Left Ad
ಚಿ.ಉದಯ್ ಶಂಕರ್;ಕರುನಾಡು ಕಂಡ ಅಸಮಾನ್ಯ ಪ್ರತಿಭೆಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ - Chittara news
# Tags

ಚಿ.ಉದಯ್ ಶಂಕರ್;ಕರುನಾಡು ಕಂಡ ಅಸಮಾನ್ಯ ಪ್ರತಿಭೆಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ

ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್‌ ಅವಾರ್ಡ್‌-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು  ಹೀಗಿತ್ತು.

ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.

ರೆಡ್‌ ಕಾರ್ಪೆಟ್‌ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್‌ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.

ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು. ಸಂದರ್ಭದಲ್ಲಿ, ದಿವಂಗತ ಚಿ.ಉದಯ್ ಶಂಕರ್ ಅವರಿಗೆ, ಮರಣೋತ್ತರ ‘Lifetime Achievement’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಚಿ.ಉದಯ್ ಶಂಕರ್ ಅವರ ಸುಪುತ್ರರಾದ ಶ್ರೀ ಚಿ.ಗುರುದತ್‌ ಅವರು ಸ್ವೀಕರಿಸಿದರು.

‘Lifetime Achievement’ ಪ್ರಶಸ್ತಿ

ಒಂದು ಕಾಲದಲ್ಲಿ ರೇಡಿಯೋದ್ದೇ ರಾಜ್ಯಭಾರ. ಜನರಿಗೆ ರೇಡಿಯೋದಲ್ಲಿ ಹಾಡು ಕೇಳುತ್ತಲೇ ತಮ್ಮ ಕೆಲಸ ಕಾರ್ಯ ಮಾಡುವುದು ರೂಢಿಯಾಗಿತ್ತು. ಸಿನಿಮಾ ಹಾಡುಗಳು ಕೂಡ ರೇಡಿಯೋ ಮೂಲಕವೇ ಜನರಿಗೆ ಮೊದಲು ತಲುಪುತ್ತಿತ್ತು. ಹಾಡುಗಳೇ ಸಿನಿಮಾಗೆ ಕರೆತರುತ್ತಿತ್ತು. ರೇಡಿಯೋ ಕಾರ್ಯಕ್ರಮದಲ್ಲಿ ವಿಶೇಷವಾಗಿ ಚಲನಚಿತ್ರ ಗೀತೆಗಳ ಪ್ರಸಾರ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರತಿ ಹಾಡಿನ ಪ್ರಸಾರಕ್ಕೆ ಮೊದಲು ಚಿತ್ರದ ಹೆಸರು, ಗೀತರಚನೆಕಾರರ ಹೆಸರು ಮತ್ತು ಸಂಗೀತ ನಿರ್ದೇಶಕರ ಹೆಸರು ಹೇಳಿದ ನಂತರವು ಹಾಡು ಪ್ರಸಾರವಾಗುತ್ತಿತ್ತು. ಆಗೆಲ್ಲಾ ಮತ್ತೆ ಮತ್ತೆ ಕೇಳುಗರ ಸೆಳೆಯುತ್ತಿದ್ದ ಹೆಸರು ಚಿ. ಉದಯಶಂಕರ್. ಹೌದು, ಕಾಲಘಟ್ಟದಲ್ಲಿ ತೆರೆಗೆ ಬರುವ ಬಹುತೇಕ ಚಿತ್ರದ ಹಾಡುಗಳು ಉದಯ್ ಶಂಕರ್ ಲೇಖನಿಯಿಂದಲೇ ಹೊಮ್ಮಿದ್ದವು. ಆರ್ ಎನ್ ಜಯಗೋಪಾಲ್, ವಿಜಯನಾರಸಿಂಹ, ಕು. ಸೀತಾರಾಮ ಶಾಸ್ತ್ರಿಯವರಂತಹ ಹೆಸರಾಂತ ಚಿತ್ರಸಾಹಿತಿಗಳು ಇದ್ದ ಕಾಲಘಟ್ಟದಲ್ಲೇ ಬಹುಬೇಡಿಕೆಯ ಚಿತ್ರಸಾಹಿತಿಯಾಗಿ ಮಿಂಚಿದವರು ಚಿ. ಉದಯಶಂಕರ್. ಅವರ ನಿಜನಾಮ ಚಿಟ್ನಹಳ್ಳಿ ಉದಯಶಂಕರ್. ‘ಸಂತ ತುಕಾರಂಇವರು ಸಂಭಾಷಣೆ ಬರೆದ ಮೊದಲ ಸಿನಿಮಾ. ‘ಸತಿ ಸಾವಿತ್ರಿಚಿತ್ರದಿಂದ ಚಿತ್ರಸಾಹಿತ್ಯ ಶುರು ಮಾಡಿದರು. ನಂತರ ಉದಯಶಂಕರ್ ಸಾಹಿತ್ಯಪರ್ವ ಶುರುವಾಯಿತು. ಇವರ ಲೇಖನಿಯಿಂದ ಜೀವ ಪಡೆದ ಕೊನೆ ಚಿತ್ರ ಗಂಧದ ಗುಡಿ -2.

ಉದಯಶಂಕರ್ ಸದಾ ತಮ್ಮ ಸರಳ, ಸುಂದರ, ಸುಲಲಿತ ಸಾಹಿತ್ಯಕ್ಕೆ ಹೆಸರಾದವರು. ಪಾಮರನಿಂದ ಪಂಡಿತರವರೆಗೆ ಎಲ್ಲರಿಗೂ ಕೇಳಿದೊಡನೆಯೇ ಅರ್ಥವಾಗುವಂತೆ ಬರೆಯುವ ಕಲೆಗಾರಿಕೆ ಉದಯ್ ಶಂಕರ್ ಅವರಿಗೆ ಒಲಿದಿತ್ತು.

ಅಣ್ಣಾವ್ರ ಹಾಡುಗಳ ಯಶಸ್ಸಿನ ಹಿಂದಿನ ಶಕ್ತಿಗಳಲ್ಲಿ ಉದಯಶಂಕರ್ ಒಬ್ಬರು. ಉದಯಶಂಕರ್ ಸಂಭಾಷಣೆ ಅಂದ್ರೆ ಚಿತ್ರದುದ್ದಕ್ಕೂ ಒಂದು ಜೀವಂತಿಕೆ ಇರುತ್ತಿತ್ತು. ಅದರ ಜೊತೆಗೆ ಅವರು ಜನಮಾನಸದಲ್ಲಿ ನೆಲೆ ನಿಲ್ಲಲು ಮುಖ್ಯ ಕಾರಣವೊಂದಿತ್ತು. ಜನರ ಆಡು ಮಾತುಗಳನ್ನೇ ಬಳಸಿ ಹಾಡಾಗಿ ಬರೆದವರು ಉದಯಶಂಕರ್.

ಇಂದು ಕನ್ನಡ ಚಿತ್ರಸಾಹಿತ್ಯ ಉತ್ಕೃಷ್ಟವಾಗಿದೆ ಎಂದರೆ ಅದರ ಹಿಂದಿನ ದೊಡ್ಡ ಕೈ ಉದಯಶಂಕರ್ ಎಂದರೆ ಅತಿಶಯೋಕ್ತಿಯಾಗಲಾರದು. 1963 ರಿಂದ 1993 ತನಕ ಉದಯಶಂಕರ್ ಅವರ ಲೇಖನಿ ವಿರಮಿಸಲೇ ಇಲ್ಲ. ಬದಲಾಗಿ ಹಾಳೆಯೊಡನೆ ರಮಿಸುತಲೇ ಇತ್ತು, ಶೋತೃಗಳನ್ನು ಕಲಾರಸಿಕರನ್ನು ತಣಿಸುತ್ತಲೇ ಇತ್ತು. ಉದಯಶಂಕರ್ ಹಾಡಿನಲ್ಲಿನ ಸತ್ವ, ತತ್ವ, ದೈವತ್ವದ ಪ್ರಭಾವದಿಂದಾಗಿ ಬದಲಾದವರು ಬಹಳ ದೊಡ್ಡ ಸಂಖ್ಯೆಯಲ್ಲಿರಬಹುದು. ಕನ್ನಡ ಚಿತ್ರರಂಗದ ಬಹುತೇಕ ಸಂಗೀತ ನಿರ್ದೇಶಕ ಉದಯ್ ಶಂಕರ್ ಅವರು ಸಾಹಿತ್ಯ ಶಕ್ತಿ ತುಂಬಿದೆ.

ಉದಯಶಂಕರ್ ವಿಶೇಷ ಅನ್ಸೋಕೆ ಮುಖ್ಯ ಕಾರಣ ಅವರು ಸರ್ವಜ್ಞ ಹೇಳಿದ್ದನ್ನು, ಕಡು ಸಂಸ್ಕೃತದಲ್ಲಿರುವುದನ್ನು ಸರಳವಾಗಿಸಿ ಚಿತ್ರಗೀತೆಗಳ ಮೂಲಕ ಶ್ರೀಸಾಮಾನ್ಯನಿಗೆ ತಲುಪಿಸಿದರು. ಅವರ ಸಾಹಿತ್ಯ ಕೇಳುಗರಲ್ಲಿ ಕನ್ನಡ ಪ್ರೀತಿ, ಕನ್ನಡಾಭಿಮಾನ ಹೆಚ್ಚಿಸುವ ಕೆಲಸ ಮಾಡಿದೆ.

ಲಗ್ನಪತ್ರಿಕೆ, ಭಾಗ್ಯದ ಬಾಗಿಲು, ಸಿಂಹಸ್ವಪ್ನ, ಮೇಯರ್ ಮುತ್ತಣ್ಣ, ಭಲೇ ಜೋಡಿ, ಕಸ್ತೂರಿ ನಿವಾಸ, ಕುಲಗೌರವ, ಬಂಗಾರದ ಮನುಷ್ಯ, ನ್ಯಾಯವೇ ದೇವರು, ದೂರದ ಬೆಟ್ಟ, ಸಂಪತ್ತಿಗೆ ಸವಾಲ್, ಎರಡು ಕನಸು, ಮಯೂರ, ದಾರಿ ತಪ್ಪಿದ ಮಗ, ಸನಾದಿ ಅಪ್ಪಣ್ಣ, ಬಹದ್ದೂರ್ ಗಂಡು, ಚಲಿಸುವ ಮೋಡಗಳು, ಕರುಣಾಮಯಿ, ಚಿರಂಜೀವಿ ಸುಧಾಕರ, ಜೀವನ ಚೈತ್ರ, ನಂಜುಂಡಿ ಕಲ್ಯಾಣ, ಆಕಸ್ಮಿಕ, ಒಡಹುಟ್ಟಿದವರು ಸೇರಿದಂತೆ ಅಸಂಖ್ಯಾತ ಸೂಪರ್ ಹಿಟ್ ಚಿತ್ರಗಳಿಗೆ ಉದಯಶಂಕರ್ ಸಾಹಿತ್ಯ ಜೀವ ತುಂಬಿದೆ.

ಡಾ. ರಾಜ್ ಅವರ ಸಿನಿಮಾಗಳ ಯಶಸ್ಸಿನ ಹಿಂದಿನ ಬಹುದೊಡ್ಡ ಶಕ್ತಿ ಉದಯಶಂಕರ್. ಪಾರ್ವತಮ್ಮ, ವರದಪ್ಪನವರು ಒಳ್ಳೆಯ ಕಥೆ ಆಯ್ಕೆ ಮಾಡಿ ಕೊಟ್ಟರೆ, ಉದಯಶಂಕರ್ ಅವರ ಸಾಹಿತ್ಯ ಸಂಭಾಷಣೆ ಅದನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುತ್ತಿತ್ತು. ಬಹುತೇಕ ಸ್ಟಾರ್ ನಟರಿಗೆ ಹಿಟ್ ಗೀತೆಗಳನ್ನು ಕೊಟ್ಟ ಹಿರಿಮೆ ಉದಯಶಂಕರ್ ಅವರಿಗೆ ಸಲ್ಲುತ್ತದೆ. ಆದರೆ ಡಾ. ರಾಜ್ ಮತ್ತು ಉದಯಶಂಕರ್ ಜೋಡಿ ಕನ್ನಡ ಚಿತ್ರರಂಗದ ಮಹೋನ್ನತ ಜೋಡಿ

ಚಿಟ್ನಹಳ್ಳಿ ಉದಯಶಂಕರ್ ಕನ್ನಡ ಚಿತ್ರರಂಗದ ನಿಜವಾದ ಸಾಹಿತ್ಯರತ್ನ. ಅವರ ಚಿತ್ರಸಾಹಿತ್ಯಕೃಷಿ ಯಾವ ಹೆಸರಾಂತಕವಿಯ ಸಾಧನೆಗೂ ಕಮ್ಮಿಯಿಲ್ಲ. ಅವರ ಸಾಹಿತ್ಯ ಇಂದಿಗೂ ನಮ್ಮ ಹೃನ್ಮನದಲ್ಲಿ ನೆಲೆಸಿದೆ. ಉದಯಶಂಕರ್ ಅವರ ರಚನೆಯ ಚಿತ್ರ ಗೀತೆ, ಭಕ್ತಿಗೀತೆಗಳೆಲ್ಲ ಲೆಕ್ಕಕ್ಕೆ ತೆಗೆದುಕೊಂಡರೆ ಸರಿಸುಮಾರು 3000 ಹಾಡುಗಳನ್ನು ರಚಿಸಿದ್ದಾರೆ. ‘ ಭೂತೋ ಭವಿಷ್ಯತಿಎನ್ನುವಂತಹ ಸಾಧನೆಯ ಹರಿಕಾರ.

ಮಹಾನ್ ಸಾಧಕರ ಸಾಧನೆಯನ್ನು ಸ್ಮರಿಸುತ್ತಾ, ಇಂದುಚಿತ್ತಾರ ಮ್ಯೂಸಿಕಲ್ ಅವಾರ್ಡ್ಸ್ – 2025′ ಕಾರ್ಯಕ್ರಮದಲ್ಲಿ ದಿವಂಗತ ಚಿ.ಉದಯ್ ಶಂಕರ್ ಅವರಿಗೆ ಮರಣೋತ್ತರ ‘Lifetime Achievement’ ಪ್ರಶಸ್ತಿ ನೀಡಿದ ಸೌಭಾಗ್ಯ ಚಿತ್ತಾರ ತಂಡದಾಗಿತ್ತು.

Spread the love
Translate »
Right Ad