ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಹೀಗಿತ್ತು.
ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.
ರೆಡ್ ಕಾರ್ಪೆಟ್ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.
ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು.
ಚಿತ್ತಾರ ಔಟ್‌ಸ್ಟಾಂಡಿಂಗ್ ಕಾಂಟ್ರುಬ್ಯೂಶನ್ ಟು ಕನ್ನಡ ಮ್ಯೂಸಿಕ್-2025 ಪ್ರಶಸ್ತಿ
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಶ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪ್ರವೇಶ ಪಡೆದ, ಚಂದನವನದ ಬಹುಮುಖ ಪ್ರತಿಭೆಯ ಹಾಸ್ಯ ನಟ ಸಾಧು ಕೋಕಿಲ. ಸ್ಟಾರ್ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಇವರ ಎಂಟ್ರಿಗೆ ವಿಶಲ್ ಬೀಳದ ಸಿನಿಮಾಗಳಿಲ್ಲ. ಕಳೆದ ಮೂರು ದಶಕಗಳಿಂದಲೂ ನಿರಂತರ ಬೇಡಿಕೆಯನ್ನು ಉಳಿಸಿಕೊಂಡ ಹಾಸ್ಯ ನಟ ಸಾಧು ಕೋಕಿಲ. ವಿಶೇಷವೆಂದರೆ ಕೇವಲ ಹಾಸ್ಯ ನಟರಷ್ಟೇ ಅಲ್ಲದೇ ಕನ್ನಡದ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ಇವರ ಸಂಗೀತಕ್ಕೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ. ಅಷ್ಟೇ ಅಲ್ಲದೇ ಇವರು ಸಾಕಷ್ಟು ಯಶಸ್ವೀ ಸಿನಿಮಾಗಳ ನಿರ್ದೇಶಕರೂ ಹೌದು. ನಟರಾಗಿ, ಸಂಗೀತ ನಿದೇಶಕರಾಗಿ, ಗಾಯಕರಾಗಿ, ಚಿತ್ರ ನಿರ್ದೇಶಕರಾಗಿ. ನಿರ್ಮಾಪಕರಾಗಿ ಕನ್ನಡ ಸಿನಿಮಾರಂಗದ ಬೆಳವಣಿಗೆಯಲ್ಲಿ ತಮ್ಮದೇ ಆದ ಹಲವಾರು ಕೊಡುಗೆಗಳನ್ನು ನೀಡಿರುವ ಸಾಧು ಕೋಕಿಲ ಅವರ ಸಿನಿ ಪಯಣದ ಸಾಧನೆಯನ್ನು ಅಭಿನಂದಿಸುತ್ತಾ, ಚಿತ್ತಾರ ಔಟ್‌ಸ್ಟಾಂಡಿಂಗ್ ಕಾಂಟ್ರುಬ್ಯೂಶನ್ ಟು ಕನ್ನಡ ಮ್ಯೂಸಿಕ್-2025 ಪ್ರಶಸ್ತಿ ನೀಡಿ ಗೌರವಿಸಿದೆ.
ʻಚಿತ್ತಾರ Best song of the year-2025 ಪ್ರಶಸ್ತಿ
ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಮೊದಲ ನಿರ್ಮಾಣದ ʻಜೊತೆ ಜೊತೆಯಲಿʼ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಬೆಳ್ಳಿತೆರೆಗೆ ಪರಿಚಯವಾದವರು ವಿ.ಹರಿಕೃಷ್ಣ. ಗಾಳಿಪಟ, ಜಾಕಿ, ಗಜ, ಜಂಗ್ಲಿ, ಸೂಪರ್, ಜೇಮ್ಸ್, ಕಾಟೇರ.. ಮುಂತಾದ ಹಿಟ್ ಚಿತ್ರಗಳಿಂದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಚಿತ್ರ ರಸಿಕರ ಮನ ಗೆದ್ದವರು ವಿ.ಹರಿಕೃಷ್ಣ. ಚಂದನವನದಲ್ಲಿ ಯಶಸ್ವೀ ನಿರ್ಮಾಪಕರಾಗಿ, ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಬಹು ಮುಖ ಪ್ರತಿಭೆಯ ವಿ.ಹರಿಕೃಷ್ಣ ಅವರು ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅಪ್ರತಿಮ ಸಾಧಕ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ಯೋಗರಾಜ್ ಭಟ್ ಸಾಹಿತ್ಯ ಮತ್ತು ನಿರ್ದೇಶನದ ‘ಕರಟಕ ದಮನಕ‘ ಚಿತ್ರದ ‘ಹಿತ್ತಲಕ ಕರಿಬ್ಯಾಡ ಮಾವ‘ ಹಾಡು ಇವರ ಸಂಗೀತದಿಂದ ಎಲ್ಲರ ಮನಸೂರೆಗೊಳಿಸಿತ್ತು. ಉತ್ತರ ಕರ್ನಾಟಕ ದೇಸಿ ಗಾಯಕ ಮಾಳು ನಿಪನಾಳ್ ಹಾಗೂ ಗಾಯಕಿ ಶೃತಿ ಪ್ರಹ್ಲಾದ್ ಗಾಯನದ ಈ ಹಾಡು ಸೆನ್ಸೇಷನ್ ಸೃಷ್ಟಿಸಿತ್ತು. ಈ ಸೂಪರ್ ಹಿಟ್ ಹಾಡಿನ ಸಂಗೀತ ಸಂಯೋಜನೆಗೆ ವಿ. ಹರಿಕೃಷ್ಣ ಅವರಿಗೆ ʻಚಿತ್ತಾರ Best song of the year-2025 ಪ್ರಶಸ್ತಿ ನೀಡಿ ಗೌರವಿಸಿದೆ.

