ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಹೀಗಿತ್ತು.
ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.
ರೆಡ್ ಕಾರ್ಪೆಟ್ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.
ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು
ವಿಶಿಷ್ಟ ಸಂಗೀತ ಸಾಧಕರಿಗೆ ವಿಶೇಷ ಪ್ರಶಸ್ತಿ
ಚಂದನವನವನ್ನು ಅನೇಕ ಸಂಗೀತ ಸಾಧಕರು ತಮ್ಮ ಕಲಾಸೇವೆಯಿಂದ ಸಮೃದ್ಧಗೊಳಿಸಿದ್ದಾರೆ. ಹಿರಿಯರು ಸ್ಫೂರ್ತಿಯ ಸೆಲೆಯಾದರೆ, ಕಿರಿಯರು ಎಳೆಯದರಲ್ಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಚಿತ್ತಾರದ ಪರಂಪರೆಯಂತೆ ಈ ಬಾರಿಯೂ ಅನೇಕ ಸಂಗೀತ ಸಾಧಕರನ್ನು ‘ಚಿತ್ತಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಯಿತು. ಈ ಬಾರಿಯ ಆ ವಿಶೇಷ ಸಾಧಕರ ಪರಿಚಯ ಇಲ್ಲಿದೆ..
Sensational Music Director / ಚರಣ್ ರಾಜ್
ಕನ್ನಡ ಚಿತ್ರರಂಗದಲ್ಲಿ ಪ್ರತಿ ಚಿತ್ರದಲ್ಲೂ ಹೊಸ ಶೈಲಿಯ ಸಂಗೀತ ನೀಡುತ್ತಾ ತಮ್ಮ ಅಗಾಧ ಪ್ರತಿಭೆಯನ್ನು ಪರಿಚಯಿಸುತ್ತಿರುವ ಸಂಗೀತ ನಿರ್ದೇಶಕ ಚರಣ್ ರಾಜ್.
ಮೂಲತಃ ಮೈಸೂರಿನವರಾದ ಚರಣ್ ರಾಜ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ. 2008 ರಲ್ಲಿ ‘ತಾಳಂ‘ ಎಂಬ ಮಲಯಾಳಂ ಆಲ್ಬಂ ಮಾಡಿದರು. ‘ಹರಿವು‘ ಇವರು ಸಂಗೀತ ಸಂಯೋಜಿಸಿದ ಚೊಚ್ಚಲ ಕನ್ನಡ ಚಿತ್ರ. ಅನಂತರ ಇವರ ಸಂಯೋಜನೆಯ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು‘ ಚಿತ್ರದ ಹಾಡುಗಳ ಜನಪ್ರಿಯತೆ ಇವರ ಮ್ಯೂಸಿಕಲ್ ಜರ್ನಿಗೆ ಹೊಸ ವೇಗ ನೀಡಿತು. ಪುಷ್ಪಕ ವಿಮಾನ, ಟಗರು, ಜೀರ್ಜಿಂಬೆ, ಕವಲುದಾರಿ, ಅವನೇ ಶ್ರೀಮನ್ನಾರಾಯಣ, ಪಾಪ್ ಕಾರ್ನ್ ಮಂಕಿ ಟೈಗರ್, ಸಪ್ತ ಸಾಗರದಾಚೆ ಎಲ್ಲೋ ಭಾಗ 1 ಮತ್ತು 2, ಸಲಗ, ಭೀಮಾ, ಎಕ್ಕ ಸೇರಿದಂತೆ ಸಾಕಷ್ಟು ಮ್ಯೂಸಿಕಲ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇವರ ಕ್ರಿಯೇಟಿವ್ ಕಂಪೋಸಿಷನ್ ಗಳಿಗೆ ಮನಸೋಲದವರಿಲ್ಲ. ಕ್ರಿಯಾಶೀಲ ಸಂಗೀತ ನಿರ್ದೇಶನ ಚರಣ್ ರಾಜ್ ಅವರಿಗೆ Sensational Music Director ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

