ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅಗಲಿಕೆ ಚಿತ್ರರಂಗಕ್ಕೆ ದಿಗ್ಭ್ರಮೆ ಉಂಟುಮಾಡಿದೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ 50ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿ 15ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ದ್ವಾರಕೀಶ್ ಬಣ್ಣದಲೋಕಕ್ಕೆ ಕೊಡುಗೆ ನೀಡಿದ್ದಾರೆ. ರಜನಿಕಾಂತ್, ದರ್ಶನ್, ಸುದೀಪ್ ಸೇರಿದಂತೆ ಹಲವರು ಮೇರು ಪ್ರತಿಭೆಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ʻಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು, ಮರೆಯಕೂಡದು. ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾ’ ಎಂದು ನಟ ಕಿಚ್ಚ ಸುದೀಪ್ ಅವರು ಪೋಸ್ಟ್ ಮಾಡಿದ್ದಾರೆ. ದ್ವಾರಕೀಶ್ ಅವರ ಅಪರೂಪದ ಫೋಟೋಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ.
ʻಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ ‘ಪ್ರಚಂಡ ಕುಳ್ಳ’ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿʼ ಎಂದು ದರ್ಶನ್ ಬರೆದುಕೊಂಡಿದ್ದಾರೆ.
ʻನನ್ನ ಆತ್ಮೀಯ ಗೆಳೆಯ ದ್ವಾರಕೀಶ್ ನಿಧನದಿಂದ ನನಗೆ ತೀವ್ರ ನೋವಾಗಿದೆ. ಹಾಸ್ಯನಟನಾಗಿ ಅವರು ವೃತ್ತಿಜೀವನ ಆರಂಭಿಸಿದ್ದರು. ನಂತರ ದೊಡ್ಡ ನಿರ್ಮಾಪಕನಾಗಿ, ನಿರ್ದೇಶಕನಾಗಿ ಬೆಳೆದು ನಿಂತರು. ಆ ಎಲ್ಲ ಸಂಗತಿಗಳು ಈಗ ನೆನಪಾಗುತ್ತಿವೆ. ಅವರ ಆಪ್ತರು ಮತ್ತು ಕುಟುಂಬದವರಿಗೆ ನನ್ನ ಸಂತಾಪಗಳು’ ಎಂದು ರಜನಿಕಾಂತ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಬರೆದುಕೊಂಡಿದ್ದಾರೆ.
ʻಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ನಿಮ್ಮ ಸೇವೆ ಅಪಾರ. ನಮ್ಮ ಬಾಲ್ಯ, ಸಿನಿ ಬದುಕು ಚೆಂದವಾಗಿರಲು ನಿಮ್ಮ ಸಿನಿಮಾಗಳು ಕಾರಣ. ಕನ್ನಡ ಚಿತ್ರರಂಗದ ಶ್ರೀಮಂತಿಕೆಗೆ ನೀವು ಬಹು ಕಾರಣ. ಅಂತಿಮ ನಮನಗಳು ಸರ್. ಹೋಗಿ ಬನ್ನಿ.. ನಿಮ್ಮ ಹೆಜ್ಜೆ ಗುರುತುಗಳು ಸದಾ ಚಿರಾಯು’ ಎಂದು ನಟ ಸತೀಶ್ ನೀನಾಸಂ ಅವರು ದ್ವಾರಕೀಶ್ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಧನಂಜಯ್, ಗಣೇಶ್, ನೀನಾಸಂ ಸತೀಶ್, ನಿರ್ದೇಶಕ ಸುನಿ ಸೇರಿದಂತೆ ಹಲವರು ದ್ವಾರಕೀಶ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಈಗಾಗಲೇ ಕೆಲ ಕಲಾವಿದರು ಹಿರಿತ ಚೇತನ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.