ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಹೀಗಿತ್ತು.
ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.
ರೆಡ್ ಕಾರ್ಪೆಟ್ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.
ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು
ವಿಶಿಷ್ಟ ಸಂಗೀತ ಸಾಧಕರಿಗೆ ವಿಶೇಷ ಪ್ರಶಸ್ತಿ
ಚಂದನವನವನ್ನು ಅನೇಕ ಸಂಗೀತ ಸಾಧಕರು ತಮ್ಮ ಕಲಾಸೇವೆಯಿಂದ ಸಮೃದ್ಧಗೊಳಿಸಿದ್ದಾರೆ. ಹಿರಿಯರು ಸ್ಫೂರ್ತಿಯ ಸೆಲೆಯಾದರೆ, ಕಿರಿಯರು ಎಳೆಯದರಲ್ಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಚಿತ್ತಾರದ ಪರಂಪರೆಯಂತೆ ಈ ಬಾರಿಯೂ ಅನೇಕ ಸಂಗೀತ ಸಾಧಕರನ್ನು ‘ಚಿತ್ತಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಯಿತು. ಈ ಬಾರಿಯ ಆ ವಿಶೇಷ ಸಾಧಕರ ಪರಿಚಯ ಇಲ್ಲಿದೆ..
Versatile Music Composer / ಗುರುಕಿರಣ್
ಸಂಗೀತಕ್ಕೆ ‘ಓಂಕಾರ‘ ಬರೆದವರು ಹಲವರು ಆದರೆ ಮೊದಲ ಚಿತ್ರದಲ್ಲಿಯೇ ‘ಎ‘ಕಾರ ಹಾಕಿ ಝೇಂಕರಿಸಿದ್ದು ಇವರು ತಮ್ಮ ವಿಭಿನ್ನ ಸಂಯೋಜನೆಯಿಂದ ಸಿನಿ ಸಂಗೀತದ ಆಕಾರ, ಪ್ರಾಕಾರ ಬದಲಿಸಿದವರು. ‘ಜೋಗಿ‘ ಜಂಗಮರಿಂದ ಆರಂಭವಾಗಿ ಕುರಿ ಕಾಯೋ ‘ಮೈಲಾರಿ‘ಯ ತನಕ ಎಲ್ಲರೂ ಇವರ ಅಭಿಮಾನಿಗಳೇ ಗುರು. ಸ್ಯಾಂಡಲ್ ವುಡ್ ನಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿದ ಸಂಗೀತ ಗುರು – ಶ್ರೀ ಗುರುಕಿರಣ್.
ಕನ್ನಡದ ಬಹುತೇಕ ಸೂಪರ್ ಸ್ಟಾರ್ ಗಳ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇವರ ಸಂಗೀತದ ಬಲದಿಂದಲೇ ಎಷ್ಟೋ ಹೊಸ ಕಲಾವಿದರು, ನಿರ್ದೇಶಕರು ಸ್ಟಾರ್ ಆಗಿದ್ದಾರೆ. ಚಂದನವನದಲ್ಲಿ ಬಹಳಷ್ಟು ಆಲ್ ಟೈಮ್ ಮ್ಯೂಸಿಕಲ್ ಹಿಟ್ ಚಿತ್ರಗಳನ್ನು ಕೊಟ್ಟ ಶ್ರೇಯ ಇವರಿಗೆ ಸಲ್ಲುತ್ತದೆ.
ಗುರುಕಿರಣ್ ಕನ್ನಡ ಸಿನಿಮಾ ಸಂಗೀತಕ್ಕೆ ಹೊಸರೂಪ ಕೊಟ್ಟವರು. ವೆಸ್ಟರ್ನ್ ಸ್ಟೈಲ್ ಆಫ್ ಮ್ಯೂಸಿಕ್ ಅನ್ನು ಎಫೆಕ್ಟೀವ್ ಆಗಿ ಬಳಸಿದವರು. ಪರಭಾಷಿಕರು ಕನ್ನಡ ಹಾಡುಗಳನ್ನು ಕೇಳುವಂತೆ ಮಾಡಿದವರು. ಅತಿ ಹೆಚ್ಚು ಪ್ರತಿಭಾವಂತ ಯುವ ಚಿತ್ರಸಾಹಿತಿಗಳನ್ನು ಮತ್ತು ಗಾಯಕ ಗಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು.
ಎ, ಉಪೇಂದ್ರ, ಮಜ್ನು, ಅಸುರ, ಚಿತ್ರ, ನಂದಿ, ಅಪ್ಪು, ನಿನಗಾಗಿ, ಚಂದು, ಕರಿಯ, ಖುಷಿ, ಅಭಿ, ಕಂಠಿ, ಆಪ್ತಮಿತ್ರ, ಮೌರ್ಯ, ರಿಶಿ, ಜೋಗಿ, ರಾಮ ಶ್ಯಾಮ ಭಾಮ, ಗಂಡುಗಲಿ ಕುಮಾರ ರಾಮ, ಪಲ್ಲಕ್ಕಿ, ಸತ್ಯ ಇನ್ ಲವ್, ಸಂತ, ಅರಮನೆ, ಆಪ್ತರಕ್ಷಕ, ಮೈಲಾರಿ, ಉಪ್ಪಿ 2, ಅಮ್ಮ ಐ ಲವ್ ಯು, ಆಯುಷ್ಮಾನ್ ಭವ ಸೇರಿದಂತೆ ನೂರಾರು ಮ್ಯೂಸಿಕಲ್ ಹಿಟ್ ಕೊಟ್ಟ ಹೆಗ್ಗಳಿಕೆ ಇವರದ್ದು. ಎಲ್ಲಾ ಸ್ಟಾರ್ ನಟರ ಟಾಪ್ ನಿರ್ದೇಶಕರ ಫೇವರಿಟ್ ಆಗಿ ಹೊರಹೊಮ್ಮಿದವರು ಗುರುಕಿರಣ್.
ಮಾಸ್ ಕ್ಲಾಸ್ ಸೇರಿದಂತೆ ಎಲ್ಲಾ ಕ್ಲಾಸ್ ಪ್ರೇಕ್ಷಕರು ಇವರ ಸಂಯೋಜನೆಗೆ ಮನಸೋತಿದ್ದಾರೆ. ಅದರಲ್ಲೂ 90’s kids ಪಾಲಿಗೆ most favorite music director ಎಂದರೆ ಅತಿಶಯೋಕ್ತಿಯಲ್ಲ. ಗುರುಕಿರಣ್ ಅವರು ಸಂಗೀತ ನೀಡಿದ ಚಿತ್ರಗಳೇ ಅವರ ವರ್ಸಾಟಾಲಿಟಿಗೆ ಅತ್ಯುತ್ತಮ ನಿದರ್ಶನ. ಕರಾವಳಿಯ ಈ ಪ್ರತಿಭೆ ಇಡೀ ಕರ್ನಾಟಕದಲ್ಲಿ ಮನೆಮಾತಾದ ರೀತಿ ನಿಜಕ್ಕೂ ಶ್ಲಾಘನೀಯ.
ಇಂತಹ ಅದ್ಭುತ ಸಂಗೀತ ನಿರ್ದೇಶಕರ ಸಾಧನೆಯನ್ನು ಗೌರವಿಸುವ ಕ್ಷಣ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಮಾಡಿದ ಸಾಧನೆಗೆ ಪ್ರತಿಯಾಗಿ ಶ್ರೀ ಗುರುಕಿರಣ್ ಅವರಿಗೆ Versatile Music Composer ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

