊಂಡು ಬಂದಿದ್ದೀನಿ. ಕಾಮಿಡಿ ಪಾತ್ರಗಳು ಅದರ ಪಾಡಿಗೆ ಅದು ನಡೆಯುತ್ತಾ ಇದೆ. ಅದರ ನಡುವೆ ಯಾವುದಾದರೂ ಕಥೆ ನಮಗೆ ಹೊಂದಾಣಿಕೆಯಾದ್ರೆ, ಮುಖ್ಯ ಪಾತ್ರದಲ್ಲಿ ಅಭಿನಯಿಸಬೇಕಾದರೆ ಮಾಡ್ತೀನಿ. ಹಾಗಂತ ಕಾಮಿಡಿ ಪಾತ್ರವನ್ನಾಗಲಿ, ಪೋಷಕ ಪಾತ್ರವನ್ನಾಗಲಿ ಬಿಡುವುದಿಲ್ಲ. ರಾಜಯೋಗ ಮಾಡುವಾಗಲೇ ನಾನು ಕ್ಲಿಯರ್ ಆಗಿ ಹೇಳಿದ್ದೆ. ರಾಮರಾಮರೇ ಸಿನಿಮಾದಲ್ಲಿನ ಒಂದು ಪಾತ್ರದ ಥರ ಅಷ್ಟೇ ಅಂತ. ಕಾಮಿಡಿ, ಪೋಷಕ ಪಾತ್ರಗಳು ಹೇಗೆ ಅಂದ್ರೆ ಮುದ್ದೆ, ಅನ್ನ ಸಾರಿನ ಊಟದ ಥರ. ಡೈಲಿ ನಂಗೆ ಇರಲೇಬೇಕು. ಈ ಪ್ರಮುಖ ಪಾತ್ರ, ನಾಯಕನ ಪಟ್ಟ ಎಂಬುದೆಲ್ಲಾ ಹಬ್ಬ ಹರಿದಿನಗಳಲ್ಲಿ ಹೋಳಿಗೆ ಊಟವಿದ್ದಂತೆ. ಅದನ್ನು ಡೈಲಿ ತಿನ್ನುವುದಕ್ಕೆ ಆಗಲ್ಲ. ಮುದ್ದೆಯೇ ನಮ್ಮ ಜೀವನದ ಸ್ಟ್ರೆಂಥ್. ಹೀಗಾಗಿ ಕೆಲವೊಂದು ಪಾತ್ರಗಳನ್ನು ಬಿಡುವುದಕ್ಕೆ ಆಗಲ್ಲʼ.
ಇದು ಧರ್ಮಣ್ಣ ಕಡೂರು ಅವರ ಮನದಾಳದ ಮಾತು. ಹೀರೋ ಆಗಿ ಎಂಟ್ರಿ ಕೊಟ್ಟಿದ್ದರು ಸಹ ಪೋಷಕ ಪಾತ್ರಗಳಿಗೂ ಸೈ ಎಂದಿದ್ದಾರೆ. ಈಗ ಹಂಪಿ ಎಕ್ಸ್‌ಪ್ರೆಸ್ ಮೂಲಕ ನಾಯಕ ನಟನಾಗಿ ಮಿಂಚಲು ರೆಡಿಯಾಗಿರುವ ಧರ್ಮಣ್ಣ ಅವರಿಗೆ ನಮ್ಮ ಕಡೆಯಿಂದಾನೂ ಆಲ್ ದಿ ಬೆಸ್ಟ್.