ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಜನಮನಸೂರೆಗೊಂಡಿರುವ ಚಂದನ್ ಶೆಟ್ಟಿ, ಈಗ ನಾಯಕನಾಗೂ ಜನಪ್ರಿಯ. ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ” ಸೂತ್ರಧಾರಿ” ಚಿತ್ರದ “ಡ್ಯಾಶ್” ಸಾಂಗ್ A2 music ಮೂಲಕ ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಹೊಸವರ್ಷ ಆರಂಭವಾಗಲಿದೆ. ಹೊಸವರ್ಷದ ಸಂಭ್ರಮಾಚರಣೆಗೆ ಇದು ಅದ್ಭುತ ಗೀತೆಯಾಗಲಿದೆ.
“ಸೂತ್ರಧಾರಿ” ಸಿನಿಮಾದ “ಡ್ಯಾಶ್” ಹಾಡು ಇಂದು ಬಿಡುಗಡೆಯಾಗಿದೆ. ಹೊಸವರ್ಷಕ್ಕೆ ನಮ್ಮ ಚಿತ್ರತಂಡದಿಂದ ಈ ಹಾಡು ಉಡುಗೊರೆ. “ಡ್ಯಾಶ್” ಎಂದರೆ ಏನು ಅಂತ ಎಲ್ಲಾ ಕೇಳುತ್ತಿದ್ದಾರೆ? ಡ್ಯಾಶ್ ಎಂದರೆ ಖಾಲಿ ಜಾಗ. ಅಲ್ಲಿ ನೀವು ಏನು ಬೇಕಾದರೂ ಬರೆದುಕೊಳ್ಳಬಹುದು. ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್ ಈ ಹಾಡಿಗೆ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ನಿರ್ಮಾಪಕ ನವರಸನ್ ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಾನು ಹಾಗೂ ಚೇತನ್ ಕುಮಾರ್ ಈ ಹಾಡನ್ನು ಬರೆದಿದ್ದೇವೆ. ನಾನೇ ಸಂಗೀತ ನೀಡಿದ್ದೀನಿ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ ಎಂದರು ಚಂದನ್ ಶೆಟ್ಟಿ.
ನಾನು ಮೊದಲ ಬಾರಿಗೆ ಸ್ಪೆಷಲ್ ಸಾಂಗ್ ಒಂದರಲ್ಲಿ ನಟಿಸಿದ್ದೇನೆ. ಚಂದನ್ ಶೆಟ್ಟಿ ಅವರ ಜೊತೆ ಡ್ಯಾನ್ಸ್ ಮಾಡಿರುವುದು ಖುಷಿಯಾಗಿದೆ. ಹಾಡು ಅದ್ಭುತವಾಗಿದೆ ಎಂದರು ಸಂಜನಾ ಆನಂದ್.
ಚಂದನ್ ಶೆಟ್ಟಿ ಅವರು ಹೊಸವರ್ಷಕ್ಕೆ ಹೊಸ ಹಾಡೊಂದನ್ನು ಬಿಡುಗಡೆ ಮಾಡುತ್ತಾರೆ. ಈ ಬಾರಿ ನಮ್ಮ ಚಿತ್ರದ ಹಾಡೊಂದನ್ನು ಹೊಸವರ್ಷಕ್ಕೆ ಬಿಡುಗಡೆ ಮಾಡುವ ಆಸೆಯಿತ್ತು. ಆದರೆ ಸಮಯ ಕಡಿಮೆ ಇತ್ತು. ಚಂದನ್ ಶೆಟ್ಟಿ ಅವರ ಬಳಿ ಈ ವಿಷಯ ಹೇಳಿದೆ. ಕೇವಲ ಎರಡು ದಿನಗಳ ಹಿಂದೆ ಈ ಹಾಡಿನ ಚಿತ್ರೀಕರಣವಾಗಿ ಈಗ ಬಿಡುಗಡೆಯಾಗಿದೆ. ಈ ಚಿತ್ರದ ನಾಯಕಿ ಅಪೂರ್ವ. ಆದರೆ ಈ ವಿಶೇಷ ಹಾಡಿಗೆ ಚಂದನ್ ಶೆಟ್ಟಿ ಅವರ ಜೊತೆ ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ನವರಸನ್. ನಿರ್ದೇಶಕ ಕಿರಣ್ ಕುಮಾರ್ ಹಾಡಿನ ಬಗ್ಗೆ ಮಾಹಿತಿ ನೀಡಿದರು.
ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರಾದ ಸಂಜಯ್ ಗೌಡ, ರವಿ ಗೌಡ, ಗೋವಿಂದರಾಜು, ರಾಜೇಶ್ ಮುಂತಾದವರು “ಸೂತ್ರಧಾರಿ” ಹಾಡಿಗೆ ಹಾರೈಸಿದರು.
ಕಿರುತೆರೆ ಸೂಪರ್ ಸ್ಟಾರ್ ಎಂದು ಖ್ಯಾತರಾಗಿರುವ ಬೇಬಿ ವಂಶಿಕಾ ಕೆಲವು ಸಮಯ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು.