ಚಿತ್ರ: ಶೆಫ್ ಚಿದಂಬರ
ನಿರ್ದೇಶನ: ಎಂ ಆನಂದರಾಜ್
ತಾರಾಗಣ: ಅನಿರುದ್ಧ್, ನಿಧಿ ಸುಬ್ಬಯ್ಯ, ರಾಚೆಲ್ ಡೇವಿಡ್, ಶರತ್ ಲೋಹಿತಾಶ್ವ, ಸಿದ್ಲಿಂಗು ಶ್ರೀಧರ್
ಆನಂದ್ ರಾಜ್ ನಿರ್ದೇಶನದ, ಅನಿರುದ್ಧ್ ಜಟ್ಕರ್ ಅಭಿನಯದ ಚೆಫ್ ಚಿದಂಬರ ಸಿನಿಮಾ ಕಳೆದ ವಾರವಷ್ಟೇ ರಿಲೀಸ್ ಆಗಿದೆ. ಸಿನಿಮಾ ನೋಡಿಕೊಂಡು ಬಂದವರೆಲ್ಲಾ ಖಂಡಿತ ಇಂತದ್ದೊಂದು ಸಿನಿಮಾ ಬೇಕಿತ್ತು ಎಂದೇ ಮಾತನಾಡುತ್ತಿದ್ದಾರೆ. ಒಂದಷ್ಟು ರಸಭರಿತವಾದ ಹಾಸ್ಯವನ್ನು ಉಣಬಡಿಸಿದ್ದಾರೆ. ಪಕ್ಕಾ ಪೈಸಾ ವಸೂಲ್ ಸಿನಿಮಾ ಎಂದರೆ ತಪ್ಪಾಗಲಾರದು.
ಕಥೆಯ ಸಾರಾಂಶ ಈ ರೀತಿ ಇದೆ:
ತನ್ನದೇ ಆದ ಹೊಟೇಲ್ ಒಂದನ್ನು ಮಾಡಿ, ರುಚಿ ರುಚಿಯಾದ ಅಡುಗೆ ಬಡಿಸಿ ಗ್ರಾಹಕರಿಗೆ ನೀಡಬೇಕು ಎಂಬುದು ಚಿದಂಬರನ ಆಸೆಯಾಗಿರುತ್ತದೆ. ಇದಕ್ಕಾಗಿ ತನ್ನದೇ ಆದ ಹಾದಿಯಲ್ಲಿ ಸಾಗುತ್ತಾ ಇರುತ್ತಾನೆ. ಆತ ಕೊಲೆಗಾರ ಅಲ್ಲ. ಆದರೂ ಆತನ ಕೈಗೆ ಕ್ರೈಮ್ ಅಂಟಿಕೊಳ್ಳುತ್ತದೆ. ಆತ ಯಾರ ರಕ್ತವನ್ನೂ ಹರಿಸಲ್ಲ. ಆದರೂ ಆತನ ಹಿಂದೆ ರಕ್ತದ ಕಲೆಗಳು ಮೂಡುತ್ತವೆ. ಆತನ ಹೆಸರು ಚಿದಂಬರ. ಬಾಣಸಿಗ ವೃತ್ತಿಯ ಈ ಚಿದಂಬರನ ಸುತ್ತ ಹೆಣದ ನೆರಳು ಸುಳಿದಾಡುವುದು ಯಾಕೆ ಮತ್ತು ಹೇಗೆ ಎನ್ನುವುದೇ ‘ಶೆಫ್ ಚಿದಂಬರ’ ಚಿತ್ರದ ಕತೆ. ಹಾಸ್ಯ, ಥ್ರಿಲ್ಲರ್, ಸಸ್ಪೆನ್ಸ್ ಕತೆಯ ಮುಖ್ಯ ಪಿಲ್ಲರ್‌ಗಳು. ಹೆಚ್ಚು ಸಮಯ ತೆಗೆದುಕೊಳ್ಳದೆ ಒಂದು ಸರಳವಾದ ಥ್ರಿಲ್ಲರ್ ಕತೆ ಹೇಳಬೇಕು ಎನ್ನುವ ನಿರ್ದೇಶಕ ಎಂ ಆನಂದರಾಜ್ ಅವರ ಆಲೋಚನೆ ಇಲ್ಲಿ ಕೈ ಹಿಡಿದಿದೆ.
ತುಂಬಾ ಚೆನ್ನಾಗಿ ಅಡುಗೆ ಮಾಡುವ ಬಾಣಸಿಗನ ಪಾತ್ರಧಾರಿ ಚಿದಂಬರನ ಮನೆಯಲ್ಲಿ ಒಬ್ಬನ ಸಾವು ಆಗಿದೆ. ಆ ಡೆಡ್ ಬಾಡಿಗಾಗಿ ಪೊಲೀಸ್ ಬರುತ್ತಾನೆ. ಈ ಪೊಲೀಸ್ ಅಧಿಕಾರಿಯನ್ನು ದಿಕ್ಕು ತಪ್ಪಿಸುತ್ತಾ ಅಮಾಯಕನಂತೆ ನಟಿಸುವ ಚಿದಂಬರ ಮತ್ತೊಂದು ಸಾವಿನ ಪ್ರಕರಣದಲ್ಲಿ ಸಿಲುಕುತ್ತಾನೆ. ಈ ಎರಡೂ ಸಾವಿನ ಪ್ರಕರಣದಲ್ಲಿ ಚಿದಂಬರ ಹೇಗೆ ಹೊರಗೆ ಬರುತ್ತಾನೆ, ಇಷ್ಟಕ್ಕೂ ಸತ್ತವರು ಯಾರು, ಚಿದಂಬರ ಪಾತ್ರವೇ ಇವರನ್ನು ಸಾಯಿಸಿದ್ದಾ ಎಂಬುದು ಚಿತ್ರದ ಸಸ್ಪೆನ್ಸ್.
ಶೆಫ್ ಪಾತ್ರದಲ್ಲಿ ಅನಿರುದ್ಧ್ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ನಿಧಿ ಸುಬ್ಬಯ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದ ಎಲ್ಲಾ ಪಾತ್ರಗಳು ಕೂಡ ಗಮನ ಸೆಳೆಯುತ್ತವೆ. ರಾಚೆಲ್ ಡೇವಿಡ್ ನಾಯಕಿಯಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ತುಂಬಾ ವೇಗವಾಗಿ ಸಾಗುವ ಚಿತ್ರಕಥೆಗೆ ಸಂಗೀತ ಮತ್ತು ಛಾಯಾಗ್ರಹಣ ಪೂರಕವಾಗಿ ಕಾಯ ನಿವಹಿಸಿದೆ. ಸಿದ್ದಲಿಂಗು, ಶ್ರೀಧರ್, ಶರತ್ ಲೋಹಿತಾಶ್ವ, ಶಿವಮಣಿ, ಮಹಾಂತೇಶ್ ಸೇರಿದಂತೆ ಅನೇಕ ಕಲಾವಿದರು ತಮ್ಮ ಪಾತ್ರ ಸಮಪಕವಾಗಿ ನಿವಹಿಸಿದ್ದಾರೆ. ಇನ್ನು ಚಿತ್ರದ ನಾಯಕ ಚಿದಂಬರ ಪಾತ್ರದಲ್ಲಿ ಅನಿರುದ್ಧ್ ಜಟ್ಕರ್, ತುಂಬಾ ದಿನದ ನಂತರ ಹೊಸತರದ ಪಾತ್ರಕ್ಕೆ ಹೊಗ್ಗಿಕೊಂಡಿದ್ದು, ಲೀಲಾಜಾಲವಾಗಿ ಅಭಿನಯಿಸಿದ್ದಾರೆ.
ಬೇರೆ ಭಾಷೆಯಲ್ಲಿ ಹೊಸತನದ ಚಿತ್ರಗಳು ಬರುತ್ತಿವೆ, ಕನ್ನಡದಲ್ಲಿ ಮಾತ್ರ ಯಾಕಿಲ್ಲ ಎನ್ನುವವರಿಗೆ ಚೆಫ್ ಚಿದಂಬರ ಉತ್ತರವಾಗಿ ನಿಲ್ಲುತ್ತದೆ. ಇಡೀ ಕುಟುಂಬ ಸಮೇತವಾಗಿ ನೋಡಬಹುದಾದ ಸಿನಿಮಾ ಚೆಫ್ ಚಿದಂಬರ ಎಂಬುದು ಚಿತ್ತಾರ ಅಭಿಪ್ರಾಯ. ಥಿಯೇಟರ್‌ನಲ್ಲಿ ಇರುವಾಗಲೇ ಸಿನಿಮಾ ನೋಡಿ.