Sandalwood Leading OnlineMedia

ಛಾವಾ ; ಪ್ರತಿಧ್ವನಿಸುತ್ತಿದೆ ಸಂಭಾಜಿ ಎಂಬ ಸಿಂಹದ ಮರಿಯ ಘರ್ಜನೆ

ಇತಿಹಾಸ ಪಾಠಗಳು ಎಷ್ಟೆಲ್ಲ ಮೋಸಮಾಡಿಬಿಟ್ವಲ್ಲ.. ಎಷ್ಟೆಲ್ಲ ಸತ್ಯಗಳನ್ನು ಮರೆಮಾಚಿಬಿಟ್ಟಿತಲ್ಲ… ಅಂತ ಪದೇಪದೆ ಅನಿಸ್ತಿರುತ್ತೆ. ನಿನ್ನೆ ಮತ್ತೆ ಹಾಗೇ ಅನಿಸಿ ಸಿಟ್ಟು ಬೇಸರ ಆಕ್ರೋಶ ಕಣ್ಣೀರು ಎಲ್ಲವನ್ನೂ ಹುಟ್ಟಿಸಿತು. ಕಾರಣ ’ಛಾವಾ’. ನಾವು ಓದಿದ ಇತಿಹಾಸ ಪಾಠದಲ್ಲಿ ಮರಾಠರು ಮತ್ತು ಪೇಶ್ವೆಗಳು ಅಂತ ಒಂದು ನಾಮಕಾವಾಸ್ತೆ ಪಾಠ ಇತ್ತು. ಶಿವಾಜಿಯ ಬಗ್ಗೆ ಚೂರಾದ್ರೂ ಹೇಳದೇ ಹೋದ್ರೆ ಚಿಕ್ಕ ಮಕ್ಕಳು ಕೂಡ ತಿರುಗಿಸಿ ಒದ್ದುಬಿಡ್ತಾರೆ ಅಂತಾನೋ ಏನೋ ಕೆಲವು ಸಾಲುಗಳಲ್ಲಿ ಶಿವಾಜಿಯ ಪರಾಕ್ರಮವನ್ನು, ರಾಜಾವಧಿಯನ್ನು, ಔರಂಗಜೇಬನ ಜೊತೆಗಿನ ಆತನ ಹಣಾಹಣಿಗಳನ್ನು ಸಂಕ್ಷಿಪ್ತವಾಗಿ ಹೇಳಲಾಗಿತ್ತು. ಆದರೆ ಸಾಂಭಾಜಿ ಬಗ್ಗೆ.. ಉಹೂಂ… ಏನಂದ್ರೆ ಏನೂ ಇರ್ಲಿಲ್ಲ. ಶಿವಾಜಿಯ ಬಗ್ಗೆ ಕೆಲವು ಚಿಕ್ಕ ಪ್ಯಾರಾಗ್ರಾಫ್ ….. ಶಿವಾಜಿ 1630ರಲ್ಲಿ ಹುಟ್ಟಿದ. ತಂದೆ ಶಹಜಿ, ತಾಯಿ ಜೀಜಾಬಾಯಿ, ಯುದ್ಧವಿದ್ಯೆ ಕಲಿಸಿದ್ದು ದಾದಾಜಿ ಕೊಂಡದೇವ, ಶಿವಾಜಿಗೆ ಛತ್ರಪತಿ ಅಂತ ಬಿರುದು ಇತ್ತು, ಜೀಜಾಬಾಯಿ ಶಿವಾಜಿಯಲ್ಲಿ ಧೈರ್ಯ ದೇಶಪ್ರೇಮ ಬಿತ್ತಿದಳು.. ಮೊಘಲ್ ದೊರೆ ಔರಂಗಜೇಬ ಶಿವಾಜಿಯ ವೈರಿಯಾಗಿದ್ದನು. ಶಿವಾಜಿ 1680ರಲ್ಲಿ ಕಾಲವಾದನು. ಇಷ್ಟು ಹೇಳಿ.. ಆ ನಂತರ ಸಾಂಭಾಜಿ ಬಗ್ಗೆ ಒಂದು ಸಾಲು.
 
ಶಿವಾಜಿ ಮರಣದ ನಂತರ ಆತನ ಮಗ ಸಾಂಭಾಜಿಯನ್ನು ಔರಂಗಜೇಬ ಕೊಲ್ಲಿಸಿದನು. ನಂತರ ಬಂದ ಸಾಹು ಕೂಡ ಬಹುಕಾಲ ಉಳಿಯಲಿಲ್ಲ. ಅಲ್ಲಿಗೆ ಮರಾಠರ ಅವಧಿ ಅಂತ್ಯವಾಯಿತು.
ಹೀಗೆ ಮರಾಠರ ಇತಿಹಾಸವನ್ನು ಮುಗಿಸಿಬಿಟ್ಟಿದ್ದರು, ನಮಗೆ ಪಾಠ ರಚಿಸಿಕೊಟ್ಟ ಇತಿಹಾಸಕಾರರು. ಸ್ವಂತ ಆಸಕ್ತಿಯಿಂದ ಕೆಲವು ಮೇಷ್ಟ್ರುಗಳು ಶಿವಾಜಿಯ ಶೌರ್ಯ ಪರಾಕ್ರಮಗಳ ಬಗ್ಗೆ ತಿಳಿಸದೇ ಹೋಗಿದ್ದಿದ್ದರೆ ನಮಗೆ ಮೊಘಲ ರಾಜರೇ ಹೀರೋಗಳಾಗಿರ್ತಿದ್ರು. ಶಿವಾಜಿ ಒಬ್ಬ ಬಂದ ಹೋದ ಎಂಬ ರಾಜನಾಗಿರುತ್ತಿದ್ದ. ಆದರೆ ಸಾಂಭಾಜಿಯ ಜೀವನಗಾಥೆಯನ್ನು ಯಾರೊಬ್ಬರೂ ನನ್ನ ಬಾಲ್ಯದಲ್ಲಿ ಹೇಳಲೇ ಇಲ್ಲ. ಅಮರಚಿತ್ರಕಥೆಗಳಲ್ಲೂ ಶಿವಾಜಿ ಸಿಕ್ಕಷ್ಟು ಸಾಂಭಾಜಿ ಸಿಗಲಿಲ್ಲ. ಹೈಸ್ಕೂಲ್ ಮುಗಿದ ನಂತರವೇ ಸಾಂಭಾಜಿ ಎಂಬ ರಣರೋಮಾಂಚಕ ವ್ಯಕ್ತಿತ್ವದ ಪರಿಚಯವಾಗಿದ್ದು.
ಬಾಬರ್, ಹುಮಾಯೂನ್, ಅಕ್ಬರ್, ಜಹಾಂಗೀರ್, ಶಹಜಹಾನ್ ಎಲ್ಲರೂ ಇತಿಹಾಸ ಪಾಠದಲ್ಲಿ ಹೀರೋಗಳು, ಕಲೋಪಾಸಕರು, ವಿನೋದಪ್ರಿಯರು, ಹಾಸ್ಯಪ್ರಜ್ಞೆ ಉಳ್ಳವರು, ಭಾರತದ ಸಂಸ್ಕೃತಿಯ ಶಿಲ್ಪಿಗಳು, ಭಾರತದ ನಿರ್ಮಾತೃಗಳು! ಕರ್ನಾಟಕದ ಇತಿಹಾಸದಲ್ಲಿ ಟಿಪ್ಪೂ ಹೈದರ್ ಕೂಡ ಮೊಘಲರಷ್ಟೇ ಬಿಲ್ಡಪ್ ತಗೊಂಡ ಕ್ಯಾರಕ್ಟರ್ ಗಳು. ಆದರೆ ಕಾಲ ಬದಲಾಗಿದೆ. ಸುಳ್ಳು ಇತಿಹಾಸವನ್ನು ನಂಬಿಸಿ ಜಯಿಸಿಕೊಳ್ಳೋ ಕಾಲವಿಲ್ಲ ಈಗ. ಅಂತೆಯೇ ಬಾಲಿವುಡ್ ಕೂಡ ಬದಲಾಗಿದೆ. ಹೀಗಾಗಿ ಸಂಭಾಜಿ ಎಂಬ ಸಿಂಹದಮರಿಯ ಬಚ್ಚಿಟ್ಟ ಇತಿಹಾಸ ತೆರೆ ಮೇಲೆ ಬಂದಿದೆ. ಛಾವಾ ಎಂಬ ಸಿನಿಮಾರೂಪದಲ್ಲಿ.
 
ಸಿನಿಮಾದಲ್ಲಿ ತೋರಿಸಿರೋದು ಏನೇನೂ ಅಲ್ಲ. ಮುಘಲರ ಕ್ರೌರ್ಯದ ಒಂದು ಪರ್ಸೆಂಟ್ ಮತ್ತು ಸಾಂಭಾಜಿಯ ಧೈರ್ಯಶೌರ್ಯಪರಾಕ್ರಮದ ಅರ್ಧಪರ್ಸೆಂಟ್ ಹಾಗೂ ಸಾಂಭಾಜಿಗೆ ಕೊಟ್ಟ ಚಿತ್ರಹಿಂಸೆಯ ಐದುಪರ್ಸೆಂಟ್ ಮಾತ್ರವೇ ಸಿನಿಮಾದಲ್ಲಿ ತೋರಿಸಿರೋದು. ಚಾವಾ ಸಿನಿಮಾ ಅಲ್ಲ.. ಇತಿಹಾಸದ ಅಸಲಿ ಪುಟಗಳ ಸಾರಾಂಶ ಅಷ್ಟೆ. ಸಾಂಭಾಜಿ ಪಾತ್ರವನ್ನು ಜೀವಿಸಿರೋ ವಿಕ್ಕಿ ಕೌಶಲ್, ಔರಂಗಜೇಬನೆಂಬ ಕ್ರೂರಮೃಗದ ಪಾತ್ರದಲ್ಲಿರೋ ಅಕ್ಷಯೀ ಖನ್ನಾ ನಿಮ್ಮನ್ನು ನೇರ ಹದಿನೇಳನೇ ಶತಮಾನಕ್ಕೆ ಕರೆದೊಯುತ್ತಾರೆ. ಔರಂಗಜೇಬನ ಕ್ರೌರ್ಯದ ಬಗ್ಗೆ ಕೇಳಿದವರಿಗೆ ಸಿನಿಮಾದಲ್ಲಿ ತೋರಿಸಿದ್ದು ತೀರಾ ಕಮ್ಮಿ ಅಂತಲೇ ಅನಿಸುತ್ತೆ. ( ಹೌದು ಕಮ್ಮಿ ಅನಿಸುತ್ತೆ.) ಇವರಿಬ್ಬರ ಮುಖಾಮುಖಿಯ ನಂತರದ ಆ ಕೊನೆಯ ಅರ್ಧಗಂಟೆಗೋಸ್ಕರವಾದ್ರೂ ಈ ಸಿನಿಮಾ ಮಿಸ್ ಮಾಡದೇ ನೋಡ್ಲೇಬೇಕು.
 
ಹಾ.. ಕನ್ನಡದ ನಟ ಬಾಲಾಜಿ ಮನೋಹರ್ ಇದಾರೆ. ಅವರಿಗೆ ಒಂದೊಳ್ಳೇ ಪಾತ್ರ ಸಿಕ್ಕಿದೆ. ಹೈದರಾಬಾದಲ್ಲಿ ಹುಟ್ಟಿದ ರಶ್ಮಿಕಾ ಮಂದಣ್ಣ ಸಾಂಭಾಜಿಯ ಪತ್ನಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾಳೆ.
ತಮಾಷೆ ಅಲ್ಲ.. ರಶ್ಮಿಕಾ ಮಂದಣ್ಣ ಚಿತ್ರದಿಂದ ಚಿತ್ರಕ್ಕೆ ಮಾಗುತ್ತಿದ್ದಾಳೆ. ಪುಷ್ಪ 2 ಚಿತ್ರದಲ್ಲಿ ಆಕೆಯ ನೋಡಿ ಅಚ್ಚರಿ ಪಟ್ಟಿದ್ದ ನನಗೆ,ಛಾವಾ ಕೂಡ ಅಚ್ಚರಿ ನೀಡಿದೆ. ಅವಳ ಪ್ರೊಫೆಶನಲ್ ಬೆಳವಣಿಗೆಯನ್ನು, ನಟನೆಯಲ್ಲಿ ಆಕೆಗೆ ಬಂದಿರೋ ಪ್ರಬುದ್ಧತೆ ಮತ್ತು ಅಡಾಪ್ಟಬಲಿಟಿಯನ್ನು ಮೆಚ್ಚದೇ ಇರೋಕೆ ನನ್ನಿಂದ ಸಾಧ್ಯವೇ ಇಲ್ಲ. ಅಕ್ಷಯಿ ಖನ್ನ ಅಂದ್ರೆ ನಂಗೆ ಸಿಕ್ಕಾಪಟ್ಟೆ ಇಷ್ಟ. ಆದರೆ ಆ ಅಕ್ಷಯ್ ಖನ್ನಾ ಇಡೀ ಸಿನಿಮಾದಲ್ಲಿ ಎಲ್ಲಂದ್ರೆ ಎಲ್ಲೂ ಕಾಣಲಿಲ್ಲ. ಕಂಡಿದ್ದು ಔರಂಗಜೇಬ್ ಔರಂಗಜೇಬ್ ಔರಂಗಜೇಬ್. ಅದು ಅಕ್ಷಯ್ ಖನ್ನಾನನ್ನು ನಾನು ಇನ್ನಷ್ಟು ಇಷ್ಟ ಪಡೋಕೆ ಕಾರಣವಾಯ್ತು.
 
ಹೌಜ್ ದ ಜೋಶ್ …. ಹೈ ಸರ್ ! ಅಂತ ಹೇಗೆ ಉರಿ ಚಿತ್ರದಲ್ಲಿ ವಿಕಿ ಕೌಶಾಲ್ ನಮ್ಮಿಂದ ಹೇಳಿಸಿದ್ನೋ.. ಹಾಗೆ ಇಲ್ಲಿ ಸಾಂಭಾಜಿಯಾಗಿ ಹರಹರಮಹಾದೇವ್ ಅಂತ ಹೇಳಿಸ್ತಾನೆ. ಜಗದಂಬೆ ಹೆಸರು ಪಠಿಸುವಂತೆ ಮಾಡ್ತಾನೆ… ವಿಕಿ ಕೌಶಾಲ್ ಅದು. ಸಾಂಭಾಜಿ ಅಲ್ಲ ಅಂತ ಒಪ್ಕೊಳೋಕೆ ಬಹುಶಃ ನಮಗೆ ಅವನ ಇನ್ನೊಂದು ಸಿನಿಮಾ ನೋಡಬೇಕಾಗಬಹುದು.

Share this post:

Translate »