ಕೆಲವರು ಬದುಕಿನಲ್ಲಿ ಹಳೆಯದನ್ನೆಲ್ಲ ಮರೆತು ಮುನ್ನಡೆಯುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ಇನ್ನು ಕೆಲವರು ಸಮಯ-ಸಂದರ್ಭ ಕೂಡಿ ಬಂದಾಗ ತಮ್ಮ ಇಷ್ಟದ ಹುಡುಗ ಸಿಕ್ಕಾಗ ಮರು ಮದುವೆಯ ಆಲೋಚನೆ ಮಾಡುತ್ತಾರೆ. ಎರಡನೇ ಮದುವೆಯಾಗುವುದರ ಮೂಲಕ ಹೊಸ ಜೀವನ ಆರಂಭ ಮಾಡುತ್ತಾರೆ. ಉದಾಹರಣೆಗೆ ಚೈತ್ರಾ ವಾಸುದೇವನ್.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಚೈತ್ರಾ ವಾಸುದೇವನ್ ಎರಡನೇ ಮದುವೆಯಾಗುತ್ತಿರುವ ವಿಚಾರವನ್ನು ಖುಷಿಯಿಂದ ಹಂಚಿಕೊಂಡಿದ್ದರು. ಚೈತ್ರಾ ಅವರ ಅಭಿಮಾನಿಗಳು ಕೂಡ ಈ ಸುದ್ದಿಯನ್ನು ಕೇಳಿ ಅಭಿನಂದನೆ ಸಲ್ಲಿಸಿದ್ದರು. ಆದರೆ, ಚೈತ್ರಾ ಮದುವೆಯಾಗುತ್ತಿರುವ ಸುದ್ದಿಯನ್ನು ಮಾತ್ರ ಹೇಳಿದ್ದರಾದರೂ ಮದುವೆಯಾಗುತ್ತಿರುವ ಹುಡುಗ ಯಾರು ? ಆ ಹುಡುಗನ ಹಿನ್ನೆಲೆ ಏನು ? ಎನ್ನುವ ವಿಚಾರವನ್ನು ಹಂಚಿಕೊಂಡಿರಲಿಲ್ಲ.ಮೊನ್ನೆಯಷ್ಟೇ ತಮ್ಮ ಹುಡುಗನ ಜೊತೆ ಪ್ಯಾರಿಸ್ ಸುತ್ತಾಡಿಕೊಂಡು ಅಲ್ಲಿಯೇ ಪ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸಿಕೊಂಡು ಬಂದಿರುವ ಚೈತ್ರಾ ಈಗ ತಮ್ಮ ಹುಡುಗನ ಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ದೇವಾಲಯವೊಂದರಲ್ಲಿ ಪಿಂಕ್ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಜಗದೀಪ್ ಎಲ್, ಚೈತ್ರಾ ಅವರನ್ನು ಮದುವೆಯಾಗುತ್ತಿರುವ ಹುಡುಗ. ಜಗದೀಪ್ ಫಿಟ್ನೆಸ್ ಕಡೆ ಒಲವು ಇರುವ ವ್ಯಕ್ತಿ. ಬೈಕ್ ಕ್ರೇಜ್ ಕೂಡ ಹೊಂದಿರುವ ಜಗದೀಪ್ ಅವರಿಗೆ ಚೈತ್ರಾ ಅವರಂತೆಯೇ ಪ್ರವಾಸಕ್ಕೆ ತೆರಳುವುದು ಇಷ್ಟ. ಮಾರ್ಚ್‌ನಲ್ಲಿ ಮದುವೆ ಎನ್ನುವುದಷ್ಟೇ ಸದ್ಯಕ್ಕೆ ಗೊತ್ತಿರುವ ವಿಚಾರ. ಇದರ ನಡುವೆ ಇಂದು ಸರಳವಾಗಿ ಇಬ್ಬರ ನಿಶ್ಚಿತಾರ್ಥ ಸಮಾರಂಭ ನಡೆಯಿತಾ ಎನ್ನುಚ ಪ್ರಶ್ನೆ ಕೂಡ ಅನೇಕರನ್ನು ಕಾಡುತ್ತಿದೆ. ಚೈತ್ರಾ ವಾಸುದೇವನ್ ಮತ್ತು ಜಗದೀಪ್ ಎಲ್ ಅವರ ಈ ಕಣ್ ಕಣ್ ಸಲಿಗೆಯ ಫೋಟೊಗೆ ಅನೇಕರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಮನಸಾರೆ ಶುಭಾಶಯಗಳನ್ನು ಹೇಳುತ್ತಿದ್ದಾರೆ.