Left Ad
ಬಿಗ್ ಬಾಸ್ ಕನ್ನಡ: ‘ತಪ್ಪು ಮಾಡಿಬಿಟ್ಟೆ’ – ಕಣ್ಣೀರು ಹಾಕಿದ ಜಾನ್ವಿ - Chittara news
# Tags

ಬಿಗ್ ಬಾಸ್ ಕನ್ನಡ: ‘ತಪ್ಪು ಮಾಡಿಬಿಟ್ಟೆ’ – ಕಣ್ಣೀರು ಹಾಕಿದ ಜಾನ್ವಿ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಶಕ್ತಿಶಾಲಿ ಸ್ಪರ್ಧಿಯೆಂದು ಹೆಸರು ಮಾಡಿದ್ದ ಜಾನ್ವಿ, ಇದೀಗ ಪಶ್ಚಾತ್ತಾಪದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಮನೆಯ ಒಳಗಿನ ಹಲವರ ಮೇಲೆ ಪ್ರಭಾವ ಬೀರಿದ ಅವರು, ಇತ್ತೀಚಿನ ಒಂದು ತಪ್ಪಿನಿಂದ ಮನೆಯವರ ಮನಸ್ಸಿನಲ್ಲಿ ತಮ್ಮ ಬಗ್ಗೆ ರೂಪಿಸಿಕೊಂಡಿದ್ದ ಗೌರವವನ್ನು ಕಳೆದುಕೊಂಡಿದ್ದಾರೆ. ಆ ತಪ್ಪಿನ ಅರಿವಾದ ನಂತರ ಜಾನ್ವಿ ಭಾವೋದ್ರಿಕ್ತಳಾಗಿ ಕಣ್ಣೀರಿನಲ್ಲಿ ತೇಲಿದರು.

ಅಶ್ವಿನಿ ಮತ್ತು ಜಾನ್ವಿ ಇಬ್ಬರೂ ಮನೆಗೆ ಸೇರಿದ ದಿನದಿಂದಲೇ ಗಟ್ಟಿ ಸ್ಪರ್ಧಿಗಳೆಂದು ತಮ್ಮನ್ನು ತಾವು ತೋರ್ಪಡಿಸಿದ್ದರು. ಆದರೆ ಮೂರನೇ ವಾರದಲ್ಲಿ ನಡೆದ ಒಂದು ಘಟನೆ ಎಲ್ಲವನ್ನು ಬದಲಿಸಿತು. ಈ ಇಬ್ಬರು ಮನೆಯ ಕಿರಿಯ ಸದಸ್ಯೆ ರಕ್ಷಿತಾ ವಿರುದ್ಧ ಆಧಾರವಿಲ್ಲದ ಆರೋಪ ಮಾಡಿದ್ದರು. ಆ ಆರೋಪದಿಂದ ರಕ್ಷಿತಾ ಮನೆಯವರ ಮುಂದೆ ನಾಚಿಕೆಗೀಡಾಗಿದ್ದು, ಭಾವನಾತ್ಮಕವಾಗಿ ತೀವ್ರವಾಗಿ ನೋವು ಅನುಭವಿಸಿದರು. ಇದರ ನಡುವೆಯೂ ಅಶ್ವಿನಿ ಮತ್ತು ಜಾನ್ವಿ ತಮ್ಮ ನಡೆ ಬದಲಿಸದೆ, ಆಟದ ಹೆಸರಲ್ಲಿ ಆ ಹುಡುಗಿಯನ್ನು ಸಂಕಟಕ್ಕೊಳಪಡಿಸಿದರು.

ಶನಿವಾರದ ಎಪಿಸೋಡ್‌ನಲ್ಲಿ ಸುದೀಪ್ ಅವರು ಈ ಘಟನೆ ಕುರಿತು ಇಬ್ಬರಿಗೂ ಗಟ್ಟಿ ಬುದ್ಧಿವಾದ ಹೇಳಿದರು. ಆ ಮಾತುಗಳು ಜಾನ್ವಿಯ ಮನಸ್ಸಿಗೆ ತಾಕಿದಂತೆಯೇ, ನಾಮಿನೇಷನ್ ವೇಳೆ ಭಾವೋದ್ರಿಕ್ತಳಾದ ಅವರು ಪಶ್ಚಾತ್ತಾಪದಿಂದ ಕಣ್ಣೀರು ಹಾಕಿದರು. “ನಾನು ಹಾಗೆ ಮಾಡಬಾರದಿತ್ತು. ರಕ್ಷಿತಾ ಅಳುವುದನ್ನೂ ನೋಡಿದ್ದೆ, ಆದರೂ ತಪ್ಪು ಮಾಡಿದೆ. ಗೊತ್ತಿದ್ದು ಗೊತ್ತಿದ್ದೇ ತಪ್ಪು ಮಾಡಿದೆ. ನಮ್ಮ ಹಳ್ಳ ನಾವೇ ತೋಡಿಕೊಂಡೆವು,” ಎಂದು ಕಣ್ಣೀರಿನಿಂದ ತಮ್ಮ ಭಾವನೆಗಳನ್ನು ಹಂಚಿಕೊಂಡರು.

ತಮ್ಮ ಕುಟುಂಬದವರು ನೀಡಿದ ಪ್ರೋತ್ಸಾಹ ನೆನಪಿಸಿಕೊಂಡ ಜಾನ್ವಿ, “ನನ್ನ ತಾಯಿ, ಮಗ, ಅಣ್ಣಂದಿರು, ಗೆಳೆಯರು ನನ್ನ ಮೇಲೆ ವಿಶ್ವಾಸ ಇಟ್ಟು ಕಳುಹಿಸಿದ್ದಾರೆ. ನಾನು ಹೀಗೆ ತಪ್ಪು ಮಾಡಿದರೆ ಅವರ ಮುಖ ಕಪ್ಪಾಗುತ್ತದೆ. ನಾನು ಹೊರಗೆ ಹೋದರೆ ಸಹೋದರರು ಕೂಡ ನನ್ನನ್ನು ಬೈಯ್ಯುತ್ತಾರೆ,” ಎಂದು ದುಃಖ ವ್ಯಕ್ತಪಡಿಸಿದರು.

ಜಾನ್ವಿಯ ಈ ಮನೋಭಾವಕ್ಕೆ ಅಶ್ವಿನಿ ಮತ್ತು ಕಾವ್ಯಾ ಅವರು ಸಮಾಧಾನ ಹೇಳಿದರು. ಈ ವಾರದ ನಾಮಿನೇಷನ್ ಪಟ್ಟಿಯಲ್ಲಿ ಅಶ್ವಿನಿ, ಜಾನ್ವಿ, ಗಿಲ್ಲಿ, ರಾಶಿಕಾ, ಧ್ರುವಂತ್, ರಕ್ಷಿತಾ ಮತ್ತು ಸ್ಪಂದನಾ ಅವರ ಹೆಸರುಗಳಿವೆ.

Spread the love
Translate »
Right Ad