
ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ವೋಟಿಂಗ್ ಲೈನ್ ಓಪನ್ ಆಗಿದೆ, ಈ ಕೂಡಲೆ ನಿಮ್ಮ ನೆಚ್ಚಿನ ನಟ/ನಟಿ, ತಂತ್ರಜ್ಞರಿಗೆ ವೋಟ್ ಮಾಡಿ.
Send “Chittara” on WhatsApp to 73 5365 5365 or click the link http://wame.pro/chittara to cast your vote!
ದರ್ಶನ್ ಅಪರೂಪದ ನಿರ್ಧಾರ ಫಿಲ್ಮ್ ಚೇಂಬರ್‌ಗೆ ಮಾದರಿಯಾಗುತ್ತಾ?
ನಟ ದರ್ಶನ್, ಆಶ್ರಮದ ಪಾಲಾಗಿದ್ದ ಹಿರಿಯ ನಟ ಸುದರ್ಶನ್ ಪತ್ನಿ ಶೈಲಶ್ರೀ ಅವರ ನೆರವಿಗೆ ನಿಂತಿದ್ದು, ಯಾರೂ ಇಲ್ಲದೇ ಆಶ್ರಮ ಪಾಲಾಗಿದ್ದ ಅವರ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಕಲಾವಿದರ ಕುಟುಂಬದ ಕುಡಿಯೊಂದು ನೆಲೆ ಬೆಲೆಯಿಲ್ಲದೇ ಇದೇ ಬೆಂಗಳೂರಿನ ಆಶ್ರಮಕ್ಕೆ ಸೇರಿಕೊಂಡು ಆಶ್ರಯ ಪಡೆದಿರುವ ದುರಂತ ಸುದ್ದಿಯೊಂದರ ಹಿಂದೆ ಬಿದ್ದಿದ್ದೇನೆ.
ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್.ಎನ್. ನಾಗೇಂದ್ರರಾಯರ ಮುದ್ದಿನ ಸೊಸೆ ಇಲ್ಲೇ ಈ ಕಾಂಕ್ರೀಟ್ ಕಾಡಿನ ನಡುವೆ ಕಳೆದು ಹೋಗಿದ್ದಾರೆ. ಸುದರ್ಶನ್ ಅವರ ಸಾವಿನ ನಂತರ ದಿಕ್ಕಿಲ್ಲದ ಪರದೇಶಿಯಾಗಿ ಏಕಾಂಗಿ ಬದುಕು ಕಂಡುಕೊಂಡಿದ್ದ ಶೈಲಶ್ರೀ ಮೇಡಂ ಸೈಲೆಂಟ್ ಆಗಿ ಆಶ್ರಮ ಸೇರಿಕೊಂಡಿರುವ ಹೃದಯ ವಿದ್ರಾವಕ ಸುದ್ದಿಯೊಂದು ಬಂದಿದೆ.
ಈ ಮೊದಲು ಅಪಾರ್ಟ್ಮೆಂಟ್ ಒಂದರಲ್ಲಿ ಶೈಲಶ್ರೀ ಅವರು ವಾಸವಿದ್ದರು. ಆದರೆ, ಅದರ ಮಾಲೀಕರು ಬಿಲ್ಡಿಂಗ್ ನೆಲಸಮ ಮಾಡಿದ್ದರಿಂದ ಶೈಲಶ್ರೀ ಅವರು ಬೇರೆ ನೆಲೆ ಕಂಡುಕೊಳ್ಳಬೇಕಿತ್ತು. ಆಗ ಹಿರಿಯ ನಟಿಯೊಬ್ಬರು ಶೈಲಶ್ರೀ ಸಹಾಯಕ್ಕೆ ಬಂದರು. ಅವರ ಸಲಹೆಯಂತೆ ಆಶ್ರಮ ಸೇರಿದರು. ಆರಂಭದಲ್ಲಿ ಖರ್ಚು ವೆಚ್ಚಗಳನ್ನು ಹಿರಿಯ ನಟಿ ನೋಡಿಕೊಳ್ಳುತ್ತಿದ್ದರು. ಆದರೆ, ತಿಂಗಳುಗಳು ಉರುಳಿದಂತೆ ಇದು ಸಾಧ್ಯವಾಗಿಲ್ಲ. ಆಗ ಸಹಾಯಕ್ಕೆ ಬಂದಿದ್ದು ದರ್ಶನ್. ಶೈಲಶ್ರೀ ಅವರ ಕೊನೆಗಾಲದವರೆಗೂ ಸಹಾಯ ಮಾಡಲು ದರ್ಶನ್ ಒಪ್ಪಿ ಮುಂದೆ ಬಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಶೈಲಶ್ರೀ ಸುದರ್ಶನ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ನಟಿ. ‘ಸಂಧ್ಯಾರಾಗ’ ಅನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ವಿವಿಧ ಪಾತ್ರಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ. ‘ಸಂಧ್ಯಾರಾಗ’ ಸಿನಿಮಾದಲ್ಲಿ ರಾಜ್‌ಕುಮಾರ್, ಭಾರತಿ ಹಾಗೂ ಉದಯ್ ಕುಮಾರ್ ನಟಿಸಿದ್ದರು. ಅದರಲ್ಲಿ ಶೈಲಶ್ರೀ ಸುದರ್ಶನ್ ಅವರಿಗೂ ಉತ್ತಮ ಪಾತ್ರವಿತ್ತು. ಕನ್ನಡದ ಕುಮಾರತ್ರಯರಾದ ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಅವರೊಂದಿಗೆ ನಟಿಸಿ ಸೈ ಎನಿಸಿಕೊಂಡವರು. ಇವರಷ್ಟೇ ಅಲ್ಲೇ ರಾಜೇಶ್, ಪತಿ ಸುದರ್ಶನ್ ಸೇರಿದಂತೆ ದಿಗ್ಗಜರೊಂದಿಗೆ ಶೈಲಶ್ರೀ ಸುದರ್ಶನ್ ನಟಿಸಿದ್ದಾರೆ.
ಹಾಗಂತ ಕನ್ನಡ ಅಷ್ಟೇ ಅಲ್ಲ. ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿಯೂ ಶೈಲಶ್ರೀ ಸುದರ್ಶನ್ ತಮ್ಮ ನಟನಾ ಪ್ರತಿಭೆಯನ್ನು ತೋರಿಸಿದ್ದಾರೆ. ಶೈಲಜಾ ಸುದರ್ಶನ್ ನಟನೆಯಷ್ಟೇ ಅಲ್ಲ. ಅವರು ಉತ್ತಮ ಭರತನಾಟ್ಯಂ ಡ್ಯಾನ್ಸರ್ ಕೂಡ ಹೌದು. ಪತಿ ಸುದರ್ಶನ್ ಕಾಲವಾದ ಬಳಿಕ ಇವರ ಬದುಕಿಗೆ ಆಸೆಯಾಗಿದ್ದು ಇದೇ ಡ್ಯಾನ್ಸ್. ಮನೆಯಲ್ಲಿಯೇ ಡ್ಯಾನ್ಸ್ ಕ್ಲಾಸ್ ನಡೆಸಿ ಜೀವನ ಸಾಗಿಸುತ್ತಿದ್ದರು. ಆದರೆ, ಈಗ ಅದೂ ಸಾಧ್ಯವಾಗುತ್ತಿಲ್ಲ. ಹಿರಿಯ ನಟ ದಿವಂಗತ ಸುದರ್ಶನ್ ಹಾಗೂ ಶೈಲಶ್ರೀ ‘ಕಾಡಿನ ರಹಸ್ಯ’ ಸಿನಿಮಾದಲ್ಲಿ ನಟಿಸುವಾಗ ಇಬ್ಬರಲ್ಲೂ ಪ್ರೀತಿ ಚಿಗುರಿತ್ತು. ಆದರೆ, ಆ ಸಮಯದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಲ್ಲಿ ಇದ್ದಿದ್ದರಿಂದ ಸುದರ್ಶನ್ ಅವರನ್ನು ಐದು ವರ್ಷಗಳ ಬಳಿಕ ಮದುವೆಯಾದರು ಅಂತ ಕೆಲವು ವರದಿಗಳು ಹೇಳುತ್ತವೆ. ಇಷ್ಟೊಂದು ಬೇಡಿಕೆಯಲ್ಲಿದ್ದ ನಟಿ ವಿವಾದ ಬಳಿಕ ಹೆಚ್ಚಾಗಿ ತೆರೆಮೇಲೆ ಕಾಣಿಸಿಕೊಳ್ಳಲಿಲ್ಲ. ನಟಿಸಿದ್ದು ಕಡಿಮೆ ಸಿನಿಮಾಗಳೇ ಆಗಿದ್ದರೂ, ನೆನಪಿನಲ್ಲಿ ಉಳಿಯುವಂತಹ ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಈ ಮಟ್ಟಿಗೆ ಸೇವೆ ಸಲ್ಲಿಸಿದ ಹಿರಿಯ ನಟಿಯ ಬದುಕು ಈಗ ಅತಂತ್ರ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರೆವಿಗೆ ಬಂದಿದ್ದು ಹಿರಿಯ ನಟಿಯ ಜೀವನ ನಿರಾಳ ಆಗುವಂತೆ ಮಾಡಿದೆ. ಈ ಸಹಕಾರ ಹೀಗೆ ಮುಂದುವರೆಯಬೇಕಿದೆ. ಜೊತೆಗೆ ಫಿಲ್ಮ್ ಚೇಂಬರ್ ಕೂಡ ಕನ್ನಡ ಚಿತ್ರರಂಗದ ಪರವಾಗಿ ಇಂತಹ ಅಸಹಾಯಕ ಕಲಾವಿದರಿಗೆ ನೆರವು ನೀಡುವ ಕಡೆಗೆ ಗಮನ ಹರಿಸಬೇಕು. ಈ ವಿಚಾರವಾಗಿ ಫಿಲ್ಮ್ ಚೇಂಬರ್‌ನ ಅಧ್ಯಕ್ಷರಾದ ನರಸಿಂಹುಲು ಗಮನ ಹರಿಸುತ್ತಾರಾ? ಕಾದು ನೋಡಬೇಕಿದೆ.

