ಕನ್ನಡದ ಹಲವು ಹಿಟ್ ಸಿನಿಮಾಗಳಿಗೆ ಕಥೆ, ಚಿತ್ರಕಥೆ ಒದಗಿಸಿ ನಿರ್ದೇಶಕರು ಆಗಿ ಸಕ್ಸಸ್ ಕಂಡಿದ್ದ ಎಸ್.ಎಸ್. ಡೇವಿಡ್ ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರಾಕರಿಸಿದ್ದಾರೆ. ಈ ಬಗ್ಗೆ ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಪ್ರತಿಕ್ರಿಯಿಸಿದ್ದಾರೆ. ಸೂಪರ್ ಹಿಟ್ ‘ಪೊಲೀಸ್ ಸ್ಟೋರಿ’ ಚಿತ್ರಕ್ಕೆ ಎಸ್.ಎಸ್. ಡೇವಿಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದರು. ಸಾಯಿ ಕುಮಾರ್ ನಟಿಸಿದ್ದ ‘ಅಗ್ನಿ IPS’ ಚಿತ್ರಕ್ಕೂ ಕಥೆ ಒದಗಿಸಿದ್ದರು. ಡೇವಿಡ್ ನಿರ್ದೇಶನದ ಚಿತ್ರಗಳಲ್ಲಿ ಥ್ರಿಲ್ಲರ್ ಮಂಜು ಹೀರೊ ಆಗಿ ನಟಿಸಿದ್ದರು. ನಿನ್ನೆ(ಆಗಸ್ಟ್ 31) ಮೆಡಿಕಲ್ ಶಾಪ್‌ಗೆ ತೆರಳಿ ವಾಪಸ್ಸಾಗುವ ವೇಳೆ ಅವರು ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಆರ್‌ಆರ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೃದಯಾಘಾತದಿಂದ ನಿನ್ನೆ ಸಂಜೆ 7.30ರ ಸುಮಾರಿಗೆ ನಿರ್ದೇಶಕ ಡೇವಿಡ್ ಕೊನೆಯುಸಿರೆಳೆದಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಾರ್ಥೀವ ಶರೀರ ಇರಿಸಲಾಗಿದೆ. ಡೇವಿಡ್ ಅವರಿಗೆ ಮದುವೆ ಆಗಿರಲಿಲ್ಲ. ಅವರ ಸೋದರಿ ಸಂಬಂಧಿ ಉಡುಪಿಯ ಕಾಪುವಿನಲ್ಲಿ ಇದ್ದಾರೆ. ಸಹೋದರನ ಅಂತ್ಯಕ್ರಿಯೆಗೆ ತಾವು ಬರೋಕೆ ಸಾಧ್ಯವಿಲ್ಲ, ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ನಡೆಸಿ ಎಂದು ಸಲಹೆ ನೀಡಿದ್ದಾರೆ. ಇದೀಗ ಥ್ರಿಲ್ಲರ್ ಮಂಜು ಸೇರಿ ಕೆಲ ಆಪ್ತರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಿರ್ದೇಶಕ ಎಸ್. ಎಸ್ ಡೇವಿಡ್ ನಿಧನದ ಬಗ್ಗೆ ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಪ್ರತಿಕ್ರಿಯಿಸಿದ್ದಾರೆ. “ಸದ್ಯ ನಾವು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದ್ದೀವಿ. ಡೇವಿಡ್ ಅವರ ಫ್ಯಾಮಿಲಿ ಅವರು ಯಾರು ಇಲ್ಲ. ಮದುವೆ ಆಗಿರಲಿಲ್ಲ. ಚಿಕ್ಕಮ್ಮನ ಮಗಳು ಮಾತ್ರ ಕಾಪುವಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಡೇವಿಡ್ ಒಬ್ಬರೇ ನೆಲೆಸಿದ್ದರು” ಎಂದು ಮಾಹಿತಿ ನೀಡಿದ್ದಾರೆ.
“ನನ್ನ ಸುಮಾರು ಸಿನಿಮಾಗಳಿಗೆ ಡೇವಿಡ್ ಕೆಲಸ ಮಾಡಿದ್ದಾರೆ. ‘ಪೊಲೀಸ್ ಸ್ಟೋರಿ’ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದಿದ್ದರು. ‘ಅಗ್ನಿ ಐಪಿಎಸ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ರು. ‘ಓಂ ನಮಃ ಶಿವಾಯ’ ಚಿತ್ರದಲ್ಲಿ ಆಕ್ಟಿಂಗ್ ಮಾಡಿದ್ರು. ಕಥೆ ಮಾಡಿದ್ರು. ಅವರ ನಿರ್ದೇಶನದಲ್ಲಿ ‘ಪೊಲೀಸ್ ಡಾಗ್’, ‘ಸುಪಾರಿ’ ಚಿತ್ರಗಳಲ್ಲಿ ನಾನು ನಟಿಸಿದ್ದೆ. ‘ಪೊಲೀಸ್ ಸ್ಟೋರಿ- 2’ ಚಿತ್ರಕ್ಕೂ ಕಥೆ ಬರೆದಿದ್ದರು. ಬಳಿಕ ಬಹಳ ವರ್ಷ ಗ್ಯಾಪ್ ಆಗಿತ್ತು. 2010ರ ಬಳಿಕ ಸಂಕರ್ಕಕ್ಕೆ ಸಿಗುತ್ತಿರಲಿಲ್ಲ. 3 ವರ್ಷದ ಹಿಂದೆ ಒಮ್ಮೆ ಭೇಟಿ ಆಗಿದ್ದೆ” ಎಂದು ಥ್ರಿಲ್ಲರ್ ಮಂಜು ನೆನಪಿಸಿಕೊಂಡಿದ್ದಾರೆ.
ಡೇವಿಡ್ ಅಂತ್ಯಕ್ರಿಯೆ ಬಗ್ಗೆ ಥ್ರಿಲ್ಲರ್ ಮಂಜು ಮಾತನಾಡಿ “ಡೇವಿಡ್ ಪದೇ ಪದೆ ಫೋನ್ ನಂಬರ್ ಬದಲಿಸುತ್ತಿದ್ದರು. ಹಾಗಾಗಿ ಸಂಪರ್ಕ ಕಷ್ಟವಾಗುತ್ತಿತ್ತು. ನಾವು ಆಸ್ಪತ್ರೆ ಬಳಿ ಇದ್ದೀವಿ. ಡೇವಿಡ್ ಸಹೋದರಿ ಪೊಲೀಸರಿಗೆ ಒಂದು ವೀಡಿಯೋ ಕಳುಹಿಸಿದ್ದಾರೆ. ನಾವು ಬರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಮನೋಜ್ ಎಂಬುವವರಿಗೆ ಸೂಚಿಸಿದ್ದೇನೆ, ಅವ್ರು ಅಂತಿಮ ವಿಧಾನ ನೋಡಿಕೊಳ್ಳುತ್ತಾರೆ ಎಂದಿದ್ದಾರಂತೆ. ಕಾನೂನು ಪ್ರಕ್ರಿಯೆ ಬಳಿಕ ಪಾರ್ಥೀವ ಶರೀರ ಸಿಗುತ್ತದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಬಹುದು” ಎಂದಿದ್ದಾರೆ.

