Left Ad
Brat Film review ; ಶಶಾಂಕ್‌ ಜೂಜಿನಡ್ಡದಲ್ಲಿ ಕೃಷ್ಣನ ದುಡ್ಡಿನ ದೊಡ್ಡಾಟ! - Chittara news
# Tags

Brat Film review ; ಶಶಾಂಕ್‌ ಜೂಜಿನಡ್ಡದಲ್ಲಿ ಕೃಷ್ಣನ ದುಡ್ಡಿನ ದೊಡ್ಡಾಟ!

ʻದುಡ್ಡೇ ದೊಡ್ಡಪ್ಪʼ ಎಂಬುವುದನ್ನು ಬೇಸ್‌ಲೈನ್‌ ಆಗಿಟ್ಟುಕೊಂಡು ಈಗಾಗಲೇ ಕನ್ನಡದಲ್ಲಿ ‘ಗುಲ್ಟು’, ‘ಮಾಯಾ ಬಜಾರ್ 2016’ ಸೇರಿದಂತೆ ಕೆಲವು ಸಿನಿಮಾಗಳು ರಿಲೀಸ್‌ ಆಗಿ ಸದ್ದು ಮಾಡಿವೆ. ಈಗ ನಿರ್ದೇಶಕ ಶಶಾಂಕ್ ಅವರು ಇದೇ ರೀತಿಯ ಕಥಾ ಹಂದರ ಇಟ್ಟುಕೊಂಡು ‘ಬ್ರ‍್ಯಾಟ್’ ಸಿನಿಮಾ ಮಾಡಿದ್ದಾರೆ. ‘ಕೌಸಲ್ಯ ಸುಪ್ರಜಾ ರಾಮ’ ಬಳಿಕ ಡಾರ್ಲಿಂಗ್ ಕೃಷ್ಣ ಜೊತೆ ಮಾಡಿರೋ ಎರಡನೇ ಸಿನಿಮಾ. ʻದುಡ್ಡುʼ ಮಾಡುವ ಕಥೆ ಹೇಳಲು ಹೊರಟಿರುವ ಶಶಾಂಕ್‌&ಟೀಮ್‌ ನಿಜಕ್ಕೂ ಮೋಡಿ ಮಾಡಿದೆಯಾ? ಇಲ್ಲಿದೆ ʻಚಿತ್ತಾರʼ ಚಿತ್ರ ವಿರ‍್ಶೆ.

ಕಾನ್‌ಸ್ಟೇಬಲ್ ಮಹದೇವಯ್ಯ (ಅಚ್ಯುತ್ ಕುಮಾರ್) ನ್ಯಾಯವೇ ತಂದೆ-ತಾಯಿ ಎಂದು ಬದುಕುತ್ತಿರುವ ಪುಣ್ಯಕೋಟಿ ಕಥೆಯ ಗೋವಿನಂತಹ ವ್ಯಕ್ತಿ. ಆದರೆ, ಈ ಗೋವಿಗೆ ನರಿಯಂತಹ ಮಗ! ಅವನ ಹೆಸ್ರು ಕ್ರಿಸ್ಟಿ (ಕೃಷ್ಣ) ಪಕ್ಕಾ ಬ್ರ‍್ಯಾಟ್. ಅಂದರೆ ʻಹಾಳಾಗ್‌ಹೋಗುʼ ಎಂಬ ಶಾಪವನ್ನು ಅಕ್ಷರಶಃ ಜೀವಿಸಿ ತೋರಿಸುವವನು. ಬ್ಯಾಟ್‌ ಹಿಡಿಯುವ ವಯಸ್ಸಿನಲ್ಲೇ ಬ್ರ‍್ಯಾಟ್ ಆಗಿ ಮಾರ್ಪಡುವ ಕೃಷ್ಟಿ, ʻತಾನು ದುಡಿಯೋ ಹೆಸರಿನಲ್ಲಿ ಇನ್ನೊಬ್ಬರ ಬೆವರಿನ ವಾಸನೆ ಇರಬೇಕು; ಎಂಬಂತೆ ಜೂಜಿನ ಚಟಕ್ಕೆ ದಾಸನಾಗುತ್ತಾನೆ. ಜೂಜಿಗೆ ದಾಸನಾಗುವ ಮೊದಲು ವಿದ್ಯೆ ತಲೆಗೆ ಹತ್ತದೇ ಇರುವಾಗ ಫುಡ್ ಡೆಲಿವರಿ ಬಾಯ್‌ ಆಗಿ ಕೆಲಸ ಶುರು ಹಚ್ಚಿಕೊಳ್ಳುತ್ತಾನೆ. ಉರಿಬಿಸಿಲಲ್ಲಿ ಫುಡ್‌ ಡೆಲಿವರಿ ಮಾಡುವಾಗ, ಐಶಾರಾಮಿ ಕಾರೊಂದರಲ್ಲಿ ಶ್ವಾನವೊಂದನ್ನು ನೋಡುತ್ತಾನೆ. ಅಲ್ಲಿಂದ ಕ್ರಿಷ್ಟಿಯ ʻಬ್ಯಾಟಿಸಮ್‌ʼ ಶುರು! ನಂತರದಲ್ಲಿ ಕ್ಟಿಷ್ಟಿ ಬದುಕಿನ ಅಸಮಾನ್ಯ ಟ್ವಿಸ್ಟ್‌ಗಳ ಮೂಲಕ ಶಶಾಂಕ್‌ ತೆರೆಯಮೇಲೆ ಅಪರೂಪದ ಕಥೆಯೊಂದನ್ನು ಹೇಳುತ್ತಾ ಹೋಗುತ್ತಾರೆ.

ಇಲ್ಲಿವರೆಗೆ ʻಡಾರ್ಲಿಂಗ್ʼ ಆಗಿದ್ದ ಕೃಷ್ಣ, ಚಿತ್ರದಲ್ಲಿ ಕ್ರಿಸ್ಟಿಯಾಗಿ ʻಹೀಗೋ ಉಂಟೇʼ ಎಂಬಂತೆ ಪಾತ್ರದಲ್ಲಿ ಪರಕಾಶ ಪ್ರವೇಶ ಮಾಡಿದ್ದಾರೆ. ದುಡ್ಡಿನ ದುರಾಸೆಗೆ ಬಿದ್ದವನು ಬದುಕಿನಲ್ಲಿ ಯಾವೆಲ್ಲಾ ಎಕ್ಟ್ರೀಮ್‌ಗಳನ್ನು ಟಚ್‌ ಮಾಡಬಹುದು ಎಂಬುದನ್ನು ಇಂಟ್ರೆಸ್ಟಿಂಗ್‌ ಆಗಿ ಪ್ರಸೆಂಟ್‌ ಮಾಡಿದ್ದಾರೆ. ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ ಕೃಷ್ಣ, ಆ್ಯಕ್ಷನ್ ಮತ್ತು ರೋಮಾನ್ಸ್‌ಗಿಂತ ತಮ್ಮ ಇಂಟಲಿಜೆನ್ಸ್‌ನಿಂದ ಬೆರಗುಗೊಳಿಸುತ್ತಾರೆ.

ಯಾವುದೇ ಪಾತ್ರವಾದರೂ ಅಚ್ಚುಕಟ್ಟಾಗಿ ಪ್ರಸೆಂಟ್‌ ಮಾಡುವ ಅಚ್ಚುತ್‌ ಕುಮಾರ್‌, ತನ್ನ ಮುಂದೆಯೇ ಡಾರ್ಲಿಂಗ್‌ ಕೃಷ್ಣ ಡೇಂಜರ್‌ ಕ್ರಿಷ್ಟಿ ಆಗುವುದನ್ನು ಅರಗಿಸಿಕೊಳ್ಳಲಾಗದ ಅಪ್ಪನಾಗಿ, ಇನ್ನೊಂದೆಡೆ, ಶಿಸ್ತುಬದ್ಧ ಪೊಲೀಸ್‌ ಆಗಿ ಮನಸಿನಲ್ಲೇ ಉಳಿಯುತ್ತಾರೆ. ಹೊಸ ಪ್ರತಿಭೆ ಮನಿಶಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಇನ್ನು, ಡ್ರಾಗನ್‌ ಮಂಜುವನ್ನು ಪಾತ್ರಕ್ಕೆ ಒಗ್ಗಿಸಲು ಶಶಾಂಕ ಪಟ್ಟ ಕಷ್ಟ ತೆರೆ ಮೇಲೆ ಗೋಚರಿಸುತ್ತದೆ. ರಮೇಶ್‌ ಇಂದಿರಾ, ಮಾನಸಿ ಸುಧೀರ್‌ ಅವರ ಪಾತ್ರಪೋಷಣೆ ಕಥೆಗೆ ಪೂರಕವಾಗಿದೆ.

ನಿದೇಶಕ ಶಶಾಂಕ್‌ ಕ್ರಿಕೆಟ್‌ ಬೆಟ್ಟಿಂಗ್‌ ಬಗ್ಗೆ ಪಿ.ಎಚ್‌.ಡಿ ಮಾಡಿದ್ದಾರಾ ಎಂಭ ಸಂದೇಹ ಮೂಡಿಸುತ್ತಾರೆ. ಅಷ್ಟರ ಮಟ್ಟಿಗೆ ಅವರ ರಿಸರ್ಚ್‌ ವರ್ಕ್‌ ಇಂಪ್ಯಾಕ್ಟ್‌. ಬೆಟ್ಟಿಂಗ್‌, ಮ್ಯಾಚ್‌ ಫಿಕ್ಸಿಂಗ್‌, ಇದರ ಬಗ್ಗೆ ಅಷ್ಟೇ ಹೇಳಿದ್ದರೆ ಸಿನಿಮಾ ಇಟ್ರೆಂಸ್ಟಿಂಗ್‌ ಅನ್ನಿಸುತ್ತಿರಲಿಲ್ಲ. ಆದರೆ, ಶಶಾಂಕ್‌ ಬೆಟ್ಟಿಂಗ್‌-ಫಿಕ್ಸಿಂಗ್‌ನೊಳಗೆ ಸಿಲುಕಿಕೊಂಡ ಮಾನಸಿಕ ಸ್ಥಿತಿಯನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತಾ ತಾವು ಹೇಳಬೇಕಾದುದ್ದನ್ನು ಮನೋಜ್ಞವಾಗಿ ಹೇಳಿದ್ದಾರೆ. ಬೆಟ್ಟಿಂಗ್‌-ಫಿಕ್ಸಿಂಗ್‌ ಬಗ್ಗೆ ಈಗಾಗಲೇ ವೆಬ್‌ ಸೀರಿಸ್‌ ಸಿನಿಮಾಗಳು ಬಂದಿಲ್ಲವೆಂದಲ್ಲ, ಆದರೆ ‘ಬ್ರ‍್ಯಾಟ್’ ನೀಡುವ ಅನುಭವ ವಿಶೇಷವಾದುದು.

ಮೈಮರೆತು ಜೂಜು ಕಟ್ಟುತ್ತಾ ಮೋಜಿನಲ್ಲಿ ಮೈಮರೆತರೆ ಬಾಳು ಏನಾಗುತ್ತದೆ ಎಂಬುದನ್ನು ಮನೋರಂಜನೆಯ ಮೂಲಕ ತೋರಿಸುವ ನಿರ್ದೇಶಕರು, ಕೇವಲ ಮನೋರಂಜನೆಗಷ್ಟೇ ಸೀಮಿತವಾಗಿಸದೆ ಈ ಕಾಲಕ್ಕೆ ಅನಿವಾರ್ಯವಾದ ಸಂದೇಶವನ್ನು ನೀಡುತ್ತಾರೆ. ಸಿನಿಮಾದ ಟ್ವಿಸ್ಟ್‌ಗಳೇ ಚಿತ್ರಕಥೆಯ ತಾಕತ್ತಾಗಿದ್ದು, ಚಿತ್ರದ ಇಂಟರ್‌ವಲ್‌ ಆಗಿದ್ದೇ ಗೊತ್ತಾಗುವುದಿಲ್ಲ. ಸೆಕೆಂಡ್‌ ಹಾಫ್‌ನಲ್ಲಿ ಜೂಜು ಮತ್ತು ಮೋಜಿನ ಗಂಭೀರ ಸೈಡ್‌ ಎಫೆಕ್ಟ್‌ಗಳನ್ನು ಹೇಳುತ್ತಲೇ ಅದ್ಭುತ ಕ್ಲೈಮಾಕ್ಸ್‌ನೊಂದಿಗೆ ‘ಬ್ರ‍್ಯಾಟ್’ ರಂಜಿಸಿ, ಚಿಂತಿಸುವಂತೆ ಮಾಡುತ್ತದೆ.

ತಮ್ಮದೇ ಚಿತ್ರ ನಿದೇಶನದ ಬಿಡುಗಡೆಯ ಒತ್ತಡದಲ್ಲಿರುವ ಅರ್ಜುನ್‌ ಜನ್ಯ, ‘ಬ್ರ‍್ಯಾಟ್’ ನೀಡಿರುವ ಸಂಗೀತ ಕೇಳಿದರೆ ಅವರ ಕೆಲಸದ ಮೇಲಿನ ಅಗಾಧವಾದ ಶ್ರದ್ಧೆಯನ್ನು ತೋರಿಸುತ್ತದೆ. ‘ನಾನೇ ನೀನಂತೆ..’, ‘ಗಂಗಿ.. ಗಂಗಿ..’ ಹಾಡುಗಳನ್ನು ಬೆಳ್ಳಿ ತೆರೆ ಮೇಲೆ ನೋಡಿಯೇ ಅನುಭವಿಸಬೇಕು. ಹಿನ್ನಲೆ ಸಂಗೀತದಲ್ಲೂ ಹೊಸತನವನ್ನು ನೀಡಿರುವ ಅರ್ಜುನ, ಕೃಷ್ಣನ ಪಾಲಿಗೆ ಗೆಲುವಿನ ಸಾರಥಿಯಾಗಿದ್ದಾರೆ. ಬಣ್ಣದ ಬೆಳಕಿನ ಮೂಲಕ ಪ್ರೇಕ್ಷರನ್ನು ಕಥೆಯೊಳಗೆ ಎಳೆದು ತರುವ ಛಾಯಾಗ್ರಾಹಕ ಅಭಿಲಾಶ್‌ ಕಲ್ಲತ್ತಿಯವರ ಕ್ರಿಯೇಟಿವಿಟಿ ಕಥಗೆ ಚೆನ್ನಾಗಿ ಒಗ್ಗಿದೆ. ಪ್ರತೀ ಶಾಟ್‌ಗಳನ್ನು ಪ್ಲಾನ್‌ ಮಾಡಿ ಶೂಟ್‌ ಮಾಡುವ ಶಶಾಂಕ್‌ ಚಿತ್ರದಲ್ಲಿ ಎಡಿಟರ್‌ಗೆ ಕೆಲಸ ಕಮ್ಮಿ ಇದ್ರೂ, ಅಭಿಲಾಶ್‌ ಕಲ್ಲತ್ತಿ ಸಿಕ್ಕಿದ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಶಶಾಂಕ್‌ ಮತ್ತು ಕೃಷ್ಣ ಜೋಡಿ ಮತ್ತೊಮ್ಮೆ ವಿಭನ್ನ ಕಥಾಹಂದರದ ಸಿನಿಮಾ ಮೂಲಕ ಮ್ಯಾಜಿಕ್‌ ಮಾಡಿದ್ದಾರೆ.

-by B.NAVEEN KRISHNA.PUTTURU

Spread the love
Translate »
Right Ad