ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಹೀಗಿತ್ತು.
ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.
ರೆಡ್ ಕಾರ್ಪೆಟ್ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.
ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು
ವಿಶಿಷ್ಟ ಸಂಗೀತ ಸಾಧಕರಿಗೆ ವಿಶೇಷ ಪ್ರಶಸ್ತಿ
ಚಂದನವನವನ್ನು ಅನೇಕ ಸಂಗೀತ ಸಾಧಕರು ತಮ್ಮ ಕಲಾಸೇವೆಯಿಂದ ಸಮೃದ್ಧಗೊಳಿಸಿದ್ದಾರೆ. ಹಿರಿಯರು ಸ್ಫೂರ್ತಿಯ ಸೆಲೆಯಾದರೆ, ಕಿರಿಯರು ಎಳೆಯದರಲ್ಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಚಿತ್ತಾರದ ಪರಂಪರೆಯಂತೆ ಈ ಬಾರಿಯೂ ಅನೇಕ ಸಂಗೀತ ಸಾಧಕರನ್ನು ‘ಚಿತ್ತಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಯಿತು. ಈ ಬಾರಿಯ ಆ ವಿಶೇಷ ಸಾಧಕರ ಪರಿಚಯ ಇಲ್ಲಿದೆ..
Impact lyric writer / ಎ.ಪಿ. ಅರ್ಜುನ್
ಕನ್ನಡ ಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ನಿರ್ದೇಶಕರು ಮಾತ್ರ ಯಶಸ್ವಿ ನಿರ್ದೇಶಕ ಎನ್ನಿಸಿಕೊಳ್ಳುವುದರ ಜೊತೆಗೆ ಜನಪ್ರಿಯ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಅಂಥವರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಎ.ಪಿ. ಅರ್ಜುನ್. 2006 ರಲ್ಲಿ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ತಂಗಿಗಾಗಿ‘ ಚಿತ್ರದ ಮೂಲಕ ಚಿತ್ರಸಾಹಿತಿಯಾಗಿ ಅರ್ಜುನ್ ಬೆಳ್ಳಿತೆರೆಗೆ ಪರಿಚಯವಾದರು. 2009 ರಲ್ಲಿ ‘ಅಂಬಾರಿ‘ ಚಿತ್ರದ ಮೂಲಕ ನಿರ್ದೇಶಕರಾದ ಅರ್ಜುನ್ ತಮ್ಮ ಸಿನಿಮಾಗೆ ತಾವೇ ಹಾಡುಗಳನ್ನು ಬರೆದರು. ಇವರ ಬರೆದು ಹಾಡುಗಳೆಲ್ಲಾ ಸೂಪರ್ ಹಿಟ್ ಪಟ್ಟಿ ಸೇರಿದಾಗ ಸಹಜವಾಗಿಯೇ ಬಹುಬೇಡಿಕೆಯ ಚಿತ್ರಸಾಹಿತಿಯಾದರು. ಇವರ ನಿರ್ದೇಶನದ ಅಂಬಾರಿ, ಅದ್ದೂರಿ, ರಾಟೆ, ಕಿಸ್, ಐರಾವತ, ಕಿಸ್,ಮಾರ್ಟಿನ್ ಚಿತ್ರಗಳಿಗೆ ಹಾಡುಗಳನ್ನು ಬರೆದರು. ಪ್ರತಿ ಬಾರಿ ಮ್ಯೂಸಿಕಲ್ ಹಿಟ್ ಸಿನಿಮಾ ಕೊಟ್ಟರು. ಇದರ ಜೊತೆಗೆ ಬೇರೆ ನಿರ್ದೇಶಕರ ಸಿನಿಮಾಗಳಿಗೂ ಅರ್ಜುನ್ ಸಾಹಿತ್ಯ ರಚಿಸಿದ್ದಾರೆ. ಲವ್, ಪ್ಯಾಥೋ, ಮಾಸ್ ಸೇರಿದಂತೆ ಎಲ್ಲಾ ಶೈಲಿ ಹಾಡು ಬರೆದು ಗೆದ್ದ ಹಿರಿಮೆ ಇವರದ್ದು. ಅರ್ಜುನ್ ಪೆನ್ ಇಂದ ರಚನೆಯಾದ ಹಾಡುಗಳೆಲ್ಲಾ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸಿನಿಪ್ರಿಯರ ಮನಸು ಗೆದ್ದಿದೆ. ಅರ್ಜುನ್ ಚಿತ್ರಸಾಹಿತಿಯಾಗಿ ಮಾಡಿದ ಸಾಧನೆ ಗುರುತಿಸಿ ಶ್ರೀ ಎ.ಪಿ. ಅರ್ಜುನ್ ಅವರಿಗೆ Impact lyric writer ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

