Left Ad
CMA-2025 ;  Lifetime Achievement ಪ್ರಶಸ್ತಿಗೆ ಭಾಜನರಾದ ನಾಡೋಜ ಡಾ|| ಶ್ರೀಮತಿ ಬಿ ಕೆ ಸುಮಿತ್ರ - Chittara news
# Tags

CMA-2025 ;  Lifetime Achievement ಪ್ರಶಸ್ತಿಗೆ ಭಾಜನರಾದ ನಾಡೋಜ ಡಾ|| ಶ್ರೀಮತಿ ಬಿ ಕೆ ಸುಮಿತ್ರ

ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್‌ ಅವಾರ್ಡ್‌-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು  ಹೀಗಿತ್ತು.

ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.

ರೆಡ್‌ ಕಾರ್ಪೆಟ್‌ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್‌ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.

ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು

ವಿಶಿಷ್ಟ ಸಂಗೀತ ಸಾಧಕರಿಗೆ ವಿಶೇಷ ಪ್ರಶಸ್ತಿ

ಚಂದನವನವನ್ನು ಅನೇಕ ಸಂಗೀತ ಸಾಧಕರು ತಮ್ಮ ಕಲಾಸೇವೆಯಿಂದ ಸಮೃದ್ಧಗೊಳಿಸಿದ್ದಾರೆ. ಹಿರಿಯರು ಸ್ಫೂರ್ತಿಯ ಸೆಲೆಯಾದರೆ, ಕಿರಿಯರು ಎಳೆಯದರಲ್ಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಚಿತ್ತಾರದ ಪರಂಪರೆಯಂತೆ ಈ ಬಾರಿಯೂ ಅನೇಕ ಸಂಗೀತ ಸಾಧಕರನ್ನು ‘ಚಿತ್ತಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಯಿತು. ಈ ಬಾರಿಯ ಆ ವಿಶೇಷ ಸಾಧಕರ ಪರಿಚಯ ಇಲ್ಲಿದೆ..

Lifetime Achievement  / ನಾಡೋಜ ಡಾ|| ಶ್ರೀಮತಿ ಬಿ ಕೆ ಸುಮಿತ್ರ

ಕನ್ನಡ ಚಲನಚಿತ್ರರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದ ಹಿನ್ನೆಲೆ ಗಾಯಕಿ ಇವರು. ಭಕ್ತಿಗೀತೆ, ಭಾವಗೀತೆ, ಜನಪದ ಗೀತೆಗಳಿಗೆ ಮತ್ತೊಂದು ಹೆಸರಾದವರು. ಅವರೇ ನಮ್ಮ ನಿಮ್ಮ ಪ್ರೀತಿಯ ಗಾಯಕಿ ಶ್ರೀಮತಿ ಬಿ.ಕೆ.ಸುಮಿತ್ರ.

ಇವರ ಪೂರ್ಣನಾಮ ಬಿಳಲುಕೊಪ್ಪ ಕೃಷ್ಣಯ್ಯ ಸುಮಿತ್ರ. ದೇವಿ ಅನ್ನಪೂರ್ಣೇಶ್ವರಿಯ ತವರು ಹೊರನಾಡು ಸಮೀಪದಲ್ಲಿರುವ ಬಿಳಲುಕೊಪ್ಪ ಇವರ ಜನ್ಮಸ್ಥಳ. ಗಂಗಮ್ಮ ಮತ್ತು ಕೃಷ್ಣಯ್ಯ ಅವರ ಸುಪುತ್ರಿಯಾಗಿ ಜನಿಸಿದ ಸುಮಿತ್ರಾ ಬಿ.ಎಸ್ಸಿ ಪದವೀಧರೆ. ಸಂಗೀತ ಬಗ್ಗೆ ಆಸಕ್ತಿ ಹೊಂದಿದ್ದ ಸುಮಿತ್ರಾ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಖ್ಯಾತ ನಟಿ ಪಂಡರಿಬಾಯಿಯವರ ಸೋದರರಾದ ಶ್ರೀ ಎಂ. ಪ್ರಭಾಕರ್ ಅವರ ಮಾರ್ಗದರ್ಶನದಲ್ಲಿ ಕಲಿತರು.

ಸುಮಿತ್ರಾ ಅವರ ಶ್ರೀ ಎಂ ಎಲ್ ಸುಧಾಕರ್. ಅವರು ಕೂಡ ಹೆಸರಾಂತ ಗಾಯಕರು.. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಮಗಳು ಸೌಮ್ಯಾ ರಾವ್ ಬಹುಭಾಷಾ ಗಾಯಕಿಯಾಗಿದ್ದು, ಮಗ ಸುನೀಲ್ ರಾವ್ ನಟನಾಗಿ, ಗಾಯಕಿನಾಗಿ ಹೆಸರು ಮಾಡಿದ್ದಾರೆ. ಇಡೀ ಕುಟುಂಬವೇ ಸಂಗೀತದೊಂದಿಗೆ ಬದುಕು ಬೆಸೆದುಕೊಂಡಿದೆ.

ಸುಮಿತ್ರಾ ಅವರ ಗಾಯನ ಪ್ರತಿಭೆಯನ್ನು ಗುರುತಿಸಿ ಹಾಡಲು ಅವಕಾಶ ಕೊಟ್ಟ ಮೊದಲ ಸಂಗೀತ ನಿರ್ದೇಶಕ ಶ್ರೀ ಜಿ.ಕೆ. ವೆಂಕಟೇಶ್. 1964 ರಲ್ಲಿಕವಲೆರಡು ಕುಲವೊಂದುಚಿತ್ರದ ಹಾಡಿಗೆ ಮೊದಲ ಬಾರಿಗೆ ಸುಮಿತ್ರಾ ಧ್ವನಿಯಾದರು.

ಅನಂತರ ಆರ್. ಸುದರ್ಶನಂ, ವಿಜಯ್ ಭಾಸ್ಕರ್, ಎಂ. ರಂಗರಾವ್, ರಾಜನ್ ನಾಗೇಂದ್ರ ಅಂತಹ ಹಿರಿಯರಿಂದ ಆರಂಭವಾಗಿ ಇಂದಿನ ಹೆಸರಾಂತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಸಿನಿಮಾಗೂ ಸುಮಿತ್ರಾ ಅವರ ಗಾಯನ ಮೆರುಗು ತಂದಿದೆ. 4 ದಶಕಗಳ ಕಾಲ ಗಾಯಕಿಯಾಗಿ ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಸಿನಿಮಾ ಹಾಡುಗಳು ಸೇರಿದಂತೆ ಸಾವಿರಾರು ಹಾಡುಗಳನ್ನು ಹಾಡಿ ಕರ್ನಾಟಕದ ಮನೆಮಾತಾಗಿದ್ದಾರೆ. ಪಿ.ಬಿ.ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಸೇರಿದಂತೆ ಖ್ಯಾತ ಗಾಯಕರೊಂದಿಗೆ ಸಿನಿಮಾ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಉಪಾಸನೆಚಿತ್ರದಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು‘  ಹಾಗೂನಂಬಿದೆ ನಿನ್ನ ನಾಗಾಭರಣ, ಕಾಯೋ ಕರುಣಾಮಯ ನನ್ನಅತಿ ಜನಪ್ರಿಯತೆ ತಂದು ಕೊಟ್ಟ ಹಾಡುಗಳು.

ನಮ್ಮ ಮಕ್ಕಳುಚಿತ್ರಕ್ಕಾಗಿ ಸುಮಿತ್ರಾ ಅವರು ಹಾಡಿದನಿನ್ನೊಲುಮೆ ನಮಗಿರಲಿ ತಂದೆನಿರೀಕ್ಷೆಗೂ ಮೀರಿ ಜನಪ್ರಿಯವಾಗಿದ್ದಲ್ಲದೆ, ಎಷ್ಟೋ ಶಾಲೆಗಳಲ್ಲಿ ಮಕ್ಕಳಿಗೆ ನಿತ್ಯ ಹೇಳಿಸುವ ಹಾಡಾಯಿತು

ಬೃಂದಾವನ, ಚಕ್ರತೀರ್ಥ, ತಂದೆ ಮಕ್ಕಳು, ಗೆಜ್ಜೆ ಪೂಜೆ, ಉಪಾಸನೆ, ಸತಿ ಸುಕನ್ಯ, ಮದುವೆಮದುವೆ, ಅನುರಾಧ, ಕರುಳಿನ ಕರೆ, ಎದ್ದೇಳು ಮಂಜುನಾಥ ಇವರ ಹಾಡಿದ ಪ್ರಮುಖ ಚಿತ್ರಗಳು.

ಕೇವಲ ಗಾಯಕಿಯಾಗಿ ಮಾತ್ರವಲ್ಲದೇ, ಸ್ವತಃ ಇವರೇ ಸಂಗೀತ ಸಂಯೋಜಿಸಿ ನೂರಾರು ಜನಪದ ಹಾಡುಗಳ, ಭಕ್ತಿಗೀತೆಗಳ ಆಲ್ಬಂ ಹೊರತಂದಿದ್ದಾರೆ. ರಸ ಋಷಿ ಕುವೆಂಪು, ವರಕವಿ .ರಾ.ಬೇಂದ್ರೆ, ಜಿ ಎಸ್ ಶಿವರುದ್ರಪ್ಪ, ಕೆ ಎಸ್ ನರಸಿಂಹಸ್ವಾಮಿ, ನಿಸ್ಸಾರ್ ಅಹಮ್ಮದ್ ಸೇರಿದಂತೆ ಖ್ಯಾತ ಕವಿಗಳು ಬರೆದ ಸಾಹಿತ್ಯಕ್ಕೆ ಧ್ವನಿಯಾದ ಸುಮಿತ್ರಾ ತಮ್ಮ ಸುಮಧುರ ಕಂಠದಿಂದ ಕೇಳುಗರ ಮನಸೂರೆ ಮಾಡಿದ್ದಾರೆತಮ್ಮ ಜೀವನವನ್ನೇ ಸಂಗೀತ ಸಾಧನೆಗೆ ಮುಡಿಪಾಗಿಟ್ಟ ಸಾಧಕಿ ಶ್ರೀಮತಿ ಬಿ.ಕೆ. ಸುಮಿತ್ರಾ. ಇವರ ಸಾಧನೆ ಗುರುತಿಸಿ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದರಾಜ್ಯೋತ್ಸವಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ. ಶ್ರೀಮತಿ ಬಿ.ಕೆ. ಸುಮಿತ್ರಾ ಅವರ ಜೀವಮಾನದ ಸಾಧನೆಯನ್ನು ಗುರುತಿಸಿ Lifetime Achievement ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದು ಚಿತ್ತಾರಕ್ಕೆ ಸಿಕ್ಕ ಸುಯೋಗವೆಂದರೂ ಅತಿಶಯೋಕ್ತಿಯಾಗಲಾರದು.

Spread the love
Translate »
Right Ad