ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ನಾಯಕ, ನಾಯಕಿಯಾಗಿ ನಟಿಸಿರುವ “ಚಾಂಪಿಯನ್” ಚಿತ್ರದ ಟ್ರೇಲರ್ ಡೈನಾಮಿಕ್ ಸ್ಟಾರ್ ದೇವರಾಜ್ ಅವರಿಂದ ಇತ್ತೀಚಿಗೆ ಬಿಡುಗಡೆಯಾಯಿತು. ಚಿತ್ರ ಅಕ್ಟೋಬರ್ 14 ರಂದು ತೆರೆಗೆ ಬರುತ್ತಿದೆ
ನಾನು ಹದಿನಾಲ್ಕು ವರ್ಷಗಳ ಹಿಂದೆ ನನ್ನ ಸ್ನೇಹಿತ ಸಚಿನ್ ಧನಪಾಲ್ ಗೆ ಹೇಳಿದ್ದೆ. ನನಗೇನಾದರೂ ತುಂಬಾ ದುಡ್ಡು ಬಂದರೆ, ನಿನ್ನನ್ನು ಸಿನಿಮಾ ಹೀರೋ ಮಾಡುತ್ತೀನಿ ಎಂದು. ಈಗ ಆ ಮಾತು ನಿಜವಾಗಿದೆ. ಸಚಿನ್ ಧನಪಾಲ್ ನಾಯಕನಾಗಿ ನಟಿಸಿರುವ “ಚಾಂಪಿಯನ್” ಚಿತ್ರವನ್ನು ನಾನು ನಿರ್ಮಾಣ ಮಾಡಿದ್ದೀನಿ. ಚಿತ್ರ ಅಕ್ಟೋಬರ್ 14 ರಂದು ಬಿಡುಗಡೆಯಾಗಲಿದೆ. 2019 ರಲ್ಲಿ ಈ ಚಿತ್ರ ಆರಂಭವಾಯಿತು. ನಂತರ ಕೋವಿಡ್.. ಆನಂತರ ನಮ್ಮ ಚಿತ್ರದ ನಿರ್ದೇಶಕ ಶಾಹುರಾಜ್ ಶಿಂಧೆ ಅವರ ಹಠಾತ್ ನಿಧನ. ಈ ರೀತಿ ಹಲವು ಅಡೆತಡೆಗಳನ್ನು ದಾಟಿ ಈಗ ಚಿತ್ರ ಬಿಡುಗಡೆ ಹಂತ ತಲುಪಿದೆ.
ಉತ್ತರ ಕರ್ನಾಟಕದ ನನ್ನ ಸ್ನೇಹಿತರು ತಮ್ಮದೇ ಚಿತ್ರ ಅನ್ನುವ ಹಾಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಹಾಗೂ ಸಚಿನ್ ಕುಟುಂಬದವರು ಸಾಕಷ್ಟು ಜನ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಮಿಯಲ್ಲಿ ನಮಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರ ಬೆಂಬಲ ಕೂಡ ನಮ್ಮಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಶಿವಾನಂದ ಎಸ್ ನೀಲಣ್ಣನವರ್.
ನಾನು ಚಿತ್ರದಲ್ಲಿ ನಟಿಸುತ್ತೇನೆ ಎಂದು ಅಂದು ಕೊಂಡಿರಲಿಲ್ಲ. ಏಕೆಂದರೆ ನನ್ನ ತಂದೆ, ತಮ್ಮ ಎಲ್ಲಾ ಆರ್ಮಿಯಲ್ಲಿದ್ದಾರೆ. ನಾನು ಸಹ ಪರೀಕ್ಷೆ ಬರೆದಿದ್ದೆ. ಆದರೆ ಸೆಲೆಕ್ಟ್ ಆಗಲಿಲ್ಲ. ಹನ್ನೆರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದೆ. ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತ ಶಿವಾನಂದ, ಕೊಟ್ಟ ಮಾತಿನಂತೆ “ಚಾಂಪಿಯನ್” ಚಿತ್ರದ ಮೂಲಕ ನನ್ನನ್ನು ಹೀರೋ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಅದಿತಿ ಪ್ರಭುದೇವ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಸನ್ನಿಲಿಯೋನ್ ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಸರ್ ಗೆ, ಸಮಾರಂಭಕ್ಕೆ ಆಗಮಿಸಿರುವ ಲಹರಿ ವೇಲು ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ಮುಂದಿನ ತಿಂಗಳ ಹದಿನಾಲ್ಕು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಪ್ರೋತ್ಸಾಹ ನೀಡಿ ಎಂದರು ನಾಯಕ ಸಚಿನ್ ಧನಪಾಲ್.
ನಾನು ಈ ಚಿತ್ರದಲ್ಲಿ ನಟಿಸಲು ಪ್ರಮುಖ ಕಾರಣ ನಿರ್ದೇಶಕ ಶಾಹುರಾಜ್ ಶಿಂಧೆ. ಇಂದು ಅವರಿಲ್ಲದಿರುವುದು ತುಂಬಾ ದುಃಖದ ವಿಷಯ. ಉತ್ತರ ಕರ್ನಾಟಕದ ನಿರ್ಮಾಪಕ ಶಿವಾನಂದ್ ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಸ್ನೇಹಿತನಿಗಾಗಿ ಅವರು ಚಿತ್ರ ನಿರ್ಮಾಣ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ. ಮೊದಲ ಚಿತ್ರದಲ್ಲೇ ಸಚಿನ್ ಚೆನ್ನಾಗಿ ನಟಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ನಿಮ್ಮೆಲ್ಲರ ಬೆಂಬಲ ನಮ್ಮ ಚಿತ್ರಕ್ಕಿರಲಿ ಎಂದು ನಟಿ ಅದಿತಿ ಪ್ರಭುದೇವ ತಿಳಿಸಿದರು.
ನನ್ನ ಮನೆಗೆ ಶಿವಾನಂದ್ ಹಾಗೂ ಸಚಿನ್ ಅವರು ಬಂದಿದಾಗ ನಾನು, ನಿರ್ಮಾಪಕ ಹಾಗೂ ಹೀರೋ ಬಂದಿದ್ದಾರೆ ಅಂದು ಕೊಂಡಿದ್ದೆ. ಆನಂತರ ಇವರ ಸ್ನೇಹದ ಬಗ್ಗೆ ತಿಳಿದು ಆನಂದವಾಯಿತು. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು ನಟ ದೇವರಾಜ್. ಲಹರಿ ವೇಲು “ಚಾಂಪಿಯನ್” ಗೆ ಶುಭ ಕೋರಿದರು. ಛಾಯಾಗ್ರಾಹಕ ಸರವಣನ್ ನಟರಾಜನ್ ಹಾಗೂ ನೃತ್ಯ ನಿರ್ದೇಶಕ ಧನು ಮಾಸ್ಟರ್ ಚಿತ್ರದ ಬಗ್ಗೆ ಮಾತನಾಡಿದರು.