ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಹೀಗಿತ್ತು.
ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.
ರೆಡ್ ಕಾರ್ಪೆಟ್ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.
ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು.
ಚಿತ್ತಾರ ಪಬ್ಲಿಕ್ ಚಾಯ್ಸ್ ಫೇವರೆಟ್ ಸಿಂಗರ್’-2025
ಆಂದ್ರಪ್ರದೇಶದಲ್ಲಿ ಹುಟ್ಟಿ ಬೆಳೆದು ದೂರದರ್ಶನ ನಿರೂಪಕಿಯಾಗಿ, ಗಾಯಕಿಯಾಗಿ, ನಟಿಯಾಗಿ ಮಿಂಚುತ್ತಿರುವ ಅಪ್ಪಟ ದೇಸಿ ಪ್ರತಿಭೆ ಸತ್ಯವತಿ ರಾಥೋಡ್ ಯಾನೆ ಮಂಗ್ಲಿ. ಬಹುಭಾಷಾ ಗಾಯಕಿಯಾಗಿರುವ ಇವರು ತಮ್ಮ ವಿಶಿಷ್ಠ ಕಂಠದಿಂದ ಎಲ್ಲರ ಮನಸೋರೆಗೊಂಡಿದ್ದಾರೆ. ಕನ್ನಡದ ಹೂ ಅಂತೀಯ ಇಲ್ಲ ಊ ಹು ಅಂತೀಯಾ ಹಿಟ್ ಹಾಡಿನ ಮೂಲಕ ನಾಡಿನ ಮೂಲೆ ಮೂಲೆಗೆ ತಲುಪಿದ ಧ್ವನಿ ಮಂಗ್ಲಿ ಅವರದ್ದು. ಎಣ್ಣೆಗು ಹೆಣ್ಣಿಗೂ ಹಾಡಿನ ಮೂಲಕ ಯುವಕರ ಮನದಲ್ಲಿ ಸ್ಟಾರ್ ಗಾಯಕಿಯಾಗಿ ಮೆರೆಯುತ್ತಿದ್ದಾರೆ. ನಂತರ ಗಿಲ್ಲಕ್ಕೋ ಶಿವ, ಪಸಂದಾಗವ್ನೆ ಹಾಡಿನ ಮೂಲಕ ಸಂಗೀತ ಪ್ರೀಯರ ಮನಗೆದ್ದ ಮಂಗ್ಲಿಯವರಿಗೆ ಚಿತ್ತಾರ ಪಬ್ಲಿಕ್ ಚಾಯ್ಸ್ ಫೇವರೆಟ್ ಸಿಂಗರ್’-2025 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

