ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲೀಗ ಮದುವೆ ಸಂಭ್ರಮ. ‘ಕನಸುಗಾರ’ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರಿಗೆ ಮದುವೆ ನಿಶ್ಚಯವಾಗಿದೆ. ಮನೋರಂಜನ್ ರವಿಚಂದ್ರನ್ ಅವರ ಮದುವೆಯ ಆಹ್ವಾನ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮನೋರಂಜನ್ ರವಿಚಂದ್ರನ್ ಅವರ ಮದುವೆಯ ಇನ್ವಿಟೇಶನ್ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ವಿಟೇಶನ್ ಕಾರ್ಡ್‌ನಲ್ಲಿ ರವಿಚಂದ್ರನ್ ಅವರ ಚಿತ್ರ ಇರುವುದು ಸೂಪರ್ ಸ್ಪೆಷಲ್.ಮೂಲಗಳ ಪ್ರಕಾರ ಮನೋರಂಜನ್ ವೈದ್ಯಕೀಯ ಹಿನ್ನೆಲೆ ಇರುವ ಸಂಗೀತಾ ದೀಪಕ್ ಅವರನ್ನು ವಿವಾಹವಾಗುತ್ತಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಮದುವೆ ನಡೆಯಲಿದ್ದು, ಸಿನಿಮಾರಂಗದ ಗಣ್ಯರನ್ನು ಆಮಂತ್ರಿಸುವುದರಲ್ಲಿ ಕ್ರೇಜಿಸ್ಟಾರ್ ಬ್ಯುಸಿ ಇದ್ದಾರೆ.
ಇನ್ನು ಸದ್ಯ ವಯರಲ್ ಆಗಿರುವ ಆಮಂತ್ರಣ ಪತ್ರಿಕೆ ಬಹಳ ಸುಂದರವಾಗಿ ಮೂಡಿ ಬಂದಿದ್ದು, ಕನಸುಗಾರನ ಕಲ್ಪನೆಯಲ್ಲಿ ತಯಾರಾಗಿದೆ. ಇದರ ನಡುವೆ ರವಿಚಂದ್ರನ್ ಅವರ ಪುತ್ರನ ವಿವಾಹದ ಸುದ್ದಿ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ.
ಸ್ಯಾಂಡಲ್ವುಡ್ನ ಕನಸುಗಾರ ವಿ. ರವಿಚಂದ್ರನ್ ತಮ್ಮ ಪುತ್ರಿಯ ವಿವಾಹವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. 2019ರಲ್ಲಿ ರವಿಚಂದ್ರನ್ ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಹಿರಿಯ ಮಗ ಮನೋರಂಜನ್ ಅವರ ವಿವಾಹವು ನಡೆಯಲಿದೆ..
ರವಿಂಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಸದ್ಯ ಸ್ಯಾಂಡಲ್ವುಡ್ನ ಬ್ಯುಸಿ ನಟರುಗಳಲ್ಲಿ ಒಬ್ಬರು. ಇವರು 2017ರಲ್ಲಿ ತೆರೆಕಂಡ ‘ಸಾಹೇಬ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಪ್ರಾರಂಭ, ಬ್ರಹಸ್ಪತಿ, ಕ್ರೇಜಿಸ್ಟಾರ್ ಮತ್ತು ಮುಗಿಲು ಪೇಟೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಲು ಸಾಲು ಸಿನಿಮಾಗಳ ನಡುವೆ ಇದೀಗ ಮನೋರಂಜನ್ ಅವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಆಗಸ್ಟ್ 21 ಹಾಗೂ 22ರಂದು ಮನೋರಂಜನ್ ವಿವಾಹ ನೆರವೇರಲಿದೆ.