ದರ್ಶನ್ ತೂಗುದೀಪ್ ಹೆಸರು ಕೇಳಿದೊಡನೆಯೇ ಚಿತ್ರರಸಿಕರ ಕಿವಿ ಒಮ್ಮೆಗೆ ಚುರುಕಾಗುತ್ತದೆ. ಗಾಂಧಿನಗರದಲ್ಲಿ ಲೆಕ್ಕಾಚಾರಗಳು ಶುರುವಾಗುತ್ತದೆ. ಅದಕ್ಕೆ ಕಾರಣ ಅವರು ಗಳಿಸಿದ ಯಶಸ್ಸು, ಬೆಳೆಸಿಕೊಂಡ ವರ್ಚಸ್ಸು ಕನ್ನಡ ಚಿತ್ರರಂಗದ ಪಾಲಿಗೆ ಮೋಸ್ಟ್ ವಾಂಟೆಡ್ ನಟ. ನಿರ್ಮಾಪಕರ ಪಾಲಿಗೆ ಕಿಸೆ ತುಂಬಿಸುವ ಅಕ್ಷಯ ಪಾತ್ರೆ, ಇನ್ನು ಅಭಿಮಾನಿಗಳಿಗಂತೂ ಆರಾಧ್ಯ ದೈವ.
ನಮ್ಮ ನಿಮ್ಮ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಜೆಸ್ಟಿಕ್ ನಿಂದ ಪಯಣ ಆರಂಭಿಸಿ ‘ಕಾಟೇರ’ ನಾಗಿ ಬೆಳೆದು ಬಂದ ಪರಿ ಎಲ್ಲರಿಗೂ ಚಿರಪರಿಚಿತ ಜೀವನದ ಹಲವಾರು ಮಜಲುಗಳನ್ನ ಕಂಡು ಬಂದ ದರ್ಶನ್ ಅವರ ಜೀವನದ ಬಹುತೇಕ ದರ್ಶನ ಈಗಾಗಲೇ ನಿಮಗಾಗಿದೆ. ಹಾಗಾದರೆ ದರ್ಶನ್ ವಿಶೇಷದಲ್ಲಿ ಏನು ವಿಶೇಷ ನೀಡುವುದು ಎಂದು ಯೋಚಿಸುತ್ತಿದ್ದಾಗ ನಮ್ಮ ಮನಸ್ಸಿಗೆ ಬಂದ ಆಲೋಚನೆ ಯಾಕೆ ‘ನೀವು ಕಂಡಿರದ ದರ್ಶನ್’ ತೋರಿಸಬಾರದು ಎಂದು. ನಿಮ್ಮ ʻಚಿತ್ತಾರʼದಲ್ಲಿ ಯಾರೂ ಕಂಡಿರದ ದರ್ಶನ್ ಬಗ್ಗೆ ಒಂದಷ್ಟು ವಿಶೇಷತೆ ಇಲ್ಲಿದೆ.
‘ಅಮ್ಮ ಕಂಡ ಚಾಲೆಂಜಿಂಗ್ ಬದುಕು’
ದರ್ಶನ್‌ರಿಗೆ ಮೊದಲ ಹೆಜ್ಜೆ ಇಡಿಸಿ, ಮೊದಲ ನುಡಿ ಕಲಿಸಿ, ಮೊದಲ ತುತ್ತುಣಿಸಿ, ಬೆಳವಣಿಗೆಯ ಹಾದಿಯ ಪ್ರತಿಯೊಂದು ಹೆಜ್ಜೆಯಲ್ಲೂ ಮಾರ್ಗದರ್ಶಿಯಾಗಿ, ದರ್ಶನ್‌ರ ಸ್ಫೂರ್ತಿಯಾಗಿ ನಿಂತವರು ಅವರ ತಾಯಿ ಶ್ರೀಮತಿ ಮೀನಾ ತೂಗುದೀಪ್. ಚಾಲೆಂಜಿಂಗ್ ಸ್ಟಾರ್ ಎದುರಿಸಿದ ಜೀವನದ ಚಾಲೆಂಜ್‌ಗಳನ್ನು ಅವರೊಂದಿಗೆ ಅನುಭವಿಸಿದವರು ಮೀನಮ್ಮ. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ, ಹಾಗಾಗಿ ಅವರ ತಾಯಿಯಿಂದಲೇ ಪ್ರಾರಂಭಿಸಬೇಕೆಂದು ಚಿತ್ತಾರ ತಂಡ ಹೊರಟದ್ದು ಮೈಸೂರಿಗೆ.
ದರ್ಶನ್ ಆಡಿ ಬೆಳೆದ ಮನೆ ‘ಮುಪಾ ಕೃಪ’. ಅವರ ಮನೆಗೆ ‘ಮುಪಾ ಕೃಪ’ ಎಂದು ಹೆಸರಿಡಲು ಕಾರಣ ತೂಗುದೀಪ ಶ್ರೀನಿವಾಸರಿಗಿದ್ದ ಡಾ.ರಾಜ್ ಮತ್ತು ಪಾರ್ವತಮ್ಮರ ಮೇಲಿನ ಅಭಿಮಾನ. ‘ಮುತ್ತುರಾಜ್-ಪಾರ್ವತಿ’.. ‘ಮುಪಾ’ ಆಯಿತು. ಅದು ಅವರ ತಂದೆ ತೂಗುದೀಪ ಶ್ರೀನಿವಾಸ್‌ರ ಬಣ್ಣದ ಬೆವರಿನ ಕನಸಿನ ಸೌಧ. ಮಕ್ಕಳು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಬೆಂಗಳೂರಿನಲ್ಲಿ ಬಂಗಲೆಗಳಲ್ಲಿದ್ದರೂ ಶ್ರೀನಿವಾಸ್‌ರವರ ಶ್ರಮದ, ಕನಸಿನ ಮನೆಯನ್ನು ಬಿಟ್ಟು ಬರಲು ಒಲ್ಲದ ಶ್ರೀಮತಿ ಮೀನಾ ತೂಗುದೀಪ್ ಇಂದಿಗೂ ಮೈಸೂರಿನ ‘ಮುಪಾ ಕೃಪ’ದಲ್ಲೇ ಇದ್ದಾರೆ. ದರ್ಶನ್ – ದಿನಕರ್‌ಗೆ ಕೂಡ ಹಾಗೆಯೇ ಅವರಿಗೆ ಮೈಸೂರು ಮನೆ ನೀಡುವ ನೆಮ್ಮದಿಯ ಸವಿಯೇ ಬೇರೆ. ಚಿತ್ತಾರ ತಂಡ ಮೀನಮ್ಮರನ್ನು ಭೇಟಿ ಮಾಡಿದ್ದಾಗ, ಮೀನಮ್ಮ ದರ್ಶನ್ ಬಗ್ಗೆ ಹೇಳಲು ಪ್ರಾರಂಭಿಸಿದ್ದು ಹೀಗೆ…
‘ಮುಪಾ ಕೃಪಾ’ ದಲ್ಲಿ ಸಂಭ್ರಮ
“ದೀಪಾವಳಿ ಬಂತೆಂದರೆ ಇಂದಿಗೂ ‘ಮುಪಾ ಕೃಪಾ’ ತುಂಬು ಸಂಭ್ರಮದಲ್ಲಿರುತ್ತದೆ.. ದರ್ಶನ್, ದಿನಕರ್ ಎಲ್ಲರೂ ಕುಟುಂಬ ಸಮೇತರಾಗಿ ಇಲ್ಲಿಗೆ ಬಂದು ಹಬ್ಬ ಆಚರಣೆ ಮಾಡುತ್ತಾರೆ. ಲಕ್ಷಾಂತರ ರೂಪಾಯಿಯ ಪಟಾಕಿಯನ್ನ ಅಣ್ಣ-ತಮ್ಮ ತಂದು, ಅಕ್ಕ ಪಕ್ಕದವರು ಮಾತಿನ ಪಟಾಕಿ ಸಿಡಿಸುವವರೆಗೂ ಹೊಡೆದು, ನಂತರ ಅವರೇ ಕೆಲಸದವರನ್ನ ಕರೆಸಿ ರಸ್ತೆ ಸ್ವಚ್ಛ ಮಾಡಿಸುವವರೆಗೂ ಸಾಗುತ್ತದೆ ಹಬ್ಬದ ಸಂಭ್ರಮ. ದೊಡ್ಡವರ ಕಾರ್ಯಗಳಲ್ಲೂ ಅಷ್ಟೇ ದರ್ಶನ್ ನಿಷ್ಠೆಯಿಂದ ಬಂದು, ಬೆಳಗ್ಗಿನಿಂದ ಎಡೆ ಇಟ್ಟು, ತರ್ಪಣ ಬಿಡುವವರೆಗೂ ಉಪವಾಸವಿದ್ದು ನಡೆಸಿಕೊಡುತ್ತಾನೆ. ದೊಡ್ಡ ಹಬ್ಬಗಳಲ್ಲಿ ಎಲ್ಲರೂ ಸೇರಿ ಆಚರಿಸುತ್ತೇವೆ. ಸೊಸೆಯರು ಅಡುಗೆ ಮನೆ, ಮಕ್ಕಳ ಗಲಾಟೆ. ದರ್ಶನ್-ದಿನಕರ್ ಎಲ್ಲಾ ಒತ್ತಡ ಮರೆತು ಸಂಭ್ರಮಿಸುವುದು, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಡೆ ಇಡುವ ದಿನ ದರ್ಶನ್ ಎರಡು ಕುರಿ ಹೊಡೆಸಿ ಎಲ್ಲರಿಗೂ ನಾನ್-ವೆಜ್ ಆಡುಗೆ ಮಾಡಿಸಿ, ತನ್ನ ಚಿಕ್ಕಪ್ಪಂದಿರನ್ನು ಚೇಡಿಸುತ್ತಾ, ಸ್ಟಾರ್ ಆಗಿರದೇ ಮನೆಯ ಮಗನಾಗಿ ಬೆರೆಯುತ್ತಾನೆ.” ಎಂದು ತಮ್ಮ ಸಂಭ್ರಮ ನಮ್ಮೊಂದಿಗೆ ಹಂಚಿಕೊಂಡರು.
ಮಾಸದ ನೆನಪುಗಳು…
“ತುಂಬಾ ತುಂಟ ದರ್ಶನ್, ಓದು ಅಂದ್ರೆ ಅಷ್ಟಕ್ಕಷ್ಟೇ. ಮಾರ್ಕ್ಸ್ ಕಾರ್ಡಿನಲ್ಲಿ ಒಂದಂಕಿ, ಅದಕ್ಕೆ ಪರಿಹಾರ ಅಮ್ಮ. ಅಪ್ಪನಿಗೆ ಕೋಪವಾದ್ದರಿಂದ ಅದು ಬರುತ್ತಿದ್ದದ್ದು ನನ್ನ ಬಳಿ, ಮಗನ ಮೇಲೆ ಪ್ರೀತಿ ನನ್ನನ್ನು ಮಾರ್ಕ್ಸ್ ಕಾರ್ಡ್ ತಿದ್ದುವಂತೆ ಮಾಡುತ್ತಿತ್ತು. ನೆನೆಸಿಕೊಂಡರೆ ಈಗ ನಗು ಬರುತ್ತದೆ. ಅಷ್ಟೇ ಅಲ್ಲ, ತಂದೆ ಖಳನಾಯಕನ ಪಾತ್ರ ಮಾಡುತ್ತಿದ್ದರು. ಆಗ ಜನಗಳು ಅವರು ನಿಜ ಜೀವನದಲ್ಲೂ ಹಾಗೆಯೇ ಎಂದು ಭಾವಿಸಿ ದರ್ಶನ್ ಆಡಲು ಹೋದಾಗ “ನಿನ್ನಪ್ಪ ಹುಡುಗೀರನ್ನ ತಬ್ಬೋತಾರೆ, ಸಿಗರೇಟ್ ಸೇಪ್ತಾ- ರೆ” ಹಾಗೆ, ಹೀಗೆ ಎಂದ ಕೂಡಲೆ ದರ್ಶನ್ ಅಂದವರಿಗೆ ಗೂಸ ತಿನ್ನಿಸಿ ಮನೆ ಸೇರುತ್ತಿದ್ದ. ಅವರ ಪೋಷಕರು ಮನೆಯ ಗೇಟ್ ಮುಂದೆ ನಿಂತು ಜಗಳ ಪ್ರಾರಂಭ. ಇದನ್ನು ಕಂಡು ಶ್ರೀನಿವಾಸ್‌ರ ಛಡಿಗಳ ಥಳಿತ ಸ್ಟಾರ್ಟ್. ಕೊನೆಗೆ ಅವನು “ನಿಮ್ಮನ್ನು ಅವರು ಬಯ್ಯುವುದು ನನಗೆ ಇಷ್ಟ ಆಗಲ್ಲ” ಎಂದಾಗ ಶ್ರೀನಿವಾಸ್‌ರಿಗೂ ಮರುಕ. ಹೀಗೆ ದಿನಕ್ಕೊಂದರಂತೆ ಘಟನೆಗಳು ನಡೆಯುತ್ತಿದ್ದವು. ಒಮ್ಮೆ ದೇವರ ಹುಂಡಿಯಲ್ಲಿ ಕೂಡಿಟ್ಟಿದ್ದ ದುಡ್ಡನ್ನು ತೆಗೆದು- ಕೊಂಡ ದರ್ಶನ್ ಅದರಲ್ಲಿ ಪಾರಿವಾಳ ತರಲು ಹೊರಟಿದ್ದ. ಪ್ರಾಣಿಗಾಗಿ ದೇವರ ದುಡ್ಡನ್ನೂ ಬಿಟ್ಟಿಲ್ಲ ಅವನು. ದರ್ಶನ್ ಪ್ರಾಣಿಪ್ರೇಮಿಯಾದರೆ ನಾನು ಗಿಡಗಳ ಪ್ರೇಮಿ, ಏನಾದರೂ ಕೆಲಸ ಸಾಧಿಸಿಕೊಳ್ಳಬೇಕಾದರೆ ಒಂದು ಗಿಡವಿರುವ ಪಾಟನ್ನು ಕೈಯಲ್ಲಿ ತೆಗೆದುಕೊಂಡು “ಕೊಡು ಇಲ್ಲದಿದ್ದರೆ ಪಾಟ್ ಒಡೆದು ಹಾಕ್ತಿನಿ” ಅಂತ ಬ್ಲಾಕ್‌ಮೇಲ್ ಮಾಡಿ ಎಷ್ಟೋ ಕೆಲಸಗಳನ್ನ ಸಾಧಿಸಿಕೊಳ್ಳುತ್ತಿದ್ದ. ಈಗ ಅವನ್ನೆಲ್ಲಾ ನೆನೆಸಿಕೊಂಡರೆ ಮಕ್ಕಳ ಬಾಲ್ಯವೇ ಚೆನ್ನ ಎನಿಸುತ್ತದೆ” ಎನ್ನುತ್ತಾ ಹೃದಯತುಂಬಿ ನಕ್ಕರು ಮೀನಮ್ಮ.
ಅಪ್ಪ ಕೊಟ್ಟ 5 ರೂಪಾಯಿಯಲ್ಲಿ ಪಾರಿವಾಳಕ್ಕೆ ಆಹಾರ
“ಆಗ ಅಪ್ಪ ಶೂಟಿಂಗ್‌ಗೆ ಹೋಗಕ್ಕೆ ಮುಂಚೆ ನನಗೆ ದರ್ಶನ್ ಗೆ ಮತ್ತು ಅಕ್ಕ ದಿವ್ಯಾಗೆ ತಲಾ ರೂ.5 ಕೊಟ್ಟು ಹೋಗುತ್ತಿದ್ದರು. ನಮಗೆ ಅದೇ ಖುಷಿ. ಆ ಐದು ರೂಪಾಯಿಯಲ್ಲಿ ರೂ.2.50 ಅಥವಾ ರೂ.3 ಕೊಟ್ಟು ಒಂದು ಕೇಕ್, ಒಂದು ಪಪ್ಸ್ ಮತ್ತು ಒಂದು ದಿಲ್‌ಖುಷ್ ತಂದು, ಅಮ್ಮನ ಕೈಯಲ್ಲಿ ಒಳ್ಳೆ ಕಾಫಿ ಮಾಡಿಸಿಕೊಂಡು ಎಲ್ಲರೂ ಒಟ್ಟಿಗೆ ಕೂತು ತಿನ್ನೋ ರೂಢಿ. ನಾವು ಬೇಕರಿಗೆ ಹೋಗಿ ತರೋದಕ್ಕೆ ಅಂತ ದುಡ್ಡು ಕೇಳಿದರೆ ಯಾವುದೇ ಕಾರಣಕ್ಕೂ ದುಡ್ಡು ಬಿಚ್ಚುತ್ತಿರಲಿಲ್ಲ ದರ್ಶನ್. ಯಾಕೆ ಅಂತ ಕೇಳಿದ್ರೆ “ಇಲ್ಲಾ ಕಣೋ ಇದರಲ್ಲಿ ನಾನು ಪಾರಿವಾಳ, ಕೋಳಿಗಳಿಗೆ ನವಣೆ, ದನಗಳಿಗೆ ಮೇವು, ಜೋಳ ಎಲ್ಲಾ ತರೀನಿ. ನನಗೇನೂ ಬೇಡ ಅಂತ ಹೇಳಿ ಕೊಟ್ಟ ದುಡ್ಡನ್ನ ಹಾಗೆ ಉಳಿಸಿಕೊಳ್ಳುತ್ತಿದ್ದ” ಎಂದು ಮಗ ದರ್ಶನ್ ಬಗ್ಗೆ ಚಿತ್ತಾರದೊಂದಿಗೆ ಮೀನಾ ಅವರು ಈ ಹಿಂದೆ ಹಂಚಿಕೊಂಡಿದ್ದರು.