ನಟ ವಿಜಯ ರಾಘವೇಂದ್ರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಯುವ ಪ್ರತಿಭೆ ಸಿದ್ಧ್ರುವ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ಮರೀಚಿ’ ಎಂಬ ಚಿತ್ರಕ್ಕೆ ಚಿನ್ನಾರಿ ಮುತ್ತ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.
‘ಮರೀಚಿ’ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ . ‘ಮರೀಚಿ’ ಕಥೆ ಕೇಳಿ ವಿಜಯ ರಾಘವೇಂದ್ರ ಕೂಡ ಇಂಪ್ರೆಸ್ ಆಗಿದ್ದು ಯುವ ನಿರ್ದೇಶಕನ ಜೊತೆ ಸಿನಿಮಾ ಮಾಡಲು ಕೈ ಜೋಡಿಸಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದ್ದು, ಅದಕ್ಕೂ ಮುನ್ನ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲು ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಚಿತ್ರದಲ್ಲಿ ವಿಜಯ ರಾಘವೇಂದ್ರ ಜೋಡಿಯಾಗಿ ನಟಿ ಸೋನು ಗೌಡ ನಟಿಸುತ್ತಿದ್ದು. ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಎಸ್ ಎಸ್ ರೆಕ್ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ನವೆಂಬರ್ ನಲ್ಲಿ ‘ಮರೀಚಿ’ ಚಿತ್ರೀಕರಣ ಆರಂಭಗೊಳ್ಳಲಿದ್ದು, ಬೆಂಗಳೂರು, ರಾಮನಗರ, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಹಲವು ಕಡೆ ಸಿನಿಮಾ ಸೆರೆ ಹಿಡಿಯಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಶೀಘ್ರದಲ್ಲೇ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.