ಡಾಲಿ ಪಿಕ್ಚರ್ಸ್ ಕನ್ನಡ ಚಿತ್ರಪ್ರೇಮಿಗಳಿಗೆ ಸದಾಭಿರುಚಿ ಸಿನಿಮಾಗಳನ್ನು ಉಣಬಡಿಸುತ್ತಿದೆ. ಕಳೆದ ವರ್ಷ ಟಗರು ಪಲ್ಯದಂತಹ ಫ್ಯಾಮಿಲಿ ಕಥೆಯನ್ನು ಪ್ರೇಕ್ಷಕರಿಗೆ ನೀಡಿದ್ದ ಈ ಸಂಸ್ಥೆ ಈಗ ವಿದ್ಯಾಪತಿ ಎಂಬ ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ವಿದ್ಯಾಪತಿಯ ಮೇಕಿಂಗ್, ಫೋಟೋಗಳು ಈಗಾಗಲೇ ನಿರೀಕ್ಷೆ ಹೆಚ್ಚಿಸಿವೆ. ಇದೀಗ ಚಿತ್ರತಂಡ ವಿದ್ಯಾಪತಿಯ ಕಿತಾಪತಿ ಝಲಕ್ ಬಿಟ್ಟು ಮತ್ತಷ್ಟು ಥ್ರಿಲ್ ಹೆಚ್ಚಿಸಿದೆ.
ವಿದ್ಯಾಪತಿಯಾಗಿ ಟಗರು ಪಲ್ಯ ನಾಯಕ ನಾಗಭೂಷಣ್ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ವಿದ್ಯಾಪತಿ ಚಿತ್ರದ ಪ್ರೋಮೋ ಅನಾವರಣ ಮಾಡಿದೆ. ಜೇಬು ತುಂಬ ಕಾಸಿರೋನು ಕೊಟ್ಯಾಧಿಪತಿ..ನಿಮ್ಮನ್ನೆಲ್ಲ ಹೊಟ್ಟೆತುಂಬ ನಗಿಸುವವನೇ ನಮ್ಮ ‘ವಿದ್ಯಾಪತಿ’ ಅಂತಾ ಹೀರೋನನ್ನು ಪರಿಚಯಿಸಿದೆ. ಕರಾಟೆ ಕಿಂಗ್ ವೇಷ ತೊಟ್ಟಿರುವ ನಾಗಭೂಷಣ್ ಮಾಡುವ ಕಿತಾಪತಿ ತುಣುಕುವೊಂದನ್ನು ಬಿಡುಗಡೆ ಮಾಡಿದೆ. ಕರಾಟೆ ಕಲಿಯುವ ವೇಳೆ ವಿದ್ಯಾಪತಿ ಮಾಡುವ ಯಡವಟ್ಟು ಪ್ರೇಕ್ಷಕರಿಗೆ ಮುಖದ ಮೇಲೆ ಮಂದಹಾಸ ಮೂಡಿಸುತ್ತದೆ.
ಇಕ್ಕಟ್ ಸಿನಿಮಾ ಸೂತ್ರಧಾರರಾದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಧನಂಜಯ್ ಜೊತೆ ಕೈ ಜೋಡಿಸಿದ್ದಾರೆ.
ನಾಗಭೂಷಣ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಈ ಚಿತ್ರದಲ್ಲಿ ನಾಗಭೂಷಣ್ ಗೆ ನಾಯಕಿಯಾಗಿ ಉಪಾಧ್ಯಕ್ಷ ಬ್ಯೂಟಿ ಮಲೈಕಾ ವಸೂಪಾಲ್ ಕಾಣಿಸಿಕೊಳ್ಳಲಿದ್ದಾರೆ. ರಂಗಾಯಣ ರಘು ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸದ್ಯ ವಿದ್ಯಾಪತಿ ಶೂಟಿಂಗ್ ಭರದಿಂದ ಸಾಗುತ್ತಿದೆ.