ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಹೀಗಿತ್ತು.
ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.
ರೆಡ್ ಕಾರ್ಪೆಟ್ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.
ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು
ವಿಶಿಷ್ಟ ಸಂಗೀತ ಸಾಧಕರಿಗೆ ವಿಶೇಷ ಪ್ರಶಸ್ತಿ
ಚಂದನವನವನ್ನು ಅನೇಕ ಸಂಗೀತ ಸಾಧಕರು ತಮ್ಮ ಕಲಾಸೇವೆಯಿಂದ ಸಮೃದ್ಧಗೊಳಿಸಿದ್ದಾರೆ. ಹಿರಿಯರು ಸ್ಫೂರ್ತಿಯ ಸೆಲೆಯಾದರೆ, ಕಿರಿಯರು ಎಳೆಯದರಲ್ಲೇ ಪ್ರೇಕ್ಷಕರ ಮನ ಮುಟ್ಟಿದ್ದಾರೆ. ಚಿತ್ತಾರದ ಪರಂಪರೆಯಂತೆ ಈ ಬಾರಿಯೂ ಅನೇಕ ಸಂಗೀತ ಸಾಧಕರನ್ನು ‘ಚಿತ್ತಾರ ವಿಶೇಷ ಪ್ರಶಸ್ತಿ’ ನೀಡಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಸಂಭ್ರಮಿಸಲಾಯಿತು. ಈ ಬಾರಿಯ ಆ ವಿಶೇಷ ಸಾಧಕರ ಪರಿಚಯ ಇಲ್ಲಿದೆ..
Golden Icon / ದೇವಿ ಶ್ರೀ ಪ್ರಸಾದ್
ದೇವಿ ಶ್ರೀ ಪ್ರಸಾದ್ ಭಾರತೀಯ ಚಲನಚಿತ್ರರಂಗದಲ್ಲಿ DSP ಎಂದೇ ಜನಪ್ರಿಯರಾದ ಸಂಗೀತ ನಿರ್ದೇಶಕ. ಮೂಲತಃ ಆಂಧ್ರಪ್ರದೇಶದ ವೆದುರುಪಾಕದವರಾದ DSP ಸಂಗೀತದಲ್ಲಿಯೇ ಬದುಕು ಕಟ್ಟಿಕೊಂಡು, ಮುಗಿಲೆತ್ತರಕ್ಕೆ ಬೆಳೆದ ಪ್ರತಿಭೆ. 1997 ರಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರ ಪುತ್ರ ಎಸ್ ಪಿ ಚರಣ್ ಅವರೊಂದಿಗೆ ಕೈ ಜೋಡಿಸಿ ‘ಡ್ಯಾನ್ಸ್ ಪಾರ್ಟಿ‘ ಎಂಬ ಹೆಸರಿನ ಆಲ್ಬಂವೊಂದಕ್ಕೆ ಸಂಗೀತ ಸಂಯೋಜಿಸಿದರು. ಆ ಆಲ್ಬಂ ಬಹಳಷ್ಟು ಸದ್ದು ಮಾಡಿತು. ತಮ್ಮ 19 ನೇ ವಯಸ್ಸಿನಲ್ಲೇ ದೇವಿ ಎಂಬ ತೆಲುಗು ಚಿತ್ರಕ್ಕೆ ಚೊಚ್ಚಲ ಬಾರಿಗೆ ಸಂಗೀತ ನಿರ್ದೇಶನ ಮಾಡಿದರು. ಅನಂತರ ಬಂದ ‘ಆನಂದಮ್‘ ಚಿತ್ರ ಇವರಿಗೆ ದೊಡ್ಡ ಗೆಲುವು, ಜನಮನ್ನಣೆ ತಂದು ಕೊಟ್ಟಿತು. ಅಂದಿನಿಂದ ಇಂದಿನವರೆಗೂ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ತಲುಗು, ತಮಿಳು, ಹಿಂದಿ, ಕನ್ನಡ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಭಾರತದ ಬಹುತೇಕ ಸೂಪರ್ ಸ್ಟಾರ್ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿ, ಬ್ಲಾಕ್ ಬಸ್ಟರ್ ಮ್ಯೂಸಿಕಲ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ.
ಜಲ್ಸಾ, ಬೊಮ್ಮರಿಲ್ಲು, ಮನ್ಮಥುಡು, ಆರ್ಯ, ಆರ್ಯ 2 , ವರ್ಷಂ, ಪುಲಿ, ಸಿಂಗಂ, ಅದುರ್ಸ್, ನೆನೊಕ್ಕಡೇನೆ, ನುವ್ವಾಸ್ತಾನುಂಟೆ, ನೇನೊದ್ದುಂಟಾನ, ಜನತಾ ಗ್ಯಾರೇಜ್, ದಶಾವತಾರಂ, ಮಿರ್ಚಿ, ಎವಡು, ಶಂಕರ್ ದಾದಾ ಎಂಬಿಬಿಎಸ್, ಜುಲಾಯಿ, ಅತ್ತಾರಿಂಟಿಕಿ ದಾರೇದಿ, ರಂಗಸ್ಥಳಂ, ಗಬ್ಬರ್ ಸಿಂಗ್, ಸರಿಲೇರು ನಿಕೆವರು, ಉಪ್ಪೆನಾ, F2, ಶ್ರೀಮಂತುಡು, ಕುಬೇರ ಸೇರಿದಂತೆ ಬಹಳಷ್ಟು ಸೂಪರ್ ಹಿಟ್ ಚಿತ್ರ ಕೊಟ್ಟು ರಾಕ್ ಸ್ಟಾರ್ ಎಂದೇ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಸಂಗಮ’ ಹಾಗೂ ಇತ್ತೀಚೆಗೆ ತೆರೆಗೆ ಬಂದ ಕಿರೀಟಿ ನಟನೆಯ ‘ಜೂನಿಯರ್’ ಚಿತ್ರಗಳಿಗೂ DSP ಸಂಗೀತ ಸಂಯೋಜಿಸಿದ್ದರು.
DSP ಜನಪ್ರಿಯತೆ ಪುಷ್ಪ, ಪುಷ್ಪ 2 ಚಿತ್ರದ ಹಾಡುಗಳಿಂದ ಭಾರತದ ಮೂಲೆಮೂಲೆಗೂ ತಲುಪಿದೆ. ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಶ್ರೀ ದೇವಿ ಶ್ರೀ ಪ್ರಸಾದ್ ಮಾಡಿರುವ ಸಾಧನೆಯನ್ನು ಗುರುತಿಸಿ Golden Icon ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

