ಸ್ಯಾಂಡಲ್‌ವುಡ್ `ಪುಟ್ಟಿ’ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ರುಕ್ಮಿಣಿ ವಸಂತ್. ಕನ್ನಡಿಗರ ಮನಸ್ಸಲ್ಲಿ ಪುಟ್ಟಿಯಾಗಿಯೇ ಉಳಿದು ಬಿಟ್ಟಿದ್ದಾರೆ. ಕರುನಾಡ ಕ್ರಶ್ ಆಗಿ ಹುಡುಗರ ಹೃದಯಸಾಗರವನ್ನು ಕದಡಿದ್ದಾರೆ. `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ಗಮನ ಸೆಳೆದ ನಟಿಗೆ ಕನ್ನಡ ಮಾತ್ರವಲ್ಲ ಬೇರೆ ಭಾಷೆಯಲ್ಲೂ ಡಿಮ್ಯಾಂಡ್ ಶುರುವಾಗಿದೆ. `ಬೀರಬಲ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರುಕ್ಮಿಣಿ ವಸಂತ್, ರಕ್ಷಿತ್ ಜೊತೆಗೆ `ಸಪ್ತಸಾಗರದಾಚೆ ಎಲ್ಲೋ’, ಗಣೇಶ್ ಜೊತೆಗೆ `ಬಾನದಾರಿಯಲಿ’ ನಟಿಸಿದ್ದು, ಶ್ರೀಮುರುಳಿ ಜೊತೆಗೆ `ಬಘೀರ’, ಶಿವಣ್ಣ ಜೊತೆಗೆ `ಭೈರತಿ ರಣಗಲ್’ ಸಿನಿಮಾದಲ್ಲೂ ನಟಿಸಿದ್ದಾರೆ. ಇಂಡಸ್ಟಿçಗೆ ಬಂದು ಬಹಳ ಕಡಿಮೆ ಸಮಯವೇ ಆದರೂ, ಬೆರಳೆಣಿಕೆಯ ಸಿನಿಮಾಗಳನ್ನೆ ಮಾಡಿದರು ಕರ್ನಾಟಕದ ಕ್ರಶ್ ಆಗಿ ಮಿಂಚುತ್ತಿದ್ದಾರೆ. ಈ ಸಕ್ಸಸ್ ನಡುವೆ ಸಿನಿಮಾ ಜರ್ನಿ, ಲೈಫ್ ಸ್ಟೈಲ್ , ಇಷ್ಟ-ಕಷ್ಟಗಳನ್ನೆಲ್ಲಾ `ಚಿತ್ತಾರ’ದೊಂದಿಗೆ ಹಂಚಿಕೊಂಡಿದ್ದಾರೆ.
* ವೀರಯೋಧರ ಮಗಳು ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್, ದೇಶಸೇವೆ ಮಾಡುವ ಫ್ಯಾಮಿಲಿಯಿಂದ ಬಂದವರು. ಅವರ ತಂದೆ ವಸಂತ್ ಅವರು ಆರ್ಮಿಯಲ್ಲಿ ಸೇವೆ ಸಲ್ಲಿಸಿದವರು. ಮಕ್ಕಳು ಸಂತೋಷದಿಂದ ಇರಬೇಕು ಎಂದು ಬದುಕಿದವರು. ಆದರೆ ರುಕ್ಮಿಣಿ ಅವರು ಹತ್ತು ವರ್ಷವಿದ್ದಾಗಲೇ ಹುತಾತ್ಮರಾದರು. ಬಳಿಕ ಅವರ ಅಮ್ಮನೇ ಎಲ್ಲಾ ಜವಬ್ದಾರಿಗಳನ್ನು ತೆಗೆದುಕೊಂಡು ಮಕ್ಕಳನ್ನು ಬೆಳೆಸಿದ್ದಾರೆ. ಮಕ್ಕಳ ಆಸೆಗೆ ನೀರೆರೆದು ಪೋಷಿಸಿದ್ದಾರೆ. ರುಕ್ಮಿಣಿ ಅವರ ತಾಯಿ ಹುಟ್ಟು ಕಲಾವಿದೆ. ಭರತನಾಟ್ಯಂ ಡ್ಯಾನ್ಸರ್ ಕೂಡ. ರುಕ್ಮಿಣಿ ಅವರಿಗೂ ಈ ಕಲೆ ಒಲಿದು ಬಂದಿದೆ. ಹೀಗಾಗಿಯೇ ರುಕ್ಮಿಣಿ ವಸಂತ್ ಕ್ಲಾಸಿಕಲ್ ಡ್ಯಾನ್ಸರ್ ಕೂಡ. ನಟಿ ರುಕ್ಮಿಣಿ, ಶಾಲೆಯಲ್ಲಿದ್ದಾಗಲೇ ನಟನೆ ಕಡೆಗೆ ಆಸಕ್ತಿ ಹೊಂದಿದ್ದರು. ಅಲ್ಲಿಂದಲೇ ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಂಡು ಬಂದಿದ್ದಾರೆ. ಬೆಂಗಳೂರಿನಲ್ಲಿಯೇ ಬೆಳೆದ ರುಕ್ಮಿಣಿ ಶಿಕ್ಷಣ ಮುಗಿಸಿದ್ದು ಮಾತ್ರ ಲಂಡನ್‌ನಲ್ಲಿ.
* ಸಿನಿ ಕೆರಿಯರ್‌ನಲ್ಲಿ ಅಮ್ಮನ ಪಾತ್ರವೇ ಹೆಚ್ಚು
ಸಿನಿಮಾ ಇಂಡಸ್ಟ್ರಿಗೆ ಎಲ್ಲರನ್ನು ಆಕರ್ಷಿಸುತ್ತದೆ ನಿಜ. ಆದರೆ ಅದಕ್ಕೆ ಬೇಕಾದ ತಯಾರಿ ಏನು ಎಂಬುದನ್ನು ಅರಿಯಬೇಕಾಗುತ್ತದೆ. ಇಂಡಸ್ಟಿçಗೆ ಹೆಜ್ಜೆ ಇಡುವುದಕ್ಕೆ ಯಾರದ್ದಾದರೂ ಸ್ಟಾçಂಗ್ ಸಪೋರ್ಟ್ ಬೇಕಾಗುತ್ತದೆ. ರುಕ್ಮಿಣಿ ವಸಂತ್ ಅವರಿಗೆ ಸಪೋರ್ಟ್ ಆಗಿ ನಿಂತಿದ್ದು ಅವರ ಅಮ್ಮ. ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಅಮ್ಮ ಹೇಗೆಲ್ಲಾ ಬೆಂಬಲ ನೀಡಿದರು ಎಂಬುದನ್ನು ರುಕ್ಮಿಣಿ ಹೇಳಿದ್ದು ಹೀಗೆ, `ಸಿನಿಮಾಗೆ ಬರಬೇಕು ಎಂದುಕೊಂಡಾಗಿನಿಂದ ಅಮ್ಮ ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ಅಮ್ಮ ನನ್ನ ಜೊತೆಗೆ ನಿಂತಿದ್ದಾರೆ. ಆಡಿಷನ್‌ಗೆ ನಾನು ಹೋಗುತ್ತೀನಿ ಎಂದಾಗಲೂ ನನ್ನ ಜೊತೆಗೆ ಅವರು ಬಂದಿದ್ದಾರೆ. ಎಷ್ಟೋ ಸಲ ಅವರೇ ಗಾಡಿಯಲ್ಲಿ ಕರೆದುಕೊಂಡು ಹೋಗಿ, ಆಡಿಷನ್ ಜಾಗಕ್ಕೆ ಬಿಟ್ಟಿದ್ದಾರೆ. ಆಡಿಷನ್‌ಗೆ ಪ್ರಿಪೇರ್ ಆಗುವಾಗಲೂ ಸ್ಕಿಪ್ಟ್ ಓದಬೇಕಾದರೆ, ಮೆಮೊರೈಸ್ ಮಾಡಬೇಕಾದರೂ ಅಮ್ಮ ತುಂಬಾ ಸಹಾಯ ಮಾಡಿದ್ದಾರೆ. ಆರಂಭದಿಂದಾನೇ ಎಲ್ಲಾ ರೀತಿಯಾದಂತ ಸಪೋರ್ಟ್ ಮಾಡಿದ್ದರ ಜೊತೆಗೆ, ಈ ಒಂದು ಅನಿರೀಕ್ಷಿತ ಕ್ಷೇತ್ರ ಆಯ್ದುಕೊಳ್ಳುವುದಕ್ಕೆ ಧೈರ್ಯ ತುಂಬಿದ್ದೆ ನನ್ನಮ್ಮ’ ಎಂದಿದ್ದಾರೆ.
* ಮಾಡೆಲಿಂಗ್ ಮಾಡ್ತಿದ್ದ ರುಕ್ಮಿಣಿ ನಟಿಯಾಗಿದ್ದೇಗೆ..?
ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೂ ಮುನ್ನ ಹಲವು ಮೆಟ್ಟಿಲುಗಳಿವೆ. ಅವುಗಳೇ ಮಾಡೆಲಿಂಗ್, ಆಡ್ಸ್ ಇತ್ಯಾದಿ ಇತ್ಯಾದಿ. ರುಕ್ಮಿಣಿ ವಸಂತ್ ಕೂಡ ಮೊದಲಿಗೆ ಮಾಡೆಲಿಂಗ್ ಹಾಗೂ ಆಡ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಮುಂದುವರೆದರೆ ಸಿನಿಮಾದಲ್ಲಿಯೇ ಮುಂದುವರೆಯಬೇಕು ಎಂಬ ಹಠವನ್ನು ಹೊಂದಿದ್ದರು. ಅಷ್ಟರಲ್ಲಾಗಲೇ ಡ್ರಾಮಾ ಸ್ಕೂಲಿಂದ ಗ್ಯಾಜುಯೇಟ್ ಆಗಿದ್ದಂತ ರುಕ್ಮಿಣಿ ತಮ್ಮ ಮ್ಯಾನೇಜ್ಮೆಂಟ್‌ಗೆ ಸಿನಿಮಾದ ಅವಕಾಶ ಸಿಕ್ಕಿದರೆ ಹೇಳಿ ಎಂದಿದ್ದರಂತೆ. ಅದೇ ಸಮಯಕ್ಕೆ `ಬೀರ್‌ಬಲ್’ ಸಿನಿಮಾಗೆ ನಾಯಕಿಯ ಹುಡುಕಾಟ ನಡೆಯುತ್ತಿತ್ತು. ಮ್ಯಾನೇಜ್ಮೆಂಟ್ ಅವರ ಕಡೆಯಿಂದ ಶ್ರೀನಿ ತಂಡಕ್ಕೆ ರುಕ್ಮಿಣಿ ಅವರನ್ನೇ ರೆಫರ್ ಮಾಡಿದ್ದರು.
* ಕರ್ನಾಟಕದ ಕ್ರಶ್ ಆಗಿದ್ದಾರೆ ಸ್ಯಾಂಡಲ್‌ವುಡ್ `ಪುಟ್ಟಿ’
ಸಿನಿ ಪ್ರೇಮಿಗಳ ಮನಸ್ಸು ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೆ ರುಕ್ಮಿಣಿ ವಸಂತ್ ಅವರ ಒಂದು ನಗು ಎಲ್ಲರ ಹಾರ್ಟ್ಗೂ ಟಚ್ ಆಗಿದೆ. ಅದಕ್ಕಾಗಿಯೇ ಅವರನ್ನು ಕರ್ನಾಕಟದ ಕ್ರಶ್ ಎಂದೇ ಕರೆಯುತ್ತಿದ್ದಾರೆ. ರುಕ್ಮಿಣಿ ವಸಂತ್ ಅವರಿಗೆ ನೀವೀಗ ಕರ್ನಾಕಟದ ಕ್ರಶ್ ಅಲ್ಲವೇ ಎಂದಾಗ ಅವರ ಮನದಲ್ಲೊಂದು ನಗು ಮೂಡಿದೆ. `ಕರ್ನಾಟಕದ ಕ್ರಶ್‌ಗಿಂತ ಜನ ಸಿನಿಮಾದ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಆ ಪುಟ್ಟಿ ತುಂಬಾ ಇಷ್ಟವಾಗಿದ್ದಾರೆ. ಅಮ್ಮ, ಮನೆಯಲ್ಲಿಯೂ ಪುಟ್ಟಿ ಅಂತಾನೆ ಕರೆಯುತ್ತಾರೆ. ಈಗ ಆ ಹೆಸರಿಗೊಂದು ಬೇರೆಯದ್ದೆ ತೂಕ ಬಂದಿದ್ದೆ. ಕರ್ನಾಟಕ ಕ್ರಶ್‌ಗಿಂತ ಜನ ನನ್ನನ್ನು ಪುಟ್ಟ ಅಂತ ಕರೆದಾಗ ತುಂಬಾ ಖುಷಿಯಾಗುತ್ತೆ’ ಎಂದಿದ್ದಾರೆ.
* `ಪುಟ್ಟಿ’ ಹಿಂದೆ ಬಿದ್ದಿದ್ದ ರುಕ್ಮಿಣಿ
ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ ಎರಡಲ್ಲೂ ರುಕ್ಮಿಣಿ ವಸಂತ್ ಪ್ರೇಕ್ಷಕರನ್ನು ಕಾಡುತ್ತಾರೆ. ಇಷ್ಟು ಗಟ್ಟಿ ಪಾತ್ರಕ್ಕೆ ರುಕ್ಮಿಣಿ ಆಯ್ಕೆಯಾಗಿದ್ದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರಿಗೂ ಬರುತ್ತೆ. ಅದಕ್ಕೆ ರುಕ್ಮಿಣಿ ಅವರು ಉತ್ತರಿಸಿದ್ದು, `ಹೇಮಂತ್ ಅವರು ಈ ಪ್ರಾಜೆಕ್ಟ್ ಬಗ್ಗೆ ಮಾತನಾಡುವಾಗಲೇ ನನಗೆ ತುಂಬಾ ಕುತೂಹಲವಿತ್ತು. ಈ ಅವಕಾಶದ ಹಿಂದೆ ನಾನೇ ಹೋಗಿದ್ದೆ. ಒಂದು ಪೋಸ್ಟರ್ ರಿಲೀಸ್ ಮಾಡಿದ್ದಾಗ ಇನ್ನು ನಟಿ ಆಯ್ಕೆಯಾಗಿರಲಿಲ್ಲ. ಹೀಗಾಗಿ ಹೇಮಂತ್ ಅವರಿಗೆ ನಾನೇ ಕಾಲ್ ಮಾಡಿ, ಆಡಿಷನ್‌ಗೆ ಬರ್ತೀನಿ ಸರ್ ಅಂತ ಹೇಳಿ ಹೋದೆ. ಹೇಮಂತ್, ರಕ್ಷಿತ್, ಚರಣ್ ಅವರು ಮತ್ತೆ ಬಂದು ಒಂದು ಸಿನಿಮಾ ಮಾಡುತ್ತಿದ್ದಾರೆ. ಅದು ಒಂದು ಲವ್ ಸ್ಟೋರಿ ಬೇರೆ. ನನಗೆ ಲವ್ ಸ್ಟೋರೀಸ್ ಎಂದರೆ ತುಂಬಾನೇ ಇಷ್ಟ. ನಮ್ಮ ಕನ್ನಡ ಇಂಡಸ್ಟಿçಯಲ್ಲಿ ಒಳ್ಳೆ ಒಳ್ಳೆ ಲವ್ ಸ್ಟೋರಿಗಳು ಬಂದಿವೆ ಕೂಡ. ಇಂಥ ಒಳ್ಳೆ ತಂಡ ಒಟ್ಟಾಗಿ ಬಂದು ಒಂದು ಸಿನಿಮಾ ಮಾಡುತ್ತಾ ಇದ್ದಾರೆ ಎಂದಾಗಲೇ ನಾನು ಆಡಿಯನ್ಸ್ ಆಗಿಯೇ ನೋಡಿದೆ. ನನಗೂ ತುಂಬಾ ಕುತೂಹಲವಿತ್ತು. ಆಡಿಷನ್ ಕೊಟ್ಟು ಸೆಲೆಕ್ಟ್ ಆದೆ. ಕಥೆ ಕೇಳಿದಾಗ ಇನ್ನಷ್ಟು ಖುಷಿಯಾಗಿತ್ತು. ತುಂಬಾ ಕಾಡುವಂತ ಸಿನಿಮಾ ಸಪ್ತಸಾಗರದಾಚೆ’ ಎಂದಿದ್ದಾರೆ.
* ರುಕ್ಮಿಣಿ ಸ್ಮೆಲ್ ಹಿಂದೆ ತಂಗಿ ಕೈಚಳಕ
ರುಕ್ಮಿಣಿ ವಸಂತ್ ಹೆಚ್ಚು ಹಾರ್ಟ್ಗಳನ್ನು ಕದ್ದಿದ್ದೆ ಅವರ ನಗುವಿನ ಮೂಲಕ. ಸೋಷಿಯಲ್ ಮೀಡಿಯಾದಲ್ಲಂತು ಮೈ ಕ್ರಶ್, ಬ್ಯೂಟಿಫುಲ್ ಸ್ಮೆಲ್ ಅಂತೆಲ್ಲಾ ಹುಡುಗ್ರು ರುಕ್ಮಿಣಿ ಅವರ ವಿಡಿಯೋಗಳನ್ನು ಹಾಕಿಕೊಳ್ಳುತ್ತಾರೆ. ಆ ನಗುವಿನ ಹಿಂದಿನ ರಹಸ್ಯವೇ ಅವರ ತಂಗಿಯAತೆ. `ನನ್ನ ತಂಗಿ ಫೋಟೋ ತೆಗೆಯುತ್ತಾಳೆ. ಆಗ ನಗುವನ್ನು ಮೂಡಿಸುತ್ತಾಳೆ. ನಗುವಿನ ಬಗ್ಗೆ ಏನೆ ಕ್ರೆಡಿಟ್ ಇದ್ದರು ಅದೆಲ್ಲವೂ ನನ್ನ ತಂಗಿಗೆ ಹೋಗಬೇಕು’ ಎಂದಿದ್ದಾರೆ.
* ಟ್ರೋಲ್ ಬಗ್ಗೆ ರುಕ್ಮಿಣಿಗೆ ಇರುವ ಅಭಿಪ್ರಾಯವೇನು..?
ನಟಿಮಣಿಯರು ಎಂದಾಕ್ಷಣಾ ಟ್ರೋಲಿಗರಿಗೆ ಮೃಷ್ಟಾನ್ನ ಭೋಜನವೇ ಸರಿ. ಪಾಸಿಟಿವ್ ಆಗಿ ಟ್ರೋಲ್ ಮಾಡಿದರೆ ಓಕೆ. ಅವರಿಗೂ ಮನಸ್ಸಿದೆ, ನೋವಾಗುತ್ತದೆ ಎಂಬುದನ್ನು ಮರೆತು, ಓಡುವ ಕಂಟೆAಟ್ ಮಾತ್ರ ಯೋಚನೆ ಮಾಡಿ, ನೆಗೆಟಿವ್ ಟ್ರೋಲ್‌ಗಳನ್ನೇ ಮಾಡುತ್ತಾರೆ. ಈ ರೀತಿಯಾದ ಟ್ರೋಲ್‌ಗಳಿಂದ ಎಷ್ಟೋ ನಟಿಯರು ಬೇಸರ ಮಾಡಿಕೊಂಡಿದ್ದಾರೆ. ಆದರೆ ರುಕ್ಮಿಣಿ ವಸಂತ್ ಅವರಿಗೆ ಹೆಚ್ಚು ಬಂದಿದ್ದೆ ಪಾಸಿಟಿವ್ ಟ್ರೋಲ್‌ಗಳು. `ನಂಗು ಕೂಡ ನೆಗೆಟಿವ್ ಟ್ರೋಲ್ ಆಗಿದೆ. ಅದು ತುಂಬಾ ಕಡಿಮೆ. ಪಬ್ಲಿಕ್ ಫಿಗರ್ ಆಗಿದ್ದಾಗ, ಟ್ರೋಲ್ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು. ಟ್ರೋಲ್‌ಗಿಂತ ಜಾಸ್ತಿ ಅಭಿಮಾನಿಗಳು, ನಮ್ಮ ಪರ್ಫಾಮೆನ್ಸ್, ನಮ್ಮ ಸಿನಿಮಾವನ್ನು ಖುಷಿಪಟ್ಟು ನೋಡಿದಾಗ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಾಗ ಅದಕ್ಕೆ ಹೆಚ್ಚಿನ ಗಮನ ನೀಡಬೇಕು. ನಾನು ಕೂಡ ಅದನ್ನೇ ಪಾಲಿಸ್ತೀನಿ. ಪಾಸಿಟಿವ್ ಟ್ರೋಲ್‌ಗಳು ಆದಾಗ ಅದಕ್ಕೊಂದು ಕೃತಜ್ಞತೆ ನಮ್ಮ ಕಡೆಯಿಂದ ಇರಬೇಕು’ ಎಂದಿದ್ದಾರೆ.
* `ಬಘೀರ’ ಸಿನಿಮಾದಲ್ಲೂ ಮನದಲ್ಲಿ ಉಳಿಯುವಂತ ಪಾತ್ರ
ರುಕ್ಮಿಣಿ ವಸಂತ್ ಈಗ ಡಿಮ್ಯಾಂಡ್ ಇರುವ ನಟಿ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಶ್ರೀಮುರುಳಿಯವರ ಬಿಗ್ ಬಜೆಟ್ ಸಿನಿಮಾ ಬಘೀರದಲ್ಲೂ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇನ್ಯಾವ ರೀತಿಯ ಪಾತ್ರದಲ್ಲಿ ನೋಡುಗರ ಮನಸ್ಸನ್ನು ಗೆಲ್ಲುತ್ತಾರೋ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇದ್ದೆ ಇರುತ್ತದೆ. ಅದಕ್ಕೆ ಉತ್ತರಿಸಿರುವ ನಟಿ ರುಕ್ಮಿಣಿ, `ಬಘೀರ ಬಗ್ಗೆ ಜಾಸ್ತಿ ಮಾತನಾಡುವಂಗಿಲ್ಲ. ನನ್ನ ಅದೃಷ್ಟ ಏನು ಅಂದ್ರೆ ನನಗೆ ಸಿಕ್ಕಿರುವಂತ ಪಾತ್ರಗಳು ತುಂಬಾ ತುಂಬಾ ವಿಭಿನ್ನವಾಗಿದೆ. ಸಪ್ತಸಾಗರದಾಚೆ ಯೆಲ್ಲೋ ಒಂದು ಥರದ ಪಾತ್ರಗಳಾದರೆ, ಬಾನದಾರಿಯಲಿ ಇನ್ನೊಂದು ತರದ ಪಾತ್ರವಾಗಿದೆ. ಈಗ ಬಘೀರದಲ್ಲೂ ಒಂದು ರೀತಿಯ ವಿಭಿನ್ನ ಪಾತ್ರವೇ ಇದೆ. ತುಂಬಾ ಪ್ರಬುದ್ಧತೆಯ ಪಾತ್ರ ಅದು. ಪಾತ್ರಕ್ಕಿಂತ ಬಘೀರನಲ್ಲಿ ಕಥೆ ತುಂಬಾ ಇಷ್ಟವಾಗುತ್ತದೆ. ಶ್ರೀಮುರುಳಿ ಅಭಿಮಾನಿಗಳಿಗೆ ಮಾತ್ರವಲ್ಲ, ಕನ್ನಡಾಭಿಮಾನಿಗಳಿಗೂ ಈ ಸಿನಿಮಾ ತುಂಬಾನೇ ಇಷ್ಟವಾಗುತ್ತದೆ’ ಎಂಬ ಭರವಸೆ ನೀಡಿದ್ದಾರೆ.
* ಶಿವಣ್ಣರ ಎನರ್ಜಿಗೆ ಫಿದಾ
ಶಿವಣ್ಣ ಅಂದ್ರೆ ಎನರ್ಜಿ.. ಎನರ್ಜಿ ಅಂದರೆ ಶಿವಣ್ಣ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಅದೇ ಎನರ್ಜಿಯನ್ನು ತೀರಾ ಹತ್ತಿರದಿಂದ ನೋಡಿದಾಗ ವಾವ್ ಎನಿಸದೆ ಇರುವುದಿಲ್ಲ, ಸ್ಪೂರ್ತಿಯಾಗದೆ ಇರುವುದಿಲ್ಲ. ರುಕ್ಮಿಣಿ ವಸಂತ್, ಶಿವಣ್ಣ ಅಭಿನಯದ `ಭೈರತಿ ರಣಗಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ ಜೊತೆಗೆ ಸ್ಕ್ರೀನ್ ಶೇರ್ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಫ್ತಿ ಆದ ಮೇಲೆ ಶಿವಣ್ಣ ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ನೀಡುತ್ತಾರೆ. ಇಂಥದ್ದೊಂದು ಪಾತ್ರದಲ್ಲಿ ಶಿವಣ್ಣರನ್ನು ನೋಡುವುದಕ್ಕೆ ಅಭಿಮಾನಿಗಳೇ ಕಾಯುತ್ತಿದ್ದಾರೆ. ಶಿವಣ್ಣ ಶೂಟಿಂಗ್ ಟೈಮ್‌ನಲ್ಲಿ ತುಂಬಾ ವಿಚಾರಗಳನ್ನು ಹೇಳುತ್ತಾ ಇರುತ್ತಾರೆ. ಇಂಡಸ್ಟ್ರಿಗೆ ಬಗ್ಗೆ, ಅಣ್ಣಾವ್ರ ಬಗ್ಗೆ. ಎಲ್ಲರನ್ನು ಜೊತೆಗೆ ಕೂತುಕೊಂಡು ಚೆನ್ನಾಗಿ ಮಾತನಾಡುತ್ತಾರೆ ಎಂದು ಶಿವಣ್ಣ ಜೊತೆಗಿನ ಶೂಟಿಂಗ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
* ವಿಜಯ್ ಸೇತುಪತಿಯಿಂದ ಸ್ಪೂರ್ತಿ ಪಡೆದ ರುಕ್ಮಿಣಿ
ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಫೇಮಸ್ ಆದ ಬಳಿಕ ತಮಿಳಿನಲ್ಲೂ ಅವಕಾಶ ಪಡೆದಿರುವ ನಟಿ ರುಕ್ಮಿಣಿ, ಈಗಾಗಲೇ ವಿಜಯ್ ಸೇತುಪತಿ ಜೊತೆಗೆ ಸಿನಿಮಾದ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಕನ್ನಡದ ನಟಿ, ತಮಿಳಿಗೆ ಹೋದಾಗ ಅಲ್ಲಿ ಭಾಷೆಯ ಆಡಿಷನ್ ಕೂಡ ಮಾಡಲಾಗಿತ್ತಂತೆ. ಅದರಲ್ಲೂ ಪಾಸ್ ಆದ ನಟಿ ರುಕ್ಮಿಣಿ, ಖುಷಿ ಖುಷಿಯಾಗಿಯೇ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಜೊತೆಗೆ ವಿಜಯ್ ಸೇತುಪತಿ ಅವರ ಹಾರ್ಡ್ ವರ್ಕ್ ಕಂಡು ನಿಬ್ಬೆರಗಾಗಿದ್ದಾರೆ. ವಿಜಯ್ ಸೇತುಪತಿ ಅವರು ಪ್ರತಿ ಸೀನ್ ಅನ್ನು ಹೊಸತನದಂತೆ ಫೀಲ್ ಮಾಡುತ್ತಾರಂತೆ. ಅವರ ಡೆಡಿಕೇಷನ್ ನೋಡಿ ಸಾಕಷ್ಟು ಕಲಿತಿದ್ದೀನಿ ಎನ್ನುತ್ತಾರೆ ರುಕ್ಮಿಣಿ.
* ಕನ್ನಡದ ಮೇಲೆ ಪ್ರೀತಿ.. ಬೇರೆ ಭಾಷೆಯಲ್ಲೂ ಫುಲ್ ಡಿಮ್ಯಾಂಡ್..
ರುಕ್ಮಿಣಿ ವಸಂತ್ ಅವರಿಗೆ ಈಗಾಗಲೇ ಬೇರೆ ಭಾಷೆಯಿಂದಾನೂ ಸಾಕಷ್ಟು ಆಫರ್‌ಗಳು ಬಂದಿವೆ. ಬಂದಂತ ಅವಕಾಶಗಳನ್ನೆಲ್ಲಾ ಕಣ್ಮುಚ್ಚಿ ಒಪ್ಪಿಕೊಳ್ಳುವುದಿಲ್ಲ ರುಕ್ಮಿಣಿ. ಹಾಗಾಗಿ ಕಥೆಗಳನ್ನು ಕೇಳುತ್ತಿದ್ದಾರೆ. ಅದರ ಜೊತೆಗೆ ಕನ್ನಡದ ಮೇಲೆ ಅತಿಯಾದ ಪ್ರೀತಿ ಇವರಿಗೆ. ಕನ್ನಡ ಮಾತೃಭಾಷೆಯಾಗಿರುವ ಕಾರಣ, ಸೆಟ್‌ನಲ್ಲಿ ಮನೆಯಂತೆ ಇರಬಹುದು. ಮಾತನಾಡಿಕೊಂಡು, ಚರ್ಚೆ ಮಾಡಿಕೊಂಡು. ಆದರೆ ಬೇರೆ ಭಾಷೆಗೆ ಹೋದಾಗ ಅಲ್ಲಿನ ಹೊಸತನ, ಭಾಷೆ, ಅಪರಿಚಿತರು ಈ ಎಲ್ಲವೂ ವಿಚಾರಗಳಾಗುತ್ತವೆ. ಹೀಗಾಗಿಯೇ ಹೆಚ್ಚು ಕಂಫರ್ಟಬಲ್ ಇರುವ ಜಾಗದಲ್ಲಿ ನಟಿಸಲು ಇಷ್ಟ ಎನ್ನುತ್ತಾರೆ.
* ಲವ್ ಸ್ಟೋರಿಗಳೇ ಕನಸಿನ ಸಿನಿಮಾಗಳು
ಎಷ್ಟೋ ನಟ-ನಟಿಯರಿಗೆ ಒಂದಿಷ್ಟು ಕನಸಿನ ಪಾತ್ರಗಳು ಅಂತ ಇರುತ್ತವೆ. ಆ ಕನಸಿನ ಪಾತ್ರಗಳು ಹುಡುಕಿದರು ಸಿಗುವುದಿಲ್ಲ. ಆದರೆ ರುಕ್ಮಿಣಿ ವಸಂತ್ ಕನಸಿನ ಪಾತ್ರವೇ ಲವ್ ಸ್ಟೋರಿಗಳಲ್ಲಿ ಅಭಿನಯಿಸುವುದು. ಆರಂಭದ ಸಿನಿಮಾಗಳಿಂದಾನೇ ಕನಸಿನ ಪಾತ್ರಗಳ ಮೂಲಕವೇ ಕಾಣಿಸಿಕೊಂಡಿದ್ದಾರೆ. ಇದು ಅತ್ಯಂತ ಸಂತಸದ ವಿಚಾರವೇ ಆಗಿದೆ. ಒಂದೊಳ್ಳೆ ಟೀಂ ಜೊತೆಗೆ, ಒಲ್ಳೆ ಲವ್ ಸ್ಟೋರಿಗಳಿರುವಂತ ಸಿನಿಮಾಗಳು ಬಂದರೆ ಖುಷಿಯಿಂದ ಮಾಡ್ತೀನಿ ಅಂತಾರೆ.
* ನಟಿಯರಾಗಬೇಕೆಂದವರಿಗೆ ರುಕ್ಮಿಣಿ ಸಲಹೆ
ಸಿನಿಮಾ ಜಗತ್ತು ಕಲರ್ ಫುಲ್. ದೂರದಿಂದ ನೋಡಿದವರು ಕಲರ್ ಫುಲ್ ಜಗತ್ತಿಗೆ ಪಯಣ ಬೆಳೆಸಬೇಕೆಂದುಕೊಳ್ಳುತ್ತಾರೆ. ಆದರೆ ಸೋಲು-ಗೆಲುವು, ಅವಮಾನ-ಕುಗ್ಗುವಿಕೆ ಎಲ್ಲದನ್ನು ಎದುರಿಸಬೇಕಾಗುತ್ತದೆ. ಹೊಸದಾಗಿ ಇಂಡಸ್ಟ್ರಿಗೆ ಬರುತ್ತಿರುವವರಿಗೆ ನಿಮ್ಮ ಸಲಹೆ ಏನು ಎಂದಾಗ ರುಕ್ಮಿಣಿ ವಸಂತ್ ಹೇಳಿದ್ದಿಷ್ಟು, `ಸಲಹೆಗಳನ್ನು ಕೊಡುವುದಕ್ಕೆ ತುಂಬಾ ಚಿಕ್ಕವಳು ನಾನು. ಆದರೆ ಇಂಡಸ್ಟಿçಗೆ ಬರುವವರು ತುಂಬಾ ತಾಳ್ಮೆಯಿಂದ ಇರಬೇಕು. ಬ್ರೇಕ್ ಯಾವಾಗ ಸಿಗುತ್ತೆ ಎಂಬುದು ಗೊತ್ತಾಗಲ್ಲ. ಯಾವ ಅವಕಾಶಗಳು ಸಿಗುತ್ತವೋ ಅದನ್ನೇ ಬಳಸಿಕೊಳ್ಳಬೇಕು. ಬಂದಿದ್ದ ಪಾತ್ರಗಳಿಗೆ ಜೀವ ತುಂಬುತ್ತಾ ಸಾಗಿದರೆ ಖಂಡಿತ ಗೆಲುವು ಸಿಗುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ :ಕರುಣೆಯೇ ಕುಟುಂಬದ ಕಣ್ಣು : ಸಿನಿಮಾದ ಸ್ವಾರಸ್ಯಕರ ವಿಚಾರಗಳು ಇಲ್ಲಿವೆ
* ಸಿಕ್ಕ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವುದು ಹೇಗೆ..?
`ಜನ ಒಳ್ಳೆ ಸಿನಿಮಾಗಳಿಗೆ, ಒಳ್ಳೆಯ ಪಾತ್ರಗಳಿಗೆ ರೆಸ್ಪಾಂಡ್ ಆಗುತ್ತಾರೆ. ಹೀಗಾಗಿ ನನ್ನ ಸಿನಿಮದಲ್ಲಿ ಅಯ್ಕೆಗಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಒಂದೊಳ್ಳೆ ಟೀಂ ಜೊತೆಗೆ ಒಂದೊಳ್ಳೆ ಕಥೆಯನ್ನು ಮಾಡಬೇಕು. ಪಾಪ್ಯೂಲಾರಿಟಿಗಿಂತ ಅಪ್ರಿಷಿಯೇಷನ್. ತುಂಬಾ ಖುಷಿಯ ವಿಚಾರ ಏನು ಅಂದ್ರೆ ಜನ ನನ್ನ ಆಕ್ಟಿಂಗ್‌ಗೆ ಅಪ್ರಿಶಿಯೇಷನ್ ಮಾಡುತ್ತಿದ್ದಾರೆ. ಇನ್ನಷ್ಟು ಚಾಲೆಂಜಿಂಗ್ ಪಾತ್ರಗಳನ್ನು ಆಯ್ಕೆ ಮಾಡಿದಾಗ ಜನ ಖಂಡಿತ ಮತ್ತೆ ಇಷ್ಟ ಪಡುತ್ತಾರೆ. ನಂಗೆ ಬೇರೆ ಬೇರೆ ತರದ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟವಿದೆ. ಪುಟ್ಟಿ ಪಾತ್ರವಾದ ಮೇಲೆ ಆಫರ್‌ಗಳು ತುಂಬಾ ಬರುತ್ತಾ ಇದೆ. ಪುಟ್ಟಿ ತರದ್ದೆ ಪಾತ್ರಗಳಿಗೆ ಮತ್ತೆ ಮತ್ತೆ ಅವಕಾಶ ಬರುತ್ತೆ. ಆದರೆ ನಂಗೆ ಬೇರೆ ಬೇರೆ ಪಾತ್ರಗಳನ್ನು ಮಾಡುವಾಸೆ. ಹೀಗಾಗಿ ರಿಪೀಟ್ ಪಾತ್ರ ಒಪ್ಪಿಕೊಂಡಿಲ್ಲ’ ಎಂದು ಹೇಳುವ ಮೂಲಕ, ಇನ್ನು ಮುಂದೆ ಸಿನಿಮಾದ ಕಥೆಗಳ ಆಯ್ಕೆಯಲ್ಲಿ ಹುಷಾರಾಗಿ ಇರುತ್ತೀನಿ ಎಂದಿದ್ದಾರೆ.
* ಬ್ರೇಕ್ ಸಿಕ್ಕರೆ ರುಕ್ಮಿಣಿ ಏನ್ಮಾಡ್ತಾರೆ ಗೊತ್ತಾ..?
ಸಿನಿಮಾ ಇಂಡಸ್ಟ್ರಿಗೆಯಲ್ಲಿ ಇರುವವರಿಗೆ, ಅದರಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡವರಿಗೆ ಫ್ಯಾಮಿಲಿ ಎನ್ನುವುದು ಮರೀಚಿಕೆಯಾಗಿ ಬಿಡುತ್ತದೆ. ಬೆಳಗ್ಗೆ ಆದರೆ ಶೂಟಿಂಗ್, ರಾತ್ರಿಯಾದರೆ ಶೂಟಿಂಗ್ ಇರುತ್ತದೆ. ಒಂದಿನ ರಜೆ ಸಿಕ್ಕರೂ ಹೆಚ್ಚೆ. ಗ್ಯಾಪ್ ಸಿಕ್ಕರೂ ನಿದ್ದೆ ಮಾಡಿದರೇನೆ ಸಾಕಾಗಿರುತ್ತದೆ. ಆದರೆ ಹಾಗೋ ಹೀಗೋ ಬ್ರೇಕ್ ಸಿಕ್ಕಾಗ ರುಕ್ಮಿಣಿ ವಸಂತ್ ಹೆಚ್ಚು ಸಮಯ ನೀಡುವುದು ಫ್ಯಾಮಿಲಿಗೆ. ತಂಗಿ ಹಾಗೂ ಅಮ್ಮನ ಜೊತೆಗೆ ಆಗು-ಹೋಗುಗಳನ್ನು ಹಂಚಿಕೊಂಡು ಸಂತಸವಾಗಿರಲು ಇಷ್ಟಪಡುತ್ತಾರೆ.
* ಸೀರೆಗಳನ್ನು ಇಷ್ಟಪಡುವ ರುಕ್ಮಿಣಿ ವಸಂತ್
ನಟಿಯರು ಎಂದಾಕ್ಷಣಾ ಸಾಮಾನ್ಯ ಜನರ ಆಸಕ್ತಿ ಬೆಳೆಯುವುದು ಅವರಿಗೆ ಯಾವ ಥರದ ಡ್ರೆಸ್‌ಗಳು ಇಷ್ಟವಾಗುತ್ತವೆ ಎಂಬುದರ ಮೇಲೆ. ರುಕ್ಮಿಣಿ ವಸಂತ್ ಅವರಿಗೆ ಸೀರೆಗಳೆಂದರೆ ತುಂಬಾ ಇಷ್ಟವಂತೆ. ಅದರಲ್ಲೂ ಅವರ ಅಮ್ಮನ ಸೀರೆ, ಅಜ್ಜಿಯ ಸೀರೆಗಳನ್ನು ಉಡುವುದರಲ್ಲಿಯೇ ಹೆಚ್ಚು ಖುಷಿಯಂತೆ. ಸೀರೆಯಲ್ಲಿಯೇ ಹೆಚ್ಚು ಕಂಫರ್ಟಬಲ್ ಆಗಿ ಇರುತ್ತಾರಂತೆ. ಅವರ ಸೋಷಿಯಲ್ ಮೀಡಿಯಾ ತಿರುವಿ ಹಾಕಿದರು ಅವರ ಸೀರೆಯಲ್ಲಿರುವ ಫೋಟೋಗಳೆ ಹೆಚ್ಚಾಗಿ ಕಾಣಿಸುತ್ತವೆ.
* ರುಕ್ಮಿಣಿ ವಸಂತ್ ಇಷ್ಟದ ಹೀರೋ ರಕ್ಷಿತ್ ಶೆಟ್ಟಿ
ಸಿನಿ ಪ್ರೇಕ್ಷಕರಿಗೆ ಮಾತ್ರವಲ್ಲ ತೆರೆಮೇಲೆ ಇರುವವರಿಗೂ ಇಂಡಸ್ಟಿçಯಲ್ಲಿ ಕೆಲವು ನಟರು ಫೇವರಿಟ್ ಆಗಿರುತ್ತಾರೆ. ಅದರಂತೆ ರುಕ್ಮಿಣಿ ವಸಂತ್ ಅವರಿಗೂ ಒಬ್ಬರು ಫೇವರಿಟ್ ನಟ ಇದ್ದಾರೆ. ಅವರೇ ರಕ್ಷಿತ್ ಶೆಟ್ಟಿ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ನಾಯಕ ನಟ. ತಮ್ಮ ಜೊತೆಗಿನ ನಟಿಯರಿಗೆ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಡುವುದು ಬಹಳ ಮುಖ್ಯವಾಗುತ್ತದೆ. ರಕ್ಷಿತ್ ಶೆಟ್ಟಿ ಆ ಕೆಲಸವನ್ನು ಮಾಡಿದ್ದಾರೆ. ರುಕ್ಮಿಣಿ ವಸಂತ್ ಅವರಿಗೆ ಕೆಲವೊಂದು ಸಲ ಪಾತ್ರದ ವಿವರಣೆ ನೀಡುವಾಗಲೂ ಅವರಿಗಿದ್ದ ತಾಳ್ಮೆಯೇ ಸ್ಪೂರ್ತಿಯಾಗಿತ್ತಂತೆ. ಪಾತ್ರ ತುಂಬಾ ಎಮೋಷನಲ್ ಆಗಿದ್ದಂತು. ಈ ಪಾತ್ರಕ್ಕೆ ಮತ್ತಷ್ಟು ಜೀವ ಬಂದಿದ್ದೆ ರಕ್ಷಿತ್ ಶೆಟ್ಟಿ ಅವರ ಬೆಂಬಲದಿಂದ ಎನ್ನುತ್ತಾರೆ ರುಕ್ಮಿಣಿ ವಸಂತ್.
* ಅಪ್ಪು ಎಂದರೆ ಸ್ಪೂರ್ತಿ
ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರು ನಮ್ಮ ಜೊತೆಗೆ ದೈಹಿಕವಾಗಿ ಇಲ್ಲ. ಆದರೆ ಸಾಮಾನ್ಯರಿಂದ ಹಿಡಿದು, ಇಂಡಸ್ಟಿçಯಲ್ಲಿ ಲೈಟ್ ಬಾಯ್‌ನಿಂದ ನಿರ್ದೇಶಕರ ತನಕವೂ ಒಂದಲ್ಲ ಒಂದು ವಿಚಾರಕ್ಕೆ ಸ್ಪೂರ್ತಿಯಾಗಿದ್ದಾರೆ. ಅವರು ದೈಹಿಕವಾಗಿ ಹೋದ ಮೇಲಂತು ಅವರ ಸಹಾಯದ ಗುಣಗಳನ್ನು ತಿಳಿದು ಇನ್ನಷ್ಟು ಸ್ಪೂರ್ತಿ ಪಡೆದವರೆ ಹೆಚ್ಚು. ಇಂಥಹ ದೊಡ್ಡ ಗುಣಗಳೇ ರುಕ್ಮಿಣಿ ವಸಂತ್ ಅವರಿಗೂ ಸ್ಪೂರ್ತಿಯಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಪುನೀತ್ ಅವರನ್ನು ಒಟ್ಟಿಗೆ ಒಮ್ಮೆ ಭೇಟಿ ಮಾಡಿರುವುದೇ ಜೀವನದ ಅತ್ಯಂತ ಸುಂದರವಾದ ಕ್ಷಣ ಎಂದಿದ್ದಾರೆ.
* ರುಕ್ಮಿಣಿ ವಸಂತ್ ಅವರನ್ನು ಕಾಡುವ ತೇಜು
ಸಿನಿಮಾ ಮನರಂಜನೆ ಮಾತ್ರವಲ್ಲ. ಅದರಲ್ಲಿ ಸಮಾಜದ ಬದಲಾವಣೆಯ ಒಂದು ಸಂದೇಶವೂ ಇರುತ್ತದೆ. ಅಂಥ ಸಂದೇಶಗಳನ್ನು ಹೊತ್ತ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಭಿನಯಿಸುವುದಲ್ಲ ಜೀವಿಸುವುದು ಬಹಳ ಮುಖ್ಯವಾಗುತ್ತದೆ. `ಗಂಟುಮೂಟೆ’ ಸಿನಿಮಾ ನೋಡಿದವರಿಗೆ ತೇಜು ಬೆಳವಾಡಿ ಖಂಡಿತಾ ಮನಸ್ಸಲ್ಲಿ ಉಳಿಯುತ್ತಾರೆ. ಪ್ರಸ್ತುತ ಜನಪ್ರಿಯತೆ ಪಡೆದು, ಬೇಡಿಕೆಯ ನಟಿಯಾಗಿರುವ ರುಕ್ಮಿಣಿ ವಸಂತ್ ಅವರನ್ನು ತೇಜು ಅವರ ಪಾತ್ರ ತುಂಬಾ ಕಾಡಿದೆಯಂತೆ.