ಸೌತ್ ಇಂಡಿಯಾ ಸಿನಿಮಾರಂಗದಲ್ಲಿ ಪ್ರಭಾಸ್ ನಟನೆಯ ಹೊಸ ಚಿತ್ರಗಳ ಬಗ್ಗೆ ಸದಾ ಕುತೂಹಲ ಇರುತ್ತದೆ. ಈಗ ಮತ್ತೆ ಒಂದು ಸುದ್ದಿ ಫಿಲ್ಮ್ ವಲಯದಲ್ಲಿ ಚರ್ಚೆಯಾಗುತ್ತಿದೆ — ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಭಾಸ್ ಸೇರಿ ಮಾಡಬೇಕಿದ್ದ ಸಿನಿಮಾ ನಿಂತುಹೋಯಿತೇ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ.

‘ಸಲಾರ್’ ಚಿತ್ರದ ಯಶಸ್ಸಿನ ನಂತರ, ಹೊಂಬಾಳೆ ಫಿಲ್ಮ್ಸ್ ಪ್ರಭಾಸ್ ಜೊತೆ ಮೂರು ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಅದರಲ್ಲಿ ‘ಸಲಾರ್ 2’ ಕೂಡ ಒಂದು ಪ್ರಮುಖ ಯೋಜನೆ. ಉಳಿದ ಎರಡು ಚಿತ್ರಗಳ ನಿರ್ದೇಶಕರ ಕುರಿತು ಸ್ಪಷ್ಟತೆ ಬರಬೇಕಿತ್ತು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಈ ಯೋಜನೆಗಳು ಸ್ಥಗಿತಗೊಂಡಿವೆ’ ಎಂಬ ಸುದ್ದಿ ವೈರಲ್ ಆಗಿದೆ.

ಈ ನಡುವೆ, ಪ್ರಭಾಸ್ ಮತ್ತು ಹೊಂಬಾಳೆ ಸಂಸ್ಥೆಯ ಮತ್ತೊಂದು ಚಿತ್ರವನ್ನು ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ‘ಬ್ರಹ್ಮರಾಕ್ಷಸ’ ಎಂಬ ಹೆಸರಿನಲ್ಲಿ ಸಿನಿಮಾ ಪ್ರಾರಂಭವಾಗಬಹುದು ಎಂದು ಅಂತೆಕಂತೆ ವರದಿಗಳು ಹೇಳುತ್ತಿದ್ದರೂ, ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.
ಪ್ರಶಾಂತ್ ವರ್ಮಾ ಅವರ ಹೆಸರು ಇದೀಗ ವಿವಾದಗಳಲ್ಲಿ ಸಿಲುಕಿದ್ದು, ವಿಷಯ ಇನ್ನಷ್ಟು ಕುತೂಹಲ ಮೂಡಿಸಿದೆ. ‘ಹನುಮಾನ್’ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದ ಪ್ರಶಾಂತ್ ವರ್ಮಾ, ಕೆಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ಸಿನಿಮಾ ಪ್ರಾರಂಭಿಸದಿದ್ದರೆಂಬ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಪ್ರೈಂ ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ ತೆಲುಗು ಫಿಲ್ಮ್ ಚೇಂಬರ್‌ನಲ್ಲಿ ದೂರು ನೀಡಿದ್ದು, ಅವರು ₹10 ಕೋಟಿ ರೂ. ಅಡ್ವಾನ್ಸ್ ಪಡೆದಿದ್ದಾರೆ ಎಂದು ಹೇಳಿದೆ. ಆದರೆ ಪ್ರಶಾಂತ್ ವರ್ಮಾ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಈ ವಿವಾದಗಳ ನಡುವೆ, ಪ್ರಭಾಸ್ ಅವರು ನಿರ್ದೇಶಕ ಪ್ರಶಾಂತ್ ವರ್ಮಾ ಜೊತೆ ಸಿನಿಮಾ ಬೇಡವೆಂದು ನಿರ್ಧರಿಸಿದ್ದಾರೆಯೇ ಎಂಬ ಊಹಾಪೋಹ ಕೂಡ ಹುಟ್ಟಿಕೊಂಡಿದೆ. ಆದರೆ, ಚಿತ್ರರಂಗದ ಕೆಲವರು “ಘೋಷಣೆ ಆಗದ ಸಿನಿಮಾ ನಿಂತುಹೋಗುವುದು ಹೇಗೆ?” ಎಂದು ಪ್ರಶ್ನಿಸುತ್ತಿದ್ದಾರೆ. ಡಿವಿವಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೂ ಪ್ರಶಾಂತ್ ವರ್ಮಾ ಜೊತೆ ಯಾವುದೇ ಸಿನಿಮಾ ಮಾತುಕತೆ ನಡೆದಿಲ್ಲವೆಂದು ಸ್ಪಷ್ಟಪಡಿಸಿದೆ.
ಇದರಿಂದ, ಪ್ರಭಾಸ್–ಹೊಂಬಾಳೆ ಸಿನಿಮಾಗಳ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಕೇವಲ ಅಂತೆಕಂತೆಗಳಾಗಿವೆ ಎಂದು ತಿಳಿಯುತ್ತದೆ. ಸದ್ಯ ಪ್ರಭಾಸ್ ‘ರಾಜಾಸಾಬ್’, ‘ಫೌಜಿ’ ಮತ್ತು ‘ಸ್ಪಿರಿಟ್’ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಮತ್ತೊಂದು ಕಡೆ, ಹೊಂಬಾಳೆ ಫಿಲ್ಮ್ಸ್ ‘ಕಾಂತಾರ 1’ ಯಶಸ್ಸಿನ ಸಂಭ್ರಮದಲ್ಲಿದ್ದು, ‘ಸಲಾರ್ 2’ ಯೋಜನೆಗೆ ಸಕಾಲದಲ್ಲಿ ಚಾಲನೆ ನೀಡಲು ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಈ ಎರಡು ದಿಗ್ಗಜರ ಸಹಯೋಗದ ಬಗ್ಗೆ ಅಧಿಕೃತ ಮಾಹಿತಿ ಬರುವ ನಿರೀಕ್ಷೆ ಇದೆ.
