ಮನಕಲಕುವ ಮನ ಕೆಣಕುವ ಸದಾ ಕಾಡಿಸುವ ನಾಯಿಯಲಿ ತಾಯಿಯ ಪ್ರೀತಿ ತೋರಿಸೋ ಕಥೆ. ಇದು ಕೇವಲ ಸಾಕು ನಾಯಿಯ ಕಥೆಯಲ್ಲಾ ಕಥೆಯನ್ನೇ ಸಾಕಿಕೊಂಡು ಬರುವ ನಾಯಿಯ ಕಥೆ. ನೋವ ನೋಯುತಾ ಮಮತೆ ಮೆರೆಯುತಾ, ತಾಯ ಕರುಳ ಕಾಳಜಿ ತೋರುತಾ ಮನುಜ ಮತಕೆ ಮಾನವತೆಯ ಧಾರೆ ಎರೆಯುತಾ ಬದುಕಿನ ಕೊನೆ ದಿನಗಳನ್ನು ಬೇಗನೆ ಬರಮಾಡಿಕೊಳ್ಳುತ್ತಾ ಬದುಕುವ ಚಾರ್ಲಿಯ ಕಥೆ. ತುತ್ತಿಗೆ ಋಣಿಯಾಗಿರುವ ನಿಯತ್ತು ಆ ತುತ್ತಿನಿಂದಲೇ ತಾಯಿಯಂತೆ ಆಂಬುಲೆನ್ಸ್ ಹಿಂದೆ ಓಡಿ ಬರುವ ತಾಕತ್ತು. ನಾಯಕನ ಕೊಳಕು ಬದುಕಿನಲಿ ಥಳುಕು ತರುವ ಈ ಪ್ರಾಣಿ ಬದುಕು ಬೇಡದಾಗಿರುವವರಿಗೂ, ಯಾರಿಗೂ ಬೇಡವಾಗಿ ಬದುಕುವವರಿಗೂ ಒಂದು ಪಾಠ. ಜೀವದ ಬೆಲೆ ಮತ್ತು ಜೀವನದ ಮೌಲ್ಯ ಎರಡನ್ನೂ ಹೇಳುತ್ತಾ ಹೋಗುತ್ತದೆ ಈ ಕಥೆ.
ಬದುಕಿನ ಪಯಣದಲಿ ಹುಟ್ಟು ಮೊದಲು ಸಾವು ಕೊನೆ. ನಮ್ಮ ಪಯಣದಲಿ ನಾವು ನಡೆಯುವ ಹಾದಿ, ಅಲ್ಲಿ ನಮಗೆ ದೊರೆಯುವ ಪ್ರೀತಿ, ಸಿಗುವ ಸ್ನೇಹ ಅಲ್ಲಲ್ಲಿ ನಮಗೆ ಯಾರೋ ತೋರಿದ ಮಮಕಾರ ಕೇಳದೆ ಮಾಡಿದ ಉಪಕಾರ ಈ ಎಲ್ಲವೂ ನಮಗೆ ಹೇಗೆ ನೆನಪಿನಲ್ಲಿ ಉಳಿಯುತ್ತದೆ. ನಾವು ಬೇರೆಯವರ ನೆನಪಿನಲ್ಲಿ ಹೀಗೆಯೆ ಉಳಿಯಬೇಕೆಂದರೆ ನಾವು ಪಡೆದದ್ದನ್ನೆಲ್ಲಾ ಮರೆಯದೆ ತಿರುಗಿ ಬೇರೆಯವರಿಗೆ ಕೊಡುತ್ತಾ ಸಾಗಿದರೆ ನಾವು ಯಾರದೋ ನೆನಪಿನಲ್ಲಿ ಉಳಿಯಬಹುದೇನೋ. ಕೊನೆಪಕ್ಷ ನಮಗೆ ಕೊನೆಯ ನಿಲ್ದಾಣದಲಿ ಪಯಣದ ನೆನಪು ಮತ್ತು ನೀಡಿದ ತೃಪ್ತಿ ತಲುಪಿದ ನೆಮ್ಮದಿ ಎಲ್ಲವೂ ಜೊತೆಗಿರುತ್ತದೆ. ಮನುಷ್ಯ ಏನು ಬೇಕಾದರೂ ಕೊಡುತ್ತಾನೆ ಕೊಡುವುದರಲ್ಲೇನು ಕೊರತೆ ಇಲ್ಲಾ ಆದರೆ ಕೊರತೆ ಇರೋದೆ ಅವನು ಕೊಡುವುದೆಲ್ಲವನ್ನು ನಿಷ್ಕಲ್ಮಶವಾಗಿ ಕೊಡುತ್ತಾನಾ ಅನ್ನುವುದು. ಕೊಟ್ಟು ತೆಗೆದುಕೊಳ್ಳುವ ಬದುಕಿನಲಿ ಈ ‘ನಿಷ್ಕಲ್ಮಶ’ ಎಂಬ ಪದದ ಮುಂದೆ ಪ್ರೀತಿ ಎಂದು ಬರೆದರೆ ಅದು ಚಾರ್ಲಿ ೭೭೭ ಆಗುತ್ತದೆ. ನಿಷ್ಕಲ್ಮಶ ಸತ್ವವನ್ನು ಸಾರುವ ಕಥೆಯೇ ೭೭೭ ಚಾರ್ಲಿ. ಈ ಕನ್ನಡ ಚಿತ್ರಕ್ಕೆ ರಾಷ್ಟç ಮಟ್ಟದ ಪ್ರಶಸ್ತಿ ಸಿಕ್ಕಿರುವುದು ಕರುನಾಡಿಗೆ ಹೆಮ್ಮೆ. ಇದು ಎಂದೂ ಮರೆಯಲಾಗದ ಜೀವ ಜೀವನದ ಚಿತ್ರ.