ಶಿವಣ್ಣ ನಂತ್ರ ಸ್ಯಾಂಡಲ್‌ವುಡ್‌ನಲ್ಲಿ ಲಾಂಗ್ ಹಿಡಿದು ರೌಡಿಸಂ ಸಿನಿಮಾಗಳಲ್ಲಿ ಅಬ್ಬರಿಸಿ ಗೆದ್ದ ಮತ್ತೊಬ್ಬ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ‘ಮೆಜೆಸ್ಟಿಕ್’ ಸಿನಿಮಾದಲ್ಲಿ ರೌಡಿ ದಾಸನಾಗಿ ಆರ್ಭಟಿಸಿದ ಮೇಲೆ ದಾಸ ಅನ್ನೋ ಹೆಸರು ದರ್ಶನ್ ಹೆಸರಿನ ಜೊತೆಗೆ ಸೇರಿಕೊಂಡುಬಿಟ್ಟಿತ್ತು. ಮುಂದಿನ ‘ಕರಿಯ’, ‘ದಾಸ’, ‘ಕಲಾಸಿಪಾಳ್ಯ’, ‘ಶಾಸ್ತ್ರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ದರ್ಶನ್ ‘ಲಾಂಗ್’ ಜರ್ನಿ ಮುಂದುವರೆಯಿತು.ಚಾಲೆಂಜಿಂಗ್ ಸ್ಟಾರ್ ರೌಡಿಯಾಗಿ ನಟಿಸಿದ ದರ್ಶನ್ ‘ಶಾಸ್ತ್ರಿ’ ಸಿನಿಮಾ 18 ವರ್ಷ ಪೂರೈಸಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಇದನ್ನು ನೆನಪಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ದರ್ಶನ್ ಸಿನಿಕರಿಯರ್‌ನಲ್ಲಿ ‘ಶಾಸ್ತ್ರಿ’ ಕೂಡ ಹಿಟ್ ಲಿಸ್ಟ್ ಸೇರಿತ್ತು. ಪಿ. ಎನ್ ಸತ್ಯ ಕಥೆ ಚಿತ್ರಕಥೆ ಬರೆದು ಈ ಸಿನಿಮಾ ನಿರ್ದೇಶನ ಮಾಡಿದ್ದರು. ತೆಲುಗು ನಟಿ ಮಾನ್ಯ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಿಂಚಿದರು. ಸಾಧು ಕೋಕಿಲ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು.
ಇದನ್ನೂ ಓದಿ: ‘ಆದಿಪುರುಷ್’ ಕನ್ನಡ ಸೆಲೆಬ್ರೆಟಿ ಶೋನಲ್ಲಿ ಯಾರೆಲ್ಲಾ ಭಾಗಿಯಾಗಲಿದ್ದಾರೆ ಗೊತ್ತಾ?
ಜೂನ್ 10, 2005ನಲ್ಲಿ ‘ಶಾಸ್ತ್ರಿ’ ಸಿನಿಮಾ ರಿಲೀಸ್ ಆಗಿತ್ತು. ಚಿತ್ರಾ ಶೆಣೈ, ಬುಲೆಟ್ ಪ್ರಕಾಶ್, ಜಿ.ಕೆ ಗೋವಿಂದ ರಾವ್, ಸತ್ಯಜಿತ್ ಚಿತ್ರದ ತಾರಾಗಣದಲ್ಲಿದ್ದರು. ದರ್ಶನ ಆಪ್ತ ಛಾಯಾಗ್ರಾಹಕ ಅಣಜಿ ನಾಗರಾಜ್ ಈ ಸಿನಿಮಾ ಮೂಲಕ ನಿರ್ಮಾಪಕರರಾಗಿದ್ದರು. 5 ವರ್ಷಗಳ ಹಿಂದೆ ‘ಶಾಸ್ತ್ರಿ’ ಸಿನಿಮಾ ಡಿಜಿಟಲ್ ವರ್ಷನ್‌ನಲ್ಲಿ ರೀ ರಿಲೀಸ್ ಆಗಿತ್ತು. ಆಗ ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಸಿನಿಮಾಗಳ ಟ್ರೆಂಡ್ ನಡೀತಿದ್ದ ಕಾಲ. ನಟ ದರ್ಶನ್ ಆಗ ತಾನೇ ‘ಕಲಾಸಿಪಾಳ್ಯ’, ‘ಅಯ್ಯ’ ಸಿನಿಮಾಗಳ ಮೂಲಕ ಕಂಬ್ಯಾಕ್ ಮಾಡಿದ್ದರು. ‘ಶಾಸ್ತ್ರಿ’ ಚಿತ್ರದಲ್ಲಿ ಮತ್ತೊಮ್ಮೆ ಲಾಂಗ್ ಹಿಡಿದು ಅಬ್ಬರಿಸಿ ಗೆದ್ದಿದ್ದರು. ಅಣಜಿ ನಾಗರಾಜ್ ನಿರ್ಮಾಪಕರಾಗಿ ಗೆದ್ದರು. ಚಿಕ್ಕವರಾಗಿದ್ದಾಗ ದರ್ಶನ್ ಸ್ನೇಹಿತನೊಬ್ಬ ಪ್ರತಿವಾರ ಪೋಷಕರ ಜೊತೆ ಫಾರ್ಮ್ ಹೌಸ್‌ಗೆ ಹೋಗಿ ಬರುತ್ತಿದ್ದನಂತೆ. ಅದನ್ನು ನೋಡಿ ಚಿಕ್ಕಂದಿನಿಂದಲೂ ದರ್ಶನ್‌ಗೆ ಫಾರ್ಮ್ ಹೌಸ್ ಮಾಡುವ ಆಸೆ ಇತ್ತು. ‘ಶಾಸ್ತ್ರಿ’ ಚಿತ್ರದಿಂದ ಬಂದ ಹಣವನ್ನು ಸ್ನೇಹಿತ ಅಣಜಿ ನಾಗರಾಜ್, ದರ್ಶನ್‌ಗೆ ಕೊಟ್ಟಿದ್ದರು. ಅದೇ ಹಣದಿಂದ ಟೀ. ನರಸೀಪುರದ ಕೆಂಪಯ್ಯನಹುಂಡಿ ಬಳಿ ದರ್ಶನ್ ಜಾಗ ಖರೀದಿಸಿದ್ದರು. ಮುಂದೆ ಆ ಜಾಗದಲ್ಲಿ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಸಾಕಿ ಫಾರ್ಮ್‌ಹೌಸ್ ಮಾಡಿಕೊಂಡರು. ದರ್ಶನ್ ತಮ್ಮ ಬಿಡುವಿನ ಬಹುತೇಕ ಸಮಯವನ್ನು ಅಲ್ಲೇ ಕಳೆಯುತ್ತಾರೆ.