ಚಂದನವನದ ಗಾಳಿ ಕುಡಿದರೆ ಸಾಕು ಚಂದನವನ ತೊರೆದು ಹೋಗುವುದು ಸುಲಭದ ಮಾತಲ್ಲ. ಗಾಳಿಯ ಗಂಧದಲ್ಲಿ ಗಂಧದ ಅಮಲಲ್ಲಿ ಮುಳುಗದ ಮನವೇ ಇಲ್ಲ ಅನ್ನಬಹುದು. ಚಂದನವನದ ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್‌ರವರ ಪುತ್ರ ರಾಜವರ್ಧನ್‌ರವರು ಚಂದನವನಕ್ಕೆ ಲಗ್ಗೆ ಇಟ್ಟ ಆರಡಿ ಕಟೌಟ್. ಈ ಆರಡಿ ಕಟೌಟ್ ಬಿಚ್ಚುಗತ್ತಿ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಚಂದನವನದ ಮತ್ತೊಂದು ಕಲಾವಿದರ ಮನೆಯ ಕುಡಿ. ಕಲೆಯ ನೆತ್ತರು ಕಲೆಯ ನರದಲ್ಲಿ ಹರಿಯದೆ ಮತ್ತೆಲ್ಲಿ ಹರಿಯುತ್ತದೆ ಹೇಳಿ!?
ತಂದೆ ಡಿಂಗ್ರಿ ನಾಗರಾಜ್ ಕನ್ನಡ ಸಿನಿಮಾ ರಂಗದಲ್ಲಿ ಏಳನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಮಹಾನ್ ಹಾಸ್ಯ ಕಲಾವಿದ. ಆದರೆ ಮಗ ರಾಜವರ್ಧನ್‌ಗೆ ಏಕೋ ಸಿನಿಮಾದ ಮೇಲೆ ಆಸಕ್ತಿ ಬೆಳೆಯಲಿಲ್ಲ. ಚಿಕ್ಕಂದಿನಿಂದಲೂ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟರು. ಓದಿನಲ್ಲಿ ಕ್ರೀಡೆಯಲ್ಲಿ ಇತರೆ ಚಟುವಟಿಕೆಗಳಲ್ಲಿ ಮುಂದಿದ್ದ ರಾಜವರ್ಧನ್ ಯಾಕೋ ನಟನೆಯ ಮೇಲೆ ಮುಗಿ ಬೀಳಲಿಲ್ಲ ಮೈಯೊಳಗೆ ಕಲೆಯ ನೆತ್ತರು ಹುದುಗಿ ಹರಿಯುತ್ತಿದ್ದರು ಅದರ ಬಿಚ್ಚುಗತ್ತಿ ಏಕೋ ಆಗಿನ್ನು ಕಲಾ ಹೃದಯವನ್ನು ತಟ್ಟಿರಲಿಲ್ಲ.
ಸಿನಿಮಾ ನನ್ನ ಬದುಕಲ್ಲ. ನನ್ನ ಬದುಕೇನಿದ್ದರೂ ಬೇರೇನೆ ಎಂದುಕೊಂಡು, ಚಿತ್ರರಂಗದ ಮರದಲ್ಲೇ ಇರುವ ಕಾಯಾದರೂ ಇಪ್ಪತ್ಮೂರು ವರುಷ ಎಲೆ ಮರೆಯಾಗಿದ್ದರು ರಾಜವರ್ಧನ್. ಈ ಎಂಟೆದೆಯ ಭಂಟನನ್ನು ಚಿತ್ರರಂಗಕ್ಕೆ ಕರೆ ತಂದವರು ಯಾರು? ಎಂದೂ ಬಯಸದ ಚಿತ್ರರಂಗ ಇವರನ್ನು ಬಾಚಿ ತಬ್ಬಿಕೊಂಡದ್ದು ಹೇಗೆ? ಮುಂದೆ ಓದೋಣ ಬನ್ನೀ……
* ಒಂದು ದಿನಕ್ಕೂ ಶೂಟಿಂಗ್‌ಗೆ ಹೋಗಲಿಲ್ಲ.
ಡಿಂಗ್ರಿ ನಾಗರಾಜ್‌ರವರು ಆ ಕಾಲದಲ್ಲಿ ಬಿಡುವಿಲ್ಲದ ಹಾಸ್ಯ ಕಲಾವಿದ. ಅವರಿಗಾಗಿ ಪಾತ್ರಗಳೂ ಸೃಷ್ಠಿಯಾಗುತ್ತಿದ್ದವು, ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸರತಿ ಸಾಲಿನಲ್ಲಿ ನಿಂತಿರುತ್ತಿದ್ದವು. ದಿನವೂ ಬಿಡುವಿಲ್ಲದ ಚಿತ್ರೀಕರಣ, ಹೀಗಿರುವಾಗ ಮಗನಿಗೆ ಒಂದು ದಿನವೂ ಸಿನಿಮಾ ಚಿತ್ರೀಕರಣ ನೋಡುವ ಆಸೆಯಾಗಲಿ, ಅಪ್ಪನ ಅಭಿನಯವನ್ನು ನೋಡುವ ಆಸೆ ಆಗಲೀ ರಾಜವರ್ಧನ್‌ಗೆ ಬರಲಿಲ್ಲ. ಇವರು ಕಲೆಯ ಸಹವಾಸದಿಂದ ದೂರ ಮತ್ತು ಓದಿಗೆ, ಕ್ರೀಡೆಗೆ ಹತ್ತಿರ. ಕೊನೆ ಪಕ್ಷ ಶಾಲಾ ಕಾಲೇಜುಗಳಲ್ಲಿ ಒಬ್ಬ ಕಲಾವಿದರ ಮಗನಾಗಿ ಒಂದು ಡ್ರಾಮಾ ಮಾಡಲಾದರೂ ಸ್ಟೇಜ್ ಹತ್ತಿದ್ದಾರ ? ಹಾಂ ಸ್ಟೇಜ್ ಹತ್ತಿದ್ದಾರೆ. ಯಾವುದಕ್ಕೆ ಅಂದರೆ ಕ್ರೀಡೆಯಲ್ಲಿ ಅವರಿಗೆ ಬಂದ ಬಹುಮಾನವನ್ನು ತೆಗೆದುಕೊಳ್ಳುವುದಕ್ಕೆ. ರಜೆ ದಿನಗಳಲ್ಲಿ ಶೂಟಿಂಗ್ ನೆಪದಲ್ಲಾದರೂ ಊರು ಸುತ್ತಲು ತಂದೆ ಜೊತೆ ಶೂಟಿಂಗ್ ಲೋಕೇಶನ್‌ಗೆ ಹೋಗಿದ್ದಾರ? ಇಲ್ಲಾ ಅದೂ ಇಲ್ಲಾ ತಾನು ನಟನಾಗುವವರೆಗೂ ಶೂಟಿಂಗ್ ಹೇಗೆ ನಡಯುತ್ತದೆ ಅನ್ನುವ ಕಲ್ಪನೆ ಇಲ್ಲದ ಶುದ್ಧ ಕಲಾವಿದರ ಮನೆಯ ಕುಡಿ ಈ ರಾಜವರ್ಧನ್.
ಇದನ್ನೂ ಓದಿ: ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಪಾರು ಸೀರಿಯಲ್ ಆದಿ..ಶರತ್ ಪದ್ಮನಾಭ್ ಚೊಚ್ಚಲ ಕನಸಿಗೆ ಟೈಟಲ್ ಫಿಕ್ಸ್
ಕಲೆಯನ್ನು ಕಲೆಯೇ ಕಲೆಯೊಳಗೆ ಕಲಿಸಿತು.
ಡಿಂಗ್ರಿ ನಾಗರಾಜ್‌ರವರ ಮನೆ ಮತ್ತು ಹಿರಿಯ ನಟ ಸುಧೀರ್ ಇಬ್ಬರು ಕಲಾವಿದರು ನೆರೆ ಹೊರೆಯವರು. ಎರಡೂ ಮನೆಯ ಮಕ್ಕಳು ಒಟ್ಟಿಗೆ ಆಡಿ ಬೆಳೆದವರು. ಅವರಲ್ಲಿ ತರುಣ್ ಸುಧೀರ್, ನಂದಕಿಶೋರ್ ಹಾಗೂ ಅವರ ಜೊತೆಗೆ ರಾಜವರ್ಧನ್. ತರುಣ್ ಸುಧೀರ್ ಮತ್ತು ನಂದ ಕಿಶೋರ್ ಇಬ್ಬರು ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ, ರಾಜವರ್ಧನ್ ತನಗೆ ಸಂಬಂಧವೇ ಇಲ್ಲದವನಂತೆ ಇದ್ದರು. ಆಗ ತರುಣ್ ಸುಧೀರ್ ಏನು ಮಾಡುತ್ತೀಯಾ ಎಂದು ರಾಜವರ್ಧನ್ ಕೇಳಿದಾಗ ಕೆಲಸಕ್ಕೆ ಹೋಗುತ್ತೇನೆ. ಇಲ್ಲವಾದರೇ ಏನಾದರೂ ಬಿಸಿನೆೆಸ್ ಮಾಡುತ್ತೇನೆ ಅಂದರು. ಒಮ್ಮೆ ರಾಜವರ್ಧನ್‌ಗೆ ತರುಣ್ ಸುಧೀರ್ ಕರೆದು ಅವರ ತಲೆಗೆ ಸಿನಿಮಾ ಅನ್ನುವ ಚಾನ್ಸ್ ನನಗಿತ್ತು. ಆಗ ನಾನೊಂದು ಸಣ್ಣ ಪ್ರಯತ್ನವನ್ನು ಮಾಡದೆ ಹಾಗೆ ಉಳಿದುಬಿಟ್ಟೆ ಅಂದುಕೊಳ್ಳಬೇಡ. ಒಂದೇ ಒಂದು ಸಣ್ಣ ಪ್ರಯತ್ನ ಮಾಡು ಎಂದು ಆರು ಕಾಲು ಅಡಿ ಇರುವ, ಉರಿಕಟ್ಟಿದ ಮೈ ಇರುವ ಆಗಲೇ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಮಾಡಿಕೊಂಡಿದ್ದ. ನೋಡಲು ಚೆನ್ನಾಗಿದ್ದ. ೨೩ರ ಹರೆಯದ ಹುಡುಗ ರಾಜ್‌ವರ್ಧನ್‌ಗೆ ತರುಣ್ ಸುಧೀರ್ ತಿಳಿ ಹೇಳಿದರು. ಬಲ ಒತ್ತಡ ಎರಡನ್ನು ಹಾಕಿ ಕಲೆಯ ನೆಲದೊಳಗೆ ದೂಕಿದರು. ಇನ್ನೊಬ್ಬ ಕಲಾವಿದರ ಮನೆಯ ಇನ್ನೊಂದು ಕುಡಿ.
ಕಲೆಯ ನೆಲ ತುಳಿದ ಮೇಲೆ ಹರಿದ ಬೆವರು, ನೆತ್ತರು.
ಮಾಸ್ಟರ್ ಆಫ್ ವಿಶುಯಲ್ ಆರ್ಟ್ಸ್ ಓದಿಕೊಂಡು ಸಿನಿಮಾ ಕಡೆ ತಲೆ ಹಾಕಿ ಮಲಗದ ರಾಜವರ್ಧನ್ ಒಂದು ಪ್ರಯತ್ನ ಎಂದು ಸಿನಿಮಾಗೆ ಕಾಲಿಟ್ಟಾಗ ಎರಡು ವರ್ಷಗಳ ಕಾಲ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸುಮ್ಮನೆ ಬೆವರು ಹರಿಸಲು ಶುರು ಮಾಡಿದರು. ಬೆಳಿಗ್ಗೆ ಜಿಮ್ ಮಧ್ಯಾಹ್ನ ಸಿನಿಮಾಗಳನ್ನು ನೋಡುವುದು, ಸಂಜೆ ಡ್ಯಾನ್ಸ್ ಮಾಡುವುದು ಮತ್ತು ಸಿನಿಮಾಗೆ ಹಾಗೂ ನಟನೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದುವುದು ಇದೇ ಕೆಲಸವನ್ನು ಮಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದರು. ನೀನಾಸಂನ ರಮೇಶ್ ರವರು ಮತ್ತು ಶಿವುರವರು ಇವರಿಗೆ ನಟನೆಯ ತರಬೇತಿ ನೀಡಿದರು. ಆನಂತರ ಸಿನಿಮಾಗೆ ಇದುವರೆಗೆ ಬಂದಿದ್ದ ನಟರ ಹಿನ್ನೆಲೆ ಮತ್ತು ಆ ನಟರು ಹೇಗೆ ಬೆಳೆದರು, ಅಲ್ಲದೆ ಇನ್ನೂ ಕೆಲವರು ಸಿನಿಮಾಗೆ ಬಂದು ನೆಲೆ ನಿಲ್ಲದೆ ಹಾಗೆ ಉಳಿದು ಹೋದವರು ಅಷ್ಟೆ ಅಲ್ಲದೆ ನೆಲೆ ನಿಲ್ಲುವುದಕ್ಕಾಗಿ ಹಗಲಿರುಳು ಶ್ರಮಿಸಿದವರ ಬಗ್ಗೆ ತಿಳಿದುಕೊಂಡು, ಅವರ ಸ್ಟೆçಂತ್ ಮತ್ತು ವೀಕ್‌ನೆಸ್ ಏನು ಎಂದು ತಿಳಿದುಕೊಂಡು ಅದರ ಬಗ್ಗೆ ಗಮನ ಹರಿಸಿದರು. ಇದೇ ತರಹ ಸಿನಿಮಾದೊಳಗೆ ಬರಲು ಸತತ ಎರಡು ವರ್ಷಗಳ ಕಾಲ, ಯಾವ ಕನಸನ್ನು ಕಾಣದೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಲೆಗೆ ತಯಾರಿ ನೆಲದಲ್ಲಿ ಬೆವರು ಮತ್ತು ನೆತ್ತರು ಬಂದರು.
ಇದನ್ನೂ ಓದಿ :ಅನುಷ್ಕಾ ಶರ್ಮಾ ಜೊತೆಗಿನ 2 ತಿಂಗಳ ವಿರಾಮದ ಬಗ್ಗೆ ವಿರಾಟ್ ಕೊಹ್ಲಿ, ಹೇಳುತ್ತಾರೆ…
ತಮ್ಮ ಬೇಳೆ ಬೇಯಿಸಿಕೊಳ್ಳುವಾಗ ಬೆಂದು ಹೋದ ನನ್ನ ಅವಕಾಶ.
ತಯಾರಿಯಲ್ಲಿ ಕಳೆದುಹೋದ ಎರಡು ವರ್ಷದ ನಂತರ ಅವಕಾಶಗಳು ಬಂದವು. ನನಗಿನ್ನು ಗಾಂಧಿನಗರ ಹೊಸದು ಎಲ್ಲರನ್ನು ನಂಬುತ್ತಿದ್ದೆ. ನನ್ನನ್ನು ಯಾರು ಬಳಸಿಕೊಳ್ಳುತ್ತಿದ್ದಾರೆ, ಯಾರು ಬೆಳೆಸಲು ನೋಡುತ್ತಿದ್ದಾರೆ, ಯಾವುದು ಅರ್ಥವಾಗುತ್ತಿಲ್ಲ. ಯಾವುದೋ ದೊಡ್ಡ ಪ್ರಾಜೆಕ್ಟ್ ಆಗುತ್ತೆ ಎಂದು ನನ್ನನ್ನು ನಂಬಿಸಿ, ಕಾಯಿಸಿ ಸುಮ್ಮನೆ ಅದೂ ಎರಡು ವರ್ಷ ಕಾಯಿಸಿಬಿಟ್ಟರು. ನಾನು ನಮ್ಮ ತಂದೆ ಬೆಳಿಗ್ಗೆ ಶೂಟಿಂಗ್‌ಗೆ ಹೋಗಿ ಸಂಜೆ ಮನೆಗೆ ತರುತ್ತಿದ್ದ ಹಣ ಆ ದಿನ ನನಗೆ ನಿಜವಾಗಲೂ ದೊಡ್ಡದು. ಅವತ್ತು. ಸಿನಿಮಾ ಜಗತ್ತಿನ ಫ್ಯಾಂಟಸಿ ನೋಡಿದ್ದ ನನಗೆ ರಿಯಾಲಿಟಿ ನೋಡಿರಲಿಲ್ಲ. ಆಗಿನ್ನು ನೋಡಲು ಶುರು ಮಾಡಿದ್ದೆ ಆಗ ಎಲ್ಲವೂ ಒಂದೊಂದಾಗಿ ಅರ್ಥವಾಗುತ್ತಾ ಬಂದವು. ಅಷ್ಟರೊಳಗೆ ನನಗೆ ನನ್ನ ಮೇಲೆ ಜಿಗುಪ್ಸೆ ಹುಟ್ಟಿಬಿಟ್ಟಿತ್ತು. ಎರಡು ವರ್ಷ ಆಯಿತು ನಾನು ಇನ್ನೂ ಒಂದು ರೂಪಾಯಿ ದುಡಿಯದೆ ಇನ್ನೂ ಹಣ ಖರ್ಚು ಮಾಡುತ್ತಿದ್ದೇನೆ ಅನ್ನಿಸುತ್ತಿತ್ತು. ಇನ್ನು ಸಿನಿಮಾ ಸಹವಾಸ ಬೇಡ ಮತ್ತೆ ನಾನು ಓದಿರುವ, ವಿದ್ಯೆಯಿಂದ ಯಾವ ಕೆಲಸ ಸಿಗುತ್ತದೋ ಆ ಕೆಲಸ ಮಾಡಿಕೊಂಡು ಹೋಗೋಣ ಅನ್ನಿಸಿತು. ಆಗ ನನಗೆ ಬಂದ ಒಂದು ದೊಡ್ಡ ಅವಕಾಶವೇ ‘ಬಿಚ್ಚುಗತ್ತಿ’.
ನಾದಬ್ರಹ್ಮ ಬರೆದ ಹಣೆ ಬರಹ.
ಒಂದು ದಿನ ಹಂಸಲೇಖರವರು ನನ್ನನ್ನು ಕರೆದು ಬಿಚ್ಚುಗತ್ತಿ ಸಿನಿಮಾದ ನಿರ್ದೇಶಕರು ಮತ್ತು ನಿರ್ಮಾಪಕರ ಮುಂದೆ ಕೂರಿಸಿ ನಾನು ನಟಿಸಬೇಕಿರುವ ಪಾತ್ರದ ಕಥೆ ಹೇಳಿಸುತ್ತಾರೆ. ಅಷ್ಟೊರೊಳಗೆ ಸಿನಿಮಾ ವಿಚಾರದಲ್ಲಿ ರೋಸಿ ಹೋಗಿದ್ದ ನಾನು ಈ ಕಥೆ ಕೇಳಿ ಮರಳಾಗಿ ಹೋದೆ. ಮಾಡಿದರೆ ಇಂತಹ ಕಥೆ ಇಂತಹ ಪಾತ್ರವನ್ನು ಮಾಡಬೇಕು ಅಂದುಕೊಂಡವನಿಗೆ ಮೊದಲ ಸಿನಿಮಾವಾಗಿ ಅಂತಹ ಕಥೆಯೇ ಸಿಕ್ಕಿಬಿಟ್ಟಿತು. ಚಿತ್ರದ ನಿರ್ಮಾಪಕರು ಕೈತುಂಬ ಹಣ ಕೊಟ್ಟು, ಇದು ಅಡ್ವಾನ್ಸ್ ಎಂದು ಹೇಳಿದರು. ನಿರ್ದೇಶಕರು ಕೂರಿಸಿಕೊಂಡು ಬಿಚ್ಚುಗತ್ತಿಯಲ್ಲಿನ ನನ್ನ ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಹೇಳಿದರು. ಕಮರಿಹೊಗಿದ್ದ ನನ್ನ ಆಸೆಯ ಕನಸಿನ ಕಮಲ ಮತ್ತೆ ಅರಳಲು ಶುರುವಾಯಿತು. ಆಗ ನಾನು ಕತ್ತಿ ವರಸೆ, ಕಳರಿ ಪಯಟ್ಟು ಸಮರ ಕಲೆ, ಕುಸ್ತಿ, ಕುದುರೆ ಓಡಿಸುವುದು ಮುಂತಾದ ವಿದ್ಯೆಗಳನ್ನು ಕಲಿತುಕೊಂಡೆ.
ಬಿಚ್ಚುಗತ್ತಿ ಸಿನಿಮಾದಲ್ಲಿ ನಮ್ಮ ತಂದೆಯ ಸಮಾನ ಕಾಲದ ನಟರ ಜೊತೆ ಅಭಿನಯಿಸುವಾಗ, ನಟನೆಯ ತಾಕತ್ತು ಮತ್ತು ಅದರ ನಿಜವಾದ ಸತ್ವ ಅರ್ಥವಾಯಿತು. ಅಲ್ಲಿಂದ ನನಗೆ ನಟನೆ ತುಂಬಾ ಕಷ್ಟವೆನಿಸಲಿಲ್ಲ. ಎದುರಿಗೆ ಎಷ್ಟು ದೊಡ್ಡ ಕಲಾವಿದರಿರುತ್ತಾರೋ ಅಷ್ಟು ನಟಿಸಲು ನಮಗೆ ಅವಕಾಶ ಸಿಗುತ್ತದೆ ಅನ್ನುವುದು ತಿಳಿಯಿತು. ಮೊದಲ ಬಾರಿ ಕ್ಯಾಮೆರಾ ಎದುರಿಸುವವರ ಎದುರು ನಟಿಸಬೇಕಾದರು ಅವರಿಂದನೂ ಎಷ್ಟು ಕಲಿಯುವುದು ಇದೆ ಅನ್ನಿಸಿತು. ಆ ದಿನದಿಂದ ಸಿನಿಮಾ ಮತ್ತೆ ನಮ್ಮ ಮನೆಯ ದೇವರಾಯಿತು, ಕಲೆ ಆ ದೇವರ ಬೆಳಗುವ ದೀಪವಾಯಿತು. ಜನರನ್ನು ರಂಜಿಸುವುದು, ಜನರಿಗಾಗಿ ಸದಾ ಏನಾದರೂ ಒಳ್ಳೆಯ ಕೆಲಸ ಮಾಡುತ್ತಿರುವುದು, ಇದು ನನ್ನ ನಿತ್ಯ ದಿನಚರಿ.
ಇದನ್ನೂ ಓದಿ :ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರ ಮರು-ಬಿಡುಗಡೆ ಬಾಕ್ಸ್ ಆಫೀಸ್ ಕಲೆಕ್ಷನ್ 2024
ಇಂದು ನಾನು ಬಿಚ್ಚುಗತ್ತಿ, ಹಿರಣ್ಯ, ಪ್ರಣಯಂ, ಗಜರಾಮ ಸಿನಿಮಾಗಳಲ್ಲಿ ನಟಿಸಿದ್ದೇನೆ ಕೈಯಲ್ಲಿ ನಟಿಸುತ್ತಿರುವ ಚಿತ್ರಗಳಿವೆ ಇನ್ನು ನಟಿಸಬೇಕಾಗಿ ಬರುತ್ತಿರುವ ಕಥೆಗಳನ್ನು ಕೇಳುತ್ತಿದ್ದೇನೆ. ನಾನು ಯಾವಾಗಲು ಜನರನ್ನು ರಂಜಿಸಲು, ನಿರ್ದೇಶಕರ ನಟನಾಗಿ, ನಿರ್ಮಾಪಕರನ್ನು ಉಳಿಸಿ ಬೆಳೆಸುವ ಕಲಾವಿದನಾಗಿ, ಯಾವಾಗಲು ನನ್ನ ಜೊತೆಗೆ ನಟಿಸಬೇಕು ಎನ್ನುವ ಕಲಾವಿದರಿಗೆ ಸಹ ಕಲಾವಿದನಾಗಿ ನಾನಿರುತ್ತೇನೆ.
– ರಾಜವರ್ಧನ್, ನಟ.