ಸಿನಿಮಾ ಡಿಸೈನ್ ಎಂಬುದು ಪ್ರೇಕ್ಷಕರು ಸಿನಿಮಾ ತಂಡ ನೀಡುವ ಆಮಂತ್ರಣ ಪತ್ರಿಕೆ. ಆ ಆಮಂತ್ರಣ ಪತ್ರಿಕೆಯ ವಿನ್ಯಾಸ ಆಕರ್ಷಕವಾಗಿದ್ದಾಗ ಮಾತ್ರ ಪ್ರೇಕ್ಷಕನಿಗೆ ಥಿಯೇಟರ್ ನತ್ತ ಹೋಗುವ ಆಸಕ್ತಿ ಹುಟ್ಟುತ್ತದೆ. ಈ ಕಾರಣಕ್ಕೆ ಪಬ್ಲಿಸಿಟಿ ಡಿಸೈನ್ ಎಂಬುದು ಸಿನಿಮಾ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಸಿನಿ ಪಬ್ಲಿಸಿಟಿ ಡಿಸೈನ್ ಮೂಲಕ ಕನ್ನಡ ಚಿತ್ರರಂಗದ ಸೇವೆ ಸಲ್ಲಿಸುತ್ತಿರುವ ಖ್ಯಾತ ಪಬ್ಲಿಸಿಟಿ ಡಿಸೈನರ್ ಮಣಿ. ಮಣಿಗೆ ಮಣಿ ಸೇರಿದರೆ ಹಾರ. ಆದರೆ ಮಣಿ ಎಂಬ ಹೆಸರಿನ ಈ ಪಬ್ಲಿಸಿಟಿ ಡಿಸೈನರ್ ಡಿಸೈನ್ ಮಾಡಿದ ಸಿನಿಮಾ ಸಂಖ್ಯೆ ಹತ್ತಿರತ್ತಿರ ಸಾವಿರ. ಕಳೆದ ೨೦ ವರ್ಷಗಳಲ್ಲಿ ೯೦೦ ಹೆಚ್ಚು ಚಿತ್ರಗಳಿಗೆ ಪಬ್ಲಿಸಿಟಿ ಡಿಸೈನ್ ಮಾಡಿದ ಹಿರಿಮೆ ಇವರದು. ಕನ್ನಡದ ಬಹುತೇಕ ಸ್ಟಾರ್ ನಟರ ಚಿತ್ರಕ್ಕೆ, ಎಲ್ಲಾ ಖ್ಯಾತನಾಮ ನಿರ್ದೇಶಕ, ನಿರ್ಮಾಪಕರ ಚಿತ್ರಕ್ಕೆ ಡಿಸೈನ್ ಮಾಡಿಕೊಟ್ಟಿದ್ದಾರೆ. ಕಥೆಯ ಥೀಮ್ ಮತ್ತು ನಿರ್ದೇಶಕರ ಕಲ್ಪನೆಗೆ ತಕ್ಕಂತೆ ವಿನ್ಯಾಸ ಮಾಡುವುದರಲ್ಲಿ ಮಣಿ ನಿಸ್ಸೀಮರು. ವರ್ಷ, ವಿಷ್ಣು ಸೇನಾ, ನೀನೆಲ್ಲೋ ನಾನಲ್ಲೆ, ಮಾತಾಡ್ ಮಾತಾಡ್ ಮಲ್ಲಿಗೆ, ಈ ಬಂಧನ, ನಾಗರಹಾವು, ಪಾಂಡವರು, ವೀರ ಪರಂಪರೆ, ರವಿ ಶಾಸ್ತ್ರಿ, ಉಗಾದಿ, ರಿಷಿ, ಮೈಲಾರಿ, ಭಜರಂಗಿ, ವಜ್ರಕಾಯ, ಟಗರು, ಉಪ್ಪಿದಾದಾ ಎಂಬಿಬಿಎಸ್, ಐಶ್ವರ್ಯಾ, ಐ ಲವ್ ಯು, ಕಬ್ಜಾ, ಮೌರ್ಯ, ಆಕಾಶ್, ಅರಸು, ಅಂಜನೀಪುತ್ರ, ಪೊರ್ಕಿ, ಚಿಂಗಾರಿ, ಯಜಮಾನ, ನಲ್ಲ, ಮುಸ್ಸಂಜೆ ಮಾತು, ಚೆಲ್ಲಾಟ, ಸಂಗಮ, ಟ್ರಿಪಲ್ ರೈಡಿಂಗ್, ಕೃಷ್ಣಂ ಪ್ರಣಯ ಸಖಿ, ತಾಕತ್, ಕರಿಚಿರತೆ, ಕನಕ, ಸಲಗ ಸೇರಿದಂತೆ ಸೂಪರ್ ಹಿಟ್ ಸಿನಿಮಾ ಪಟ್ಟಿ ಬಹು ದೊಡ್ಡದಿದೆ. ಕ್ರಿಯೇಟಿವ್ ಸಿನಿ ಪಬ್ಲಿಸಿಟಿ ಡಿಸೈನರ್ ಆಗಿ ಮಣಿಯವರು ಮಾಡಿದ ಸಾಧನೆ ಗುರುತಿಸಿ ಚಿತ್ತಾರ ಸ್ಟಾರ್ ಅವಾರ್ಡ್ಸ್ – 2024 ಕಾರ್ಯಕ್ರಮದಲ್ಲಿ ‘Best film publicity designer’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ ಮಣಿ ಅವರು, `ಸಿನಿಮಾ ಮಾಡುವಾಗ ಖಂಡಿತ ಕಷ್ಟ ಇರುತ್ತದೆ. ಆ ಕಷ್ಟಕ್ಕೆ ಇಪ್ಪತ್ತು ವರ್ಷವಾಗಿದೆ. ಇಷ್ಟು ವರ್ಷ ತೆಗೆದುಕೊಳ್ಳುತ್ತಾ ಇದ್ದ ಅವಾರ್ಡ್ ಬೇರೆ. ವಿನ್ಯಾಸಕ್ಕಾಗಿಯೇ ಸೆಲೆಕ್ಟ್ ಮಾಡಿರುವ ಅವಾರ್ಡ್ ಖಂಡಿತ ಸ್ಪೆಷಲ್. ತುಂಬಾನೇ ಖುಷಿಯಾಗುತ್ತಾ ಇದೆ. ಚಿತ್ತಾರ ಸಂಸ್ಥೆಗೆ ನಾನು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದಿದ್ದಾರೆ.