ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಒಳಗಿನ ‘ರಾಜಾತಿಥ್ಯ’ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಈ ಘಟನೆ ಹೊಸ ತಿರುವು ಪಡೆದಿದೆ. ಇದೀಗ ದರ್ಶನ್ ಅವರ ಆಪ್ತ ಗೆಳೆಯ ಹಾಗೂ ನಟ ಧನ್ವೀರ್ ಸಿಸಿಬಿ ಪೊಲೀಸರ ರಾಡಾರಿನಲ್ಲಿದ್ದಾರೆ.

ವಿಡಿಯೋ ಬಿಡುಗಡೆ ಹಿನ್ನೆಲೆ ಪೋಲಿಸ್ ಇಲಾಖೆಗೆ ಮುಜುಗರ ತಂದಿರುವ ಕಾರಣ, ಸಿಸಿಬಿ ಪೊಲೀಸರು ಧನ್ವೀರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಡಿಯೋ ಬಿಡುಗಡೆಗೆ ಧನ್ವೀರ್ ಅವರ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ತನಿಖೆ ಈಗ ಗಂಭೀರ ಹಂತಕ್ಕೆ ತಲುಪಿದೆ.
ಭಾನುವಾರದಿಂದಲೇ ಪೊಲೀಸರು ಧನ್ವೀರ್ ಅವರನ್ನು ವಿಚಾರಣೆಗೊಳಪಡಿಸಿದ್ದು, ಅವರ ಮೊಬೈಲ್ ಫೋನ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (Forensic Lab) ಕಳುಹಿಸಲಾಗಿದೆ. ತನಿಖೆಯ ಭಾಗವಾಗಿ ಸಿಸಿಬಿ ತಂಡ ಧನ್ವೀರ್ ಮೇಲೆ ನಿಖರವಾಗಿ “ಡ್ರಿಲ್” ನಡೆಸುತ್ತಿದ್ದು, ಅವರು ಸಿಸಿಬಿ ವಶದಲ್ಲೇ ಇದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದೇ ವೇಳೆ, ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿಯೂ ಹೊಸ ಚರ್ಚೆ ನಡೆಯಿತು. ದರ್ಶನ್‌ಗೆ ದಿಂಬು, ಹಾಸಿಗೆ ಸೇರಿದಂತೆ ಕೆಲವು ಮೂಲಭೂತ ಸೌಲಭ್ಯ ನೀಡಬೇಕು ಎಂಬ ವಾದವನ್ನು ವಕೀಲರು ಮಂಡಿಸಿದರು. “ಇತರ ಕೈದಿಗಳಿಗೆ ಸಿಗುವ ಸವಲತ್ತುಗಳು ದರ್ಶನ್‌ಗೆ ಮಾತ್ರ ನಿರಾಕರಿಸಲಾಗುತ್ತಿದೆ,” ಎಂದು ವಾದಿಸುತ್ತಾ, ಸಮಾನತೆ ಕೋರಿ ಮನವಿ ಸಲ್ಲಿಸಿದರು.
