ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಹೀಗಿತ್ತು.
ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.
ರೆಡ್ ಕಾರ್ಪೆಟ್ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.
ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು
ವಿಶಿಷ್ಟ ಸಂಗೀತ ಸಾಧಕರಿಗೆ ವಿಶೇಷ ಪ್ರಶಸ್ತಿ
ಚಂದನವನವನ್ನು ಅನೇಕ ಸಂಗೀತ ಸಾಧಕರು ತಮ್ಮ ಕಲಾಸೇವೆಯಿಂದ ಸಮೃದ್ಧಗೊಳಿಸಿದ್ದಾರೆ. ಹಿರಿಯರು ಸ್ಫೂರ್ತಿಯ ಸೆಲೆಯಾದರೆ, ಕಿರಿಯರು ಎಳೆಯದರಲ್ಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಚಿತ್ತಾರದ ಪರಂಪರೆಯಂತೆ ಈ ಬಾರಿಯೂ ಅನೇಕ ಸಂಗೀತ ಸಾಧಕರನ್ನು ‘ಚಿತ್ತಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಯಿತು. ಈ ಬಾರಿಯ ಆ ವಿಶೇಷ ಸಾಧಕರ ಪರಿಚಯ ಇಲ್ಲಿದೆ..
‘Listener Favorite Song’ / ‘ನಂಗೆ ಅಲ್ಲವಾ / ಸಂಜಿತ್ ಹೆಗ್ಡೆ
ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಸೆನ್ಸೇಷನ್ ಕ್ರಿಯೇಟ್ ಮಾಡಿದ ಕನ್ನಡದ ಯುವ ಗಾಯಕ ಹಾಗೂ ಸಂಯೋಜಕ ಶ್ರೀ ಸಂಜಿತ್ ಹೆಗ್ಡೆ. ಕನ್ನಡ ರಿಯಾಲಿಟಿ ಶೋವೊಂದರ ಮೂಲಕ ಕೇಳುಗರ ಗಮನ ಸೆಳೆದ ಸಂಜಿತ್ ಆ ಶೋ ನಲ್ಲಿ ಕೊನೆಯವರೆಗೂ ತಲುಪಿ ಗೆಲ್ಲಲಿಲ್ಲ. ಆದರೆ ರಿಯಾಲಿಟಿಯಲ್ಲಿ ಅವರು ಪಡೆದ ಗೆಲುವು, ಜನಪ್ರಿಯತೆ ಊಹೆಗೂ ಮೀರಿದ್ದು.
ಚರಣ್ ರಾಜ್ ಸಂಯೋಜನೆಯ ‘ದಳಪತಿ‘ ಚಿತ್ರದ ಗುನು ಗುನುಗು ಎಂಬ ಹಾಡಿನ ಮೂಲಕ ಹಿನ್ನೆಲೆ ಗಾಯಕರಾಗಿ ಸಂಜಿತ್ ಪರಿಚಯವಾದರು. ತಮ್ಮ ವಿಶಿಷ್ಟ ಧ್ವನಿ ಮತ್ತಿ ಹಾಡುಗಾರಿಕೆಯಿಂದ ಮೊದಲ ಹಾಡಿಂದಲೇ ಗುಂಗು ಹಿಡಿಸಿದರು.
ಮರಳಿ ಮನಸಾಗಿದೆ, ಕುಶ್ ಕುಶ್ ಇವ ಜಾದೂಗಾರ, ಶಾಕುಂತ್ಲೆ ಸಿಕ್ಕಳು, ಹೃದಯಕೆ ಹೆದರಿಕೆ, ನಟಸಾರ್ವಭೌಮ.. ಹಿ ಇಸ್ ಕಿಂಗ್ ಆಫ್ ದಿ ಸಿನಿಮಾ, ಕಣ್ಮಣಿಯೇ, ನೆನ್ನೆ ತನಕ, ಬೆಳಕಿನ ಕವಿತೆ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಹಾಡುಗಳು ಇವರ ಧ್ವನಿಯಲ್ಲಿ ಜೀವ ಪಡೆದಿದೆ.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ನಲ್ಲೂ ಸಂಜಿತ್ ಹಾಡುವ ಮೂಲಕ ಬಹುಭಾಷಾ ಗಾಯಕರಾಗಿದ್ದಾರೆ. ಅತಿ ಕಡಿಮೆ ಅವಧಿಯಲ್ಲೂ 50 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಜಿತ್ ಹಾಡಿದ್ದಾರೆ.
ಇದರೊಂದಿಗೆ ಸಿಂಗಲ್ಸ್ ಮೂಲಕವು ಸಂಜಿತ್ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ನಾಗಾರ್ಜುನ ಶರ್ಮಾ ಸಾಹಿತ್ಯಕ್ಕೆ ಸಂಜಿತ್ ಸಂಗೀತ ಸಂಯೋಜಿಸಿ, ಹಾಡಿದ ‘ನಂಗೆ ಅಲ್ಲವಾ‘ ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದಿದೆ.
ಯುವ ಗಾಯಕ ಶ್ರೀ ಸಂಜಿತ್ ಹೆಗ್ಡೆ ಅವರಿಗೆ, ಅವರದೇ ಸಂಯೋಜನೆಯ ‘ನಂಗೆ ಅಲ್ಲವಾ ಹಾಡಿಗೆ ‘Listener Favorite Song’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

