ಹಾಡುಗಳಿಂದಲೇ ಜನಪ್ರಿಯವಾಗುತ್ತಿರುವ ಚೇಸ್
ಬಿಡುಗಡೆಗೆ ಸಿದ್ದವಾಗಿರುವ, ವಿಲೋಕ್ ಶೆಟ್ಟಿ ಅವರ ನಿರ್ದೇಶನದ ಸಸ್ಪೆನ್ಸ್, ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಚೇಸ್ ಇದೀಗ ತನ್ನ ಸುಂದರ ಹಾಡುಗಳಿಂದಲೇ ಸುದ್ದಿಯಾಗುತ್ತಿದೆ. ಈಗಾಗಲೇ ನಾನಾ ದಿಕ್ಕಿನಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಚೇಸ್ ಚಿತ್ರದ ಬಗ್ಗೆ ಇಂಥದ್ದೊಂದು ಕ್ರೇಜ್ ಹುಟ್ಟು ಹಾಕುವಲ್ಲಿ ಹಾಡುಗಳ ಪಾತ್ರ ದೊಡ್ಡದು. ಹಾಡುಗಳು ಸಿನಿಮಾವೊಂದರ ಆಮಂತ್ರಣವೆನ್ನಬಹುದು. ಚಿತ್ರದ ಎಲ್ಲಾ ಹಾಡುಗಳನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು,ಅದರಲ್ಲಿ ಸೂಫಿ ಮತ್ತು ಡ್ಯುಯೆಟ್ ಕಾಂಬಿನೇಷನ್ನಿನ ಮನದಾ ಹೊಸಿಲಾ ಎಂಬ ಹಾಡು ಸಂಗೀತ ಪ್ರೇಮಿಗಳ ಮನ ಮುಟ್ಟಿದೆ. ಅದನ್ನು ವಿಜಯ ಪ್ರಕಾಶ್ ಮತ್ತು ಮನ್ಸೂರ್ ಮೊಹಮದ್ ಹಾಡಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ಗಾಯಕ ಬೆನ್ನಿ ದಯಾಳ್ ಹಾಡಿದ್ದ ಶಾ ಲಾಲಾ ಲವ್ ಎಂಬ ಹಾಡು ಬಿಡುಗಡೆಯಾಗುತ್ತು. ಹೀಗೆ ಪ್ರತಿ ಹಾಡೂ ಒಂದೊಂದು ಶೈಲಿಯಲ್ಲಿ ಮೂಡಿಬಂದಿದ್ದು ಆ ಕಾರಣದಿಂದಲೇ ಪ್ರತಿಯೊಬ್ಬರಿಗೂ ಚೇಸ್ ಆಲ್ಬಂ ಹಿಡಿಸುತ್ತದೆ.
ನಿರ್ದೇಶಕ ವಿಲೋಕ್ ಶೆಟ್ಟಿ ಒಂದು ಹಾಡಿಗೆ, ಉಮೇಶ್ ಪಿಲಿಕುಡೇಲು ಉಳಿದೆಲ್ಲ ಹಾಡುಗಳಿಗೂ ಸಾಹಿತ್ಯ ಒದಗಿಸಿದ್ದಾರೆ. ಇನ್ನುಳಿದಂತೆ ಕಾರ್ತಿಕ್ ಆಚಾರ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಂದಹಾಗೆ ಮನೋಹರ್ ಸುವರ್ಣ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ತಾರಾಗಣವಿದೆ.